ಜಗದ್ಗುರುಗಳ ಬಿಷಪ್‌ಗಳಿಗೆ: ವಿಭಜನೆಗಳು ಹೆಚ್ಚುತ್ತಿರುವ ಈ ಯುಗದಲ್ಲಿ, ವೈವಿಧ್ಯತೆಯ ನಡುವೆಯೂ ಐಕ್ಯತೆಯ ಸಾಕ್ಷಿಯಾಗಿ ಧರ್ಮ ಸಭೆ ನಿಲ್ಲಬೇಕು.
ವ್ಯಾಟಿಕನ್ ವರದಿ
ಮ್ಯಾಡ್ರಿಡ್‌ನಲ್ಲಿರುವ ಸ್ಪ್ಯಾನಿಷ್ ಬಿಷಪ್‌ಗಳ ಸಮ್ಮೇಳನದ ಕೇಂದ್ರ ಕಚೇರಿಯಲ್ಲಿ ಸ್ಪೇನಿನ ಬಿಷಪ್‌ಗಳನ್ನು ಭೇಟಿ ಮಾಡಿದ ಜಗದ್ಗುರು XIVನೇ ಲಿಯೋರವರು, ಧರ್ಮ ಸಭೆಯ ಶಕ್ತಿಯು ಅದರ ಆಸ್ತಿಪಾಸ್ತಿಗಳು ಅಥವಾ ಸಂಪನ್ಮೂಲಗಳಿಂದ ಬರುವುದಿಲ್ಲ, ಬದಲಾಗಿ ಆಕೆಯ ಮಕ್ಕಳ ಪಾವಿತ್ರ್ಯ, ಧರ್ಮಗುರುಗಳ ನಡುವಿನ ಐಕ್ಯತೆ ಮತ್ತು ಪವಿತ್ರಾತ್ಮನ ಮಾರ್ಗದರ್ಶನಕ್ಕೆ ವಿಧೇಯರಾಗಿರುವವರ ನಿಷ್ಠೆಯಿಂದ ಉಗಮಿಸುತ್ತದೆ ಎಂದು ಹೇಳಿದರು. ಇಂದಿನ ಅನೇಕ ಸವಾಲುಗಳ ನಡುವೆಯೂ ನಂಬಿಕೆ ಮತ್ತು ಸೇವೆಯಲ್ಲಿ ದೃಢವಾಗಿರಲು ಅವರು ಬಿಷಪ್‌ಗಳನ್ನು ಪ್ರೋತ್ಸಾಹಿಸಿದರು.
ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ಧ್ರುವೀಕರಣ ಮತ್ತು ವಿಭಜನೆಗಳ ನಡುವೆ, ಧರ್ಮ ಸಭೆಯ"ವೈವಿಧ್ಯತೆಯಲ್ಲಿನ ಐಕ್ಯತೆಗೆ ಸಾಕ್ಷಿಯಾಗಬೇಕು" ಎಂದು ಜಗದ್ಗುರುಗಳು ಒತ್ತಿಹೇಳಿದರು. ಬಿಷಪ್‌ಗಳು ಐಕ್ಯತೆಯನ್ನು ಕಾಪಾಡುವುದು, ಸಂವಾದವನ್ನು ಉತ್ತೇಜಿಸುವುದು, ಬಿರುಕುಗಳನ್ನು ಗುಣಪಡಿಸುವುದು ಮತ್ತು ತಮ್ಮ ಆರೈಕೆಗೆ ಒಪ್ಪಿಸಲಾದ ದೇವಜನರೊಂದಿಗೆ ಹೆಜ್ಜೆ ಹಾಕುವುದು ತಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಧರ್ಮ ಸಭೆಯಲ್ಲಿ ಇರುವ ವಿವಿಧ ವರದಾನಗಳು, ಸೇವಾ ವರಗಳು ಮತ್ತು ಆಧ್ಯಾತ್ಮಿಕ ವೈವಿಧ್ಯತೆಗಳನ್ನು ಒಂದಾಗಿ ಬೆಸೆಯುವಂತಹ ಸಹಭಾಗಿತ್ವವನ್ನು ಬೆಳೆಸಬೇಕೆಂದು ಅವರು ಕರೆ ನೀಡಿದರು.
ಧರ್ಮ ಸಭೆಯು ಕ್ರಿಸ್ತನೊಂದಿಗೆ ಮತ್ತು ಪೇತ್ರನ ಉತ್ತರಾಧಿಕಾರಿಯೊಂದಿಗೆ, ಹಾಗೆಯೇ ವಿಶ್ವವ್ಯಾಪಿ ಧರ್ಮ ಸಭೆ, ಧರ್ಮಗುರುಗಳು, ಧಾರ್ಮಿಕ ಜೀವನಕ್ಕೆ ಸಮರ್ಪಿತರಾದವರು, ವಿವಿಧ ಚಳವಳಿಗಳು ಮತ್ತು ಸಂಘಟನೆಗಳೊಂದಿಗೆ ಗೋಚರವಾಗುವ ಐಕ್ಯತೆಯಲ್ಲಿ ಜೀವಿಸಬೇಕು ಎಂದು ಜಗದ್ಗುರುಗಳು ಹೇಳಿದರು. ಅಂತರಂಗದಲ್ಲಿ ಶಾಂತಿಯನ್ನು ಹೊಂದಿರುವ ಧರ್ಮ ಸಭೆಯು ಮಾತ್ರ ಇತರ ಕ್ರೈಸ್ತ ಪಂಥಗಳು, ಇತರ ಧರ್ಮಗಳು, ನಂಬಿಕೆ ಇಲ್ಲದವರು ಹಾಗೂ ಸಾಮೂಹಿಕ ಹಿತಕ್ಕಾಗಿ ಶ್ರಮಿಸುವ ಎಲ್ಲರೊಂದಿಗೆ ಮುಕ್ತವಾಗಿ ಸಂವಾದ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ವಿಶೇಷವಾಗಿ ಯುವಜನರು, ಗುರು ವಿದ್ಯಾಮಂದಿರದ ವಿದ್ಯಾರ್ಥಿಗಳು ಮತ್ತು ದುರ್ಬಲರೊಂದಿಗೆ ಹತ್ತಿರವಾಗಿರಲು ಅವರು ಬಿಷಪ್‌ಗಳಿಗೆ ಸಲಹೆ ನೀಡಿದರು.
ಸ್ಪೇನ್ ಅನ್ನು "ಮರಿಯಮ್ಮನ ನಾಡು" ಎಂದು ಪವಿತ್ರ ದ್ವಿತೀಯ ಜಾನ್ ಪಾಲ್ ರು ಕರೆದಿದ್ದನ್ನು ಸ್ಮರಿಸಿದ ಜಗದ್ಗುರುಗಳು, ಪರಮಪವಿತ್ರ ಕನ್ಯೆ ಮರಿಯಮ್ಮನನ್ನು "ಐಕ್ಯತೆ ಮತ್ತು ಭರವಸೆಯ ತಾಯಿ" ಎಂದು ಬಣ್ಣಿಸಿದರು. ದೇವರ ವಾಕ್ಯವನ್ನು ಹೃದಯದಲ್ಲಿ ಇಟ್ಟುಕೊಳ್ಳುವುದು, ಶಿಷ್ಯರೊಂದಿಗೆ ಅವರ ಪಯಣದಲ್ಲಿ ಜೊತೆಯಾಗಿರುವುದು ಮತ್ತು ಧರ್ಮ ಸಭೆಯ ಯಾತ್ರೆಯಲ್ಲಿ ಸದಾ ಉಪಸ್ಥಿತರಾಗಿರುವುದನ್ನು ಮರಿಯಮ್ಮನಿಂದ ಕಲಿಯಬಹುದು ಎಂದು ಅವರು ಹೇಳಿದರು. ಬಿಷಪ್‌ಗಳ ಸೇವೆಯನ್ನು ಮರಿಯಮ್ಮನ ರಕ್ಷಣೆಗೆ ಸಮರ್ಪಿಸುತ್ತಿರುವುದಾಗಿ ಅವರು ತಿಳಿಸಿದರು.
ಈ ವರ್ಷ ಸ್ಪೇನಿನ ಧರ್ಮಗುರುಗಳ ಆಶ್ರಯದಾತರಾದ ಅವಿಲಾದ ಸಂತ ಜಾನ್ ಅವರ ಯಾಜಕದೀಕ್ಷೆಯ 500ನೇ ವಾರ್ಷಿಕೋತ್ಸವವನ್ನು ಸ್ಮರಿಸಿದ ಜಗದ್ಗುರುಗಳು, ಪ್ರತಿಯೊಬ್ಬ ಬಿಷಪ್ ತಮ್ಮ ಧರ್ಮಪ್ರಾಂತ್ಯದ ಧರ್ಮಗುರುಗಳ ಜೀವನವನ್ನು ಪೋಷಿಸಿ ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಪ್ರಾರ್ಥನೆಯಲ್ಲಿ ಬೇರೂರಿರುವ, ಕ್ರಿಸ್ತನನ್ನು ಪ್ರೀತಿಸುವ, ಧರ್ಮ ಸಭೆಗೆ ನಿಷ್ಠರಾಗಿರುವ ಮತ್ತು ಜನರೊಂದಿಗೆ ನಿಕಟ ಸಂಬಂಧ ಹೊಂದಿರುವ ಸರಳ ಧರ್ಮಗುರುಗಳೇ ಬಿಷಪ್‌ಗಳ ನಿಜವಾದ ಸಹಯಾತ್ರಿಗಳು ಎಂದು ಅವರು ತಿಳಿಸಿದರು.
ತಮ್ಮ ಭಾಷಣದ ಕೊನೆಯಲ್ಲಿ, "ಪ್ರಭುವೆ, ನೀನು ಮಾಡಿದುದನ್ನೇ ಮಾಡಲು ನನಗೆ ಆಜ್ಞಾಪಿಸುತ್ತಿದ್ದರೆ, ನಿನ್ನ ಹೃದಯವನ್ನೇ ನನಗೆ ನೀಡು" ಎಂಬ ಅವಿಲಾದ ಸಂತ ಜಾನ್ ರವರ ಪ್ರಾರ್ಥನೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ನಾವೂ ಸಹ ಕ್ರಿಸ್ತನ ಹೃದಯವನ್ನು ಬೇಡಿಕೊಳ್ಳೋಣ ಎಂದು ಹೇಳಿದರು. ಕೇಳುವ, ವಿವೇಚಿಸುವ, ಸೇವೆ ಮಾಡುವ, ಪ್ರೀತಿಯಿಂದ ತಿದ್ದುವ, ತಾಳ್ಮೆಯಿಂದ ಜೊತೆಯಾಗುವ ಮತ್ತು ಸಂತೋಷದಿಂದ ಸುವಾರ್ತೆಯನ್ನು ಸಾರುವ ಹೃದಯವನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು. ಕ್ರಿಸ್ತನ ಹೃದಯವನ್ನು ಸ್ವೀಕರಿಸುವ ಧರ್ಮ ಸಭೆ, ಯಾವುದೇ ಸವಾಲನ್ನು ಎದುರಿಸಲು ಅಗತ್ಯವಾದ ಶಕ್ತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತದೆ ಎಂದು ಅವರು ಹೇಳಿದರು.
