ಹುಡುಕಿ

ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳು. ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳು.  (AFP or licensors)

ಸಾರ್ವಜನಿಕ ಭೇಟಿಯಲ್ಲಿ ಜಗದ್ಗುರುಗಳು: ಲಿಟರ್ಜಿ ನಮ್ಮನ್ನು ಜೀವನದ ಸಾರಭೂತ ಅಂಶಗಳತ್ತ ಮರಳಿ ಕರೆದೊಯ್ಯುತ್ತದೆ.

ಜಗದ್ಗುರು XIVನೇ ಲಿಯೋರವರು, ತಮ್ಮ ಸಾಪ್ತಾಹಿಕ ಸಾರ್ವಜನಿಕ ಭೇಟಿಯ ಧರ್ಮೋಪದೇಶದಲ್ಲಿ, ದ್ವಿತೀಯ ವ್ಯಾಟಿಕನ್ ಮಹಾಸಭೆಯ 1963ರ ಪವಿತ್ರ ಲಿಟರ್ಜಿ ಕುರಿತ ಸಂವಿಧಾನ ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ಕುರಿತು ಚಿಂತನೆ ನಡೆಸುತ್ತಾ, ದೈವಾರಾಧನೆ ವಿಧಿಗಳು, ಚಿಹ್ನೆಗಳು ಮತ್ತು ಸಂಕೇತಗಳು ನಮ್ಮನ್ನು ದೇವರೊಂದಿಗೆ ಇನ್ನಷ್ಟು ನಿಕಟವಾಗಿ ಒಂದಾಗಿಸಲು ಎಷ್ಟು ಮಹತ್ವದ್ದಾಗಿವೆ ಎಂಬುದನ್ನು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಜೂನ್ 3ರಂದು ಸಂತ ಪೇತ್ರರ ಚೌಕದಲ್ಲಿ ನಡೆದ ಬುಧವಾರದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ, ಇಂದಿನ ಗದ್ದಲ ಮತ್ತು ಅತಿವ್ಯಸ್ತ ಜೀವನದಲ್ಲಿ ದೈವಾರಾಧನೆ ವಿಧಿಗಳು, ಚಿಹ್ನೆಗಳು ಮತ್ತು ಸಂಕೇತಗಳು ನಮ್ಮನ್ನು ಕ್ಷಣಕಾಲ ನಿಲ್ಲಿಸಿ, ಅಂತರಂಗದ ಆಧ್ಯಾತ್ಮಿಕ ಜೀವನದೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತವೆ ಎಂದು ಹೇಳಿದರು. ಅವು ನಮ್ಮನ್ನು ಕ್ರಿಸ್ತನ ಮತ್ತು ಅವರ ಪ್ರೀತಿಯತ್ತ ಇನ್ನಷ್ಟು ಹತ್ತಿರ ಕರೆದೊಯ್ಯುತ್ತವೆ ಎಂದು ಅವರು ಒತ್ತಿಹೇಳಿದರು. “ತನ್ನ ಗಂಭೀರವಾದ ಸರಳತೆಯ ಮೂಲಕ ಲಿಟರ್ಜಿಯ ವಿಧಿಗಳು ನಮ್ಮ ಆತುರದ ಚಟುವಟಿಕೆಗಳನ್ನು ತಡೆದು, ಜೀವನದ ಸಾರಭೂತ ಅಂಶಗಳತ್ತ ನಮ್ಮನ್ನು ಮರಳಿ ನಡೆಸುತ್ತವೆ” ಎಂದು ಜಗದ್ಗುರುಗಳು ಹೇಳಿದರು.

ದ್ವಿತೀಯ ವ್ಯಾಟಿಕನ್ ಮಹಾಸಭೆಯ 1963ರ ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ಎಂಬ ಪವಿತ್ರ ಲಿಟರ್ಜಿ ಕುರಿತ ಸಂವಿಧಾನದ ಕುರಿತು ತಮ್ಮ ಧರ್ಮೋಪದೇಶವನ್ನು ಮುಂದುವರಿಸಿದ ಜಗದ್ಗುರುಗಳು, ಕ್ರೈಸ್ತ ದೈವಾರಾಧನೆ ವಿಧಿಗಳು ಕೇವಲ ಬಾಹ್ಯ ಆಚರಣೆಗಳಲ್ಲ, ಆದರೆ ದೇವರ ಕೃಪೆ ಮತ್ತು ರಕ್ಷಣೆಯ ವರವು ವಿಶ್ವಾಸಿಗಳ ಜೀವನವನ್ನು ತಲುಪಿಸುವ ಧರ್ಮ ಸಭೆಯ ಮಾಧ್ಯಮಗಳಾಗಿವೆ ಎಂದು ವಿವರಿಸಿದರು. ಲಿಟರ್ಜಿ ನಮ್ಮ ಜೀವನಕ್ಕೆ ರೂಪ ನೀಡುತ್ತಿದ್ದು, ಯೇಸು ಕ್ರಿಸ್ತನ ಮೂಲಕ ದೇವರ ಸಾನ್ನಿಧ್ಯವನ್ನು ಅನುಭವಿಸುವ ಆಧ್ಯಾತ್ಮಿಕ ಸಂವೇದನೆಯನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು.

ಆದರೆ ಲಿಟರ್ಜಿಯ ಈ ಫಲಗಳು ದೊರಕಬೇಕಾದರೆ ವಿಶ್ವಾಸಿಗಳು ದೇಹ, ಮನಸ್ಸು ಮತ್ತು ಹೃದಯ ಸಮೇತ ಸಂಪೂರ್ಣವಾಗಿ ಅದರಲ್ಲಿ ಭಾಗವಹಿಸಬೇಕು ಎಂದು ಜಗದ್ಗುರುಗಳು ನೆನಪಿಸಿದರು. ಕೇವಲ ವೀಕ್ಷಕರಾಗಿಯೇ ಅಥವಾ ಮೌನ ಪ್ರೇಕ್ಷಕರಾಗಿಯೇ ಉಳಿಯಬಾರದು ಎಂದು ಅವರು ಎಚ್ಚರಿಸಿದರು. ಪವಿತ್ರ ವಿಧಿಗಳ ಮೂಲಕ ದೇವರ ವಾಕ್ಯವನ್ನು ಆಲಿಸುವುದು, ಕೃತಜ್ಞತೆಯನ್ನು ಸಲ್ಲಿಸುವುದು, ಆರಾಧಿಸುವುದು, ಸಹೋದರಭಾವವನ್ನು ಹಂಚಿಕೊಳ್ಳುವುದು ಮತ್ತು ಧರ್ಮ ಸಭೆಯ ಐಕ್ಯತೆಯಲ್ಲಿ ಜೀವಿಸುವುದನ್ನು ನಾವು ಕಲಿಯುತ್ತೇವೆ ಎಂದರು.

ದೈವಾರಾಧನೆ ವಿಧಿಗಳು ನಿಶ್ಚಿತವಾದ ಪ್ರಾರ್ಥನೆಗಳು ಮತ್ತು ಕ್ರಿಯೆಗಳ ಕ್ರಮವನ್ನು ಒಳಗೊಂಡಿರುವುದರಿಂದ ಅವು ಕೆಲವೊಮ್ಮೆ ವೈಯಕ್ತಿಕ ಸ್ವಾಭಾವಿಕ ಅಭಿವ್ಯಕ್ತಿಗೆ ವಿರುದ್ಧವಾಗಿ ತೋರುವ ಸಾಧ್ಯತೆಯಿದೆ ಎಂದು ಜಗದ್ಗುರುಗಳು ಒಪ್ಪಿಕೊಂಡರು. ಆದಾಗ್ಯೂ, ಅವು ಸ್ವಾತಂತ್ರ್ಯವನ್ನು ಕಟ್ಟಿಹಾಕಲು ಅಲ್ಲ ಬದಲಾಗಿ ಜೀವನದ ಮೂಲಭೂತ ಸತ್ಯಗಳತ್ತ ನಮ್ಮನ್ನು ಕರೆದೊಯ್ದು, ಅಂತರಂಗದ ಆಧ್ಯಾತ್ಮಿಕ ಆಯಾಮದೊಂದಿಗೆ ನಮ್ಮನ್ನು ಸಂಪರ್ಕಿಸಲು ರೂಪುಗೊಂಡಿವೆ ಎಂದು ಅವರು ಸ್ಪಷ್ಟಪಡಿಸಿದರು.

ನಂತರ ಜಗದ್ಗುರುಗಳು ಲಿಟರ್ಜಿಯ ಚಿಹ್ನೆಗಳು ಮತ್ತು ಸಂಕೇತಗಳ ಮಹತ್ವವನ್ನು ವಿವರಿಸಿದರು. ಪವಿತ್ರ ನೀರಿನ ಸಿಂಪಡಣೆಯಂತಹ ಚಿಹ್ನೆಗಳು ದೀಕ್ಷಾಸ್ನಾನದಲ್ಲಿ ಪಡೆದ ಕೃಪೆಯನ್ನು ಮತ್ತು ಕ್ರಿಸ್ತನಲ್ಲಿ ಹೊಸ ಜೀವನ ನಡೆಸುವ ಕರೆಯನ್ನು ನೆನಪಿಸುತ್ತವೆ ಎಂದು ಹೇಳಿದರು. ನೀರು ಸೃಷ್ಟಿಯ ಆರಂಭದಿಂದ ಹಿಡಿದು ಮಹಾಪ್ರಳಯ, ಕೆಂಪು ಸಮುದ್ರದ ದಾಟುವಿಕೆ, ಜೋರ್ಡಾನ್ ನದಿ ಮತ್ತು ಅಂತಿಮವಾಗಿ ಕ್ರಿಸ್ತನ ಪಾರ್ಶ್ವದಿಂದ ಹರಿದ ನೀರಿನವರೆಗೆ ಬೈಬಲ್‌ನಲ್ಲೆಲ್ಲಾ ರಕ್ಷಣೆಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ ಎಂದು ಅವರು ವಿವರಿಸಿದರು

ಧರ್ಮೋಪದೇಶದ ಅಂತ್ಯದಲ್ಲಿ, ದೈವಾರಾಧನೆ ವಿಧಿಗಳಿಂದ ನಾವು ರೂಪುಗೊಳ್ಳಲು ಅವಕಾಶ ನೀಡಬೇಕು ಮತ್ತು ಆಚರಣೆಗಳ ಸೌಂದರ್ಯವನ್ನು ಗೌರವದಿಂದ ಕಾಪಾಡಿಕೊಳ್ಳಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಜೀವಂತ ಹಾಗೂ ಭಕ್ತಿಪೂರ್ಣ ದೈವಾರಾಧನೆ, ಸೂಕ್ತವಾದ ಧರ್ಮೋಪದೇಶದೊಂದಿಗೆ ಸೇರಿ, ಪ್ರತಿಯೊಬ್ಬರಲ್ಲಿಯೂ ದೇವರನ್ನು ಭೇಟಿಯಾಗುವ ಬಯಕೆಯನ್ನು ಪುನರುಜ್ಜೀವನಗೊಳಿಸುವ ಅತ್ಯುತ್ತಮ ಸಾಧನವಾಗಿದೆ. ಅವತಾರದ ರಹಸ್ಯದಂತೆ, ದೇವರೊಂದಿಗೆ ನಿಜವಾದ ಭೇಟಿಯು ಮನುಷ್ಯನ ಆತ್ಮ, ಮನಸ್ಸು ಮತ್ತು ದೇಹವನ್ನು ಒಳಗೊಂಡಾಗ ಮಾತ್ರ ಸಂಪೂರ್ಣವಾಗುತ್ತದೆ ಎಂದು ಜಗದ್ಗುರು ಲಿಯೋರವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

 

 

03 ಜೂನ್ 2026, 16:16