SPAIN-VATICAN-DIPLOMACY-RELIGION-POPE

ಸ್ಪೇನಿನ ಯಾತ್ರೆಯ ಎರಡನೇ ದಿನ: ‘ಭವಿಷ್ಯದ ಪೀಳಿಗೆಗಳಿಗೆ ನಾವು ಯಾವ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದೇವೆ?’

ಧಾರ್ಮಿಕ, ಕಲಾತ್ಮಕ ಮತ್ತು ಸಂಗೀತಮಯ ವಿವಿಧ ಆಚರಣೆಗಳು ಮ್ಯಾಡ್ರಿಡ್‌ನಲ್ಲಿ ಜಗದ್ಗುರು XIVನೇ ಲಿಯೋರವರ ಎರಡನೇ ದಿನದ ಭೇಟಿಗೆ ವಿಶೇಷ ಮೆರುಗು ನೀಡಿದವು. ಪವಿತ್ರ ಬಲಿಪೂಜೆಯ ಬಳಿಕ ಅವರು ಕ್ರಿಸ್ತನ ಪವಿತ್ರ ಶರೀರ ಮತ್ತು ರಕ್ತದ ಮಹೋತ್ಸವದ (ಕಾರ್ಪಸ್ ಕ್ರಿಸ್ತಿ) ಮೆರವಣಿಗೆಗೆ ನೇತೃತ್ವ ವಹಿಸಿದರು. ಅಲ್ಲದೆ, ಜೀವನದ ಎಲ್ಲ ಕ್ಷೇತ್ರಗಳ ಜನರನ್ನು ಉದ್ದೇಶಿಸಿ, "ಜೀವನದ ಎಲ್ಲ ಆಯಾಮಗಳನ್ನು ಸಮನ್ವಯಗೊಳಿಸುವ ಹೊಸ ಬಾಂಧವ್ಯಗಳನ್ನು ಹೆಣೆಯುವ ನೂತನ ನಾಯಕಪಾತ್ರಗಳಾಗಿರಿ" ಎಂದು ಅವರು ಕರೆ ನೀಡಿದರು.

ವ್ಯಾಟಿಕನ್ ವರದಿ

ಸ್ಪೇನಿಗೆ ಕೈಗೊಂಡಿರುವ ತಮ್ಮ ಪ್ರೇಷಿತರ ಯಾತ್ರೆಯ ಎರಡನೇ ದಿನ, ಜಗದ್ಗುರು XIVನೇ ಲಿಯೋರವರೊಂದಿಗೆ ಮ್ಯಾಡ್ರಿಡ್‌ನ ಐತಿಹಾಸಿಕ ಪ್ಲಾಸಾ ದೆ ಸಿಬೆಲೆಸ್‌ನಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಭಕ್ತರು ಕಾರ್ಪಸ್ ಕ್ರಿಸ್ತಿ ಮಹೋತ್ಸವವನ್ನು ಆಚರಿಸಿದರು. ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಯಾತ್ರಿಕರ ನಡುವೆ ಜಗದ್ಗುರುಗಳು, ಸ್ಪೇನಿನಲ್ಲಿ ಈ ಹಬ್ಬವು ಕೇವಲ ಒಂದು ಧಾರ್ಮಿಕ ವಿಧಿವಿಧಾನವಲ್ಲ, ದೇಶದ ಇತಿಹಾಸ, ಕಲೆ, ಸಂಗೀತ, ವಾಸ್ತುಶಿಲ್ಪ ಮತ್ತು ಜನಜೀವನವನ್ನು ರೂಪಿಸಿರುವ ನಂಬಿಕೆಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು.

ಪುಷ್ಪಾಲಂಕಾರಗಳು ಮತ್ತು ಭವ್ಯ ಮೆರವಣಿಗೆಗಳಂತಹ ಸಂಪ್ರದಾಯಗಳನ್ನು ಕೇವಲ ಜನಪದ ಆಚರಣೆ ಅಥವಾ ವಸ್ತುಸಂಗ್ರಹಾಲಯದ ಪ್ರದರ್ಶನಗಳಾಗಿ ನೋಡಬಾರದು ಎಂದು ಅವರು ಒತ್ತಿಹೇಳಿದರು. ಬದಲಾಗಿ, ಅವು ಜೀವಂತ ನಂಬಿಕೆಯ ಸಾಕ್ಷಿಯಾಗಿದ್ದು, ಇಂದಿನ ಸಮಾಜಕ್ಕೂ ಮಾರ್ಗದರ್ಶನ ನೀಡುವ ಆಧ್ಯಾತ್ಮಿಕ ಶಾಲೆಯಾಗಬೇಕು ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು. ಯೂಕರಿಸ್ಟ್‌ನಲ್ಲಿ ಸನ್ನಿಹಿತರಾಗಿರುವ ಯೇಸು, ಇತರರಿಗಾಗಿ ಮುರಿದು ಹಂಚಲ್ಪಡುವ ಮತ್ತು ಅರ್ಪಿಸಲ್ಪಡುವ ಜೀವನವನ್ನು ನಡೆಸಲು ನಮಗೆ ಪ್ರೇರಣೆ ನೀಡುತ್ತಾನೆ ಎಂದರು.

ಜಗದ್ಗುರುಗಳನ್ನು ಕಾಣುವ ಅಪರೂಪದ ಅವಕಾಶಕ್ಕಾಗಿ ಸಾವಿರಾರು ಭಕ್ತರು ಮುಂಜಾನೆಯೇ ಮ್ಯಾಡ್ರಿಡ್‌ಗೆ ಆಗಮಿಸಿದ್ದರು. ಕೆಲವರು ಹಲವು ಗಂಟೆಗಳ ಪ್ರಯಾಣ ಮಾಡಿ ಜಗದ್ಗುರುಗಳು ಪ್ರಯಾಣಿಸುವ ವಾಹನದಲ್ಲಿ ಸಾಗುತ್ತಿದ್ದ ಜಗದ್ಗುರುಗಳನ್ನು ನೋಡುವುದಕ್ಕಾಗಿ ಕಾಯುತ್ತಿದ್ದರು. ಅನೇಕ ಯುವಜನರ ಭಾಗವಹಿಸುವಿಕೆ ಸ್ಪೇನಿನಲ್ಲಿ ನಂಬಿಕೆಯ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಯಾತ್ರಿಕರು ಸಂತೋಷ ವ್ಯಕ್ತಪಡಿಸಿದರು.

ಅದೇ ದಿನ ಸಂಜೆ, ಜಗದ್ಗುರು ಲಿಯೋರವರು ಸಂಸ್ಕೃತಿ, ಕಲೆ, ಶಿಕ್ಷಣ, ಆರ್ಥಿಕತೆ ಮತ್ತು ಕ್ರೀಡಾ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ನಟ ಆಂಟೋನಿಯೊ ಬಾಂಡೆರಾಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಸಂವಾದ, ಐಕ್ಯತೆ ಮತ್ತು ಪರಸ್ಪರ ಸಹಕಾರದ ಹೊಸ ಬಾಂಧವ್ಯಗಳನ್ನು ನಿರ್ಮಿಸುವ ಅಗತ್ಯವನ್ನು ಜಗದ್ಗುರುಗಳು ಒತ್ತಿಹೇಳಿದರು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು  ಕೆಲವು ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟರು: "ಭವಿಷ್ಯದ ಪೀಳಿಗೆಗಳಿಗೆ ನಾವು ಯಾವ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದೇವೆ?", "ನಿಜವಾದ ಮಾನವನಾಗಿರುವುದರ ಅರ್ಥವೇನು?", "ಯಾವ ಮೌಲ್ಯಗಳನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆ ಮತ್ತು ಯಾವುದನ್ನು ಕಳೆದುಕೊಳ್ಳುತ್ತಿದ್ದೇವೆ?" ಹಾಗೂ "ನಂಬಿಕೆಯ ಪ್ರಭಾವವಿಲ್ಲದೆ ಯುರೋಪ್ ಇದೇ ರೀತಿ ಇರುತ್ತಿತ್ತೇ?" ಎಂದು ಅವರು ಪ್ರಶ್ನಿಸಿದರು. ಅಂತಿಮವಾಗಿ, ಮಾನವಕುಲದ ನಿಜವಾದ ಮಹತ್ವವು ಬೆಳಕಿಗೆ ಬರಬೇಕಾದರೆ, "ಜೀವನದ ಎಲ್ಲ ಕ್ಷೇತ್ರಗಳನ್ನು ಸಮನ್ವಯಗೊಳಿಸುವ ಹೊಸ ಬಾಂಧವ್ಯಗಳನ್ನು ಹೆಣೆಯುವ ನೂತನ ನಾಯಕಪಾತ್ರಗಳಾಗೋಣ" ಎಂದು ಎಲ್ಲರಿಗೂ ಅವರು ಕರೆ ನೀಡಿದರು.

 

07 ಜೂನ್ 2026, 21:38