ಹುಡುಕಿ

ವ್ಯಾಟಿಕನ್ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಜಗದ್ಗುರುಗಳಿಗೆ ನೀಡಿದ ಬಾಲಯೇಸುವಿನ ಆಸ್ಪತ್ರೆಯ ರೋಗಿಗಳು ರಚಿಸಿದ ರೇಖಾಚಿತ್ರ. ವ್ಯಾಟಿಕನ್ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಜಗದ್ಗುರುಗಳಿಗೆ ನೀಡಿದ ಬಾಲಯೇಸುವಿನ ಆಸ್ಪತ್ರೆಯ ರೋಗಿಗಳು ರಚಿಸಿದ ರೇಖಾಚಿತ್ರ.  (ANSA)

ವ್ಯಾಟಿಕನ್ ಮಕ್ಕಳ ಆಸ್ಪತ್ರೆಯ ರೋಗಿಗಳು ಜಗದ್ಗುರು XIVನೇ ಲಿಯೋರವರಿಗಾಗಿ ಚಿತ್ರಗಳನ್ನು ರಚಿಸಿದರು.

ವ್ಯಾಟಿಕನ್‌ನ ಬಾಲಯೇಸುವಿನ ಮಕ್ಕಳ ಆಸ್ಪತ್ರೆಯ ಪುಟ್ಟ ರೋಗಿಗಳು, ಡಿಕಾಸ್ಟರಿ ಫಾರ್ ಕಮ್ಯುನಿಕೇಶನ್‌ನ ಪತ್ರಕರ್ತರ ಮೂಲಕ ಜಗದ್ಗುರು XIVನೇ ಲಿಯೋರವರಿಗೆ ಒಂದು ಚಿತ್ರವನ್ನು ಉಡುಗೊರೆಯಾಗಿ ನೀಡಿ, ಅವರ ಸ್ಪೇನ್ ಪ್ರೇಷಿತರ ಯಾತ್ರೆಯಲ್ಲಿ ತಮ್ಮ ಪ್ರಾರ್ಥನೆ ಮತ್ತು ಶುಭಹಾರೈಕೆಗಳೊಂದಿಗೆ ಸಾಥ್ ನೀಡುತ್ತಿದ್ದಾರೆ.

ವ್ಯಾಟಿಕನ್ ವರದಿ

ಸ್ಪೇನ್‌ಗೆ ತೆರಳುತ್ತಿದ್ದ ವಿಮಾನಯಾನದಲ್ಲಿ ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನ ಬಾಲ ಯೇಸುವಿನ ಮಕ್ಕಳ ಆಸ್ಪತ್ರೆಯ ಪುಟ್ಟ ರೋಗಿಗಳು ಬಿಡಿಸಿದ ಒಂದು ಚಿತ್ರವನ್ನು ಸ್ವೀಕರಿಸಿದರು. ಅವರ ಪ್ರೇಷಿತರ ಯಾತ್ರೆಯು ಜೂನ್ 6ರಿಂದ 12ರವರೆಗೆ ನಡೆಯಲಿದೆ.

ಕೆಲವು ಮಾರ್ಕರ್‌ಗಳ ಗೆರೆಗಳು, ಹಳದಿ ಬಣ್ಣದ ಸೂರ್ಯ, ಬಿಳಿ ವಿಮಾನ ಮತ್ತು ಸ್ಪೇನ್‌ನ ರಾಷ್ಟ್ರಧ್ವಜ—ಈ ಚಿತ್ರವು ಮೋಡಗಳ ನಡುವೆ ಪ್ರಯಾಣಿಸುತ್ತಿರುವ ಜಗದ್ಗುರುಗಳನ್ನು ಮಕ್ಕಳು ಹೇಗೆ ಕಲ್ಪಿಸಿಕೊಂಡಿದ್ದಾರೆಂಬುದನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ.

ಜಗದ್ಗುರುಗಳೊಂದಿಗೆ ಪ್ರಯಾಣಿಸುತ್ತಿದ್ದ ವ್ಯಾಟಿಕನ್ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಈ ಚಿತ್ರವನ್ನು ಅವರಿಗೆ ಹಸ್ತಾಂತರಿಸಿದರು.

ಜಗದ್ಗುರು XIVನೇ ಲಿಯೋರವರು ಚಿತ್ರವನ್ನು ತಮ್ಮ ಕೈಯಲ್ಲಿ ಹಿಡಿದು ಗಮನವಿಟ್ಟು ವೀಕ್ಷಿಸಿದರು ಮತ್ತು ಮಂದಹಾಸ ಬೀರಿದರು. ಕೆಲವು ಕ್ಷಣಗಳ ಕಾಲ ಅವರ ದೃಷ್ಟಿ ಅದರ ಸೂಕ್ಷ್ಮ ವಿವರಗಳ ಮೇಲೆ ನೆಲೆಸಿತು. ವಿಮಾನದ ಹಿಂಭಾಗದಲ್ಲಿ ಚಿತ್ರಿಸಲಾದ ಸಂತ ಪೇತ್ರರ ಕೀಲಿಗಳು, ಕಿಟಕಿಯಿಂದ ಹೊರಗೆ ನೋಡುತ್ತಿರುವ ಜಗದ್ಗುರುಗಳ ಕುತ್ತಿಗೆಯಲ್ಲಿರುವ ಚಿನ್ನದ ಶಿಲುಬೆ ಮತ್ತು ಇಡೀ ದೃಶ್ಯವನ್ನು ಬೆಳಗಿಸುತ್ತಿರುವ ದೊಡ್ಡ ಸೂರ್ಯ. ಬಳಿಕ ಅವರು ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಬಾಲ ಯೇಸುವಿನ ಆಸ್ಪತ್ರೆಯ ಆಟದ ಕೊಠಡಿಯಿಂದ ಜಗದ್ಗುರುಗಳ ವಿಮಾನದವರೆಗೆ

ಈ ಬಣ್ಣಗಳ ಹಿಂದೆ, ವಿಮಾನ ಹಾರಾಟಕ್ಕೂ ಬಹಳ ಹಿಂದೆಯೇ ಆರಂಭವಾದ ಒಂದು ಹೃದಯಸ್ಪರ್ಶಿ ಕಥೆಯಿದೆ. ಅದು ಬಾಲ ಯೇಸುವಿನ ಮಕ್ಕಳ ಆಸ್ಪತ್ರೆಯ ಆಟದ ಕೊಠಡಿಯಲ್ಲಿ, ಮೇಜುಗಳು, ಮಾರ್ಕರ್‌ಗಳ ಒಂದು ಪೆಟ್ಟಿಗೆ ಮತ್ತು ಅಲ್ಲಲ್ಲಿ ಹರಡಿಕೊಂಡಿದ್ದ ಕಾಗದಗಳ ನಡುವೆ ಹುಟ್ಟಿಕೊಂಡಿತು.

ಆ ಮೇಜುಗಳ ಸುತ್ತ ವಿವಿಧ ಪ್ರದೇಶಗಳಿಂದ ಬಂದ ಮಕ್ಕಳು ಸೇರುತ್ತಾರೆ. ಅವರ ಜೀವನ ಪಥಗಳು ಬೇರೆಬೇರೆ ಆದರೂ, ಅವರು ಒಂದೇ ಅನುಭವವನ್ನು ಹಂಚಿಕೊಳ್ಳುತ್ತಾರೆ. ಆಸ್ಪತ್ರೆಯ ವಾರ್ಡ್‌ಗಳು, ವೈದ್ಯಕೀಯ ತಪಾಸಣೆಗಳು, ಚಿಕಿತ್ಸೆಗಳು, ಅಂತ್ಯವಿಲ್ಲದ ಕಾಯುವಿಕೆಗಳು ಮತ್ತು ಮೌನವಾಗಿ ಸಂಭ್ರಮಿಸಲ್ಪಡುವ ಸಣ್ಣ ಸಣ್ಣ ಗೆಲುವುಗಳು.

ಅಂತಹ ವಾತಾವರಣದಲ್ಲಿಯೇ ಜಗದ್ಗುರುಗಳಿಗಾಗಿ ಈ ವಿಶೇಷ ಉಡುಗೊರೆ ಹುಟ್ಟಿಕೊಂಡಿತು.

ಈ ಕಲಾಕೃತಿಯ ಸೃಷ್ಟಿಯಲ್ಲಿ ವಿಶೇಷವಾಗಿ ಒಂಬತ್ತು ವರ್ಷದ ಜೂಲಿಯಾ ಮುನ್ನಡೆ ವಹಿಸಿದ್ದಾಳೆ. ತನ್ನ ಸಹಿಯ ಪಕ್ಕದಲ್ಲಿ ಅವಳು ಒಂದು ಪುಟ್ಟ ಹೃದಯದ ಚಿಹ್ನೆಯನ್ನು ಸಹ ಚಿತ್ರಿಸಿದ್ದಾಳೆ. ಬಹುಶಃ ಸುಲಭವಾಗಿ ಗಮನಕ್ಕೆ ಬಾರದ ಈ ಸಣ್ಣ ವಿವರವೇ ಈ ಚಿತ್ರದ ಆತ್ಮವನ್ನು ಅಭಿವ್ಯಕ್ತಿಸುತ್ತದೆ.

ವ್ಯಾಟಿಕನ್‌ನ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಜಗದ್ಗುರುಗಳಿಗಾಗಿ ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಏಪ್ರಿಲ್‌ನಲ್ಲಿ ಜಗದ್ಗುರು ಲಿಯೋರವರು ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ಕೈಗೊಂಡಿದ್ದ ಪ್ರೇಷಿತರ ಯಾತ್ರೆಯ ಸಂದರ್ಭದಲ್ಲಿಯೂ ಬಾಲ ಯೇಸುವಿನ ಆಸ್ಪತ್ರೆಯ ಪುಟ್ಟ ರೋಗಿಗಳು ತಮ್ಮ ಚಿತ್ರವೊಂದರ ಮೂಲಕ ಅವರಿಗೆ ಸಾಥ್ ನೀಡಲು ಬಯಸಿದ್ದರು.

ಒಂದು ಆಸ್ಪತ್ರೆಯ ಆಟದ ಕೊಠಡಿಯಲ್ಲಿ ಹುಟ್ಟಿದ ಈ ಚಿತ್ರ ಇಂದು ಜಗದ್ಗುರುಗಳ ಕೈ ಸೇರಿದೆ. ಮಕ್ಕಳ ಕಲ್ಪನೆಯ ಲೋಕವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ, ಅದು ತನ್ನ ಪಯಣವನ್ನು ಇನ್ನೂ ಸ್ವಲ್ಪ ದೂರ ಮುಂದುವರಿಸಲಿದೆ. ಬದುಕಿನ ನಾಜೂಕನ್ನು ಹತ್ತಿರದಿಂದ ಅರಿತಿದ್ದರೂ ಕನಸು ಕಾಣುವುದನ್ನು ಬಿಟ್ಟುಕೊಡದ ಆ ಮಕ್ಕಳ ಮೌನ ಧ್ವನಿಯನ್ನು ಅದು ಹೊತ್ತೊಯ್ಯುತ್ತಿದೆ.

ಅವರ ಸರಳವಾದ, ಆದರೆ ಹೃದಯಪೂರ್ವಕ ಸಂದೇಶ ಒಂದೇ:

"ನಿಮ್ಮ ಈ ಭೇಟಿ ಶುಭಕರವಾಗಿರಲಿ!"

06 ಜೂನ್ 2026, 18:44