"ಹೊಸ ಮಾನವತೆಯ ಕಿಡಿಗಳಾಗಿರಿ": ಸ್ಪೇನ್‌ನ ಯುವಜನತೆಗೆ ಜಗದ್ಗುರುಗಳ ಕರೆ.
ವ್ಯಾಟಿಕನ್ ವರದಿ
ಸ್ಪೇನಿನ ಪ್ರವಾಸದ ಮೊದಲ ದಿನದ ಕೊನೆಯ ಕಾರ್ಯಕ್ರಮವಾಗಿ ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್‌ನ ಪ್ಲಾಜಾ ದೆ ಲಿಮಾದಲ್ಲಿ ಯುವಜನರೊಂದಿಗೆ ಪ್ರಾರ್ಥನಾ ಜಾಗರಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ಯುವಕರು ಮತ್ತು ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವ ಪ್ರತಿನಿಧಿಗಳು ನಂಬಿಕೆ, ಸಾಕ್ಷಿಜೀವನ ಹಾಗೂ ಆಧುನಿಕ ಜಗತ್ತಿನಲ್ಲಿ ಕ್ರೈಸ್ತ ಜೀವನದ ಕುರಿತು ಪ್ರಶ್ನೆಗಳನ್ನು ಕೇಳಿದರು ಮತ್ತು ಜಗದ್ಗುರುಗಳು ಪ್ರತಿಯೊಂದಕ್ಕೂ ಉತ್ತರ ನೀಡಿದರು.
ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯದ ಆರ್ಚ್‌ಬಿಷಪ್ ಕಾರ್ಡಿನಲ್ ಜೋಸೆ ಕೋಬೊ ಕಾನೊರವರು ಇಂದಿನ ಯುವಕರು ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಜಗದ್ಗುರುಗಳು ತಮ್ಮ ನಂಬಿಕೆಯ ಪಯಣದಲ್ಲಿ ಪ್ರೇರಣೆಯಾದ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾ, ಸತ್ಯ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದ ಸಂತ ಜಾನ್ ಕ್ರೈಸೊಸ್ಟಮ್, ಕರುಣೆಯ ಆದರ್ಶವಾಗಿದ್ದ ಸಂತ ಥಾಮಸ್ ಆಫ್ ವಿಲ್ಲನುವಾ ಹಾಗೂ ನ್ಯಾಯ ಮತ್ತು ಜನಸೇವೆಗೆ ಹೆಸರಾಗಿದ್ದ ಸಂತ ತುರಿಬಿಯಸ್ ಆಫ್ ಮೊಗ್ರೊವೆಹೊರವರನ್ನು ಸ್ಮರಿಸಿದರು. ಪೆರುವಿನಲ್ಲಿ ಮಿಷನರಿಯಾಗಿ ಕಳೆದ ತಮ್ಮ ಅನುಭವಗಳು ಸುವಾರ್ತೆಯ ಮೂಲಕ ತಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವು ಎಂದು ಅವರು ಹೇಳಿದರು.
ಯುವಕರ ಪ್ರಶ್ನೆಗಳಿಗೆ ಉತ್ತರಿಸಿದ ಜಗದ್ಗುರುಗಳು, ಪ್ರಾರ್ಥನೆ ಮತ್ತು ಮೌನದ ಮೂಲಕ ದೇವರ ಧ್ವನಿಯನ್ನು ಆಲಿಸುವಂತೆ ಪ್ರೋತ್ಸಾಹಿಸಿದರು. ಸತ್ಯಕ್ಕೆ ಬದ್ಧರಾಗಿರಬೇಕು ಹಾಗೂ ವೈವಾಹಿಕ ಜೀವನ ಮತ್ತು ದೇವರ ಸಮರ್ಪಿತ ಜೀವನ ಎರಡೂ ದೇವರ ಕರೆಯ ರೂಪಗಳೆಂಬುದನ್ನು ಅವರು ನೆನಪಿಸಿದರು. ಒಬ್ಬ ಉತ್ತಮ ಕ್ರೈಸ್ತ ಸಾಕ್ಷಿಯಾಗಲು ಮೊದಲು ವ್ಯಕ್ತಿಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ವಿನಯ ಇರಬೇಕು ಎಂದು ಅವರು ಒತ್ತಿ ಹೇಳಿದರು.
ಆಧುನಿಕ ಜಗತ್ತು ಗದ್ದಲ, ಉಪಭೋಗವಾದ ಮತ್ತು ಸ್ವಾರ್ಥದಿಂದ ತುಂಬಿರುವ ಸಂದರ್ಭದಲ್ಲಿ ಮೌನದ ಮಹತ್ವವನ್ನು ಜಗದ್ಗುರುಗಳು ವಿಶೇಷವಾಗಿ ಒತ್ತಿಹೇಳಿದರು. ಮೌನದಲ್ಲಿಯೇ ಮನುಷ್ಯ ದೇವರ ಧ್ವನಿಯನ್ನು ಅರಿಯಲು, ಸತ್ಯವನ್ನು ಸುಳ್ಳಿನಿಂದ ಬೇರ್ಪಡಿಸಲು ಮತ್ತು ಜೀವನದ ನಿಜವಾದ ಅರ್ಥವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಪ್ರಾಚೀನ "ಡಿಯೊಗ್ನೇಟಸ್‌ಗೆ ಬರೆದ ಪತ್ರ"ವನ್ನು ಉಲ್ಲೇಖಿಸಿ, ಕ್ರೈಸ್ತರು ಆಧುನಿಕ ಸಮಾಜದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರಬೇಕು, ಆದರೆ ಕ್ಷಣಿಕ ಪ್ರವೃತ್ತಿಗಳು ಮತ್ತು ಸಿದ್ಧಾಂತಗಳ ಗುಲಾಮರಾಗಬಾರದು ಎಂದು ಅವರು ತಿಳಿಸಿದರು.
ತಮ್ಮ ಸಂದೇಶದ ಕೊನೆಯಲ್ಲಿ, ಯುವಜನರು ವಿಶೇಷವಾಗಿ ಡಿಜಿಟಲ್ ಜಗತ್ತಿನಲ್ಲಿಯೂ ಸಮಾಜ ಪರಿವರ್ತನೆಯ ಸಾಧನಗಳಾಗಬೇಕೆಂದು ಜಗದ್ಗುರುಗಳು ಕರೆ ನೀಡಿದರು. ಸುವಾರ್ತೆಯ ಸೌಂದರ್ಯ ಮತ್ತು ಮೌಲ್ಯಗಳನ್ನು ಜಗತ್ತಿಗೆ ಸಾರಬೇಕು, ಉದಾಸೀನತೆ, ಹಿಂಸೆ ಮತ್ತು ಅಸತ್ಯವನ್ನು ಎದುರಿಸಬೇಕು ಹಾಗೂ "ಹೊಸ ಮಾನವತೆಯ ಕಿಡಿಗಳಾಗಬೇಕು" ಎಂದು ಅವರು ಹೇಳಿದರು. ಕ್ರಿಸ್ತನ ಮಾದರಿಯನ್ನು ಅನುಸರಿಸಿ ಪ್ರೀತಿಯ ಮತ್ತು ದಾನಶೀಲತೆಯ ಜೀವನ ನಡೆಸಿದಾಗ ಮಾತ್ರ ಜಗತ್ತನ್ನು ಉತ್ತಮವಾಗಿ ಬದಲಾಯಿಸುವ ಶಕ್ತಿ ದೊರೆಯುತ್ತದೆ ಎಂದು ಜಗದ್ಗುರು XIVನೇ ಲಿಯೋರವರು ಯುವಕರಿಗೆ ಪ್ರೇರಣೆ ನೀಡಿದರು.
