ಹುಡುಕಿ

Papa Leone a Piazza San Pietro per l'udienza generale

ಆರ್ಒಎಸಿಒ ಸದಸ್ಯರಿಗೆ ಜಗದ್ಗುರುಗಳ ಸಂದೇಶ: ಧರ್ಮ ಸಭೆಯ ಭವಿಷ್ಯ ಕಟ್ಟುತ್ತದೆ, ಯುದ್ಧ ಇಂದಿನ ಬದುಕನ್ನು ಧ್ವಂಸಗೊಳಿಸುತ್ತದೆ.

ಜಗದ್ಗುರು XIVನೇ ಲಿಯೋರವರು ಪೂರ್ವ ವಿಧಿಯ ಕಥೋಲಿಕರನ್ನು ತಮ್ಮ ಆಧ್ಯಾತ್ಮಿಕ ಸಂಪತ್ತಿನ ಮೂಲಕ ಧರ್ಮ ಸಭೆಯನ್ನು ಮತ್ತಷ್ಟು ಸಮೃದ್ಧಗೊಳಿಸುವಂತೆ ಪ್ರೋತ್ಸಾಹಿಸಿದರು. ಅದೇ ವೇಳೆ, ಕ್ರೈಸ್ತರು ತಮ್ಮ ಸ್ವದೇಶಗಳನ್ನು ತೊರೆದು ವಲಸೆ ಹೋಗುವಂತೆ ಮಾಡುವ ಯುದ್ಧದಿಂದ ಉಂಟಾಗಿರುವ ಅಸ್ಥಿರತೆಯನ್ನು ಅವರು ತೀವ್ರವಾಗಿ ಖಂಡಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗುರುವಾರ ಪೂರ್ವ ಧರ್ಮ ಸಭೆಗಳಿಗೆ ನೆರವು ನೀಡುವ ಸಂಸ್ಥೆಗಳ ಒಕ್ಕೂಟದ (ಆರ್ಒಎಸಿಒ) ಪೂರ್ಣಾಧಿವೇಶನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳನ್ನು ಭೇಟಿಯಾದರು.

ತಮ್ಮ ಭಾಷಣದಲ್ಲಿ, ಪೂರ್ವದ ಗುರು ವಿದ್ಯಾರ್ಥಿ ಮಂದಿರಗಳಲ್ಲಿ ಯಾಜಕರು ಮತ್ತು ಸನ್ಯಾಸಿಗಳ ರೂಪುಗೊಳಿಸುವಿಕೆಗೆ ಬೆಂಬಲ ನೀಡುವ ಅಗತ್ಯದ ಮೇಲೆ ಸಭೆಯು ಕೇಂದ್ರೀಕರಿಸಿದ್ದಕ್ಕಾಗಿ ಜಗದ್ಗುರುಗಳು ಪ್ರಶಂಸೆ ವ್ಯಕ್ತಪಡಿಸಿದರು.

ಪೂರ್ವ ಕಥೋಲಿಕ ಧರ್ಮ ಸಭೆಗಳು ವಿಶ್ವವ್ಯಾಪಿ ಧರ್ಮ ಸಭೆಯೊಂದಿಗೆ ಹಂಚಿಕೊಳ್ಳಲು ಅಪಾರ ಆಧ್ಯಾತ್ಮಿಕ ಸಂಪತ್ತನ್ನು ಹೊಂದಿವೆ ಎಂದು ಅವರು ಹೇಳಿದರು. ಧರ್ಮ ಸಭೆಯ ಬೆಳವಣಿಗೆಗಾಗಿ ಧರ್ಮಸೇವಕರ ತರಬೇತಿ ಅತ್ಯಗತ್ಯವಾಗಿದೆ ಎಂದು ಅವರು ಒತ್ತಿಹೇಳಿದರು.

“ನಮ್ಮ ತಾಯಿ ಧರ್ಮ ಸಭೆಯು ಏಕೀಕೃತವಾಗಿದ್ದಾಳೆ; ಆದರೆ ಏಕರೂಪವಾಗಿಲ್ಲ,” ಎಂದು ಜಗದ್ಗುರುಗಳು ಹೇಳಿದರು. “ಅವಳ ಫಲವತ್ತಾದ ಗರ್ಭವು ವಿವಿಧ ಆಧ್ಯಾತ್ಮಿಕ ಮತ್ತು ಧರ್ಮಶಾಸ್ತ್ರೀಯ ಪರಂಪರೆಗಳಿಗೆ, ಹಾಗೆಯೇ ವಿಭಿನ್ನ ವಿಧಿವಿಧಾನಗಳು ಮತ್ತು ಶಿಸ್ತುಗಳಿಗೆ ಜನ್ಮ ನೀಡಿದೆ. ಇವು ಪರಸ್ಪರ ಒಂದನ್ನೊಂದು ಸಮೃದ್ಧಗೊಳಿಸುತ್ತವೆ.”

ಪೂರ್ವ ಧರ್ಮ ಸಭೆಗಳ ಆರಾಧನಾ ವಿಧಿಗಳು ದೇವರ ಕೃಪೆಯ ಬೆಳಕನ್ನು ಪ್ರಕಾಶಮಾನಗೊಳಿಸುವ ಮೂಲಕ ಕಥೋಲಿಕರನ್ನು ನಂಬಿಕೆಯ ಮೂಲಗಳತ್ತ ಮರಳಿ ಕರೆದೊಯ್ಯುತ್ತವೆ ಎಂದು ಅವರು ಹೇಳಿದರು.

ಆದಾಗ್ಯೂ, ಪೂರ್ವದ ಕ್ರೈಸ್ತ ಪರಂಪರೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಅದನ್ನು ಸಂರಕ್ಷಿಸಲು ಸಾಧ್ಯವೆಂದು ಅವರು ತಿಳಿಸಿದರು. ಅದಕ್ಕಾಗಿ ಸೂಕ್ತ ಶಿಕ್ಷಣ ಮತ್ತು ರೂಪುಗೊಳಿಸುವಿಕೆಯಲ್ಲಿ ಹೂಡಿಕೆ ಅಗತ್ಯವಿದೆ ಎಂದ ಅವರು, ಭವಿಷ್ಯದ ಯಾಜಕರು ಮತ್ತು ಧರ್ಮಸೇವಕರ ತರಬೇತಿ ವೆಚ್ಚಕ್ಕೆ ನೆರವು ನೀಡುವ ಆರ್ಒಎಸಿಒ ನಿರ್ಧಾರವನ್ನು ಶ್ಲಾಘಿಸಿದರು.

“ಜ್ಞಾನ ಮತ್ತು ದಾನಧರ್ಮದ ನಡುವಿನ ಈ ಸಂಬಂಧ, ಮುಕ್ತ ಮನಸ್ಸು ಮತ್ತು ಸೇವಾನಿರತ ಕೈಗಳ ನಡುವಿನ ಈ ಬಾಂಧವ್ಯಕ್ಕೆ ಆಧ್ಯಾತ್ಮಿಕ ಆಯಾಮವೂ ಅಗತ್ಯವಿದೆ. ಉದಾರ ಮನಸ್ಸಿನ ಜೊತೆಗೆ ದೇವರ ಕೃಪೆಯಿಂದ ತುಂಬಿ, ಪವಿತ್ರಾತ್ಮನ ಜ್ವಾಲೆಯಿಂದ ಉರಿಯುವ ಹೃದಯವೂ ಬೇಕಾಗಿದೆ,” ಎಂದು ಅವರು ಹೇಳಿದರು.

ನಂತರ ಜಗದ್ಗುರುಗಳು, “ಯುದ್ಧಗಳನ್ನು ಪ್ರಚೋದಿಸುವ ಅನೇಕರಿಂದ” ಉಂಟಾಗಿರುವ ಯುದ್ಧ ಮತ್ತು ಅಸ್ಥಿರತೆಯ ಭಾರೀ ಹೊರೆ ಕುರಿತು ಮಾತನಾಡಿದರು.

“ನೀವು ಜೀವವನ್ನು ಸೃಷ್ಟಿಸುತ್ತೀರಿ, ಆದರೆ ಅವರು ಮರಣವನ್ನು ಬಿತ್ತುತ್ತಾರೆ. ನೀವು ನಿಮ್ಮ ಸಹೋದರನ ಕಡೆಗೆ ಕೈ ಚಾಚುತ್ತೀರಿ, ಆದರೆ ಅವರು ನಾಶಮಾಡಬೇಕಾದ ಶತ್ರುಗಳನ್ನು ಹುಡುಕುತ್ತಾರೆ. ನೀವು ಸಂವಾದವನ್ನು ನಿರ್ಮಿಸುತ್ತೀರಿ, ಆದರೆ ಅವರು ಏಕಪಕ್ಷೀಯ ಮಾತುಗಳನ್ನು ಬಯಸುತ್ತಾರೆ. ನೀವು ಭರವಸೆಯ ಮಾರ್ಗಗಳನ್ನು ತೆರೆಯುತ್ತೀರಿ,ಆದರೆ ಅವರು ಜನರನ್ನು ಭಯದ ಬಂಧನದಲ್ಲಿ ಇರಿಸುತ್ತಾರೆ. ನೀವು ಭವಿಷ್ಯವನ್ನು ನಿರ್ಮಿಸುತ್ತೀರಿ, ಆದರೆ ಅವರು ವರ್ತಮಾನವನ್ನು ನಾಶಮಾಡುತ್ತಾರೆ,” ಎಂದು ಜಗದ್ಗುರುಗಳು ಹೇಳಿದರು.

ಈ ವ್ಯತ್ಯಾಸವು ಒಂದು ಕಡೆ ಸಂಪನ್ಮೂಲಗಳು ಅಗತ್ಯವಿರುವವರಿಗೆ ನೆರವಾಗಲು ಬಳಸಲ್ಪಡುತ್ತಿದ್ದರೆ, ಮತ್ತೊಂದು ಕಡೆ ಅವುಗಳನ್ನು ಕೊಲ್ಲಲು ಮತ್ತು ವಿನಾಶಕ್ಕೆ ವ್ಯರ್ಥ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

“ಮುಖ್ಯವಾಗಿ ಯುದ್ಧದ ಕಾರಣದಿಂದ ತಮ್ಮ ಸ್ವಂತ ನೆಲವನ್ನು ತೊರೆಯಬೇಕಾದ ಪೂರ್ವದ ಕ್ರೈಸ್ತರ ನೋವಿನ ವಲಸೆಯನ್ನು” ಜಗದ್ಗುರುಗಳು ನೆನಪಿಸಿಕೊಂಡರು. ಇಂತಹ ಯುದ್ಧಗಳು ಜಗತ್ತು ಬೇಗ ಮರೆತುಬಿಡುವ ದುರಂತಗಳನ್ನು ಮಾತ್ರ ಸೃಷ್ಟಿಸುತ್ತವೆ ಎಂದು ಅವರು ವಿಷಾದಿಸಿದರು.

“ಇಂದು ನಾನು ಮಾತನಾಡಲು ಬಯಸುವ, ಯುದ್ಧದಿಂದ ಹುಟ್ಟಿಕೊಂಡ ಒಂದು ಮಹಾಮಾರಿ ಮತ್ತು ಶಾಪವಿದೆ, ಅದು ವಿಶೇಷವಾಗಿ ಪೂರ್ವ ಧರ್ಮ ಸಭೆಗಳ ಜೀವನಾಡಿಯನ್ನು ಹೀರಿಕೊಳ್ಳುತ್ತಿದೆ,” ಎಂದು ಅವರು ಹೇಳಿದರು. “ನಾನು ಅದನ್ನು ಒಂದು ಪದದಲ್ಲಿ ವ್ಯಾಖ್ಯಾನಿಸುತ್ತೇನೆ: ಅದೇನೆಂದರೆ ಅಸ್ಥಿರತೆ”ಎಂಬುದನ್ನು ಹೇಳಿದರು.

ಯುದ್ಧ ಕೊನೆಗೊಂಡ ನಂತರವೂ ಸಮಾಜಗಳು ಅದರ ಗಾಯಗಳನ್ನು ಹೊತ್ತುಕೊಂಡೇ ಇರುತ್ತವೆ ಎಂದು ಅವರು ಹೇಳಿದರು. ಶಸ್ತ್ರಸಜ್ಜಿತ ಗುಂಪುಗಳ ಅಸ್ತಿತ್ವ, ದುರ್ಬಲಗೊಂಡ ಸಂಸ್ಥೆಗಳು ಮತ್ತು ಹೊರಗಿನ ಪ್ರಭಾವಿಗಳ ಕುತಂತ್ರಗಳಿಂದ ಸಮಾಜವು ಇನ್ನೂ ಸಂಕಷ್ಟಕ್ಕೆ ಸಿಲುಕಿರುತ್ತದೆ.

“ಇಂತಹ ವ್ಯವಸ್ಥೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಲ್ಲ,ಬದಲಾಗಿ ಕುತಂತ್ರಗಳು, ರಹಸ್ಯ ಒಪ್ಪಂದಗಳು ಮತ್ತು ಪಕ್ಷಪಾತದ ಹಿತಾಸಕ್ತಿಗಳ ಜಾಲದಲ್ಲಿ ಸಿಲುಕಿರುತ್ತದೆ,” ಎಂದು ಅವರು ಹೇಳಿದರು. “ಇದರ ಪರಿಣಾಮವಾಗಿ ನಿರಂತರ ಅಸ್ಥಿರತೆಯ ಚಕ್ರ ಸೃಷ್ಟಿಯಾಗುತ್ತದೆ. ಅದು ಅಭಿವೃದ್ಧಿಯ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ ಮತ್ತು ಅದರ ಹೊಡೆತವನ್ನು ಅತ್ಯಂತ ಹೆಚ್ಚು ಬಡವರೇ ಅನುಭವಿಸುತ್ತಾರೆ.”

ಈ ಪರಿಸ್ಥಿತಿಯು ಜನರನ್ನು ಅನಿಶ್ಚಿತ ಉದ್ಯೋಗ ಪರಿಸ್ಥಿತಿಗಳಲ್ಲಿ ಬದುಕುವಂತೆ ಮಾಡುತ್ತದೆ ಎಂದು ಪೋಪ್ ಹೇಳಿದರು. ಇದರ ಭಾರವನ್ನು ಸಾಮಾನ್ಯ ಕುಟುಂಬಗಳು ಮತ್ತು ಯುವಜನರು ಹೆಚ್ಚಾಗಿ ಹೊರುತ್ತಾರೆ.

ಕೊನೆಯಲ್ಲಿ, ಯುದ್ಧ ಮತ್ತು ಅಸ್ಥಿರತೆಯ ವ್ಯಾಪಕ ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸುವಂತೆ ಜಗದ್ಗುರುಗಳು ಮನವಿ ಮಾಡಿದರು. ಹಿಂಸಾಚಾರವು ಅದನ್ನು ನಡೆಸುವವರ ಮೇಲೆಯೇ ತಿರುಗಿಬೀಳುವ ಸಂದರ್ಭಗಳು ಅನೇಕವಿವೆ ಎಂದು ಅವರು ಎಚ್ಚರಿಸಿದರು.

“ಶಾಂತಿಯ ಪ್ರಭುವಾದ ಯೇಸುವಿಗೆ ನಾವು ಪ್ರಾರ್ಥಿಸೋಣ,” ಎಂದು ಅವರು ಹೇಳಿದರು. “ಜನರ ಮನಸ್ಸಾಕ್ಷಿಯನ್ನು ಜಾಗೃತಗೊಳಿಸುವಂತೆ ಮನವಿ ಮಾಡೋಣ. ಮಾನವೀಯತೆಯ ಗೌರವ ಮತ್ತು ನಾಗರಿಕತೆಯ ನಿಜವಾದ ಪ್ರಜ್ಞೆ ಮತ್ತೆ ಪುನಃಸ್ಥಾಪನೆಯಾಗಲಿ!”

18 ಜೂನ್ 2026, 15:05