ಜಗದ್ಗುರು ಲಿಯೋರವರು: ಅಪ್ರಾಪ್ತ ವಯಸ್ಕರ ರಕ್ಷಣೆ ಧರ್ಮ ಸಭೆಯ ಕರ್ತವ್ಯ ಮತ್ತು ಹೊಣೆಗಾರಿಕೆ ಆಗಿದೆ.
ವ್ಯಾಟಿಕನ್ ವರದಿ
ಯೇಸು ಕ್ರಿಸ್ತರೊಂದಿಗಿನ ನಿಜವಾದ ಭೇಟಿ ವ್ಯಕ್ತಿಯ ಜೀವನವನ್ನು ಪ್ರೀತಿ, ಸ್ವಾತಂತ್ರ್ಯ ಮತ್ತು ಪರಿವರ್ತನೆಯ ಮಾರ್ಗದತ್ತ ಕೊಂಡೊಯ್ಯುತ್ತದೆ. ಆದರೆ ದುರುಪಯೋಗ ಮತ್ತು ಶೋಷಣೆಯಂತಹ ಅನುಭವಗಳು ವ್ಯಕ್ತಿಯ ಮನಸ್ಸು ಮತ್ತು ಆತ್ಮದ ಮೇಲೆ ಆಳವಾದ ಗಾಯಗಳನ್ನು ಉಂಟುಮಾಡಿ, ಅವರ ಮಾನವೀಯ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಬುಧವಾರದ ಸಾರ್ವಜನಿಕ ಭೇಟಿಯ ಮುನ್ನ ಅಪ್ರಾಪ್ತರ ರಕ್ಷಣೆಗಾಗಿ ಕಾರ್ಯನಿರ್ವಹಿಸುವ ಲ್ಯಾಟಿನ್ ಅಮೆರಿಕದ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದರು.
ವಿವಿಧ ಲ್ಯಾಟಿನ್ ಅಮೆರಿಕ ದೇಶಗಳಿಂದ ಆಗಮಿಸಿದ್ದ ಪ್ರತಿನಿಧಿಗಳನ್ನು ಸ್ವಾಗತಿಸಿದ ಜಗದ್ಗುರುಗಳು, ಎಲ್ಲರ ಉದ್ದೇಶ ಒಂದೇ ಆಗಿದೆ ಎಂದು ಹೇಳಿದರು: ಧರ್ಮ ಸಭೆಯ ಸಮುದಾಯಗಳು ಪ್ರತಿಯೊಬ್ಬರಿಗೂ, ವಿಶೇಷವಾಗಿ ಮಕ್ಕಳು, ಯುವಕರು ಮತ್ತು ಅತ್ಯಂತ ದುರ್ಬಲ ವ್ಯಕ್ತಿಗಳಿಗೆ ಸುರಕ್ಷಿತ ಸ್ಥಳಗಳಾಗಬೇಕು. ಧರ್ಮ ಸಭೆಯ ಭೌತಿಕ ಹಾಗೂ ಡಿಜಿಟಲ್ ಎಲ್ಲ ವಲಯಗಳೂ ಭಯ, ಅನುಮಾನ ಮತ್ತು ಅವಿಶ್ವಾಸಗಳಿಂದ ಮುಕ್ತವಾಗಿ, ಯೇಸು ಕ್ರಿಸ್ತರೊಂದಿಗೆ ಫಲಪ್ರದವಾದ ಭೇಟಿಗೆ ಅವಕಾಶ ನೀಡುವ ಸ್ಥಳಗಳಾಗಲಿ ಎಂಬುದು ತಮ್ಮ ಆಶಯ ಎಂದು ಅವರು ತಿಳಿಸಿದರು.
ಮೊದಲ ಶಿಷ್ಯರು ಯೇಸುವನ್ನು ಭೇಟಿಯಾದಾಗ ಅವರ ಜೀವನ ಸಂಪೂರ್ಣವಾಗಿ ಬದಲಾಗಿತ್ತು ಎಂದು ಜಗದ್ಗುರುಗಳು ನೆನಪಿಸಿದರು. ಆ ಅನುಭವವು ಅವರನ್ನು ಪರಿವರ್ತನೆಯ ಹಾದಿಯಲ್ಲಿ ನಡೆಸಿ, ತಮ್ಮನ್ನೇ ಸಂಪೂರ್ಣವಾಗಿ ಕ್ರಿಸ್ತನಿಗೆ ಅರ್ಪಿಸುವ ಮಟ್ಟಕ್ಕೆ ಕೊಂಡೊಯ್ದಿತು. ಇಂತಹ ಅನುಭವವು ಕೇವಲ ಭೂತಕಾಲದ ಘಟನೆ ಅಲ್ಲ ಇಂದಿಗೂ ಪ್ರತಿಯೊಬ್ಬ ವ್ಯಕ್ತಿಯು ಜೀವಂತ ಕ್ರಿಸ್ತರನ್ನು ಭೇಟಿಯಾಗಿ ಅವರ ಪ್ರೀತಿಯನ್ನು ಅನುಭವಿಸಲು ಕರೆಯಲ್ಪಟ್ಟಿದ್ದಾನೆ ಎಂದು ಅವರು ಹೇಳಿದರು. ಆದರೆ ಅದು ಸಾಧ್ಯವಾಗಲು ಸುರಕ್ಷಿತ ವಾತಾವರಣ ಅಗತ್ಯ ಎಂದು ಅವರು ಒತ್ತಿಹೇಳಿದರು.
ಅಪ್ರಾಪ್ತರ ರಕ್ಷಣೆಯ ಅಗತ್ಯತೆಯನ್ನು ಕುರಿತು ಮಾತನಾಡಿದ ಜಗದ್ಗುರುಗಳು, “ಸಣ್ಣವರನ್ನು ಅಪಮಾನಕ್ಕೆ ಅಥವಾ ಅಪಾಯಕ್ಕೆ ಒಳಪಡಿಸಬಾರದು” ಎಂಬ ಯೇಸುವಿನ ಎಚ್ಚರಿಕೆಯನ್ನು ನೆನಪಿಸಿದರು. ಇದೇ ಕ್ರಿಸ್ತನ ಕರೆಯೇ ಈ ಸಂಸ್ಥೆಯ ಕಾರ್ಯಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು. ಇತ್ತೀಚೆಗೆ ಸ್ಪೇನಿನ ಪ್ರವಾಸದ ವೇಳೆ ಬಿಷಪ್‌ಗಳೊಂದಿಗೆ ಮಾತನಾಡಿದಾಗಲೂ, ತಮಗೆ ರಕ್ಷಣೆ ನೀಡಬೇಕಿದ್ದವರಿಂದಲೇ ನೋವು ಅನುಭವಿಸಿದವರ ದುಃಖವನ್ನು ಉಲ್ಲೇಖಿಸಿದ್ದಾಗಿ ಅವರು ಸ್ಮರಿಸಿದರು.
ಇಂತಹ ಸಂದರ್ಭಗಳಲ್ಲಿ ಧರ್ಮ ಸಭೆಯ ಸಮುದಾಯವು ಆಲಿಸುವ ಮನೋಭಾವ, ಸತ್ಯ, ನ್ಯಾಯ, ಪರಿಹಾರ ಮತ್ತು ತಡೆಗಟ್ಟುವಿಕೆಯತ್ತ ದೃಢವಾದ ಬದ್ಧತೆಯೊಂದಿಗೆ ಪ್ರತಿಕ್ರಿಯಿಸಬೇಕೆಂದು ಜಗದ್ಗುರುಗಳು ಹೇಳಿದರು. ಅಪ್ರಾಪ್ತರ ಸುರಕ್ಷತೆಯ ಹೊಣೆಗಾರಿಕೆ ಕೇವಲ ಬಿಷಪ್‌ಗಳು ಮತ್ತು ಗುರುಗಳದ್ದಲ್ಲ ಅದು ಇಡೀ ಧರ್ಮ ಸಭೆಯ ಕರ್ತವ್ಯವಾಗಿದೆ. ಈ ಕ್ಷೇತ್ರದಲ್ಲಿ ವೃತ್ತಿಪರವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.
ಕೊನೆಯಲ್ಲಿ, ಸ್ಥಳೀಯ ಧರ್ಮ ಸಭೆಗಳು ಮತ್ತು ನಾಗರಿಕ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸಿ, ದುರ್ಬಲರ ರಕ್ಷಣೆಗೆ ಆದ್ಯತೆ ನೀಡುವ ಸಂಸ್ಕೃತಿಯನ್ನು ಬೆಳೆಸುವಂತೆ ಜಗದ್ಗುರುಗಳು ಪ್ರೋತ್ಸಾಹಿಸಿದರು. ಈ ಮಹತ್ತರ ಕಾರ್ಯವನ್ನು ಮುಂದುವರಿಸಲು ದೇವಮಾತೆಯ ಮಧ್ಯಸ್ಥಿಕೆಯನ್ನು ಕೋರಿ, ತಮ್ಮ ಪ್ರೆಷಿತರ ಆಶೀರ್ವಾದವನ್ನು ಎಲ್ಲರಿಗೂ ನೀಡಿದರು.
