Il Papa, Dio vede le ferite delle guerre e soffre per noi

ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ದೇವರ ಕೃಪೆ ಉಚಿತವಾಗಿ ನೀಡಲ್ಪಟ್ಟಿದೆ, ಅದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ದೇವರ ಕೃಪೆಯ ಅಪಾರ ಸಮೃದ್ಧಿಯನ್ನು ಸ್ಮರಿಸಿಕೊಂಡು, ಕ್ರಿಸ್ತನ ಕ್ಷಮೆಯನ್ನು ಎಲ್ಲ ಜನರೊಂದಿಗೆ ಹಂಚಿಕೊಳ್ಳುವುದು ಪ್ರತಿಯೊಬ್ಬ ಕ್ರೈಸ್ತನ ಧರ್ಮಕಾರ್ಯ ಮತ್ತು ಕರ್ತವ್ಯವಾಗಿದೆ ಎಂದು ನೆನಪಿಸಿದರು.

ವ್ಯಾಟಿಕನ್ ವರದಿ

ಭಾನುವಾರ, ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ಯಾತ್ರಿಕರೊಂದಿಗೆ ಜಗದ್ಗುರು XIVನೇ ಲಿಯೋರವರು ತ್ರಿಕಾಲ ಪ್ರಾರ್ಥನೆಯ  ಪ್ರಾರ್ಥನೆಯನ್ನು ಸಲ್ಲಿಸಿದರು.

ಆ ದಿನದ ಸುವಾರ್ತಾ ವಾಚನವಾದ (ಮತ್ತಾಯ 9:36–10:8) ಕುರಿತು ಚಿಂತನೆ ನಡೆಸಿದ ಜಗದ್ಗುರುಗಳು, “ಬಾಧಿತರೂ ಅಸಹಾಯಕರೂ ಆಗಿದ್ದ ಜನಸ್ತೋಮವನ್ನು” ಕಂಡು ಅವರ ಮೇಲೆ ಕನಿಕರ ತೋರಿದ ಯೇಸುವಿನ ದೃಷ್ಟಿಯನ್ನು ಸ್ಮರಿಸಿದರು.

“ದೇವರ ಪುತ್ರನು ಜನರ ಕಡೆಗೆ ನೋಡುತ್ತಾನೆ, ಆತನು ಮಾನವಕುಲದ ಕಡೆಗೆ ನೋಡುತ್ತಾನೆ. ಜನರನ್ನು ಕುಗ್ಗಿಸುವ ದಬ್ಬಾಳಿಕೆಯನ್ನು ಮತ್ತು ಅವರ ಶಕ್ತಿಯನ್ನು ಕ್ಷೀಣಗೊಳಿಸುವ ಹಿಂಸೆಯನ್ನು ಆತನು ಕಾಣುತ್ತಾನೆ,” ಎಂದು ಜಗದ್ಗುರುಗಳು ಹೇಳಿದರು. “ಯುದ್ಧದ ಗಾಯಗಳನ್ನು ಮತ್ತು ಉಪಭೋಗವಾದದ ಶೂನ್ಯತೆಯನ್ನು ಆತನು ಕಾಣುತ್ತಾನೆ. ಮುಖವಾಡಗಳಾಗಿ ಮಾರ್ಪಟ್ಟ ಮುಖಗಳನ್ನು, ದುಷ್ಟತೆಯಿಂದ ಛಿದ್ರಗೊಂಡ ಕುಟುಂಬಗಳನ್ನು ಹಾಗೂ ಸುಳ್ಳು ಆದರ್ಶಗಳಿಂದ ದಾರಿ ತಪ್ಪಿಸಲ್ಪಟ್ಟ ಯುವಜನರನ್ನು ಆತನು ಕಾಣುತ್ತಾನೆ.”

ಯೇಸು ನಮ್ಮನ್ನು ನೋಡುತ್ತಾರೆ ಮತ್ತು ಪ್ರೀತಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು. ಅವರ ಕನಿಕರವು ಸಹೋದರತ್ವದ ಸಾನ್ನಿಧ್ಯವಾಗಿರುವುದರ ಜೊತೆಗೆ, ನಮ್ಮನ್ನು ವಿಮೋಚಿಸಲು ಇರುವ ಅವರ ಅಪೇಕ್ಷೆಯ ಅಭಿವ್ಯಕ್ತಿಯೂ ಆಗಿದೆ ಎಂದು ಅವರು ಗಮನಿಸಿದರು.

“ಕುರುಬನಿಲ್ಲದ ಕುರಿಗಳಂತಿದ್ದ” ಅಸಂಖ್ಯಾತ ಜನರನ್ನು ಕಂಡ ಯೇಸು, ದುಃಖಪಡುವ ಪ್ರತಿಯೊಬ್ಬರಿಗೂ ದೇವರ ಸಾಂತ್ವನವನ್ನು ನೀಡುವ ಕಾರ್ಯವನ್ನು ತನ್ನ ಶಿಷ್ಯರಿಗೆ ಒಪ್ಪಿಸಿ ಅವರನ್ನು ಲೋಕಕ್ಕೆ ಕಳುಹಿಸಿದನು.

ಕ್ರೈಸ್ತರಾದ ನಮ್ಮ ಕರ್ತವ್ಯವೆಂದರೆ, “ದುಃಖವಿರುವಲ್ಲಿ ದಯೆಯನ್ನು, ಸಂಕಟವಿರುವಲ್ಲಿ ನಿರೀಕ್ಷೆಯನ್ನು ಮತ್ತು ಅವಿಶ್ವಾಸವಿರುವಲ್ಲಿ ನಂಬಿಕೆಯನ್ನು” ಕೊಂಡೊಯ್ಯುವುದು ಎಂದು ಜಗದ್ಗುರು ಲಿಯೋರವರು ಹೇಳಿದರು.

ಸುವಾರ್ತೆಯಲ್ಲಿ ಮೊದಲ ಹನ್ನೆರಡು ಕಾರ್ಯಕರ್ತರ ಹೆಸರುಗಳು ಪೇತ್ರನಿಂದ ಹಿಡಿದು ಯೂದಾಸ್ ಇಸ್ಕರಿಯೋತನವರೆಗೆ ಉಲ್ಲೇಖವಾಗಿವೆ ಎಂದು ಜಗದ್ಗುರುಗಳು ಗಮನಸೆಳೆದರು. ಇದು ಯೇಸುವಿನ ಅನುಯಾಯಿಗಳೂ ಸಹ ಅವರನ್ನು ದ್ರೋಹಿಸಬಹುದು ಎಂಬುದನ್ನು ನೆನಪಿಸುತ್ತದೆ ಎಂದರು.

ಆದಾಗ್ಯೂ, ಸುವಾರ್ತೆಯು ಶತಮಾನಗಳನ್ನು ದಾಟಿ ಸಾಗುವ, ಜೀವಂತ ಮತ್ತು ಸತ್ಯವಾದ ವಾಕ್ಯವಾಗಿದೆ, ಅದು ಸದಾ ಒಂದೇ ಆಗಿದ್ದರೂ ಯಾವಾಗಲೂ ಹೊಸದಾಗಿ, ತಾಜಾತನದಿಂದ ಮತ್ತು ವಿಮೋಚನೆಯನ್ನು ನೀಡುವಂತೆಯೇ ಉಳಿಯುತ್ತದೆ ಎಂದು ಅವರು ಹೇಳಿದರು.

“ಸುವಾರ್ತೆಯನ್ನು ಸಾರಿದಾಗ ಮತ್ತು ಅದರಂತೆ ಬದುಕಿದಾಗ,” ಎಂದು ಅವರು ಹೇಳಿದರು, “ದುಷ್ಟತೆಯು ಕಳೆದುಹೋಗುವ ರೋಗದಂತೆ ಕುಸಿದು ಬೀಳುತ್ತದೆ, ರಾತ್ರಿಯು ಬೆಳಗಿಗೆ ದಾರಿ ಮಾಡಿಕೊಡುವಂತೆ ಅಳಿದುಹೋಗುತ್ತದೆ, ಪುನರುತ್ಥಾನ ಹೊಂದಿದ ಪ್ರಭುವಿನಿಂದ ಜಯಿಸಲ್ಪಟ್ಟ ಮರಣದಂತೆಯೇ ಅದು ಸೋಲುತ್ತದೆ.”

ಹೀಗಾಗಿ ಯೇಸುವಿನ ದೃಷ್ಟಿಯು ವಾಸ್ತವವನ್ನು ಪರಿವರ್ತಿಸುತ್ತದೆ. ಅದು ನಮ್ಮನ್ನು ಅವರ ಪ್ರೀತಿಯಿಂದ ತುಂಬಿಸಿ, ಅವರ ಉಚಿತ ಕೊಡುಗೆಯನ್ನು ಹಂಚಿಕೊಳ್ಳುವ ಪ್ರೇಷಿತರ ಧ್ಯೇಯವನ್ನು ಮುಂದುವರಿಸಲು ನಮ್ಮನ್ನು ನಡೆಸುತ್ತದೆ.

“ಯೇಸುವಿನ ಕೊಡುಗೆ ಸಂಪೂರ್ಣವಾಗಿ ಉಚಿತವಾಗಿದೆ, ಅದರ ಮೌಲ್ಯವು ಎಲ್ಲ ಅಳತೆಗಳನ್ನೂ ಮೀರಿದೆ. ಅದನ್ನು ಗಳಿಸಲು ಅಥವಾ ‘ಖರೀದಿಸಲು’ ಸಾಧ್ಯವಿಲ್ಲ,” ಎಂದು ಜಗದ್ಗುರುಗಳು ಹೇಳಿದರು. “ಈ ಕೃಪೆಯೇ ದೇವರ ಕರುಣೆಯ ಸುಂದರ ನಾಮವಾಗಿದೆ. ನಾವು ಎಲ್ಲಿದ್ದರೂ ನಮ್ಮನ್ನು ಹುಡುಕಿಕೊಂಡು ಬಂದು, ತನ್ನ ಬಳಿಗೆ ಸೆಳೆಯುವ ಕರುಣೆಯೇ ಅದು”ಎಂದರು.

ತಮ್ಮ ಸಂದೇಶದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಬಡವರ ಸೇವೆ ಮಾಡುವುದರ ಮೂಲಕ ಮತ್ತು ನ್ಯಾಯಕ್ಕಾಗಿ ಬದ್ಧರಾಗಿರುವುದರ ಮೂಲಕ ದೇವರ ಕ್ಷಮೆಯನ್ನು ಲೋಕದೊಂದಿಗೆ ಹಂಚಿಕೊಳ್ಳುತ್ತಾ ಲೋಕವನ್ನು ಸುವಾರ್ತೀಕರಿಸಲು ಕ್ರೈಸ್ತರನ್ನು ಪ್ರೋತ್ಸಾಹಿಸಿದರು.

“ಕೃಪೆಯಿಂದ ಪರಿಪೂರ್ಣಳಾದ ಕನ್ಯಾ ಮರಿಯಮ್ಮನ ಸಹಾಯವನ್ನು ನಾವು ಬೇಡೋಣ,” ಎಂದು ಅವರು ಹೇಳಿದರು. “ಯೇಸು ನಮ್ಮನ್ನು ಕರೆಯುವ ಧ್ಯೇಯಕ್ಕೆ ನಾವು ಸಂತೋಷದಿಂದಲೂ ಧೈರ್ಯದಿಂದಲೂ ಪ್ರತಿಕ್ರಿಯಿಸಲು ಆಕೆ ನಮ್ಮನ್ನು ನೆರವಾಗಲಿ” ಎಂದು ಹೇಳಿದರು.

14 ಜೂನ್ 2026, 11:20