ಜಗದ್ಗುರುಗಳು: ಸಂಘರ್ಷಗಳಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ದೇವರ ಅಪಾರ ಕರುಣೆ ನಮ್ಮ ಬದುಕಿಗೆ ಹೊಸ ದಿಕ್ಕನ್ನು ನೀಡಬಲ್ಲದು.
ವ್ಯಾಟಿಕನ್ ವರದಿ
ಉದ್ವಿಗ್ನತೆ ಮತ್ತು ಹಿಂಸಾಚಾರದಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ದೇವರ ಕರುಣೆಗೆ ಮಿತಿಯಿಲ್ಲ, ನಮ್ಮ ಹೃದಯಗಳನ್ನು ಪರಿವರ್ತಿಸುವ ಶಕ್ತಿ ಅದಕ್ಕಿದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದ್ದಾರೆ. ಜೂನ್ 7, ಭಾನುವಾರದಂದು ವಿಶ್ವ ಪ್ರೇಷಿತರ ಕರುಣೆ ಮಹಾಸಭೆಗಾಗಿ ಬಿಡುಗಡೆಗೊಂಡ ವೀಡಿಯೊ ಸಂದೇಶದಲ್ಲಿ ಅವರು ಈ ಮಾತುಗಳನ್ನು ಹೇಳಿದರು.
"ಸಂಬಂಧಗಳನ್ನು ವಿಷಪೂರಿತಗೊಳಿಸಿ ಜೀವಗಳನ್ನು ನಾಶಮಾಡುತ್ತಿರುವ ಹಿಂಸಾಚಾರದ ಸುಳಿಯಲ್ಲಿ, ತನ್ನ ಅದ್ಭುತ ನವೀಕರಣದ ಶಕ್ತಿಯೊಂದಿಗೆ ದೇವರ ಕರುಣೆ ನಮ್ಮ ಹೃದಯಗಳಿಗೆ ಪ್ರವೇಶಿಸಲು ಅವಕಾಶ ನೀಡುವಂತೆ ನಮ್ಮನ್ನು ಆಹ್ವಾನಿಸುತ್ತದೆ," ಎಂದು ಜಗದ್ಗುರುಗಳು ಒತ್ತಿಹೇಳಿದರು.
"ದೇವರ ಈ ಕರುಣೆಯೇ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಮ್ಮ ಮೂಲಕ ವ್ಯಕ್ತವಾಗುವ ದೇವರ ಮುಖದ ವಿಶಿಷ್ಟ ಲಕ್ಷಣಗಳಾದ ಪ್ರೀತಿ ಮತ್ತು ಕ್ಷಮೆಯ ಮಾರ್ಗವನ್ನು ತೆರೆದಿಡುತ್ತದೆ," ಎಂದು ಅವರು ಹೇಳಿದರು.
ಆರನೇ ವಿಶ್ವ ಪ್ರೇಷಿತರ ಕರುಣೆ ಮಹಾಸಭೆಯು ಜೂನ್ 7ರಿಂದ 12ರವರೆಗೆ ಲಿಥುವೇನಿಯಾದ ರಾಜಧಾನಿ ವಿಲ್ನಿಯಸ್‌ನಲ್ಲಿ ನಡೆಯುತ್ತಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ವಿಭಿನ್ನ ದೇಶವೊಂದರಲ್ಲಿ ಆಯೋಜಿಸಲಾಗುವ ಈ ಮಹಾಸಭೆಯು ಸಾಕ್ಷ್ಯಗಳು, ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಇತರ ಕಾರ್ಯಕ್ರಮಗಳ ಮೂಲಕ ದೇವರ ದಿವ್ಯ ಕರುಣೆಯನ್ನು ಘೋಷಿಸುವ ಹಾಗೂ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ತಮ್ಮ ವೀಡಿಯೊ ಸಂದೇಶದಲ್ಲಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕಾನ್‌ಸ್ಟಾಂಟಿನೋಪಲ್‌ನ ಪರಮಪೂಜ್ಯ ಪಿತಾಮಹ ಬಾರ್ತಲೊಮಿಯೋಸ್ ರವರಿಗೆ, ವಿಲ್ನಿಯಸ್ ಮಹಾಧರ್ಮಾಧ್ಯಕ್ಷ ಗಿಂಟಾರಸ್ ಗ್ರುಶಾಸ್ ರವರಿಗೆ, ಲಿಥುವೇನಿಯಾದ ಅಧ್ಯಕ್ಷ ಗಿತಾನಾಸ್ ನೌಸೇಡಾ ರವರಿಗೆ ಹಾಗೂ ಮಹಾಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಜಗದ್ಗುರುಗಳು ಶುಭಾಶಯಗಳನ್ನು ಸಲ್ಲಿಸಿದರು. ಈ ಉಪಕ್ರಮವು "ಪವಿತ್ರ ದ್ವಿತೀಯ ಜಾನ್ ಪಾಲ್ ರವರಿಂದ ಅತ್ಯಂತ ಬಲವಾಗಿ ಅಪೇಕ್ಷಿಸಲ್ಪಟ್ಟಿತ್ತು" ಎಂಬುದನ್ನೂ ಅವರು ಸ್ಮರಿಸಿದರು.
ದೇವರು ತನ್ನ ಕರುಣೆಯನ್ನು ತೋರಿಸಲು ಎಂದಿಗೂ ಆಯಾಸಗೊಳ್ಳುವುದಿಲ್ಲ
ತಮ್ಮ ಸಂದೇಶದಲ್ಲಿ, "ಅಸಂಖ್ಯಾತ ಭಯಗಳು, ಆತಂಕಗಳು, ಉದ್ವಿಗ್ನತೆಗಳು ಮತ್ತು ಯುದ್ಧಗಳಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ, ವ್ಯಕ್ತಿಗಳ ಹಾಗೂ ಜನಾಂಗಗಳ ಹೃದಯಗಳಲ್ಲಿ ಶಾಂತಿಯ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚು ತುರ್ತಾಗಿದೆ" ಎಂದು ಜಗದ್ಗುರುಗಳು ಹೇಳಿದರು.
"ದೇವರು ತನ್ನ ಕರುಣೆಯನ್ನು ತೋರಿಸಲು ಎಂದಿಗೂ ಆಯಾಸಗೊಳ್ಳುವುದಿಲ್ಲ," ಎಂದು ಅವರು ಒತ್ತಿ ಹೇಳುತ್ತಾ, ದೇವರ ಪ್ರೀತಿಯು "ಶಾಶ್ವತವಾಗಿ ನೆಲೆಗೊಂಡಿದೆ, ಮತ್ತು ನಮ್ಮ ಜಗತ್ತು ಪ್ರತಿಯೊಂದು ಹಂತದಲ್ಲೂ ಎಷ್ಟೊಂದು ಕರುಣೆಯನ್ನು ಬಯಸುತ್ತಿದೆ ಎಂಬುದನ್ನು ನಾವು ಕಾಣುತ್ತೇವೆ" ಎಂದು ಹೇಳಿದರು.
"ನನ್ನ ಏಕೈಕ ನಿರೀಕ್ಷೆಯು ದೇವರ ಅಪರಿಮಿತ ಕರುಣೆಯಲ್ಲಿದೆ" ಎಂದು ಹೇಳಿದ ಸಂತ ಆಗಸ್ಟಿನ್ ರವರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರುಗಳು, "ದೇವರು ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಎಷ್ಟೊಂದು ಕರುಣಾಮಯನಾಗಿದ್ದಾನೆ ಎಂಬುದನ್ನು ಅನುಭವಿಸಿದಾಗ ಅದು ಸಂತೋಷ ಮತ್ತು ಭರವಸೆಯ ಮೂಲವಾಗುತ್ತದೆ" ಎಂದು ಹೇಳಿದರು.
ಆದರೆ, "ನಾವು ಆಳವಾಗಿ ಅಪೇಕ್ಷಿಸುವ ಶಾಂತಿಯು ಕರುಣೆಯಿಲ್ಲದೆ ಸಾಧ್ಯವಾಗುವುದಿಲ್ಲ" ಎಂದು ಅವರು ವಿವರಿಸಿದರು.
"ಆದ್ದರಿಂದ, ದೇವರ ಅನಂತ ಕರುಣೆಯ ಮೇಲಿನ ನಮ್ಮ ಭರವಸೆಯೊಂದಿಗೆ, ಮೊದಲು ನಮ್ಮ ಕುಟುಂಬಗಳಿಂದಲೇ ಆರಂಭಿಸಿ, ಹೆಚ್ಚು ಸ್ವಾಗತಾರ್ಹ ಮತ್ತು ಕರುಣಾಮಯ ಸಮಾಜವನ್ನು ನಿರ್ಮಿಸಲು ನಾವು ವೈಯಕ್ತಿಕವಾಗಿ ಬದ್ಧರಾಗೋಣ," ಎಂದು ಅವರು ಕರೆ ನೀಡಿದರು.
ಅಂತಿಮವಾಗಿ, ಈ ಅಂತಾರಾಷ್ಟ್ರೀಯ ಮಹಾಸಭೆಯಲ್ಲಿ ಪಡೆದ ಅನುಭವ ಮತ್ತು ಆಧ್ಯಾತ್ಮಿಕ ಸಂಪತ್ತನ್ನು ತಮ್ಮ ತಮ್ಮ ಸಮುದಾಯಗಳಿಗೆ ಕೊಂಡೊಯ್ಯುವಂತೆ ಅಲ್ಲಿದ್ದವರನ್ನು ಪ್ರೋತ್ಸಾಹಿಸಿದ ಜಗದ್ಗುರುಗಳು, ಅವರಿಗೆ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.
