ಹುಡುಕಿ

ಕಾರ್ಡಿನಲ್ ಕಾಮಿಲ್ಲೊ ರುಯಿನಿ. ಕಾರ್ಡಿನಲ್ ಕಾಮಿಲ್ಲೊ ರುಯಿನಿ.  (ANSA)

ದಿವಂಗತ ಕಾರ್ಡಿನಲ್ ರುಯಿನಿರವರನ್ನು ‘ಜ್ಞಾನಿ ಸಹೋದರ’ ಎಂದು ಸ್ಮರಿಸಿದ ಜಗದ್ಗುರು ಲಿಯೋರವರು.

ರೋಮಿನ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಹಾಗೂ ಇಟಲಿಯ ಕಥೋಲಿಕ ಧರ್ಮ ಸಭೆಯ ಪ್ರಮುಖ ವ್ಯಕ್ತಿಯಾಗಿದ್ದ ಕಾರ್ಡಿನಲ್ ಕಾಮಿಲ್ಲೊ ರುಯಿನಿರವರ ನಿಧನದ ಹಿನ್ನೆಲೆಯಲ್ಲಿ ಕಳುಹಿಸಿದ ಸಂತಾಪ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು, “ಧಮ೯ ಸಭೆಯ ಈ ಗೌರವಾನ್ವಿತ ಸೇವಕರನ್ನು ನಮಗೆ ದಯಪಾಲಿಸಿದ ದೇವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳುತ್ತಾ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ವರದಿ

ಜೂನ್ 17, ಬುಧವಾರ ಪ್ರಕಟವಾದ ಸಂತಾಪ ಸಂದೇಶದಲ್ಲಿ, ರೋಮಿನ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಹಾಗೂ ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಮಾಜಿ ಅಧ್ಯಕ್ಷರಾಗಿದ್ದ ಕಾರ್ಡಿನಲ್ ಕಾಮಿಲ್ಲೊ ರುಯಿನಿರವರು ಜೂನ್ 16, ಮಂಗಳವಾರ 95ನೇ ವಯಸ್ಸಿನಲ್ಲಿ ನಿಧನರಾದ ಸುದ್ದಿ ತಿಳಿದ ಬಳಿಕ, ಜಗದ್ಗುರು XIVನೇ ಲಿಯೋರವರು ತಮ್ಮ “ಸಾಮೀಪ್ಯ ಮತ್ತು ಸಂತಾಪ”ವನ್ನು ವ್ಯಕ್ತಪಡಿಸಿದರು.

ಜಗದ್ಗುರು ಲಿಯೋರವರು ಅವರನ್ನು “ಆಳವಾದ ನಂಬಿಕೆ, ತೀಕ್ಷ್ಣ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯುಳ್ಳ, ಅನುಭವಸಂಪನ್ನ ಹಾಗೂ ಜ್ಞಾನಿ ಸಹೋದರ” ಎಂದು ಸ್ಮರಿಸಿದರು. “ಅವರು ವಿವೇಕ, ವಿನಮ್ರತೆ ಮತ್ತು ಆತ್ಮತ್ಯಾಗದ ಮನೋಭಾವದೊಂದಿಗೆ ಸುವಾರ್ತೆ ಮತ್ತು ಧರ್ಮ ಸಭೆಗೆ ಸೇವೆ ಸಲ್ಲಿಸಿದರು” ಎಂದು ಜಗದ್ಗುರುಗಳು ಹೇಳಿದರು.

ಅಲ್ಲದೆ, “ಇಟಾಲಿಯನ್ ಬಿಷಪ್‌ಗಳ ಸಮ್ಮೇಳನಕ್ಕಾಗಿ ಅವರು ನಡೆಸಿದ ಫಲಪ್ರದ ಕಾರ್ಯ” ಹಾಗೂ “ಸಂಸ್ಕೃತಿ ಲೋಕದೊಂದಿಗೆ ಅವರು ಬೆಳೆಸಿದ ಸಾರ್ಥಕ ಸಂವಾದ”ವನ್ನು ಜಗದ್ಗುರುಗಳು ನೆನಪಿಸಿಕೊಂಡರು.

ಇದಲ್ಲದೆ, “ಧಮ೯ಸಭೆಯ ಈ ಗೌರವಾನ್ವಿತ ಸೇವಕರನ್ನು ನಮಗೆ ದಯಪಾಲಿಸಿದ ದೇವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಜಗದ್ಗುರು XIVನೇ ಲಿಯೋರವರು  ಒತ್ತಿ ಹೇಳಿದರು. ಈ ಸಂತಾಪ ಸಂದೇಶವನ್ನು ರೋಮಿನ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ದಸ್ಸಾರೆ ರೈನಾರವರಿಗೆ ಕಳುಹಿಸಲಾಗಿತ್ತು.

“ಪವಿತ್ರ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಯ ಮೂಲಕ, ಪ್ರಭು ಕಾರ್ಡಿನಲ್ ರುಯಿನಿರವರನ್ನು ಸ್ವರ್ಗೀಯ ಜೆರೂಸಲೇಮಿನಲ್ಲಿ ಸ್ವಾಗತಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರ ನಿಧನಕ್ಕಾಗಿ ಶೋಕಿಸುತ್ತಿರುವ ಎಲ್ಲರಿಗೂ ನಾನು ಹೃತ್ಪೂರ್ವಕವಾಗಿ ಪ್ರೇಷಿತರ ಆಶೀರ್ವಾದವನ್ನು ನೀಡುತ್ತೇನೆ. ಹಾಗೆಯೇ, ಅವರನ್ನು ಅಪಾರ ಸಮರ್ಪಣೆಯಿಂದ ಆರೈಕೆ ಮಾಡಿದವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ” ಎಂದು ಜಗದ್ಗುರುಗಳು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

ಇಟಾಲಿಯನ್ ಧರ್ಮ ಸಭೆಯ ಪ್ರಮುಖ ವ್ಯಕ್ತಿತ್ವ

ಕಾರ್ಡಿನಲ್ ಕಾಮಿಲ್ಲೊ ರುಯಿನಿರವರು 1931ರಲ್ಲಿ ಮಧ್ಯ ಇಟಲಿಯ ಸಸ್ಸುವೋಲೊ ಪಟ್ಟಣದಲ್ಲಿ ಜನಿಸಿದರು ಮತ್ತು 1954ರಲ್ಲಿ ಯಾಜಕರಾಗಿ ದೀಕ್ಷೆ ಪಡೆದರು. 1983ರಿಂದ 1986ರವರೆಗೆ ಅವರು ರೆಜ್ಜಿಯೋ ಎಮಿಲಿಯಾದ ಸಹಾಯಕ ಬಿಷಪ್ ಆಗಿ ಸೇವೆ ಸಲ್ಲಿಸಿದರು. ನಂತರ, 1991ರಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಅವರನ್ನು ಕಾರ್ಡಿನಲ್ ಆಗಿ ನೇಮಿಸಿದರು.

ಅದೇ ವರ್ಷ ಅವರು ರೋಮಿನ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಸೇಂಟ್ ಜಾನ್ ಲ್ಯಾಟೆರನ್ ಬೆಸಿಲಿಕಾ ನ ಪ್ರಧಾನ ಯಾಜಕರಾಗಿ ನೇಮಕಗೊಂಡರು. ಅವರು 2008ರವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಜೊತೆಗೆ, 2007ರವರೆಗೆ ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಇಟಾಲಿಯನ್ ಧರ್ಮ ಸಭೆಯ ಮೇಲೆ ಆಳವಾದ ಪ್ರಭಾವ ಬೀರಿದ ನಾಯಕರಾಗಿ ಅವರು ಸ್ಮರಿಸಲ್ಪಡುತ್ತಾರೆ.

ರೋಮಿನ ಧರ್ಮಪ್ರಾಂತ್ಯ, ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಪ್ರಸ್ತುತ ಅಧ್ಯಕ್ಷ ಕಾರ್ಡಿನಲ್ ಮ್ಯಾಟಿಯೊ ಜುಪ್ಪಿ ಹಾಗೂ ಇಟಲಿಯ ವಿವಿಧ ಕಥೋಲಿಕ ಸಂಸ್ಥೆಗಳು ಕಾರ್ಡಿನಲ್ ರುಯಿನಿರವರ ಧರ್ಮ ಸಭೆಯ ಸೇವೆಯನ್ನು ಸ್ಮರಿಸಿ ಸಂತಾಪ ಸಂದೇಶಗಳನ್ನು ಪ್ರಕಟಿಸಿವೆ.

ಗುರುವಾರ ಅಂತ್ಯಕ್ರಿಯೆ

ಇತ್ತೀಚಿನ ತಿಂಗಳುಗಳಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದು, ಪ್ರತಿದಿನ ಮನೆಯಲ್ಲೇ ವಿಶೇಷ ಆರೈಕೆ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಇದಕ್ಕೂ ಮೊದಲು, ಅವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. 2024ರ ಜುಲೈನಲ್ಲಿ ಹೃದಯಾಘಾತಕ್ಕೊಳಗಾಗಿದ್ದರು ಮತ್ತು 2025ರಲ್ಲಿ ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು.

ಅವರ ಅಂತ್ಯಕ್ರಿಯೆ ಜೂನ್ 18, ಗುರುವಾರ ಸಂಜೆ 4:30ಕ್ಕೆ ಸಂತ ಪೇತ್ರರ ಬಸಿಲಿಕಾದಲ್ಲಿರುವ ‘ಆಲ್ಟರ್ ಆಫ್ ದಿ ಚೇರ್’ ನಲ್ಲಿ ನಡೆಯಲಿದೆ.

 

 

17 ಜೂನ್ 2026, 18:01