SPAIN-VATICAN-POPE-RELIGION-DIPLOMACY

ಸ್ಪೇನಿಗೆ ಪ್ರೇಷಿತರ ಪ್ರವಾಸದ ಆರಂಭದಲ್ಲೇ ಮ್ಯಾಡ್ರಿಡ್‌ನ ಅತ್ಯಂತ ದುರ್ಬಲ ಮತ್ತು ನಿರ್ಗತಿಕ ಜನರನ್ನು ಭೇಟಿಯಾದ ಜಗದ್ಗುರುಗಳು.

ತಮ್ಮ ಒಂದು ವಾರದ ಪ್ರೇಷಿತರ ಪ್ರವಾಸದ ಮೊದಲ ಹಂತವಾಗಿ ಮ್ಯಾಡ್ರಿಡ್‌ಗೆ ಆಗಮಿಸಿರುವ ಜಗದ್ಗುರು XIVನೇ ಲಿಯೋರವರು, ಅಲ್ಲಿನ ಸಿಡಿಯಾ 24 ಹೊರಾಸ್ ಸಾಮಾಜಿಕ ಸೇವಾ ಯೋಜನೆಗೆ ಭೇಟಿ ನೀಡಿ, ಐಕ್ಯತೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನೇರವಾದ ಮಾನವೀಯ ಭೇಟಿಯ ಮಹತ್ವವನ್ನು ಪುನರುಚ್ಚರಿಸಿದರು. ಈ ಪ್ರೇಷಿತರ ಪ್ರವಾಸದ ಸಂದರ್ಭದಲ್ಲಿ ಅವರು ನಂತರ ಬಾರ್ಸಿಲೋನಾ ಮತ್ತು ಕ್ಯಾನರಿ ದ್ವೀಪಗಳಿಗೂ ಭೇಟಿ ನೀಡಲಿದ್ದಾರೆ.

ವ್ಯಾಟಿಕನ್ ವರದಿ

ಸ್ಪೇನಿಗೆ ತಮ್ಮ ಪ್ರೇಷಿತರ ಪ್ರವಾಸವನ್ನು ಆರಂಭಿಸಿದ ಜಗದ್ಗುರು XIVನೇ ಲಿಯೋರವರು, ಮ್ಯಾಡ್ರಿಡ್‌ನ ಲುಸೆರೊ ಪ್ರದೇಶದಲ್ಲಿರುವ ದಾನ ಸಂಸ್ಥೆಯ ಸಿಡಿಯಾ 24 ಹೊರಾಸ್ ಸಾಮಾಜಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಸಮಾಜದ ಅತ್ಯಂತ ದುರ್ಬಲರು ಮತ್ತು ನಿರಾಶ್ರಿತರಿಗೆ ತಮ್ಮ ಸಾನ್ನಿಧ್ಯ ಹಾಗೂ ಪ್ರೋತ್ಸಾಹವನ್ನು ನೀಡಿದರು. ಈ ಕೇಂದ್ರವು ದಿನದ 24 ಗಂಟೆಯೂ ಆಶ್ರಯ, ಸಾಮಾಜಿಕ ಮಾರ್ಗದರ್ಶನ, ಮಾನಸಿಕ ಬೆಂಬಲ ಮತ್ತು ಮೂಲಭೂತ ಸೇವೆಗಳನ್ನು ಒದಗಿಸುತ್ತದೆ.

ಕೇಂದ್ರಕ್ಕೆ ಆಗಮಿಸಿದ ಜಗದ್ಗುರುಗಳನ್ನು ಮ್ಯಾಡ್ರಿಡ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ಜೋಸೆ ಕೋಬೊ ಕಾನೊ ಹಾಗೂ ಕೇಂದ್ರದ ನಿರ್ದೇಶಕರು ಸ್ವಾಗತಿಸಿದರು. ಬಳಿಕ ಅವರು ಕ್ಯೂಬಾದ ನಿಯುರ್ಕಾ, ಸೆನೆಗಲ್‌ನ ಖಾದ್ರಿ ಮತ್ತು ಸ್ವಯಂಸೇವಕಿ ಅಲಿಸಿಯಾ ಅವರ ಜೀವನ ಸಾಕ್ಷ್ಯಗಳನ್ನು ಆಲಿಸಿದರು. ಕಷ್ಟಕರ ಸಂದರ್ಭಗಳಲ್ಲಿ ಈ ಕೇಂದ್ರವು ತಮ್ಮ ಬದುಕಿನಲ್ಲಿ ಹೊಸ ಭರವಸೆ ಮತ್ತು ಭವಿಷ್ಯವನ್ನು ನಿರ್ಮಿಸಿಕೊಟ್ಟಿದೆ ಎಂದು ಅವರು ಹಂಚಿಕೊಂಡರು.

ತಮ್ಮ ಭಾಷಣದಲ್ಲಿ ಜಗದ್ಗುರು ಲಿಯೋರವರು, “ಮ್ಯಾಡ್ರಿಡ್‌ನಲ್ಲಿ ಇರುವ ಪ್ರತಿಯೊಬ್ಬರೂ ಮ್ಯಾಡ್ರಿಡ್‌ನವರೇ” ಎಂಬ ಮಾತನ್ನು ಉಲ್ಲೇಖಿಸಿ, ತಾವೂ ಈ ನಗರದ ದೊಡ್ಡ ಮತ್ತು ಸುಂದರ ಕುಟುಂಬದ ಸದಸ್ಯನಾಗಿರುವ ಭಾವನೆಯನ್ನು ವ್ಯಕ್ತಪಡಿಸಿದರು. ಸಿಡಿಯಾ ಕೇಂದ್ರವನ್ನು ಅವರು ನಿಜವಾದ ಐಕ್ಯತೆಯ ಮನೆ ಎಂದು ಬಣ್ಣಿಸಿ, “ಇಲ್ಲಿ ಯಾರೂ ಒಂಟಿಯಾಗಿರುವುದಿಲ್ಲ, ಒಬ್ಬರ ಸಂತೋಷ ಮತ್ತು ದುಃಖ ಎಲ್ಲರದ್ದಾಗುತ್ತದೆ” ಎಂದು ಹೇಳಿದರು.

ನಿಯುರ್ಕಾ, ಖಾದ್ರಿ ಮತ್ತು ಅಲಿಸಿಯಾರವರ ಕಥೆಗಳು ಮಾನವೀಯ ಪ್ರೀತಿ ಮತ್ತು ಕರುಣೆಯ ಶಕ್ತಿಗೆ ಸಾಕ್ಷಿಯಾಗಿವೆ ಎಂದು ಜಗದ್ಗುರುಗಳು ಹೇಳಿದರು. ಒಂದು ಸಣ್ಣ ತೆರೆದ ಬಾಗಿಲು ನಿಯುರ್ಕಾಗೆ ತನ್ನ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ನೆರವಾದರೆ, ಮಹಾಮಾರಿಯ ಕತ್ತಲೆಯನ್ನು ದಾಟಿದ ಖಾದ್ರಿಗೆ ಇಲ್ಲಿ ಹೊಸ ಬದುಕು ಮತ್ತು ಉದ್ಯೋಗ ದೊರೆಯಿತು. ಅದೇ ರೀತಿ, ಸ್ವಯಂಸೇವಕರು ಮಹಿಳೆಯರು ಮತ್ತು ಸಂಕಷ್ಟದಲ್ಲಿರುವವರಿಗೆ ಮತ್ತೆ ಗೌರವಯುತ ಜೀವನ ಆರಂಭಿಸಲು ನೆರವಾಗುತ್ತಿದ್ದಾರೆ ಎಂದು ಅವರು ಪ್ರಶಂಸಿಸಿದರು.

ತಮ್ಮ ಪ್ರೇಷಿತರ ಪ್ರವಾಸದ ಧ್ಯೇಯವಾದ “ನಿಮ್ಮ ಸುತ್ತಲೂ ನೋಡಿ” ಎಂಬ ಯೇಸುವಿನ ವಾಕ್ಯವನ್ನು ನೆನಪಿಸಿದ ಜಗದ್ಗುರುಗಳು, ಪ್ರೀತಿಯ ಸೇವೆಯನ್ನು ಮುಂದೂಡಬಾರದು ಎಂದು ಕರೆ ನೀಡಿದರು. ಅಗತ್ಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಭೇಟಿಯಾಗುವುದು ದೇವರನ್ನು ಭೇಟಿಯಾಗುವ ಅವಕಾಶವಾಗಿದ್ದು, ಬಡವರನ್ನು ನಿರ್ಲಕ್ಷಿಸುವುದರಿಂದ ಧರ್ಮ ಸಭೆಯ ಸುವಾರ್ತೆಯ ಧ್ಯೇಯವೇ ಅಪೂರ್ಣವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೊನೆಯಲ್ಲಿ, ದಿವಂಗತ ಜಗದ್ಗುರು ಫ್ರಾನ್ಸಿಸ್ ರವರ ಬೋಧನೆಯನ್ನು ಸ್ಮರಿಸಿದ ಜಗದ್ಗುರು ಲಿಯೋರವರು, ಕೇವಲ ದಾನ ಮಾಡುವುದು ಸಾಕಾಗುವುದಿಲ್ಲ, ಬದಲಾಗಿ ಜನರ ಕಣ್ಣಿನಲ್ಲಿ ಕಣ್ಣಿಟ್ಟು ಅವರ ನೋವು ಮತ್ತು ಘನತೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ಸಿಡಿಯಾ ಕೇಂದ್ರದ ಸಿಬ್ಬಂದಿ, ಸ್ವಯಂಸೇವಕರು ಮತ್ತು ಫಲಾನುಭವಿಗಳನ್ನು ಕನ್ಯಾ ಮರಿಯಮ್ಮನವರ ರಕ್ಷಣೆಗೆ ಸಮರ್ಪಿಸಿ, ಕರುಣೆ, ಕ್ಷಮೆ ಮತ್ತು ಭರವಸೆಯ ದಾರಿಯಲ್ಲಿ ಮುಂದುವರಿಯುವಂತೆ ಆಶೀರ್ವದಿಸಿದರು.

06 ಜೂನ್ 2026, 18:33