ಹುಡುಕಿ

TOPSHOT-SPAIN-VATICAN-DIPLOMACY-RELIGION-POPE

ಮೊಂಟ್ಸೆರಾಟ್‌ನಲ್ಲಿ ಜಗದ್ಗುರು XIVನೇ ಲಿಯೋರವರು: "ದ್ವೇಷದ ಸ್ಥಾನದಲ್ಲಿ ಶಾಂತಿ ನೆಲೆಸಲು ಪ್ರೀತಿಯನ್ನು ಬೆಳೆಸಿರಿ".

ಸ್ಪೇನಿನ ಮೊಂಟ್ಸೆರಾಟ್‌ನಲ್ಲಿರುವ ನಮ್ಮ ತಾಯಿಯಾದ ಮರಿಯಮ್ಮನ ಮಠದಲ್ಲಿ, ಜಗದ್ಗುರು XIVನೇ ಲಿಯೋರವರು ಜಪಮಾಲೆ ಪ್ರಾರ್ಥನೆ ನೆರವೇರಿಸಿ, ಕರುಣೆ, ಸಮಾಧಾನ, ಸತ್ಯ ಮತ್ತು ಸೌಮ್ಯತೆಯ ಮಾರ್ಗವನ್ನು ತೋರಿಸುವ ಕ್ರಿಸ್ತನ ಕಡೆಗೆ ಸದಾ ದೃಷ್ಟಿ ಹರಿಸುವಂತೆ ಕನ್ಯಾ ಮರಿಯಮ್ಮ ನೀಡುವ ಆಹ್ವಾನವನ್ನು ವಿಶ್ವಾಸಿಗಳು ಸ್ವೀಕರಿಸಬೇಕೆಂದು ಕರೆ ನೀಡಿದರು. ನಮ್ಮ ಮಾತುಗಳು ಮತ್ತು ವರ್ತನೆಗಳಲ್ಲಿ ಅಡಗಿರಬಹುದಾದ ಹಿಂಸಾತ್ಮಕ ಪ್ರವೃತ್ತಿಗಳನ್ನು ಕ್ರಿಸ್ತನು ಬಹಿರಂಗಪಡಿಸುತ್ತಾನೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಸ್ಪೇನಿನ ಬಾರ್ಸಿಲೋನಾದ ಸಮೀಪವಿರುವ ಐತಿಹಾಸಿಕ ಮೊಂಟ್ಸೆರಾಟ್ ಮಠದಲ್ಲಿ ಜೂನ್ 10ರಂದು ಜಗದ್ಗುರು XIVನೇ ಲಿಯೋರವರು ಜಪಮಾಲೆ ಪ್ರಾರ್ಥನೆಯನ್ನು ನೆರವೇರಿಸಿ, ವಿಶ್ವಾಸಿಗಳಿಗೆ ಕನ್ಯಾ ಮರಿಯಮ್ಮನ ಆಹ್ವಾನವನ್ನು ಸ್ವೀಕರಿಸಿ ಸದಾ ಕ್ರಿಸ್ತನ ಕಡೆಗೆ ದೃಷ್ಟಿ ಹರಿಸುವಂತೆ ಕರೆ ನೀಡಿದರು. ಕ್ರಿಸ್ತನು ಕರುಣೆ, ಸಮಾಧಾನ, ಸತ್ಯ ಮತ್ತು ಸೌಮ್ಯತೆಯ ಮಾರ್ಗವನ್ನು ತೋರಿಸುತ್ತಾನೆ ಹಾಗೂ ನಮ್ಮ ಹೃದಯಗಳಲ್ಲಿ ಅಡಗಿರುವ ಹಿಂಸಾತ್ಮಕ ಪ್ರವೃತ್ತಿಗಳನ್ನು ಬಹಿರಂಗಪಡಿಸುತ್ತಾನೆ ಎಂದು ಅವರು ಹೇಳಿದರು.

ಜಪಮಾಲೆಯ ನಂತರ ಮಾತನಾಡಿದ ಜಗದ್ಗುರುಗಳು, “ಶಾಂತಿಯ ರಾಣಿಯಾದ ಮರಿಯಮ್ಮನವರೆ ನಮ್ಮನ್ನು ನೋಯಿಸುವ ಮಾತುಗಳು, ಆತುರದ ತೀರ್ಪುಗಳು, ಅಪಪ್ರಚಾರ ಮತ್ತು ನಿಂದೆಗಳನ್ನು ತ್ಯಜಿಸಲು ಕಲಿಸಲಿ” ಎಂದು ಪ್ರಾರ್ಥಿಸಿದರು. ಕುಟುಂಬಗಳಲ್ಲಿ, ಸ್ನೇಹಿತರ ನಡುವೆ, ಕೆಲಸದ ಸ್ಥಳಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ಚರ್ಚೆಗಳಲ್ಲಿ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ಪ್ರೀತಿಯನ್ನು ಪೋಷಿಸಿ ಬೆಳೆಸಬೇಕು,ಆಗ ದ್ವೇಷವು ಭರವಸೆ ಮತ್ತು ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

2025ರಲ್ಲಿ ತನ್ನ ಸ್ಥಾಪನೆಯ ಸಾವಿರ ವರ್ಷಗಳನ್ನು ಪೂರೈಸಿದ ಈ ಬೆನೆಡಿಕ್ಟಿನ್ ಮಠವು ಕ್ಯಾಟಲೋನಿಯಾದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ. ಇಲ್ಲಿ ಕ್ಯಾಟಲೋನಿಯಾದ ಆಶ್ರಯದಾತೆಯಾದ ಮೊಂಟ್ಸೆರಾಟ್ ಮಾತೆಯ 12ನೇ ಶತಮಾನದ ಪವಿತ್ರ ಪ್ರತಿಮೆ ಇದೆ. ಜಗದ್ಗುರುಗಳನ್ನು ಆಗಮಿಸಿದಾಗ ಸಾವಿರಾರು ಭಕ್ತರು ಅವರನ್ನು ಹರ್ಷದಿಂದ ಸ್ವಾಗತಿಸಿದರು. ಬಳಿಕ ಅವರು ಜಪಮಾಲೆ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಧನ್ಯ ಸಂಸ್ಕಾರದ ಚಾಪೆಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಸಂದೇಶದಲ್ಲಿ ಜಗದ್ಗುರುಗಳು, ಕನ್ಯಾ ಮರಿಯಮ್ಮ ಮನುಷ್ಯನನ್ನು ಆಳವಾದ ಪರಿವರ್ತನೆಯ ಕಡೆಗೆ ಕರೆದೊಯ್ಯುತ್ತಾಳೆ ಎಂದು ಹೇಳಿದರು. ಗಲಿಲಾಯದ ಕಾನಾ ವಿವಾಹದಲ್ಲಿ ಮರಿಯಮ್ಮನವರು ಹೇಳಿದ “ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂಬ ಮಾತುಗಳು ಕ್ರೈಸ್ತ ಜೀವನಕ್ಕೆ ನಿಜವಾದ ಮಾರ್ಗದರ್ಶಿಯಾಗಿದೆ ಎಂದು ಅವರು ವಿವರಿಸಿದರು. ಮರಿಯಮ್ಮನವರು ನಮ್ಮನ್ನು ಕ್ರಿಸ್ತನ ಬಳಿಗೆ ಕರೆದೊಯ್ಯುತ್ತಾರೆ ಮತ್ತು ಆತನ ವಾಕ್ಯವನ್ನು ಆಲಿಸಿ ಜೀವನವನ್ನು ಪರಿವರ್ತಿಸಿಕೊಳ್ಳಲು ಪ್ರೇರೇಪಿಸುತ್ತಾರೆ ಎಂದು ಹೇಳಿದರು.

ಜಗದ್ಗುರು ಲಿಯೋರವರು, ನಮ್ಮ ಮಾತುಗಳು ಮತ್ತು ವರ್ತನೆಗಳಲ್ಲಿ ಅಡಗಿರುವ ಟೀಕೆ, ಖಂಡನೆ ಮತ್ತು ವಿಭಜನೆ ಉಂಟುಮಾಡುವ ಹಿಂಸಾತ್ಮಕ ಮನೋಭಾವಗಳನ್ನು ತ್ಯಜಿಸುವಂತೆ ಕರೆ ನೀಡಿದರು. “ನಮ್ಮ ಹೃದಯಗಳನ್ನು ಗಟ್ಟಿಗೊಳಿಸಿರುವ ಕವಚವನ್ನು ಇಂದು ಮರಿಯಮ್ಮನವರ ಪಾದಗಳ ಬಳಿ ಇಡೋಣ” ಎಂದು ಅವರು ಹೇಳಿದರು. ಪ್ರೀತಿಯ ಶಕ್ತಿಯಿಂದಲೇ ಯೇಸು ನಮ್ಮನ್ನು ರಕ್ಷಿಸಿದನು, ಆದ್ದರಿಂದ ನಾವು ಕೂಡ ದೇವರ ಪ್ರೀತಿ ಮತ್ತು ಕರುಣೆಯ ಆಯುಧಗಳನ್ನು ಮಾತ್ರ ಧರಿಸಬೇಕು ಎಂದು ಅವರು ಒತ್ತಿಹೇಳಿದರು.

ಕೊನೆಯಲ್ಲಿ ಜಗದ್ಗುರುಗಳು ಮೊಂಟ್ಸೆರಾಟ್ ಮಾತೆಯ ಮಧ್ಯಸ್ಥಿಕೆಯನ್ನು ಬೇಡಿ ಪ್ರಾರ್ಥಿಸಿದರು ಮತ್ತು ಮಠದ ಹೊರಗೆ ಸೇರಿದ್ದ ಭಕ್ತರಿಗೆ ಆಶೀರ್ವಾದ ನೀಡಿದರು. “ಸ್ಪೇನಿನಾದ್ಯಂತ ನಂಬಿಕೆ, ಪ್ರೀತಿ ಮತ್ತು ದೇವರನ್ನು ಸ್ತುತಿಸುವ ಉತ್ಸಾಹ ತುಂಬಿಕೊಂಡಿದೆ. ವಿವಿಧ ದೇಶಗಳಿಂದ ಬಂದ ಜನರನ್ನು ಒಂದೇ ಕುಟುಂಬವಾಗಿ ಸ್ವಾಗತಿಸಿರುವ ಕ್ಯಾಟಲೋನಿಯಾಗೆ ಧನ್ಯವಾದಗಳು” ಎಂದು ಅವರು ಹೇಳಿದರು. ಎಲ್ಲರೂ ಮರಿಯಮ್ಮನವರ ಮಮತೆಯ ಅಪ್ಪುಗೆಯಲ್ಲಿ ಒಂದೇ ಕುಟುಂಬವಾಗಿ ಏಕತೆಯಿಂದ ಬದುಕುವಂತೆ ಅವರು ಕರೆ ನೀಡಿದರು.

10 ಜೂನ್ 2026, 17:47