ಹುಡುಕಿ

Pope Leo XIV visits Spain

"ಏಕತೆ ಮತ್ತು ವೈವಿಧ್ಯತೆಯಲ್ಲಿ ಸುವಾರ್ತೆಯ ಸಂತೋಷವನ್ನು ಲೋಕಕ್ಕೆ ಸಾರುವ ಸಾಕ್ಷಿಗಳಾಗಿರಿ" ಎಂದು ಜಗದ್ಗುರು XIVನೇ ಲಿಯೋರವರು ಕರೆ ನೀಡಿದರು.

ಮ್ಯಾಡ್ರಿಡ್ ನಗರದ ಸಾಂತಿಯಾಗೋ ಬೆರ್ನಬೆವು ಕ್ರೀಡಾಂಗಣದಲ್ಲಿ ನಡೆದ ಮಹಾಧರ್ಮಪ್ರಾಂತ್ಯದ ಸಮುದಾಯದೊಂದಿಗಿನ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು ಧರ್ಮಸ್ನಾನ, ಸಿನೊಡಾಲಿಟಿ (ಒಟ್ಟಾಗಿ ನಡೆಯುವ ಧರ್ಮ ಸಭೆಯ ಪಯಣ) ಮತ್ತು ಸುವಾರ್ತಾ ಪ್ರಸಾರದ ಕುರಿತು ಚಿಂತನೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರು ಮಹಾಧರ್ಮಪ್ರಾಂತ್ಯದ ವಿವಿಧ ಸಮುದಾಯಗಳ ಸದಸ್ಯರು ನೀಡಿದ ಸಾಕ್ಷ್ಯಗಳು ಮತ್ತು ಅನುಭವಗಳನ್ನು ಆಧಾರವಾಗಿಸಿಕೊಂಡು ತಮ್ಮ ಸಂದೇಶವನ್ನು ನೀಡಿದರು.

ವ್ಯಾಟಿಕನ್ ವರದಿ

ಮ್ಯಾಡ್ರಿಡ್‌ನ ಪ್ರಸಿದ್ಧ ಸಾಂತಿಯಾಗೋ ಬೆರ್ನಬೆವು ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ನಡೆದ ಮಹಾಧರ್ಮಪ್ರಾಂತ್ಯದ ಸಮುದಾಯದ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು ಸುಮಾರು 80,000 ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಸ್ಪೇನಿಗೆ ತಮ್ಮ ಪ್ರೇಷಿತರ ಯಾತ್ರೆಯ ಮೂರನೇ ದಿನದ ಈ ಕಾರ್ಯಕ್ರಮದಲ್ಲಿ, ವಿಶ್ವಾಸಿಗಳು “ಭರವಸೆಯ ಸಿಂಫನಿ”ಯಾಗಿ ರೂಪುಗೊಂಡು ವೇಗವಾಗಿ ಬದಲಾಗುತ್ತಿರುವ ನಗರದ ಹೃದಯವನ್ನು ಸ್ಪರ್ಶಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾಧರ್ಮಪ್ರಾಂತ್ಯದ ವಿವಿಧ ಸಮುದಾಯಗಳ ಪ್ರತಿನಿಧಿಗಳು ತಮ್ಮ ಜೀವನ ಸಾಕ್ಷ್ಯಗಳನ್ನು ಹಂಚಿಕೊಂಡರು. ಧರ್ಮ ಕೇಂದ್ರದ ಸೇವೆಯಲ್ಲಿ ತೊಡಗಿರುವ ಸಾಮಾನ್ಯ ವಿಶ್ವಾಸಿ, ಧರ್ಮಾಧ್ಯಕ್ಷೀಯ ಕೌನ್ಸಿಲ್ ಸದಸ್ಯ, ಧರ್ಮಪ್ರಾಂತ್ಯದ ಗುರುಗಳು, ಧರ್ಮ ಸಭೆಯಲ್ಲಿ ಸ್ವಾಗತ ಮತ್ತು ಬೆಂಬಲ ಕಂಡುಕೊಂಡ ವಲಸೆ ಕುಟುಂಬ ಹಾಗೂ ಇತ್ತೀಚೆಗೆ ಧರ್ಮಸ್ನಾನ ಪಡೆದ ಯುವಕ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಾಕ್ಷ್ಯಗಳು ಜಗದ್ಗುರುಗಳ ಐಕ್ಯತೆ, ಸುವಾರ್ತಾ ಪ್ರಸಾರ ಮತ್ತು ಧರ್ಮ ಸಭೆಯ ಧ್ಯೇಯದ ಕುರಿತ ಚಿಂತನೆಗಳಿಗೆ ಜೀವಂತ ಹಿನ್ನೆಲೆಯಾದವು.

ತಮ್ಮ ಸಂದೇಶದಲ್ಲಿ ಜಗದ್ಗುರುಗಳು, ಧರ್ಮ ಸಭೆಯನ್ನು “ಬಹುಸ್ವರ ಸಂಗೀತದ ಕಲೆಯನ್ನು ಕಲಿಯುವ ಸಮುದಾಯ” ಎಂದು ಬಣ್ಣಿಸಿದರು. ನಿಜವಾದ ಐಕ್ಯತೆ ಎಂದರೆ ಭಿನ್ನತೆಗಳನ್ನು ಅಳಿಸುವುದಲ್ಲ, ಅವುಗಳನ್ನು ಸೌಹಾರ್ದತೆಯಲ್ಲಿ ಒಗ್ಗೂಡಿಸುವುದಾಗಿದೆ ಎಂದು ಅವರು ಹೇಳಿದರು. ಧರ್ಮಸ್ನಾನದ ರೂಪಾಂತರಕಾರಿ ಶಕ್ತಿಯನ್ನು ಉಲ್ಲೇಖಿಸಿದ ಅವರು, ವಿಶ್ವಾಸವು ವ್ಯಕ್ತಿಯ ಜೀವನವನ್ನು ಮಾತ್ರವಲ್ಲ, ಅವನ ಪ್ರತಿಭೆ ಮತ್ತು ವರದಾನಗಳನ್ನು ಸಮಾಜದ ಒಳಿತಿಗಾಗಿ ಬಳಸುವ ದೃಷ್ಟಿಯನ್ನೂ ಬದಲಾಯಿಸುತ್ತದೆ ಎಂದು ತಿಳಿಸಿದರು.

ಜಗದ್ಗುರು XIVನೇ ಲಿಯೋರವರು ವೈವಿಧ್ಯತೆ ಮತ್ತು ಐಕ್ಯತೆಯ ನಡುವಿನ ಸಂಬಂಧದ ಕುರಿತು ಮಾತನಾಡುತ್ತಾ, ಇಂದಿನ ಕ್ರೈಸ್ತರು ಆಲಿಸುವಿಕೆ, ಸಂವಾದ ಮತ್ತು ಸಿನೊಡಾಲಿಟಿಯ ಮೂಲಕ ಭಿನ್ನತೆಗಳನ್ನು ಸಂಪನ್ಮೂಲಗಳಾಗಿ ಪರಿವರ್ತಿಸಬೇಕು ಎಂದು ಹೇಳಿದರು. ವಿವಿಧ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಅನುಭವಗಳು ಒಂದಾಗಿರುವ ಮ್ಯಾಡ್ರಿಡ್‌ನಂತಹ ಮಹಾನಗರಗಳು ಸುವಾರ್ತಾ ಪ್ರಸಾರಕ್ಕೆ ಅಪೂರ್ವ ಅವಕಾಶಗಳನ್ನು ಒದಗಿಸುತ್ತವೆ. ಆದ್ದರಿಂದ, ವಿಶ್ವಾಸಿಗಳು ತಮ್ಮ ಪರಿಚಿತ ವಲಯಗಳಲ್ಲೇ ಸೀಮಿತರಾಗದೆ ನಗರದ ಹೃದಯಭಾಗದತ್ತ ಹೆಜ್ಜೆ ಇಡಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ, ದಯೆ ಮತ್ತು ಸೌಜನ್ಯವನ್ನು ಕ್ರೈಸ್ತ ಸಾಕ್ಷ್ಯದ ಪ್ರಮುಖ ಅಂಶವೆಂದು ಜಗದ್ಗುರುಗಳು ವಿವರಿಸಿದರು. ವಿಭಜನೆ, ಅನಿಶ್ಚಿತತೆ ಮತ್ತು ಏಕಾಂತತೆಯಿಂದ ಕೂಡಿದ ಸಮಾಜದಲ್ಲಿ, ನಿಜವಾದ ಮಾನವೀಯ ಭೇಟಿಯಿಲ್ಲದ ಸುವಾರ್ತಾ ಸಂದೇಶ ಪರಿಣಾಮಕಾರಿಯಾಗುವುದಿಲ್ಲ ಎಂದು ಅವರು ಹೇಳಿದರು. ವಿಶೇಷವಾಗಿ ಧರ್ಮ ಸಭೆಯಲ್ಲಿ ಆತ್ಮೀಯ ಸ್ವಾಗತವನ್ನು ಕಂಡುಕೊಂಡ ವಲಸೆ ಕುಟುಂಬದ ಸಾಕ್ಷ್ಯವನ್ನು ಉಲ್ಲೇಖಿಸಿದ ಅವರು, “ಕೆಲವರ ದಯೆ ಅನೇಕ ಜನರ ಭಯವನ್ನು ಜಯಿಸಬಲ್ಲದು” ಎಂದು ಹೇಳಿದರು.

ತಮ್ಮ ಸಂದೇಶದ ಕೊನೆಯಲ್ಲಿ, ಜಗದ್ಗುರುಗಳು ಗುರುಗಳು ಮತ್ತು ವಿಶ್ವಾಸಿಗಳನ್ನು ಪವಿತ್ರಾತ್ಮನ ಧ್ವನಿಯನ್ನು ಆಲಿಸುವ ಹಾಗೂ ಕಾಲದ ಸವಾಲುಗಳಿಗೆ ಸುವಾರ್ತೆಯ ಬೆಳಕಿನಲ್ಲಿ ಪ್ರತಿಕ್ರಿಯಿಸುವ ಸಮುದಾಯಗಳಾಗಲು ಪ್ರೋತ್ಸಾಹಿಸಿದರು. “ಧಮ೯ಸಭೆಯನ್ನು ನೋಡಿ! ಸುವಾರ್ತೆಯ ಸಂಗೀತವನ್ನು ಆಲಿಸಿ!” ಎಂದು ಕರೆ ನೀಡಿದ ಅವರು, “ಎಲ್ಲರಿಗೂ ತೆರೆದ ಬೈಬಲಿನಂತಾಗಿರಿ. ದೇವರ ವಾಕ್ಯವು ನಿಮ್ಮ ಮುಖಗಳಲ್ಲಿ ಮತ್ತು ನಿಮ್ಮ ಜೀವನಗಳಲ್ಲಿ ಪ್ರತಿಫಲಿಸಲಿ. ಏಕೆಂದರೆ ಪ್ರೀತಿಯೇ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿರುವಂತೆ ಅನುಭವಿಸುವ ಭಾಷೆಯಾಗಿದೆ” ಎಂದು ಹೇಳಿದರು.

08 ಜೂನ್ 2026, 21:26