ಏಕತೆ ಮತ್ತು ಭೇಟಿಯ ಮನೋಭಾವವನ್ನು ಬಲಪಡಿಸಲು ಜಗದ್ಗುರುಗಳ ಸ್ಪೇನ್ ಭೇಟಿ: ಕಾರ್ಡಿನಲ್ ಪಾರೋಲಿನ್.
ವ್ಯಾಟಿಕನ್ ವರದಿ
ವ್ಯಾಟಿಕನ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆತ್ರೊ ಪಾರೋಲಿನ್, ಜಗದ್ಗುರು XIVನೇ ಲಿಯೋರವರು ಸ್ಪೇನಿನ ಪ್ರೇಷಿತ ಯಾತ್ರೆಯ ಮುಖ್ಯ ಉದ್ದೇಶವು ಧರ್ಮ ಸಭೆಯ ವಿಶ್ವಾಸಿಗಳನ್ನು ಮಾತ್ರವಲ್ಲದೆ ಸತ್ಸಂಕಲ್ಪವುಳ್ಳ ಎಲ್ಲ ಜನರನ್ನು ಭೇಟಿಯಾಗುವುದು ಮತ್ತು ಸಮಾಜದಲ್ಲಿ ಪರಸ್ಪರ ಏಕತೆ ಹಾಗೂ ಸಂವಾದದ ಮನೋಭಾವವನ್ನು ಬಲಪಡಿಸುವುದಾಗಿದೆ ಎಂದು ಹೇಳಿದರು. ಕ್ರಿಸ್ತನು ಜೀವನ, ಮರಣ ಮತ್ತು ದುಃಖದಂತಹ ಮಾನವ ಜೀವನದ ಮೂಲಭೂತ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನೆ ಎಂಬ ಸುವಾರ್ತೆಯ ಸಂದೇಶವನ್ನು ಎಲ್ಲರಿಗೂ ತಲುಪಿಸುವುದು ಈ ಯಾತ್ರೆಯ ಕೇಂದ್ರಬಿಂದುವಾಗಿದೆ ಎಂದು ಅವರು ವಿವರಿಸಿದರು.
ಸ್ಪೇನಿನ ಸಂಸತ್ತಿನೊಂದಿಗೆ ಜಗದ್ಗುರುಗಳು ನಡೆಸಲಿರುವ ಭೇಟಿಯ ಕುರಿತು ಮಾತನಾಡಿದ ಕಾರ್ಡಿನಲ್ ಪಾರೋಲಿನ್, ಯಾವುದೇ ಕಾನೂನು ಮತ್ತು ಸಾಮಾಜಿಕ ನೀತಿಗಳ ಮೂಲಾಧಾರ ಮಾನವ ಘನತೆ ಮತ್ತು ಸಾಮೂಹಿಕ ಹಿತವಾಗಿರಬೇಕು ಎಂದು ಹೇಳಿದರು. ವಿಶೇಷವಾಗಿ ಮಧ್ಯಧರಾ ಪ್ರದೇಶದಲ್ಲಿ ವಲಸೆಯ ಸಮಸ್ಯೆಯನ್ನು ಮಾನವೀಯತೆ, ಸಹಾನುಭೂತಿ ಮತ್ತು ಜಾಗತಿಕ ಸಹಕಾರದ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಪ್ರತಿಯೊಬ್ಬ ವಲಸಿಗನಿಗೂ ಸಹಜ ಮಾನವ ಹಕ್ಕುಗಳಿವೆ ಮತ್ತು ಅವುಗಳನ್ನು ಎಲ್ಲ ಸಂದರ್ಭಗಳಲ್ಲೂ ಗೌರವಿಸಬೇಕು ಎಂಬುದು ಜಗದ್ಗುರುಗಳ ಅಧಿಕಾರ ಸ್ಥಳದ ನಿಲುವಾಗಿದೆ ಎಂದರು.
ಪ್ರಾದೇಶಿಕ ಸ್ವಾಯತ್ತತೆ ಮತ್ತು ಸಾಮಾಜಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಧರ್ಮ ಸಭೆಯ ಪಾತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಜಗದ್ಗುರುಗಳ ಮೂಲ ಧ್ಯೇಯವೇ ಏಕತೆ ಮತ್ತು ಶಾಂತಿಯನ್ನು ಬೆಳೆಸುವುದಾಗಿದೆ ಎಂದು ಹೇಳಿದರು. ಪೇತ್ರನ ಉತ್ತರಾಧಿಕಾರಿಯಾಗಿ ಜಗದ್ಗುರುಗಳು ಧರ್ಮ ಸಭೆಯ ಹಾಗೂ ವಿಶ್ವಾಸಿಗಳ ಐಕ್ಯತೆಯ ಗೋಚರ ಸಂಕೇತವಾಗಿದ್ದು, ರಾಷ್ಟ್ರಗಳ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡದೆ, ಸುವಾರ್ತೆಯ ಬೆಳಕಿನಲ್ಲಿ ಮಾನವ ಜೀವನದ ಎಲ್ಲ ಆಯಾಮಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮ್ಯಾಡ್ರಿಡ್‌ನಲ್ಲಿ ಯುವಜನರೊಂದಿಗೆ ನಡೆಯಲಿರುವ ಪ್ರಾರ್ಥನಾ ಜಾಗರಣೆಯ ಮಹತ್ವವನ್ನು ವಿವರಿಸಿದ ಕಾರ್ಡಿನಲ್ ಪಾರೋಲಿನ್ ರವರು, ಇಂದಿನ ವೇಗದ ಮತ್ತು ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಯುವಕರು ಸತ್ಯದ ಅನ್ವೇಷಕರು, ಶಾಂತಿಯ ಪ್ರವಾದಿಗಳು ಹಾಗೂ ನಿಜವಾದ ಪ್ರೀತಿಯ ಸಾಕ್ಷಿಗಳಾಗಬೇಕು ಎಂದು ಹೇಳಿದರು. ಮೌನ, ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಮಾನವಕುಲದ ಒಳಿತಿಗಾಗಿ ಬಳಸುವಂತೆ ಜಗದ್ಗುರುಗಳು ಯುವಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬಾರ್ಸಿಲೋನಾದ ಸಾಗ್ರಾದಾ ಫಮಿಲಿಯಾ ಬಸಿಲಿಕಾದಲ್ಲಿ ನಡೆಯಲಿರುವ ಪವಿತ್ರ ಬಲಿಪೂಜೆ ಮತ್ತು ‘ಯೇಸು ಕ್ರಿಸ್ತನ ಗೋಪುರ’ದ ಆಶೀರ್ವಾದವು ಈ ಯಾತ್ರೆಯ ಅತ್ಯಂತ ಸಾಂಕೇತಿಕ ಕ್ಷಣಗಳಲ್ಲಿ ಒಂದಾಗಲಿದೆ ಎಂದು ಕಾರ್ಡಿನಲ್ ಹೇಳಿದರು. ಈ ಗೋಪುರವು ಮಾನವನ ದೃಷ್ಟಿಯನ್ನು ದೇವರತ್ತ ಎತ್ತುವ ಸಂಕೇತವಾಗಿದ್ದು, ಪ್ರಸಿದ್ಧ ವಾಸ್ತುಶಿಲ್ಪಿ ಅಂತೋನಿ ಗೌಡಿಯ ನಂಬಿಕೆ ಮತ್ತು ಸುವಾರ್ತಾ ಸಂದೇಶದ ಕಲಾತ್ಮಕ ಅಭಿವ್ಯಕ್ತಿಗೆ ಜೀವಂತ ಸಾಕ್ಷಿಯಾಗಿದೆ. ಇದು ಸ್ಪೇನಿನ ಸಾಂಸ್ಕೃತಿಕ ಪರಂಪರೆಯಷ್ಟೇ ಅಲ್ಲ, ಅದರ ಕ್ರೈಸ್ತ ನಂಬಿಕೆಯ ಬಲವಾದ ಪ್ರತೀಕವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ಪೇನಿನ ಇಂದಿನ ಸಾಮಾಜಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಕಾರ್ಡಿನಲ್ ಪಾರೋಲಿನ್ ರವರು, ಸವಾಲುಗಳ ನಡುವೆಯೂ ಆ ದೇಶವು ತನ್ನ ಆಳವಾದ ಕ್ರೈಸ್ತ ಬೇರುಗಳನ್ನು ಉಳಿಸಿಕೊಂಡಿದ್ದು, ಪೇತ್ರನ ಉತ್ತರಾಧಿಕಾರಿಯ ಮೇಲಿನ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತಿದೆ ಎಂದು ಹೇಳಿದರು. ಮಾನವ ಘನತೆ, ಸಂವಾದ ಮತ್ತು ಸಮನ್ವಯವನ್ನು ಆಧಾರವಾಗಿಟ್ಟುಕೊಂಡು ಸ್ಪೇನಿನ ಯುರೋಪ್ ಮತ್ತು ವಿಶ್ವದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಮಾನವ ಹಕ್ಕುಗಳು, ಶಾಂತಿ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವಲ್ಲಿ ಸ್ಪೇನಿನ ಮಹತ್ವದ ಪಾತ್ರ ವಹಿಸಬಹುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
