ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  

ಸ್ಪೇನ್‌ಗೆ ತಮ್ಮ ಭೇಟಿ ಸಂದರ್ಭದಲ್ಲಿ, ಲೈಂಗಿಕ ದೌರ್ಜನ್ಯ ಸಂತ್ರಸ್ತರನ್ನು ಜಗದ್ಗುರುಗಳು ಭೇಟಿಯಾಗಲಿದ್ದಾರೆ.

ಸ್ಥಳೀಯ ಧರ್ಮ ಸಭೆ ಆಯೋಜಿಸಿರುವ ಈ ಭೇಟಿಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮತ್ತೆಯೊ ಬ್ರೂನಿ ದೃಢಪಡಿಸಿದ್ದು, ಸಂತ್ರಸ್ತರ ಖಾಸಗಿತನವನ್ನು ಗೌರವಿಸುವ ಉದ್ದೇಶದಿಂದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ವ್ಯಾಟಿಕನ್ ವರದಿ

ನಾಳೆ, ಜೂನ್ 6ರಂದು ಆರಂಭವಾಗಲಿರುವ ಜಗದ್ಗುರುಗಳ ಸ್ಪೇನ್ ಧರ್ಮಪ್ರಾಂತೀಯ (ಪ್ರೇಷಿತರ) ಪ್ರವಾಸದಲ್ಲಿ, "ಸ್ಪೇನ್‌ನ ಧರ್ಮಗುರುಗಳ ಸದಸ್ಯರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಂದಿಗೆ" ಒಂದು ಭೇಟಿಯೂ ನಡೆಯಲಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಹಿನ್ನೆಲೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಟೆಲಿಗ್ರಾಮ್ ಖಾತೆಯ ಮೂಲಕ ಮತ್ತೆಯೊ ಬ್ರೂನಿ ಈ ವಿಷಯವನ್ನು ದೃಢಪಡಿಸಿದ್ದಾರೆ.

"ಈ ಭೇಟಿಯನ್ನು ಸ್ಪೇನ್ ಧರ್ಮಸಭೆ ಆಯೋಜಿಸಿದೆ. ಸಂತ್ರಸ್ತರ ಹಿತಾಸಕ್ತಿ, ಅವರ ಇಚ್ಛೆ ಮತ್ತು ಖಾಸಗಿತನವನ್ನು ಗೌರವಿಸುವ ದೃಷ್ಟಿಯಿಂದ, ಸಭೆ ನಡೆದ ನಂತರ ಹೆಚ್ಚಿನ ಮಾಹಿತಿಯನ್ನು ನೀಡಬಹುದು," ಎಂದು ಬ್ರೂನಿ ವಿವರಿಸಿದರು.

ಲೈಂಗಿಕ ದೌರ್ಜನ್ಯದ ಸಮಸ್ಯೆ ಸ್ಪೇನ್ ಧರ್ಮಸಭೆಗೆ ಇನ್ನೂ ಅತ್ಯಂತ ನೋವಿನ ವಿಷಯವಾಗಿಯೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ, ಇಂತಹ ಘಟನೆಗಳನ್ನು ತಡೆಯಲು ಹಾಗೂ ಸಂತ್ರಸ್ತರಿಗೆ ನ್ಯಾಯ ಮತ್ತು ಪರಿಹಾರ ಒದಗಿಸಲು ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಇತ್ತೀಚೆಗಷ್ಟೇ, ಮಾರ್ಚ್ ತಿಂಗಳಲ್ಲಿ, ಈ ನೋವಿನ ವಾಸ್ತವಿಕತೆಯನ್ನು ಸತ್ಯ ಮತ್ತು ನ್ಯಾಯದ ಆಧಾರದ ಮೇಲೆ ಎದುರಿಸಲು ಸ್ಪ್ಯಾನಿಷ್ ಎಪಿಸ್ಕೊಪಲ್ ಸಮ್ಮೇಳನ, ಧಾರ್ಮಿಕ ಸಮುದಾಯಗಳ ಸಮ್ಮೇಳನ ಮತ್ತು ಅಧ್ಯಕ್ಷೀಯ ಸಚಿವಾಲಯವು ಜಂಟಿಯಾಗಿ ಒಂದು ಕಾರ್ಯವಿಧಾನ (ಪ್ರೋಟೋಕಾಲ್) ಅಂಗೀಕರಿಸಿವೆ.

ಜಗದ್ಗುರುಗಳ ಭೇಟಿಗೆ ಮುನ್ನ, ಹಲವಾರು ಸ್ಥಳೀಯ ಮಾಧ್ಯಮಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದವು. ಕೆಲವು ವರದಿಗಳ ಪ್ರಕಾರ, ಸ್ಪೇನ್‌ನ ಹಲವಾರು ಸಂತ್ರಸ್ತರು ಜಗದ್ಗುರುಗಳನ್ನು ವೈಯಕ್ತಿಕವಾಗಿ ಭೇಟಿಯಾಗಲು ಅವಕಾಶ ನೀಡುವಂತೆ ಪತ್ರಗಳನ್ನು ಕೂಡ ಕಳುಹಿಸಿದ್ದರು.

ಇಂದಿನ ಈ ದೃಢೀಕರಣದಿಂದ, ಜಗದ್ಗುರು XIVನೇ ಲಿಯೋರವರು ಸಂತ್ರಸ್ತರೊಂದಿಗೆ ಖಾಸಗಿ ಹಾಗೂ ಮುಚ್ಚಿದ ಬಾಗಿಲಿನ ಸಭೆ ನಡೆಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದೇ ರೀತಿಯ ಭೇಟಿಗಳನ್ನು ಈ ಹಿಂದೆ ಜಗದ್ಗುರು XVI ನೇ ಬೆನೆಡಿಕ್ಟ್ ರವರ ಅಧಿಕಾರ ಅವಧಿಯಲ್ಲಿ 2008ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ, ಹಾಗೆಯೇ ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಇದೇ ರೀತಿಯ ಸಭೆಗಳು ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾರ ಅವಧಿಯಲ್ಲಿ ಚಿಲಿ, ಐರ್ಲೆಂಡ್, ಪೋರ್ಚುಗಲ್ ಮತ್ತು ಬೆಲ್ಜಿಯಂ ಪ್ರವಾಸಗಳಲ್ಲಿಯೂ ನಡೆದಿದ್ದವು.

05 ಜೂನ್ 2026, 21:53