ಹುಡುಕಿ

ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಮಾನವೀಯ ಪ್ರಯತ್ನಗಳು. ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಮಾನವೀಯ ಪ್ರಯತ್ನಗಳು.  (World Food Programme)

ವಿಶ್ವ ಆಹಾರ ಕಾರ್ಯಕ್ರಮದ ಅಧಿಕಾರಿ: ಆಹಾರ ನೆರವು ಅನೇಕ ಜನರಿಗೆ ಬದುಕು ಅಥವಾ ಸಾವಿನ ಪ್ರಶ್ನೆಯಾಗಿರುತ್ತದೆ.

ಜಗದ್ಗುರು XIVನೇ ಲಿಯೋರವರು ವಿಶ್ವ ಆಹಾರ ಕಾರ್ಯಕ್ರಮದ ಕೇಂದ್ರ ಕಚೇರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸಿದ್ದ ಡಬ್ಲ್ಯೂ ಎಫ್ ಪಿ ಅಧಿಕಾರಿ ಗೆಮ್ಮಾ ಸ್ನೋಡನ್ ಅವರು, ಈ ಭೇಟಿ ವಿಶ್ವಸಂಸ್ಥೆಯ ಮಾನವೀಯ ಸೇವಾ ಕಾರ್ಯಕರ್ತರ ಧ್ಯೇಯಕ್ಕೆ ವಿಶೇಷ ಉತ್ತೇಜನ ನೀಡುತ್ತದೆ ಎಂದು ಹೇಳಿದರು. ವಿಶೇಷವಾಗಿ ಸಂಘರ್ಷಗಳು ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ತೀವ್ರ ಪರಿಣಾಮಗಳಿಗೆ ಒಳಗಾದ ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರಿಗೆ ಇದು ಪ್ರೋತ್ಸಾಹ ಮತ್ತು ಆಶಾಕಿರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ರೋಮಿನಲ್ಲಿರುವ ವಿಶ್ವ ಆಹಾರ ಕಾರ್ಯಕ್ರಮದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ,ಡಬ್ಲ್ಯೂ ಎಫ್ ಪಿ  ಅಧಿಕಾರಿಯಾಗಿರುವ ಗೆಮ್ಮಾ ಸ್ನೋಡನ್ ರವರು ಈ ಭೇಟಿ ಸಂಸ್ಥೆಯ ಸಿಬ್ಬಂದಿಗೆ ಮಹತ್ತರ ಪ್ರೋತ್ಸಾಹವಾಗಿದೆ ಎಂದು ಹೇಳಿದರು. ಜಗತ್ತಿನಾದ್ಯಂತ ಹಸಿವನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ಸಿಬ್ಬಂದಿಯ ಸೇವೆಯನ್ನು ಈ ಭೇಟಿ ಗೌರವಿಸುತ್ತದೆ. ಅಲ್ಲದೆ, ಸಂಘರ್ಷಗಳು ಮತ್ತು ಹವಾಮಾನ ವೈಪರೀತ್ಯಗಳಿಂದ ಸಂಕಷ್ಟಕ್ಕೊಳಗಾಗಿರುವ ದೂರದ ಪ್ರದೇಶಗಳ ಕುಟುಂಬಗಳ ದುಃಸ್ಥಿತಿಯತ್ತ ಜಾಗತಿಕ ಗಮನ ಸೆಳೆಯಲು ಇದು ಒಂದು ಮಹತ್ವದ ಅವಕಾಶವಾಗಿದೆ ಎಂದು ಅವರು ತಿಳಿಸಿದರು.

ತಮ್ಮ ಭಾಷಣದಲ್ಲಿ ಜಗದ್ಗುರು XIVನೇ ಲಿಯೋರವರು ನವೀಕೃತ ಬಹುಪಕ್ಷೀಯ ಸಹಕಾರದ ಅಗತ್ಯವನ್ನು ಒತ್ತಿಹೇಳಿದರು. ಯುದ್ಧಗಳು ಮತ್ತು ಸಂಘರ್ಷಗಳಿಗೆ ಸುಲಭವಾಗಿ ಸಂಪನ್ಮೂಲಗಳು ದೊರೆಯುತ್ತಿರುವ ಈ ಕಾಲದಲ್ಲಿ, ಆಹಾರ, ನೀರು ಮತ್ತು ಆರೋಗ್ಯ ಸೇವೆಗಳಂತಹ ಮೂಲಭೂತ ಅಗತ್ಯಗಳನ್ನು ಯಾವುದೇ ಭೂರಾಜಕೀಯ ಹಿತಾಸಕ್ತಿಗಳಿಗೆ ಅಧೀನಗೊಳಿಸಬಾರದು ಎಂದು ಅವರು ಎಚ್ಚರಿಕೆ ನೀಡಿದರು. ಜಗತ್ತಿನ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಬ್ಲ್ಯೂ ಎಫ್ ಪಿ ಸಿಬ್ಬಂದಿಯ ಸಮರ್ಪಣೆಯನ್ನು ಶ್ಲಾಘಿಸಿದ ಅವರು, ಹಸಿವಿನ ವಿರುದ್ಧದ ಹೋರಾಟದಲ್ಲಿ ಧರ್ಮ ಸಭೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಡಬ್ಲ್ಯೂ ಎಫ್ ಪಿ  ಅಂದಾಜಿನ ಪ್ರಕಾರ, 2026ರಲ್ಲಿ ಸುಮಾರು 318 ಮಿಲಿಯನ್ ಜನರು ಆಹಾರ ಬಿಕ್ಕಟ್ಟು ಅಥವಾ ಅದಕ್ಕಿಂತಲೂ ಗಂಭೀರ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳು ಇನ್ನೂ 45 ಮಿಲಿಯನ್ ಜನರನ್ನು ತೀವ್ರ ಹಸಿವಿನತ್ತ ತಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ, ಜಗದ್ಗುರುಗಳ ಭೇಟಿ ಮತ್ತು ಸಂದೇಶವು ಜಾಗತಿಕ ಹಸಿವಿನ ಸಮಸ್ಯೆಯ ತುರ್ತುತೆಯನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.

ಗೆಮ್ಮಾ ಸ್ನೋಡನ್ ರವರು, ಸಂಘರ್ಷ ಮತ್ತು ಹಸಿವು ಪರಸ್ಪರ ಅವಿನಾಭಾವವಾಗಿ ಸಂಬಂಧ ಹೊಂದಿವೆ ಎಂದು ಹೇಳಿದರು. ಯುದ್ಧಗಳು ಹಸಿವಿಗೆ ಕಾರಣವಾಗುತ್ತವೆ, ಅದೇ ವೇಳೆ ಹಸಿವು ಮತ್ತಷ್ಟು ಸಂಘರ್ಷಗಳನ್ನು ಹುಟ್ಟುಹಾಕಬಹುದು. ಆದ್ದರಿಂದ, ಹಸಿವಿಲ್ಲದ ಜಗತ್ತನ್ನು ನಿರ್ಮಿಸಲು ಸಂಘರ್ಷರಹಿತ ಜಗತ್ತಿನತ್ತವೂ ಸಾಗಬೇಕಾಗಿದೆ. ಈ ಸತ್ಯವನ್ನು ಪೋಪ್ ತಮ್ಮ ಭಾಷಣದಲ್ಲಿ ಒತ್ತಿ ಹೇಳಿರುವುದು ಬಹಳ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಕ್ಷಿಣ ಸುಡಾನ್‌ನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸ್ನೋಡನ್ ರವರು, ಅನೇಕ ನೆರವು ಕಾರ್ಯಕರ್ತರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ಎಂದು ನೆನಪಿಸಿದರು. ಅಪಾಯಕರ ಪರಿಸ್ಥಿತಿಗಳ ನಡುವೆಯೂ ಜನರಿಗೆ ನೀಡುವ ನೆರವು ಅವರ ಬದುಕು ಅಥವಾ ಸಾವಿನ ಪ್ರಶ್ನೆಯಾಗಿರುವುದನ್ನು ನೇರವಾಗಿ ಕಂಡಾಗ, ಈ ಸೇವೆಯ ಮಹತ್ವ ಅರ್ಥವಾಗುತ್ತದೆ ಎಂದು ಅವರು ಹೇಳಿದರು. ಇದೇ ಅರಿವು ಅನೇಕ ಕಾರ್ಯಕರ್ತರನ್ನು ತಮ್ಮ ಸೇವೆಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ ಎಂದರು.

ಕಥೋಲಿಕ ಧರ್ಮ ಸಭೆಯ ಸಹಕಾರವು ಮಾನವೀಯ ಕಾರ್ಯಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಸ್ನೋಡನ್ ತಿಳಿಸಿದರು. ಅನೇಕ ಪ್ರದೇಶಗಳಲ್ಲಿ WFP ಮತ್ತು ಕಥೋಲಿಕ ಧರ್ಮ ಸಭೆ ಒಟ್ಟಾಗಿ ಕಾರ್ಯನಿರ್ವಹಿಸಿ, ಅಗತ್ಯವಿರುವ ಜನರಿಗೆ ನೆರವು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ, ಹಸಿವು ಮತ್ತು ಮಾನವೀಯ ಬಿಕ್ಕಟ್ಟುಗಳ ವಿರುದ್ಧದ ಹೋರಾಟದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳು, ಸರ್ಕಾರಗಳು ಮತ್ತು ಧಾರ್ಮಿಕ ಸಂಘಟನೆಗಳು ಒಗ್ಗಟ್ಟಿನಿಂದ ಕೆಲಸ ಮಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು.

22 ಜೂನ್ 2026, 21:27