ಹುಡುಕಿ

Il Papa ai trafficanti di essere umani, fermatevi e convertitevi!

ಮಾನವ ಕಳ್ಳಸಾಗಣೆಗಾರರಿಗೆ ಜಗದ್ಗುರುಗಳು: ಪಶ್ಚಾತ್ತಾಪಪಡಿರಿ! ದೈವಿಕ ನ್ಯಾಯವು ನಿಮ್ಮನ್ನು ಕಾಯುತ್ತಿದೆ.

ಟೆನೆರಿಫ್‌ನಲ್ಲಿ ವಲಸಿಗರೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾದ ಜಗದ್ಗುರು XIVನೇ ಲಿಯೋರವರು, ವಲಸಿಗರ ಸಮಾಜದಲ್ಲಿ ಒಳಗೊಳ್ಳುವಿಕೆ (ಏಕೀಕರಣ) ಎಂಬುದು ಮಾನವ ಘನತೆ ಮತ್ತು ಸೇರಿದ ಭಾವನೆಯನ್ನು ಪುನಃಸ್ಥಾಪಿಸುವ ಎಲ್ಲರ ಹಂಚಿಕೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಅದೇ ವೇಳೆ, ಮಾನವ ಕಳ್ಳಸಾಗಣೆಯಲ್ಲಿ ತೊಡಗಿರುವವರಿಗೆ ಪಶ್ಚಾತ್ತಾಪಪಡಲು ಕರೆ ನೀಡಿ, ಇಲ್ಲವಾದರೆ ಅವರು ದೈವಿಕ ನ್ಯಾಯವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವ್ಯಾಟಿಕನ್ ವರದಿ

ಸ್ಪೇನಿಗೆ ತಮ್ಮ ಪ್ರೇಷಿತರ ಪ್ರವಾಸದ ಅಂತಿಮ ದಿನವಾದ ಶುಕ್ರವಾರ, ಟೆನೆರಿಫ್‌ನ ಲಾ ಲಗುನಾ ನಗರದ ಪ್ಲಾಸಾ ದೆಲ್ ಕ್ರಿಸ್ತೊದಲ್ಲಿ ವಲಸಿಗರ ಸೇವೆಯಲ್ಲಿ ತೊಡಗಿರುವ ಧರ್ಮ ಸಭೆಯ ಸಂಘಟನೆಗಳು, ದತ್ತಿ ಸಂಸ್ಥೆಗಳು ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಜಗದ್ಗುರು XIVನೇ ಲಿಯೋರವರು ಮಾತನಾಡಿದರು. ವಲಸಿಗರನ್ನು ಸ್ವಾಗತಿಸುವುದು ಕೇವಲ ತುರ್ತು ಸಹಾಯಕ್ಕೆ ಸೀಮಿತವಾಗಬಾರದು, ಅವರ ಘನತೆ, ಸೇರಿದ ಭಾವನೆ ಮತ್ತು ಭವಿಷ್ಯದ ಅವಕಾಶಗಳನ್ನು ಪುನಃಸ್ಥಾಪಿಸುವ ಸಮಗ್ರ ಪ್ರಕ್ರಿಯೆಯಾಗಬೇಕು ಎಂದು ಅವರು ಒತ್ತಿಹೇಳಿದರು.

ಲಾ ಲಗುನಾ ನಗರವನ್ನು “ಗೋಡೆಗಳಿಲ್ಲದ ನಗರ” ಎಂದು ಕರೆಯಲಾಗುತ್ತದೆ ಎಂದು ಉಲ್ಲೇಖಿಸಿದ ಜಗದ್ಗುರುಗಳು, ನಿಜವಾದ ಗೋಡೆಗಳು ಕಲ್ಲಿನಿಂದ ನಿರ್ಮಿತವಾಗಿರುವುದಿಲ್ಲ, ಅವು ಭಯ, ಉದಾಸೀನತೆ ಮತ್ತು ಪೂರ್ವಾಗ್ರಹಗಳ ರೂಪದಲ್ಲಿ ಮಾನವರ ಹೃದಯಗಳಲ್ಲಿ ನಿರ್ಮಾಣವಾಗುತ್ತವೆ ಎಂದು ಹೇಳಿದರು. ವಲಸಿಗರನ್ನು ಸಂಖ್ಯೆಗಳಾಗಿ ಅಥವಾ ಕಡತಗಳಾಗಿ ನೋಡುವ ಬದಲು, ಅವರ ಜೀವನ ಕಥೆಗಳನ್ನು ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಜಗದ್ಗುರುಗಳ ಪ್ರಕಾರ, ಏಕೀಕರಣವು ಕೇವಲ ದಾನಧರ್ಮ ಅಥವಾ ಸಂದರ್ಭೋಚಿತ ಸಹಾಯವಲ್ಲ. “ಸ್ವಾಗತವು ಬಾಗಿಲನ್ನು ತೆರೆಯುತ್ತದೆ, ಏಕೀಕರಣವು ಆ ಬಾಗಿಲಿನೊಳಗೆ ಪ್ರವೇಶಿಸಲು ನೆರವಾಗುತ್ತದೆ” ಎಂದು ಅವರು ಹೇಳಿದರು. ವಲಸಿಗರು ತಮ್ಮ ಹೊಸ ದೇಶದ ಭಾಷೆ, ಕಾನೂನು ಮತ್ತು ಸಂಸ್ಕೃತಿಯನ್ನು ಕಲಿಯಬೇಕು, ಅದೇ ಸಮಯದಲ್ಲಿ ಅವರನ್ನು ಸ್ವೀಕರಿಸುವ ಸಮಾಜವೂ ತನ್ನ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳಬೇಕು. ಈ ಪರಸ್ಪರ ವಿನಿಮಯವೇ ನಿಜವಾದ ಏಕೀಕರಣದ ಹಾದಿಯಾಗಿದೆ ಎಂದು ಅವರು ವಿವರಿಸಿದರು.

ವಲಸೆಯನ್ನು ಕೇವಲ ರಾಜಕೀಯ ಅಥವಾ ಆಡಳಿತಾತ್ಮಕ ಸಮಸ್ಯೆಯಾಗಿ ನೋಡಬಾರದು ಎಂದು ಜಗದ್ಗುರುಗಳು ಎಚ್ಚರಿಸಿದರು. ವಲಸಿಗರು ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟ ಮಾನವರಾಗಿದ್ದು, ಅವರ ಜೀವನ ಮತ್ತು ಘನತೆ ಅಮೂಲ್ಯವಾದವು ಎಂದು ಅವರು ನೆನಪಿಸಿದರು. ತಮ್ಮ ಜೀವನವನ್ನು ಪುನಃ ಕಟ್ಟಿಕೊಳ್ಳಲು ಅವಕಾಶವನ್ನು ಹುಡುಕುತ್ತಿರುವ ಈ ಜನರಿಗೆ ಸಮಾಜವು ಭರವಸೆ, ಗೌರವ ಮತ್ತು ಭಾಗವಹಿಸುವಿಕೆಯ ಅವಕಾಶಗಳನ್ನು ಒದಗಿಸಬೇಕು ಎಂದು ಹೇಳಿದರು.

ಸಮುದ್ರವನ್ನು ಸುರಕ್ಷಿತವಾಗಿ ದಾಟಿದ ನಂತರವೂ ಅನೇಕ ವಲಸಿಗರು ಏಕಾಂಗಿತನ, ಶೋಷಣೆ ಮತ್ತು ನಿರಾಕರಣೆಯನ್ನು ಎದುರಿಸುತ್ತಾರೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು. ಇದನ್ನು ಅವರು “ಮೌನವಾದ ಎರಡನೇ ಹಡಗು ಮುಳುಗು” ಎಂದು ಬಣ್ಣಿಸಿದರು. ಈ ಎರಡನೇ ದುರಂತವನ್ನು ತಡೆಯುವುದೇ ನಿಜವಾದ ಏಕೀಕರಣದ ಉದ್ದೇಶವಾಗಿದ್ದು, ಅದಕ್ಕಾಗಿ ದಾನ ಸಂಸ್ಥೆ, ವಲಸೆ ಕಚೇರಿಗಳು, ಧರ್ಮಪ್ರಾಂತ್ಯಗಳು ಮತ್ತು ಸ್ಥಳೀಯ ಸಂಘಟನೆಗಳು ಮಾಡುತ್ತಿರುವ ಸೇವೆಯನ್ನು ಅವರು ಪ್ರಶಂಸಿಸಿದರು.]

ಕೊನೆಯಲ್ಲಿ, ಮಾನವ ಕಳ್ಳಸಾಗಣೆ ಮತ್ತು ಶೋಷಣೆಯಿಂದ ಲಾಭ ಪಡೆಯುವವರಿಗೆ ಜಗದ್ಗುರುಗಳು ತೀವ್ರ ಎಚ್ಚರಿಕೆ ನೀಡಿದರು. “ನಿಲ್ಲಿಸಿ, ಪಶ್ಚಾತ್ತಾಪಪಡಿರಿ,” ಎಂದು ಅವರು ಹೇಳಿದರು. “ಕಳೆದುಹೋದ ಪ್ರತಿಯೊಂದು ಜೀವಕ್ಕಾಗಿ, ಮೋಸಹೋಗಿದ ಪ್ರತಿಯೊಂದು ಕುಟುಂಬಕ್ಕಾಗಿ ಮತ್ತು ಶೋಷಿಸಲ್ಪಟ್ಟ ಪ್ರತಿಯೊಬ್ಬರಿಗಾಗಿ ನೀವು ದೇವರ ನ್ಯಾಯದ ಮುಂದೆ ಉತ್ತರ ನೀಡಬೇಕಾಗುತ್ತದೆ.” ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಈಜಿಪ್ಟ್‌ಗೆ ನಿರಾಶ್ರಿತರಾಗಿ ತೆರಳಿದ್ದ ನಜರೇತ್‌ನ ಪವಿತ್ರ ಕುಟುಂಬವು ಇಂದಿಗೂ ಪ್ರತಿಯೊಬ್ಬ ವಲಸಿಗ, ನಿರಾಶ್ರಿತ ಮತ್ತು ತಾಯ್ನಾಡನ್ನು ತೊರೆಯಬೇಕಾದ ವ್ಯಕ್ತಿಗೆ ಆಶ್ರಯ ಹಾಗೂ ಮಾದರಿಯಾಗಿದೆ ಎಂದು ಜಗದ್ಗುರು ಲಿಯೋರವರು ನೆನಪಿಸಿದರು.

 

12 ಜೂನ್ 2026, 21:10