ಜಗದ್ಗುರು XIVನೇ ಲಿಯೋರವರು ಕಿಂಗ್ ಫೆಲಿಪೆ ರವರ ವಿಮಾನದಲ್ಲಿ ಸ್ಪೇನ್‌ನಿಂದ ನಿರ್ಗಮಿಸುತ್ತಾರೆ. ಜಗದ್ಗುರು XIVನೇ ಲಿಯೋರವರು ಕಿಂಗ್ ಫೆಲಿಪೆ ರವರ ವಿಮಾನದಲ್ಲಿ ಸ್ಪೇನ್‌ನಿಂದ ನಿರ್ಗಮಿಸುತ್ತಾರೆ.  (ANSA)

“ಸ್ಪೇನಿನ ರಾಜರ ವಿಮಾನದಲ್ಲಿ ವ್ಯಾಟಿಕನ್‌ಗೆ ಮರಳಿದ ಜಗದ್ಗುರು ಲಿಯೋರವರು”.

ತೆನೆರಿಫೆಯ ಲೋಸ್ ರೋಡೆಯೋಸ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮೂಲ ವಿಮಾನ ಹಾರಾಟ ನಡೆಸಲು ಸಾಧ್ಯವಾಗದ ಕಾರಣ, ಸ್ಪೇನಿನ ರಾಜ ಫೆಲಿಪೆರವರಿಂದ ವ್ಯವಸ್ಥೆ ಮಾಡಲಾದ ವಿಶೇಷ ವಿಮಾನದಲ್ಲಿ ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ಗೆ ಹಿಂತಿರುಗಿದರು.

ವ್ಯಾಟಿಕನ್ ವರದಿ

“ಜಗದ್ಗುರು ಲಿಯೋರವರು ಸ್ಪೇನಿನ ಮಹಾರಾಜರಿಂದ ಸೌಜನ್ಯಪೂರ್ವಕವಾಗಿ ಒದಗಿಸಲಾದ ವಿಮಾನದಲ್ಲಿ ರೋಮಿಗೆ ಮರಳಲಿದ್ದಾರೆ. ಈ ವಿಮಾನವು ಸ್ಥಳೀಯ ಸಮಯ ಸಂಜೆ ಸುಮಾರು 6 ಗಂಟೆಗೆ ಹೊರಡಲಿದ್ದು, ರೋಮಿನ ಸಮಯ ರಾತ್ರಿ ಸುಮಾರು 11 ಗಂಟೆಗೆ ತಲುಪುವ ನಿರೀಕ್ಷೆಯಿದೆ.

ಜಗದ್ಗುರುಗಳ ಅಧಿಕಾರ ಸ್ಥಳದ ಸಿಬ್ಬಂದಿ ಹಾಗೂ ಜಗದ್ಗುರುಗಳೊಂದಿಗೆ  ಪ್ರಯಾಣಿಸುತ್ತಿದ್ದ ಪತ್ರಕರ್ತರು, ಐಬೇರಿಯಾ  ಸಂಸ್ಥೆಯು ಒದಗಿಸಿದ ಪ್ರತ್ಯೇಕ ವಿಮಾನದಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ರೋಮಿಗೆ ಮರಳಲಿದ್ದಾರೆ.”

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಟೆಲಿಗ್ರಾಂ ಮೂಲಕ ಪ್ರಕಟಿಸಿದ ಈ ಪ್ರಕಟಣೆ, ಜಗದ್ಗುರುಗಳನ್ನು ರೋಮಿಗೆ ಕರೆದೊಯ್ಯಬೇಕಿದ್ದ ಐಬೇರಿಯಾ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಹೊರಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊರಬಂದಿತು.

ಅಂತಿಮವಾಗಿ, ಸ್ಪೇನಿನ ರಾಜರು ಒದಗಿಸಿದ ವಿಮಾನವು ಸ್ಥಳೀಯ ಸಮಯ ಸಂಜೆ 6 ಗಂಟೆಯ ಸ್ವಲ್ಪ ನಂತರ ಹಾರಾಟ ಆರಂಭಿಸಿತು.

ಜಗದ್ಗುರುಗಳ ಯಾತ್ರೆಯ ಅಪೂರ್ವ ಅಂತ್ಯ

ಈ ರೀತಿಯಾಗಿ, ಅಪರೂಪದ ಬೆಳವಣಿಗೆಯೊಂದರಲ್ಲಿ, ಜಗದ್ಗುರು XIVನೇ ಲಿಯೋರವರು ನಾಲ್ಕನೇ ಅಂತರರಾಷ್ಟ್ರೀಯ ಪ್ರೇಷಿತರ ಯಾತ್ರೆಯು ತೆನೆರಿಫೆ ಉತ್ತರ ವಿಮಾನ ನಿಲ್ದಾಣದಲ್ಲಿ (ಲೋಸ್ ರೋಡೆಯೋಸ್) ಅಂತ್ಯಗೊಂಡಿತು. ಒಂದು ವಾರದ ಈ ಭೇಟಿಯ ಸಂದರ್ಭದಲ್ಲಿ ಅವರು ಮ್ಯಾಡ್ರಿಡ್, ಬಾರ್ಸಿಲೋನಾ, ಲಾಸ್ ಪಾಲ್ಮಾಸ್ ದೆ ಗ್ರಾನ್ ಕ್ಯಾನರಿಯಾ ಮತ್ತು ತೆನೆರಿಫೆಗೆ ಭೇಟಿ ನೀಡಿದ್ದರು.

ಐಬೇರಿಯಾ ಏರ್‌ಬಸ್ A320 ವಿಮಾನದ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಜಗದ್ಗುರುಗಳ ನಿರ್ಗಮನವು ಸಾಕಷ್ಟು ಸಮಯ ವಿಳಂಬವಾಯಿತು. ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 4:15ಕ್ಕೆ ವಿಮಾನವು ಹಾರಾಟಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಆರಂಭಿಸಿತ್ತು.

ಆದರೆ ಕೆಲವೇ ಕ್ಷಣಗಳ ಬಳಿಕ, ವಿಮಾನದ ಮೆಟ್ಟಿಲುಗಳನ್ನು ಮತ್ತೆ ವಿಮಾನದ ಬಳಿಗೆ ತರಲಾಯಿತು. ಕೆಲವೇ ಕ್ಷಣಗಳ ಹಿಂದೆ ವಿದಾಯ ಹೇಳಿದ್ದ ಸ್ಪೇನಿನ ರಾಜ VIನೇ ಫೆಲಿಪೆರವರು, ಜಗದ್ಗುರುಗಳನ್ನು ವಿಮಾನ ನಿಲ್ದಾಣದ ವಿಐಪಿ ವಿಶ್ರಾಂತಿ ಕೋಣೆಗೆ ಕರೆದೊಯ್ದರು. ಅವರ ನಂತರ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ಹಾಗೂ ಜಗದ್ಗುರುಗಳ ನಿಯೋಗದೊಂದಿಗೆ ಪ್ರಯಾಣಿಸುತ್ತಿದ್ದ ಇತರ ಕಾರ್ಡಿನಲ್‌ಗಳು ಮತ್ತು ಬಿಷಪ್‌ಗಳೂ ವಿಮಾನದಿಂದ ಇಳಿದರು.

ವಿದಾಯ ಸಮಾರಂಭ

ಆದಾಗ್ಯೂ, ವಿದಾಯ ಸಮಾರಂಭವು ಪೂರ್ವನಿಗದಿತ ವೇಳಾಪಟ್ಟಿಯಂತೆ ನಡೆಯಿತು. ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 3:45ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಗದ್ಗುರು XIVನೇ ಲಿಯೋರವರನ್ನು ಸ್ಪೇನಿನ ರಾಜ VIನೇ ಫೆಲಿಪೆ , ಸ್ಥಳೀಯ ಆಡಳಿತದ ಹಲವು ಪ್ರತಿನಿಧಿಗಳು ಹಾಗೂ ಸ್ಥಳೀಯ ಧರ್ಮ ಸಭೆಯ ಮುಖಂಡರು ಸ್ವಾಗತಿಸಿದರು.

ರಾಷ್ಟ್ರಗೀತೆಗಳ ಗಾಯನ ಮತ್ತು ಧ್ವಜಗಳಿಗೆ ಗೌರವ ಸಲ್ಲಿಸಿದ ಬಳಿಕ, ಜಗದ್ಗುರುಗಳು ಮತ್ತು ರಾಜರು ಗೌರವ ರಕ್ಷಕ ದಳದ ಪರಿವೀಕ್ಷಣೆ ನಡೆಸಿದರು. ನಂತರ ಇಬ್ಬರೂ ತಮ್ಮ ತಮ್ಮ ನಿಯೋಗಗಳ ಸದಸ್ಯರನ್ನು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.

12 ಜೂನ್ 2026, 21:40