ಹುಡುಕಿ

ಬಾರ್ಸಿಲೋನಾದಲ್ಲಿ ಜಗದ್ಗುರುಗಳು: “ಮಾನವನು ಅನಂತದತ್ತ ಮುಖಮಾಡಿ ಸೃಷ್ಟಿಸಲ್ಪಟ್ಟವನು”.

ಬಾರ್ಸಿಲೋನಾದಲ್ಲಿ ನಡೆದ ಪ್ರಾರ್ಥನಾ ಜಾಗರಣೆಯಲ್ಲಿ, ಜಗದ್ಗುರು XIVನೇ ಲಿಯೋರವರು ಯುವಜನರಿಗೆ ತಮ್ಮ ಆಧ್ಯಾತ್ಮಿಕ ಅಶಾಂತತೆಯನ್ನು ಸ್ವೀಕರಿಸಲು, ದುಃಖ ಮತ್ತು ಮಾನಸಿಕ ಅಸ್ವಸ್ಥತೆಯ ನಡುವೆಯೂ ದೇವರ ಸಾನ್ನಿಧ್ಯದ ಮೇಲೆ ಭರವಸೆ ಇಡಲು, ಹಾಗೂ ಕ್ಷಮೆಯನ್ನು ಒಂದು ಬಾರಿ ಮಾಡುವ ಕಾರ್ಯವಾಗಿ ಅಲ್ಲದೆ, ಗುಣಮುಖತೆ ಮತ್ತು ಸಮಾಧಾನದತ್ತ ಕರೆದೊಯ್ಯುವ ಕ್ರಮೇಣದ ಪಯಣವಾಗಿ ಕಾಣಲು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಬಾರ್ಸಿಲೋನಾದ ಲ್ಲೂಯಿಸ್ ಕಂಪಾನ್ಸ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಯುವಜನರ ಪ್ರಾರ್ಥನಾ ಜಾಗರಣೆಯಲ್ಲಿ ಜಗದ್ಗುರು XIVನೇ ಲಿಯೋರವರು ಪರಿವರ್ತನೆ, ಮಾನಸಿಕ ಆರೋಗ್ಯ, ದುಃಖ, ಹಿಂಸಾಚಾರ ಮತ್ತು ಕ್ಷಮೆಯ ಕುರಿತು ಯುವಕರು ಹಂಚಿಕೊಂಡ ಜೀವನಾನುಭವಗಳಿಗೆ ಪ್ರತಿಕ್ರಿಯಿಸಿದರು. ಯಶಸ್ಸು ಮತ್ತು ಮಾನ್ಯತೆಯ ಹುಡುಕಾಟದ ನಡುವೆಯೂ ತನ್ನೊಳಗಿನ ಶೂನ್ಯತೆಯನ್ನು ಅನುಭವಿಸಿದ್ದ ಹೊಸದಾಗಿ ದೀಕ್ಷಾಸ್ನಾನ ಪಡೆದ ಯುವಕನಿಗೆ ಉತ್ತರಿಸುತ್ತಾ, “ನಾವು ಅನಂತಕ್ಕಾಗಿ ಸೃಷ್ಟಿಸಲ್ಪಟ್ಟವರು” ಎಂದು ಜಗದ್ಗುರುಗಳು ಹೇಳಿದರು. ಜೀವನದ ಪ್ರತಿಯೊಂದು ಸಾಧನೆಯೂ ತೃಪ್ತಿಯನ್ನು ನೀಡಿದರೂ, ಅದು ನಮ್ಮನ್ನು ಇನ್ನಷ್ಟು ಆಳವಾದ ಅರ್ಥದ ಹುಡುಕಾಟದತ್ತ ಕರೆದೊಯ್ಯುತ್ತದೆ ಎಂದು ಅವರು ತಿಳಿಸಿದರು.

ಇಂದಿನ ಸಮಾಜದಲ್ಲಿ ಲಾಭ, ಸಾಧನೆ ಮತ್ತು ಸ್ವಯಂ-ಪ್ರತಿಷ್ಠೆಯನ್ನು ದೇವರ ಸ್ಥಾನಕ್ಕೆ ಏರಿಸುವ ಪ್ರವೃತ್ತಿಯ ಬಗ್ಗೆ ಎಚ್ಚರಿಸಿದ ಜಗದ್ಗುರುಗಳು, ಇವು ಮಾನವನ ಅಂತಃಕರಣವನ್ನು ಕುಂಠಿತಗೊಳಿಸುವ ‘ಮೂರ್ತಿಪೂಜೆಗಳಾಗಿವೆ’ ಎಂದರು. ನಿರಂತರ ಗೊಂದಲ ಮತ್ತು ವ್ಯಸ್ತತೆಯ ಸಂಸ್ಕೃತಿಯ ಮಧ್ಯೆ ಯುವಕರು ಮೌನ, ಆತ್ಮಾವಲೋಕನ ಮತ್ತು ದೇವರೊಂದಿಗಿನ ಸಂವಾದಕ್ಕಾಗಿ ಸಮಯ ಮೀಸಲಿಡಬೇಕು ಎಂದು ಅವರು ಕರೆ ನೀಡಿದರು. ಪ್ರತಿದಿನ ಕೆಲವು ಕ್ಷಣಗಳಾದರೂ ಸುವಾರ್ತೆಯನ್ನು ಓದಿ ದೇವರೊಂದಿಗೆ ಮಾತನಾಡುವಂತೆ ಪ್ರೋತ್ಸಾಹಿಸಿದರು.

ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆ ಪ್ರಯತ್ನದ ಅನುಭವವನ್ನು ಹಂಚಿಕೊಂಡ ಯುವತಿಯೊಬ್ಬಳ ಸಾಕ್ಷ್ಯಕ್ಕೆ ಪ್ರತಿಕ್ರಿಯಿಸಿದ ಜಗದ್ಗುರುಗಳು, ಮಾನಸಿಕ ಆರೋಗ್ಯದ ಸಮಸ್ಯೆಗಳು ಆಧುನಿಕ ಸಮಾಜದ ಗಂಭೀರ ಸಂಕಷ್ಟವನ್ನು ತೋರಿಸುತ್ತವೆ ಎಂದರು. ಯೇಸು ಕ್ರಿಸ್ತನು ತನ್ನ ಶಿಲುಬೆಯ ಯಾತನೆಯಲ್ಲಿ ಮಾನವಕುಲದ ಎಲ್ಲಾ ನೋವು, ಏಕಾಂತ ಮತ್ತು ದುಃಖವನ್ನು ತನ್ನ ಮೇಲೆ ಹೊತ್ತುಕೊಂಡಿದ್ದಾನೆ ಎಂದು ನೆನಪಿಸಿದ ಅವರು, ಕತ್ತಲೆಯ ಕ್ಷಣಗಳಲ್ಲಿಯೂ ದೇವರು ನಮ್ಮನ್ನು ತೊರೆಯುವುದಿಲ್ಲ,ಆತನು ನಮ್ಮೊಂದಿಗೆ ದುಃಖವನ್ನು ಹೊರುತ್ತಾನೆ ಎಂದು ಹೇಳಿದರು.

ಕುಟುಂಬ ಹಿಂಸಾಚಾರ ಮತ್ತು ನೋವಿನ ಅನುಭವಗಳನ್ನು ಹಂಚಿಕೊಂಡ ಮತ್ತೊಬ್ಬ ಯುವತಿಗೆ ಉತ್ತರಿಸುತ್ತಾ, ಜಗದ್ಗುರುಗಳು ಕ್ಷಮೆ ಎನ್ನುವುದು ಒಂದೇ ಕ್ಷಣದಲ್ಲಿ ನಡೆಯುವ ಕಾರ್ಯವಲ್ಲ, ಬದಲಾಗಿ ಗುಣಮುಖತೆ ಮತ್ತು ಸಮಾಧಾನದತ್ತ ಸಾಗುವ ದೀರ್ಘ ಪಯಣ ಎಂದು ವಿವರಿಸಿದರು. ಆಳವಾದ ಗಾಯಗಳನ್ನು ಅನುಭವಿಸಿದವರಿಗೆ ಕ್ಷಮಿಸುವುದು ಸುಲಭವಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ಮೊದಲು ದೇವರು ನಮ್ಮ ಹೃದಯದ ಗಾಯಗಳನ್ನು ಗುಣಪಡಿಸಲಿ ಎಂದು ಪ್ರಾರ್ಥಿಸಬೇಕು ಎಂದು ಹೇಳಿದರು. ಕ್ಷಮೆ ಎಂದರೆ ಹಿಂದಿನ ಸಂಬಂಧವನ್ನು ಯಥಾಸ್ಥಿತಿಗೆ ತರುವುದು ಎಂದಲ್ಲ, ದ್ವೇಷ ಮತ್ತು ಪ್ರತೀಕಾರವನ್ನು ತ್ಯಜಿಸಿ, ಕರುಣೆಯ ಮನೋಭಾವವನ್ನು ಬೆಳೆಸುವುದಾಗಿದೆ ಎಂದು ತಿಳಿಸಿದರು.

ನಂತರ ತಮ್ಮ ಪ್ರವಚನದಲ್ಲಿ ನಿಕೋದೇಮನ ಉದಾಹರಣೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಪ್ರತಿಯೊಬ್ಬ ಮನುಷ್ಯನು ಜೀವನದ ಅರ್ಥ, ಸತ್ಯ ಮತ್ತು ಪ್ರೀತಿಯನ್ನು ಹುಡುಕುವ “ರಾತ್ರಿಯ ಯಾತ್ರಿಕ” ಎಂದು ಹೇಳಿದರು. ಜೀವನ ಮತ್ತು ನಂಬಿಕೆಯ ಪಯಣದಲ್ಲಿ ಎದುರಾಗುವ ಕತ್ತಲೆ, ಗೊಂದಲ ಮತ್ತು ಸಂದೇಹಗಳನ್ನು ಸೋಲಿನ ಸಂಕೇತಗಳಾಗಿ ನೋಡಬಾರದು,ಅವು ಹೊಸ ಜೀವನ ಮತ್ತು ಪುನರುತ್ಥಾನದ ಅವಕಾಶಗಳಾಗಿವೆ ಎಂದು ಅವರು ವಿವರಿಸಿದರು. ದೇವರು ನಮ್ಮನ್ನು ದೂಷಿಸಲು ಅಲ್ಲ, ರಕ್ಷಿಸಿ ನವೀಕರಿಸಲು ಬರುತ್ತಾನೆ ಎಂಬುದನ್ನು ಅವರು ನೆನಪಿಸಿದರು.

ತಮ್ಮ ಸಂದೇಶದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಸ್ಪೇನ್ ಮತ್ತು ವಿಶ್ವದ ಯುವಜನರಿಗೆ ಆಶಾಭರವಸೆ ನೀಡಿದರು. ಸಮಾಜದಲ್ಲಿರುವ ಬಡತನ, ವಿಭಜನೆ ಮತ್ತು ಸಾಂಸ್ಕೃತಿಕ ಸವಾಲುಗಳ ನಡುವೆಯೂ ಪ್ರತಿಯೊಬ್ಬರ ಘನತೆಯನ್ನು ಗೌರವಿಸುವ, ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸುವ ಭವಿಷ್ಯವನ್ನು ನಿರ್ಮಿಸಬೇಕೆಂದು ಅವರು ಕರೆ ನೀಡಿದರು. “ದೇವರು ಯಾವುದೂ ನಾಶವಾಗುವುದನ್ನು ಬಯಸುವುದಿಲ್ಲ, ಆತನು ನಮಗೆ ಅಂತ್ಯವಿಲ್ಲದ ಸಂತೋಷ ಮತ್ತು ನಿತ್ಯಜೀವನವನ್ನು ನೀಡಲು ಬಯಸುತ್ತಾನೆ” ಎಂದು ಹೇಳುತ್ತಾ, ಸುವಾರ್ತೆಯ ಬೆಳಕು ನಮ್ಮನ್ನು “ಕತ್ತಲೆಯಿಂದ ಬೆಳಕಿನತ್ತ” ನಡೆಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

09 ಜೂನ್ 2026, 21:00