ಪವಿತ್ರ ಬಲಿಪೂಜೆಯ ಅನುಗ್ರಹವು ನಮ್ಮನ್ನು ಹೇಗೆ ರೂಪಾಂತರಿಸಿ, ಭರವಸೆಯ ಪ್ರಮುಖ ಸಾಕ್ಷಿಗಳನ್ನಾಗಿ ಮಾಡುತ್ತದೆ ಎಂಬುದನ್ನು ಜಗದ್ಗುರುಗಳು ನೆನಪಿಸುತ್ತಾರೆ.
ವ್ಯಾಟಿಕನ್ ವರದಿ
ಸ್ಪೇನಿನಲ್ಲಿನ ತಮ್ಮ ಧಾರ್ಮಿಕ ಭೇಟಿಯ ಎರಡನೇ ದಿನದಂದು, ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್‌ನ ಸಿಬೆಲೆಸ್ ಚೌಕದಲ್ಲಿ ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಹಬ್ಬದ (ಕಾರ್ಪಸ್ ಕ್ರಿಸ್ತಿ) ಪವಿತ್ರ ಬಲಿಪೂಜೆಗೆ ನೇತೃತ್ವ ವಹಿಸಿದರು. ಸುಮಾರು 12 ಲಕ್ಷಕ್ಕೂ ಅಧಿಕ ಭಕ್ತರು ಈ ಆಚರಣೆಯಲ್ಲಿ ಭಾಗವಹಿಸಿದ್ದು, ಬಲಿ ಪೂಜೆಯಲ್ಲಿ ಕ್ರಿಸ್ತನ ಜೀವಂತ ಸಾನ್ನಿಧ್ಯದ ಸುತ್ತ ಒಗ್ಗೂಡಿರುವುದಕ್ಕೆ ಜಗದ್ಗುರುಗಳು ಸಂತಸ ವ್ಯಕ್ತಪಡಿಸಿದರು.
ತಮ್ಮ ಪ್ರಭೊಧನೆಯಲ್ಲಿ ಜಗದ್ಗುರುಗಳು, ಯೇಸುಕ್ರಿಸ್ತನು ನಮ್ಮನ್ನು ಪರಲೋಕದ ತಂದೆಯೊಂದಿಗೆ ಐಕ್ಯಗೊಳಿಸಲು ತನ್ನ ಜೀವವನ್ನೇ ಅರ್ಪಿಸಿದನು ಮತ್ತು ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿಯಾಗಿ ದೇವರ ಪ್ರೀತಿ ಹಾಗೂ ಜೀವದಿಂದ ನಮ್ಮನ್ನು ಪೋಷಿಸುತ್ತಾರೆ ಎಂದು ಸ್ಮರಿಸಿದರು. ಮರಣಕ್ಕಿಂತಲೂ ಪ್ರಬಲವಾದ ದೇವರ ಪ್ರೀತಿಯೇ ಬಲಿಪೂಜೆಯ ಮೂಲಕ ನಮಗೆ ದೊರೆಯುತ್ತದೆ ಎಂದು ಅವರು ಹೇಳಿದರು.
ಸ್ಪೇನಿನಲ್ಲಿ ಶತಮಾನಗಳಿಂದ ಆಚರಿಸಲ್ಪಡುತ್ತಿರುವ ಕಾರ್ಪಸ್ ಕ್ರಿಸ್ತಿ ಸಂಪ್ರದಾಯವನ್ನು ಜಗದ್ಗುರುಗಳು ವಿಶೇಷವಾಗಿ ಪ್ರಶಂಸಿಸಿದರು. ಮೆರವಣಿಗೆಗಳು, ಸಂಗೀತ, ಕಲೆ ಮತ್ತು ಧಾರ್ಮಿಕ ಭಕ್ತಿಯ ಮೂಲಕ ವ್ಯಕ್ತವಾಗುವ ಈ ಪರಂಪರೆ ಕೇವಲ ಜನಪದ ಸಂಸ್ಕೃತಿಯಲ್ಲ, ಅದು ಜೀವಂತನಾದ ಪುನರುತ್ಥಾನಗೊಂಡ ಕ್ರಿಸ್ತನಲ್ಲಿ ಇರುವ ನಂಬಿಕೆಯ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು.
ಯೂಕರಿಸ್ಟ್‌ನ ಮೆರವಣಿಗೆಗಳು ಯೇಸು ನಮ್ಮನ್ನು ಪೋಷಿಸುವ ದೇವರಾಗಿರುವುದಷ್ಟೇ ಅಲ್ಲ, ನಮ್ಮ ದೈನಂದಿನ ಬದುಕಿನ ಪಯಣದಲ್ಲಿ ನಮ್ಮೊಂದಿಗೆ ನಡೆಯುವ ಸಂಗಾತಿಯೂ ಆಗಿದ್ದಾನೆ ಎಂಬುದನ್ನು ನೆನಪಿಸುತ್ತವೆ ಎಂದು ಜಗದ್ಗುರುಗಳು ಹೇಳಿದರು. ಆತನು ಬಡವರಲ್ಲಿ, ದುಃಖಿತರಲ್ಲಿ, ನಿರ್ಲಕ್ಷಿತರಲ್ಲಿ ಮತ್ತು ಏಕಾಂಗಿಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾರೆ, ಆದ್ದರಿಂದ ನಾವು ಸಹ ಅವರ ಸೇವೆಯಲ್ಲಿ ದೇವರ ಸಾನ್ನಿಧ್ಯವನ್ನು ಕಾಣಬೇಕು ಎಂದು ಕರೆ ನೀಡಿದರು.
ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಹಬ್ಬವು ಸ್ವಾರ್ಥ, ನಿರ್ಲಕ್ಷ್ಯ ಮತ್ತು ಕೇವಲ ವೈಯಕ್ತಿಕ ನಂಬಿಕೆಯ ಸೀಮೆಯಿಂದ ಹೊರಬಂದು, ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಆಹ್ವಾನವಾಗಿದೆ ಎಂದು ಜಗದ್ಗುರುಗಳು ತಿಳಿಸಿದರು. ದೇವರು ನಿಜವಾದ ಸಾನ್ನಿಧ್ಯವಾಗಿರುವಂತೆ, ನಾವೂ ಸಹ ಸಮಾಜದ ಸವಾಲುಗಳು ಮತ್ತು ಅಗತ್ಯಗಳ ನಡುವೆ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮೂಹಿಕ ಹಿತಕ್ಕಾಗಿ ಶ್ರಮಿಸಬೇಕೆಂದು ಅವರು ಒತ್ತಿಹೇಳಿದರು.
ಸ್ಪೇನಿನ ಮುಂದಿನ ಧ್ಯೇಯವೆಂದರೆ, ಶತಮಾನಗಳಿಂದ ದೇಶವನ್ನು ರೂಪಿಸಿರುವ ಧಾರ್ಮಿಕ ಪರಂಪರೆಯನ್ನು ಕೇವಲ ಭೂತಕಾಲದ ವಸ್ತುಸಂಗ್ರಹಾಲಯವನ್ನಾಗಿ ಮಾಡದೆ, ಇಂದಿಗೂ ಜೀವಂತ ನಂಬಿಕೆಯನ್ನು ಕಲಿಸುವ ಶಾಲೆಯಾಗಿ ಉಳಿಸಿಕೊಳ್ಳುವುದು ಎಂದು ಜಗದ್ಗುರುಗಳು ಹೇಳಿದರು. ದೇವರ ಮುಂದೆ ಹಾಗೂ ನೆರೆಹೊರೆಯವರ ಮುಂದೆ ವಿನಯದಿಂದ ಮೊಣಕಾಲೂರಿ, ಪ್ರೀತಿಯನ್ನು ಉಚಿತ ಕೊಡುಗೆಯಾಗಿ ಹಂಚಿಕೊಳ್ಳುವ ಬದುಕಿಗೆ ಅವರು ಆಹ್ವಾನ ನೀಡಿದರು.
ಕೊನೆಯಲ್ಲಿ, ಯೂಕರಿಸ್ಟ್‌ನ ಅನುಗ್ರಹವು ನಮ್ಮನ್ನು ರೂಪಾಂತರಗೊಳಿಸಿ ಇತಿಹಾಸವನ್ನು ಬದಲಾಯಿಸುವ ಭರವಸೆಯ ಸಾಕ್ಷಿಗಳನ್ನಾಗಿ ಮಾಡುತ್ತದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಭಕ್ತರು ಮತ್ತೊಮ್ಮೆ ಈ ಯೂಕರಿಸ್ಟಿಕ್ ಬುಗ್ಗೆಯಿಂದ ಜೀವಜಲವನ್ನು ಪಡೆದು, ಅದನ್ನು ತಮ್ಮ ಕುಟುಂಬಗಳು, ಬಡವರು, ದುಃಖಿತರು ಮತ್ತು ಭರವಸೆ ಕಳೆದುಕೊಂಡವರೊಂದಿಗೆ ಹಂಚಿಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು. ಬಳಿಕ ಸುಮಾರು 30 ಸಾವಿರಕ್ಕೂ ಹೆಚ್ಚು ಹೂವುಗಳಿಂದ ಅಲಂಕರಿಸಲಾದ ಮಾರ್ಗದಲ್ಲಿ ಪವಿತ್ರ ಪರಮಪ್ರಸಾದದ ಮೆರವಣಿಗೆ ಮತ್ತು ಆಶೀರ್ವಾದದೊಂದಿಗೆ ಆಚರಣೆ ಸಮಾಪ್ತಿಯಾಯಿತು.
