ಹುಡುಕಿ

SPAIN-VATICAN-DIPLOMACY-RELIGION-POPE

ಸ್ಪೇನಿನ ಭೇಟಿಯ ಎರಡನೇ ಹಂತಕ್ಕಾಗಿ ಜಗದ್ಗುರು ಲಿಯೋರವರು ಬಾರ್ಸಿಲೋನಾಗೆ ಆಗಮಿಸಿದರು.

ಜಗದ್ಗುರು XIVನೇ ಲಿಯೋರವರು ಸ್ಪೇನಿಗೆ ಕೈಗೊಂಡಿರುವ ತಮ್ಮ ಪ್ರೇಷಿತರ ಭೇಟಿಯ ಎರಡನೇ ಹಂತಕ್ಕಾಗಿ ಬಾರ್ಸಿಲೋನಾಗೆ ಆಗಮಿಸುತ್ತಿರುವ ಸಂದರ್ಭದಲ್ಲಿ, ಸ್ಥಳೀಯ ಧರ್ಮ ಸಭೆ ಪವಿತ್ರ ತಂದೆಯನ್ನು ಸ್ವಾಗತಿಸಲು ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ನಮ್ಮ ವರದಿಗಾರ ವಿವರಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸ್ಪೇನಿಗೆ ಕೈಗೊಂಡಿರುವ ತಮ್ಮ ಪ್ರೇಷಿತರ ಭೇಟಿಯ ಎರಡನೇ ಹಂತಕ್ಕಾಗಿ ಬಾರ್ಸಿಲೋನಾಗೆ ಆಗಮಿಸಿದ್ದಾರೆ.

ಜಗದ್ಗುರುಗಳ ಆಗಮನಕ್ಕೆ ಕೆಲವೇ ದಿನಗಳ ಮೊದಲು ನಾವು ಈ ನಗರಕ್ಕೆ ಭೇಟಿ ನೀಡಿದಾಗ, ಬಾರ್ಸಿಲೋನಾ ಚಟುವಟಿಕೆಗಳಿಂದ ಕಂಗೊಳಿಸುತ್ತಿರುವುದು ಕಂಡುಬಂತು. ಅಧಿಕಾರಿಗಳು ರಸ್ತೆಗಳನ್ನು ಸ್ವಚ್ಛಗೊಳಿಸುವುದಲ್ಲದೆ, ಪಾದಚಾರಿ ಮಾರ್ಗಗಳ ದುರಸ್ತಿಯಲ್ಲಿಯೂ ತೊಡಗಿಸಿಕೊಂಡಿದ್ದರು.

ನಗರದಾದ್ಯಂತ ಕಾರ್ಮಿಕರ ತಂಡಗಳು ಕಾರ್ಯನಿರ್ವಹಿಸುತ್ತಿದ್ದವು. ಧರ್ಮ ಸಭೆ ಸಹ ಜಗದ್ಗುರುಗಳ ಭೇಟಿಗಾಗಿ ವಿವಿಧ ಸ್ಥಳಗಳನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತವಾಗಿತ್ತು.

ರಸ್ತೆಗಳಲ್ಲಿ ಮತ್ತು ಕಾಫೆಗಳಲ್ಲಿ ಜಗದ್ಗುರು ಲಿಯೋರವರ ಭೇಟಿಯೇ ಪ್ರಮುಖ ಚರ್ಚೆಯ ವಿಷಯವಾಗಿದ್ದರೂ, ಜನರು ತಮ್ಮ ದೈನಂದಿನ ಜೀವನವನ್ನು ಸಹಜವಾಗಿ ಮುಂದುವರಿಸುತ್ತಿದ್ದರು. ಮಕ್ಕಳು ಶಾಲೆಗೆ ಹೋಗುತ್ತಿದ್ದರು, ಜನರು ಸೈಕಲ್‌ಗಳಲ್ಲಿ ಸಂಚರಿಸುತ್ತಿದ್ದರು ಮತ್ತು ಬೀದಿಯ ಪಕ್ಕದ ಮೇಜುಗಳ ಬಳಿ ಕುಳಿತುಕೊಂಡು ತಮ್ಮ ಸಮಯವನ್ನು ಕಳೆಯುತ್ತಿದ್ದರು. ಭದ್ರತಾ ಸಿಬ್ಬಂದಿಯ ಉಪಸ್ಥಿತಿ ಸ್ಪಷ್ಟವಾಗಿ ಕಂಡುಬಂದರೂ, ಒಟ್ಟಾರೆ ವಾತಾವರಣ ಶಾಂತ ಮತ್ತು ಸುವ್ಯವಸ್ಥಿತವಾಗಿತ್ತು.

ಕೆಲವು ಬೀದಿಗಳಲ್ಲಿ ಪಾರಿವಾಳದ ಚಿಹ್ನೆಯೊಂದಿಗೆ ಜಗದ್ಗುರು ಲಿಯೋರವರನ್ನು ಸ್ವಾಗತಿಸುವ ಪ್ರಕಟಣೆಗಳು ಕಾಣಿಸುತ್ತಿದ್ದವು. ಅವುಗಳಲ್ಲಿ “ಬೆನ್ವಿಂಗಟ್!” ಎಂದು ಬರೆಯಲಾಗಿತ್ತು, ಇದು ಕ್ಯಾಟಲನ್ ಭಾಷೆಯಲ್ಲಿ “ಸುಸ್ವಾಗತ” ಎಂಬ ಅರ್ಥವನ್ನು ಹೊಂದಿದೆ.

ಮತ್ತೊಂದು ಪ್ರಮುಖವಾಗಿ ಕಾಣಿಸುತ್ತಿದ್ದ ಪದ “PAU” ಆಗಿತ್ತು. ಸ್ಥಳೀಯರ ಪ್ರಕಾರ, ಕ್ಯಾಟಲನ್ ಭಾಷೆಯಲ್ಲಿ ಇದರ ಅರ್ಥ “ಶಾಂತಿ”.

ಇದರಿಂದ ಜಗದ್ಗುರು ಲಿಯೋರವರನ್ನು ಜನರು ಸ್ಪಷ್ಟವಾಗಿ ಶಾಂತಿಯ ವ್ಯಕ್ತಿಯಾಗಿ ಕಾಣುತ್ತಿರುವುದು ಗೊತ್ತಾಗುತ್ತದೆ. ಜಗತ್ತನ್ನು ಶಾಂತಿಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ನಾಯಕನಾಗಿ ಅವರು ಗುರುತಿಸಲ್ಪಡುತ್ತಿದ್ದಾರೆ. ಈ ಭೇಟಿ ಆಳವಾದ ಆಧ್ಯಾತ್ಮಿಕ ಮತ್ತು ಧರ್ಮಾಧ್ಯಕ್ಷೀಯ ಮಹತ್ವವನ್ನು ಹೊಂದಿದೆ.

ಬಾರ್ಸಿಲೋನಾದ ಕಥೆಯನ್ನು ಕೆಲವೊಮ್ಮೆ “ದೇವಾಲಯ ಮತ್ತು ನಗರದ ಕಥೆ” ಎಂದು ಕರೆಯಲಾಗುತ್ತದೆ.

ನಗರ ಯೋಜನೆಯಲ್ಲಿ ತನ್ನ ಸಮೃದ್ಧ ಇತಿಹಾಸ ಮತ್ತು ಮುಂಚೂಣಿ ಪಾತ್ರವನ್ನು ಗುರುತಿಸಿ, 2026ನೇ ಸಾಲಿನ ವಿಶ್ವ ವಾಸ್ತುಶಿಲ್ಪ ರಾಜಧಾನಿಯಾಗಿ ಬಾರ್ಸಿಲೋನಾವನ್ನು ಘೋಷಿಸಲಾಗಿದೆ.

ಬಾರ್ಸಿಲೋನಾದ ಅತ್ಯಂತ ಅದ್ಭುತ ಮತ್ತು ಪ್ರಸಿದ್ಧ ಸ್ಮಾರಕವೆಂದರೆ ನಿಸ್ಸಂದೇಹವಾಗಿ ಬೆಸಿಲಿಕಾ ಡೆ ಲಾ ಸಗ್ರಾಡಾ ಫ್ಯಾಮಿಲಿಯಾ. ವಿಶ್ವಪ್ರಸಿದ್ಧ ಈ ಮಹಾದೇವಾಲಯನ್ನು ಖ್ಯಾತ ವಾಸ್ತುಶಿಲ್ಪಿ ಆಂಟೋನಿ ಗೌಡಿ ವಿನ್ಯಾಸಗೊಳಿಸಿದ್ದಾರೆ. ಇದು ಬಾರ್ಸಿಲೋನಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತಿನ ಪ್ರತೀಕವಾಗಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ.

09 ಜೂನ್ 2026, 18:12