Viaggio apostolico di Papa Leone in Spagna

ಸ್ಪೇನಿನಲ್ಲಿ ಜಗದ್ಗುರುಗಳು: ‘ಸುವಾರ್ತೆಯ ಮೇಲಿನ ನಿಷ್ಠೆಯನ್ನು ದೃಢಪಡಿಸಲು ಮತ್ತು ನವೀಕರಿಸಲು ನಾನು ಬಂದಿದ್ದೇನೆ’.

ಮ್ಯಾಡ್ರಿಡ್‌ನಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ದಳದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ವಿಶ್ವಾಸಿಗಳಲ್ಲಿ ಸುವಾರ್ತೆಯ ಮೇಲಿನ ನಂಬಿಕೆ ಮತ್ತು ನಿಷ್ಠೆಯನ್ನು ಬಲಪಡಿಸಲು ತಾವು ಸ್ಪೇನಿಗೆ ಬಂದಿರುವುದಾಗಿ ಹೇಳಿದರು. ಇದೇ ವೇಳೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಎಲ್ಲ ಸಂದರ್ಭಗಳಲ್ಲಿಯೂ ಸಂರಕ್ಷಿಸಬೇಕು ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಸ್ಪೇನಿಗೆ ತಮ್ಮ ಪ್ರೇಷಿತರ ಯಾತ್ರೆಯ ಅಂಗವಾಗಿ ಮ್ಯಾಡ್ರಿಡ್‌ನ ರಾಯಲ್ ಪ್ಯಾಲೇಸ್‌ನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕ ದಳದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ವಿಶ್ವಾಸಿಗಳಲ್ಲಿ ಸುವಾರ್ತೆಯ ಮೇಲಿನ ನಿಷ್ಠೆಯನ್ನು ಬಲಪಡಿಸಲು ಹಾಗೂ ದೇಶದ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳ ನಡುವೆ ಸಮನ್ವಯ ಮತ್ತು ಸಹಕಾರವನ್ನು ಉತ್ತೇಜಿಸಲು ತಾವು ಬಂದಿರುವುದಾಗಿ ಹೇಳಿದರು. ಸುಮಾರು ಎರಡು ಸಾವಿರ ವರ್ಷಗಳಿಂದ ಸುವಾರ್ತೆಯನ್ನು ಸ್ವಾಗತಿಸಿಕೊಂಡಿರುವ ಸ್ಪೇನ್ ದೇಶಕ್ಕೆ ಭೇಟಿ ನೀಡುತ್ತಿರುವುದು ತಮ್ಮ ಪಾಲಿಗೆ ಸಂತಸದ ವಿಷಯವಾಗಿದೆ ಎಂದು ಅವರು ತಿಳಿಸಿದರು.

ಸ್ಪೇನಿನ ಕ್ರೈಸ್ತ ಪರಂಪರೆ, ಜನಪದ ಭಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸ್ಮರಿಸಿದ ಜಗದ್ಗುರುಗಳು, ಈ ದೇಶದ ಜನರು ಯೇಸು ಕ್ರಿಸ್ತನೊಂದಿಗೆ ಹೊಂದಿರುವ ಆಳವಾದ ಆಧ್ಯಾತ್ಮಿಕ ಬಾಂಧವ್ಯವು ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು. ಧಾರ್ಮಿಕ ಮೆರವಣಿಗೆಗಳು, ಸಹೋದರ ಸಂಘಗಳು ಮತ್ತು ದತ್ತಿ ಸಂಸ್ಥೆಗಳು ಕ್ರಿಸ್ತನ ಸಂದೇಶವು ಜನಜೀವನದ ಭಾಗವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು. ವಿಶ್ವಾಸಿಗಳನ್ನು ಈ ನಂಬಿಕೆಯಲ್ಲಿ ಇನ್ನಷ್ಟು ದೃಢಗೊಳಿಸುವುದೇ ತಮ್ಮ ಯಾತ್ರೆಯ ಉದ್ದೇಶ ಎಂದು ಜಗದ್ಗುರುಗಳು ಹೇಳಿದರು.

ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ ಮತ್ತು ಧ್ರುವೀಕರಣದ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಗದ್ಗುರು ಲಿಯೋರವರು, ಸಂಘರ್ಷವಲ್ಲ, ಪರಸ್ಪರ ಭೇಟಿ ಮತ್ತು ಸಂವಾದದ ಸಂಸ್ಕೃತಿಯೇ ಸಮಾಜಕ್ಕೆ ಸ್ಥಿರತೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಿದರು. ಶಿಲುಬೆಯ ಸಂತ ಯೋವಾನ ,ಅವಿಲಾದ ಸಂತ ತೆರೆಸಾ ಮತ್ತು ಸಂತ ಇಗ್ನೇಷಿಯಸ್ ಲೊಯೋಲಾ ಅವರ ಜೀವನವನ್ನು ಉಲ್ಲೇಖಿಸಿದ ಅವರು, ದೇವರ ಅನ್ವೇಷಣೆ ಮಾನವರನ್ನು ಪರಸ್ಪರ ಹತ್ತಿರಕ್ಕೆ ತಂದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುತ್ತದೆ ಎಂದು ನೆನಪಿಸಿದರು.

ಜಗದ್ಗುರುಗಳು ತಮ್ಮ ಭಾಷಣದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ವಿಶೇಷವಾಗಿ ಒತ್ತಿ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿರುವ ಸತ್ಯದ ಹುಡುಕಾಟವನ್ನು ಗೌರವಿಸುವ ಸಮಾಜವೇ ನಿಜವಾದ ನ್ಯಾಯ ಮತ್ತು ಶಾಂತಿಯನ್ನು ನಿರ್ಮಿಸಬಲ್ಲದು ಎಂದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆ, ಶಿಕ್ಷಣ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ಪೇನಿನ ಶಾಂತಿ, ಬಹುಪಕ್ಷೀಯ ಸಹಕಾರ ಮತ್ತು ಅಂತರರಾಷ್ಟ್ರೀಯ ಕಾನೂನು ಪಾಲನೆಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ ಜಗದ್ಗುರುಗಳು, ದೇಶದೊಳಗೂ ಹೊರಗೂ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವಂತೆ ಕರೆ ನೀಡಿದರು. ವಿಶೇಷವಾಗಿ ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳ ನಡುವೆ ಸಂವಾದವನ್ನು ಬಲಪಡಿಸುವ ಮೂಲಕ ಮಾನವ ಕುಟುಂಬದ ಏಕತೆಯನ್ನು ಬೆಳೆಸಬೇಕು ಎಂದು ಅವರು ಹೇಳಿದರು. ಆಯುಧಗಳು ಮತ್ತು ಗೋಡೆಗಳಲ್ಲಿ ಅಲ್ಲ, ಪರಸ್ಪರ ಜೊತೆಯಾಗಿ ನಡೆದು ಬೆಳೆಯುವ ಮನೋಭಾವದಲ್ಲಿಯೇ ನಿಜವಾದ ಭದ್ರತೆ ಅಡಗಿದೆ ಎಂದು ಜಗದ್ಗುರುಗಳು ತಮ್ಮ ಸಂದೇಶವನ್ನು ಕೊನೆಗೊಳಿಸಿದರು.

06 ಜೂನ್ 2026, 18:57