Pope Leo XIV visits Spain

ಸ್ಪೇನಿನ ಪ್ರವಾಸದ ಮೊದಲ ದಿನ: ಪ್ರೀತಿಯ ಮೂಲಕ ಇತಿಹಾಸವನ್ನು ಬದಲಾಯಿಸಲು ಯುವಜನತೆಗೆ ಜಗದ್ಗುರುಗಳ ಸವಾಲು

ಜಗದ್ಗುರು XIVನೇ ಲಿಯೋರವರ ನಾಲ್ಕನೇ ಅಂತರರಾಷ್ಟ್ರೀಯ ಪ್ರೇಷಿತರ ಪ್ರವಾಸವು ಅವರು ಇಂದು ಭೇಟಿಯಾದ ವಿವಿಧ ಗುಂಪುಗಳಿಗೆ ನೀಡಿದ ಸಂದೇಶಗಳೊಂದಿಗೆ ಆರಂಭವಾಯಿತು ನಾಗರಿಕ ಮತ್ತು ಧಾರ್ಮಿಕ ನಾಯಕರಿಗೆ ವಿಭಜನೆ ಉಂಟುಮಾಡುವ ಧೋರಣೆಗಳನ್ನು ಬದಿಗಿಡುವಂತೆ, ಸಮಾಜದ ಅತ್ಯಂತ ದುರ್ಬಲರ ಸೇವೆಯಲ್ಲಿ ತೊಡಗಿರುವವರಿಗೆ ಪ್ರತಿಯೊಬ್ಬರಲ್ಲೂ ಅಡಗಿರುವ ಮಾನವ ಘನತೆಯನ್ನು ನಿಜವಾಗಿ ಗುರುತಿಸುವಂತೆ, ಹಾಗೂ ಯುವಜನತೆಗೆ ನಿಜವಾದ ಮಾನವೀಯತೆಯ ಜೀವನ ನಡೆಸುವಂತೆ ಅವರು ಕರೆ ನೀಡಿದರು.

ವ್ಯಾಟಿಕನ್ ವರದಿ

 

ಸ್ಪೇನಿನ ಪ್ರವಾಸದ ಮೊದಲ ದಿನವೇ ಜಗದ್ಗುರು XIVನೇ ಲಿಯೋರವರು ಸಮಾಜದ ವಿವಿಧ ವರ್ಗಗಳಿಗೆ ಆಶಾಭರವಸೆಯ ಸಂದೇಶವನ್ನು ನೀಡಿದರು. ಮ್ಯಾಡ್ರಿಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ನಗರದ ಬೀದಿಗಳಲ್ಲಿ ಸಾವಿರಾರು ಯಾತ್ರಿಕರು, ಪ್ರವಾಸಿಗರು ಮತ್ತು ಸಾರ್ವಜನಿಕರು ಜಗದ್ಗುರುಗಳನ್ನು ಒಂದು ನೋಟ ಕಾಣಲು ಜಮಾಯಿಸಿದ್ದರು. ಬಳಿಕ ಅವರು ಮ್ಯಾಡ್ರಿಡ್‌ನ ರಾಜಮನೆತನಕ್ಕೆ ಭೇಟಿ ನೀಡಿ, ರಾಜ VIನೇ ಫೆಲಿಪೆ , ರಾಣಿ ಲೆತಿಸಿಯಾ ಹಾಗೂ ರಾಜಕುಟುಂಬದ ಸದಸ್ಯರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸ್ಪೇನಿನ ಎರಡು ಸಾವಿರ ವರ್ಷಗಳ ಕ್ರೈಸ್ತ ಪರಂಪರೆಯನ್ನು ಇಬ್ಬರೂ ನಾಯಕರು ಸ್ಮರಿಸಿದರು.

ರಾಜಮನೆತನದಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು ಸಮಾಜವನ್ನು ವಿಭಜಿಸುವ ಮತ್ತು ಧ್ರುವೀಕರಿಸುವ ಮನೋಭಾವಗಳನ್ನು ತೊರೆದು, ಭಿನ್ನತೆಗಳನ್ನು ಪರಸ್ಪರ ಗೌರವ ಮತ್ತು ಸಂವಾದದ ಮೂಲಕ ಎದುರಿಸುವಂತೆ ಕರೆ ನೀಡಿದರು. ಸತ್ಯ, ನ್ಯಾಯ ಮತ್ತು ಶಾಂತಿಯ ಪರವಾಗಿ ನಿಂತು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ನಂತರ ಜಗದ್ಗುರುಗಳು ಮ್ಯಾಡ್ರಿಡ್ ಧರ್ಮಪ್ರಾಂತ್ಯದ ದಾನ ಸಂಸ್ಥೆಯ ‘ಸೆಡಿಯಾ 24 ಹೊರಾಸ್’ ಸಾಮಾಜಿಕ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ನಿರ್ಗತಿಕರು ಮತ್ತು ಸಂಕಷ್ಟದಲ್ಲಿರುವವರಿಗೆ ನೀಡಲಾಗುತ್ತಿರುವ ಸೇವೆಯನ್ನು ಶ್ಲಾಘಿಸಿದ ಅವರು, “ಮ್ಯಾಡ್ರಿಡ್‌ನಲ್ಲಿರುವ ಪ್ರತಿಯೊಬ್ಬರೂ ಮ್ಯಾಡ್ರಿಡ್‌ನವರೇ” ಎಂದು ಹೇಳಿ ಎಲ್ಲರನ್ನೂ ಗೌರವದಿಂದ ಸ್ವೀಕರಿಸುವ ಮನೋಭಾವವನ್ನು ಒತ್ತಿಹೇಳಿದರು. ದಾನಧರ್ಮವು ಕೇವಲ ವಸ್ತುಗಳನ್ನು ನೀಡುವುದಲ್ಲ, ಸಂಕಷ್ಟದಲ್ಲಿರುವವರ ಕಣ್ಣಲ್ಲಿ ಕಣ್ಣಿಟ್ಟು ಅವರ ಮಾನವ ಘನತೆಯನ್ನು ಗುರುತಿಸುವ ವೈಯಕ್ತಿಕ ಭೇಟಿಯೂ ಆಗಿರಬೇಕು ಎಂದು ಅವರು ನೆನಪಿಸಿದರು.

ದಿನದ ಕೊನೆಯ ಕಾರ್ಯಕ್ರಮವಾಗಿ ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್‌ನ ಪ್ಲಾಜಾ ದೆ ಲಿಮಾದಲ್ಲಿ ಯುವಜನರೊಂದಿಗೆ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಿದರು. ಯುವಕರು ತಮ್ಮ ಜೀವನದ ಸವಾಲುಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಾರ್ಥನೆ ಮತ್ತು ಮೌನದ ಮೂಲಕ ದೇವರ ಧ್ವನಿಯನ್ನು ಆಲಿಸುವಂತೆ ಪ್ರೋತ್ಸಾಹಿಸಿದರು. ಸತ್ಯವು ಶಾಶ್ವತವಾದದ್ದು, ಆದರೆ ಸಿದ್ಧಾಂತಗಳು ಮತ್ತು ತಾತ್ಕಾಲಿಕ ಪ್ರವೃತ್ತಿಗಳು ಕಾಲದೊಂದಿಗೆ ಮರೆಯಾಗುತ್ತವೆ ಎಂದು ಅವರು ತಿಳಿಸಿದರು.

ತಮ್ಮ ಅಂತಿಮ ಸಂದೇಶದಲ್ಲಿ, ಯುವಜನರು ಹಿಂಸೆ, ಯುದ್ಧ, ಉದಾಸೀನತೆ ಮತ್ತು ನಿರ್ಲಕ್ಷ್ಯದ ನಡುವೆ "ಹೊಸ ಮಾನವತೆಯ ಕಿಡಿಗಳಾಗಬೇಕು" ಎಂದು ಜಗದ್ಗುರುಗಳು ಕರೆ ನೀಡಿದರು. ಕ್ರಿಸ್ತನ ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸುವಾರ್ತೆಯ ಮಿಷನರಿಗಳಾಗುವಂತೆ ಅವರು ಉತ್ತೇಜಿಸಿದರು. "ಇತಿಹಾಸವನ್ನು ಬದಲಾಯಿಸುವ ಶಕ್ತಿ ಪ್ರೀತಿಯಲ್ಲಿದೆ , ಆದ್ದರಿಂದ ಪ್ರೀತಿಯ ಮೂಲಕವೇ ಜಗತ್ತನ್ನು ಉತ್ತಮಗೊಳಿಸಿ" ಎಂಬ ಸಂದೇಶದೊಂದಿಗೆ ಜಗದ್ಗುರುಗಳು ತಮ್ಮ ಮೊದಲ ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

07 ಜೂನ್ 2026, 15:31