ಜಗದ್ಗುರು ಲಿಯೋರವರು ಪೆರು ಗಣರಾಜ್ಯದ ಅಧ್ಯಕ್ಷರನ್ನು ಸ್ವಾಗತಿಸಿ ಭೇಟಿಯಾದರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಇಂದು ವ್ಯಾಟಿಕನ್‌ನಲ್ಲಿ ಪೆರು ಗಣರಾಜ್ಯದ ಅಧ್ಯಕ್ಷರಾದ ಶ್ರೀ ಜೋಸೆ ಮರಿಯಾ ಬಾಲ್ಕಾಸರ್ ಝೆಲಾಡಾರವರನ್ನು ಭೇಟಿಯಾದರು.
ಅದಾದ ಬಳಿಕ, ಅಧ್ಯಕ್ಷರು ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಹಾಗೂ ರಾಜ್ಯಗಳ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರೊಂದಿಗೆ ರಾಜ್ಯ ಕಾರ್ಯದರ್ಶಾಲಯದಲ್ಲಿ ಮಾತುಕತೆ ನಡೆಸಿದರು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಮಾತುಕತೆಗಳು “ಸೌಹಾರ್ದಯುತವಾಗಿದ್ದವು” ಹಾಗೂ “ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಪೆರು ನಡುವಿನ ಉತ್ತಮ ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಲಾಯಿತು ಮತ್ತು ಅವುಗಳನ್ನು ಮತ್ತಷ್ಟು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಲಾಯಿತು.”
ಪ್ರಕಟಣೆಯಲ್ಲಿ ಮುಂದುವರಿದು, ಸಾಮಾನ್ಯ ಹಿತಾಸಕ್ತಿ ಹೊಂದಿರುವ ಹಲವು ವಿಷಯಗಳ ಕುರಿತು ಗಮನ ಹರಿಸಲಾಯಿತು ಎಂದು ತಿಳಿಸಲಾಗಿದೆ. ಅವುಗಳಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳು, ಅಕ್ರಮ ಗಣಿಗಾರಿಕೆ ಚಟುವಟಿಕೆಗಳು, ಸಾರ್ವಜನಿಕ ಹಿತದ ಪ್ರೋತ್ಸಾಹ, ಸಂವಾದದ ವೃದ್ಧಿ ಹಾಗೂ ಸಾಮಾಜಿಕ ಐಕ್ಯತೆಯನ್ನು ಬಲಪಡಿಸುವ ಬದ್ಧತೆ ಪ್ರಮುಖವಾಗಿದ್ದವು.
ಕೊನೆಗೆ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಾಮಾಜಿಕ-ರಾಜಕೀಯ ಪರಿಸ್ಥಿತಿಗಳ ಕುರಿತೂ ಅಭಿಪ್ರಾಯಗಳ ವಿನಿಮಯ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ. ವಿಶೇಷವಾಗಿ ವಲಸೆಯ ಸಮಸ್ಯೆ, ಸಂಘಟಿತ ಅಪರಾಧ ಚಟುವಟಿಕೆಗಳು ಹಾಗೂ ವಿವಿಧ ಸಂಘರ್ಷಗಳ ಪರಿಣಾಮಗಳ ಕುರಿತು ಗಮನ ಕೇಂದ್ರೀಕರಿಸಲಾಯಿತು.
