ಹುಡುಕಿ

ರೋಮ್‌ನಲ್ಲಿರುವ ವಿಶ್ವ ಆಹಾರ ಕಾರ್ಯಕ್ರಮದ ಪ್ರಧಾನ ಕಚೇರಿಯಲ್ಲಿ ಜಗದ್ಗುರು ಲಿಯೋರವರು ಮಾತನಾಡುತ್ತಾರೆ. ರೋಮ್‌ನಲ್ಲಿರುವ ವಿಶ್ವ ಆಹಾರ ಕಾರ್ಯಕ್ರಮದ ಪ್ರಧಾನ ಕಚೇರಿಯಲ್ಲಿ ಜಗದ್ಗುರು ಲಿಯೋರವರು ಮಾತನಾಡುತ್ತಾರೆ.  (ANSA)

ವಿಶ್ವ ಆಹಾರ ಕಾರ್ಯಕ್ರಮಕ್ಕೆ ಜಗದ್ಗುರುಗಳು: ಜನರಿಗೆ ಆಹಾರ ಒದಗಿಸುವುದಕ್ಕಿಂತ ಸಂಘರ್ಷಗಳಿಗೆ ಹೆಚ್ಚು ಪೋಷಣೆ ನೀಡಲಾಗುತ್ತಿದೆ.

ಜಗದ್ಗುರು XIVನೇ ಲಿಯೋರವರು ರೋಮಿನಲ್ಲಿರುವ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಕೇಂದ್ರ ಕಚೇರಿಗೆ ಭೇಟಿ ನೀಡಿ, ಆಹಾರ, ನೀರು ಮತ್ತು ಆರೋಗ್ಯ ಸೇವೆಗಳನ್ನು ಭೂರಾಜಕೀಯ ಹಿತಾಸಕ್ತಿಗಳಿಗೆ ಅಧೀನಗೊಳಿಸಬಾರದು ಎಂದು ಒತ್ತಿಹೇಳಿದರು. ಅಲ್ಲದೆ, ರಾಷ್ಟ್ರಗಳು ನವೀಕೃತ ಬಹುಪಕ್ಷೀಯ ಸಹಕಾರದ ಮನೋಭಾವದೊಂದಿಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ರೋಮಿನಲ್ಲಿರುವ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಕೇಂದ್ರ ಕಚೇರಿಯಲ್ಲಿ ಅದರ ಕಾರ್ಯಕಾರಿ ಮಂಡಳಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವುದು ಮಾನವಕುಲದ ತುರ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕೇವಲ ಆಹಾರದ ಕೊರತೆಯನ್ನು ನಿವಾರಿಸುವುದಷ್ಟೇ ಅಲ್ಲದೆ, ಅದರ ಹಿಂದೆ ಇರುವ ರಚನಾತ್ಮಕ ಕಾರಣಗಳನ್ನು ಗುರುತಿಸಿ ಪರಿಹರಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

ಇಂದು ಜಗತ್ತು ದೀರ್ಘಕಾಲದ ಯುದ್ಧಗಳು, ಆಹಾರ ಅಭದ್ರತೆ, ಆರ್ಥಿಕ ಅಸ್ಥಿರತೆ ಮತ್ತು ಹವಾಮಾನ ಬದಲಾವಣೆಯಂತಹ ಸಂಕಷ್ಟಗಳನ್ನು ಎದುರಿಸುತ್ತಿದೆ ಎಂದು ಜಗದ್ಗುರುಗಳು ಗಮನಿಸಿದರು. ಈ ಸಮಸ್ಯೆಗಳು ಕೇವಲ ಪ್ರತ್ಯೇಕ ಘಟನೆಗಳಲ್ಲ, ಅವು ಜಾಗತಿಕ ವ್ಯವಸ್ಥೆಯಲ್ಲಿರುವ ಆಳವಾದ ಕೊರತೆಗಳನ್ನು ಬಯಲಿಗೆಳೆಯುತ್ತವೆ. ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತಲೂ, ಅವು ಮರುಮರು ಏಕೆ ಉಂಟಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ವ್ಯವಸ್ಥೆಯು ಹೆಚ್ಚು ವಿಭಜಿತವಾಗುತ್ತಿದ್ದು, ಅನೇಕ ರಾಷ್ಟ್ರಗಳು ಬಹುಪಕ್ಷೀಯ ಸಹಕಾರಕ್ಕಿಂತ ತಮ್ಮ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು. ಇದರ ಪರಿಣಾಮವಾಗಿ, ಅಪಾರ ಉತ್ಪಾದನಾ ಸಾಮರ್ಥ್ಯವಿದ್ದರೂ ಲಕ್ಷಾಂತರ ಜನರು ಹಸಿವು ಮತ್ತು ಬಡತನದಲ್ಲಿ ಬದುಕುವಂತಹ ವಿರೋಧಾಭಾಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, ಮಾನವೀಯ ನೆರವು ಮತ್ತು ಅಭಿವೃದ್ಧಿ ಯೋಜನೆಗಳು ರಾಜಕೀಯ ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ತಡೆಯಲ್ಪಡುತ್ತವೆ, ಆದರೆ ಶಸ್ತ್ರಾಸ್ತ್ರಗಳ ಪೂರೈಕೆಗೆ ಅಂತಹ ಅಡೆತಡೆಗಳು ಕಾಣಿಸುವುದಿಲ್ಲ ಎಂದು ಹೇಳಿದರು. “ಜನರಿಗೆ ಆಹಾರ ನೀಡುವುದಕ್ಕಿಂತ ಸಂಘರ್ಷಗಳು ಮತ್ತು ಯುದ್ಧಗಳಿಗೆ ಹೆಚ್ಚು ಪೋಷಣೆ ನೀಡಲಾಗುತ್ತಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇದು ಕೇವಲ ಕಾರ್ಯನಿರ್ವಹಣೆಯ ವೈಫಲ್ಯವಲ್ಲ, ರಾಜಕೀಯ ಮತ್ತು ನೈತಿಕ ಆದ್ಯತೆಗಳಲ್ಲಿನ ಗಂಭೀರ ಅಸಮತೋಲನದ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.

ವಿಶ್ವ ಆಹಾರ ಕಾರ್ಯಕ್ರಮವು ಕೇವಲ ತಾಂತ್ರಿಕ ಅಥವಾ ರಾಜಕೀಯ ಸಂಸ್ಥೆಯಲ್ಲ, ಅದು ಅಂತರರಾಷ್ಟ್ರೀಯ ಐಕ್ಯತೆಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ಜಗದ್ಗುರುಗಳು ಶ್ಲಾಘಿಸಿದರು. ರಾಷ್ಟ್ರೀಯ ಸಂಸ್ಥೆಗಳು ದುರ್ಬಲಗೊಂಡಿರುವ ಪ್ರದೇಶಗಳಲ್ಲಿ ಡಬ್ಲ್ಯೂಎಫ್ ಪಿಯ ಉಪಸ್ಥಿತಿಯು ಮಾನವೀಯ ದುರಂತಗಳು ಮತ್ತಷ್ಟು ಹದಗೆಡದಂತೆ ತಡೆಯುತ್ತದೆ ಎಂದು ಅವರು ಹೇಳಿದರು. ಆದ್ದರಿಂದ, ಹಸಿವು ಮತ್ತು ಅದರ ಮೂಲ ಕಾರಣಗಳನ್ನು ನಿವಾರಿಸಲು ರಾಷ್ಟ್ರಗಳು ಬಹುಪಕ್ಷೀಯ ಸಹಕಾರದತ್ತ ಹೊಸ ಬದ್ಧತೆಯನ್ನು ತೋರಬೇಕು ಎಂದು ಕರೆ ನೀಡಿದರು.

ತಮ್ಮ ಭಾಷಣದ ಅಂತ್ಯದಲ್ಲಿ, ಕಥೋಲಿಕ ಧರ್ಮ ಸಭೆ, ದಾನ ಸಂಸ್ಥೆಗಳು ಹಾಗೂ ಇತರ ಸ್ಥಳೀಯ ಸಂಘಟನೆಗಳು ಅತ್ಯಂತ ದುರ್ಬಲ ಸಮುದಾಯಗಳವರೆಗೆ ತಲುಪುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜಗದ್ಗುರುಗಳು ನೆನಪಿಸಿದರು. ಆಹಾರ ಭದ್ರತೆಯು ಜಾಗತಿಕ ಶಾಂತಿ ಮತ್ತು ಸಮಗ್ರ ಭದ್ರತೆಯ ಮೂಲಭೂತ ಅಂಶವಾಗಿದೆ ಎಂದು ಒತ್ತಿಹೇಳಿದ ಅವರು, “ಪ್ರತಿಯೊಬ್ಬರೂ ತಮ್ಮ ದೈನಂದಿನ ಆಹಾರವನ್ನು ಪಡೆದು ಘನತೆಯಿಂದ ಬದುಕುವಂತಾಗಲಿ” ಎಂದು ದೇವರಲ್ಲಿ ಪ್ರಾರ್ಥಿಸಿದರು.

22 ಜೂನ್ 2026, 21:21