ಮೇ 25ರಂದು ನಡೆದ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ಎನ್‌ಸೈಕ್ಲಿಕಲ್‌ ಅನಾವರಣ ಕಾರ್ಯಕ್ರಮದಲ್ಲಿ ಜಗದ್ಗುರು XIVನೇ ಲಿಯೋರವರು. ಮೇ 25ರಂದು ನಡೆದ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ಎನ್‌ಸೈಕ್ಲಿಕಲ್‌ ಅನಾವರಣ ಕಾರ್ಯಕ್ರಮದಲ್ಲಿ ಜಗದ್ಗುರು XIVನೇ ಲಿಯೋರವರು.  (ANSA)

ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ನಡುವೆ ನೈತಿಕ ನಾಯಕತ್ವ ಅತ್ಯಗತ್ಯ: ತಂತ್ರಜ್ಞಾನ ತಜ್ಞರ ಅಭಿಪ್ರಾಯ.

ಅಮೆರಿಕದ ತಂತ್ರಜ್ಞಾನ ತಜ್ಞ ಮತ್ತು ಉದ್ಯಮಿ ಎಲಿ ಪ್ಯಾರೈಸರ್ ರವರು, ಜಗದ್ಗುರು XIVನೇ ಲಿಯೋರವರು ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರಿಕೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟುಮಾಡಿರುವ ಪ್ರತಿಧ್ವನಿಯನ್ನು ವಿಶ್ಲೇಷಿಸುತ್ತಾ, ಮಾನವಕೇಂದ್ರಿತ ಕೃತಕ ಬುದ್ಧಿಮತ್ತೆಯನ್ನು ರೂಪಿಸುವ ಸಾಧ್ಯತೆಗಳ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ವ್ಯಾಟಿಕನ್ ವರದಿ

ಅಮೆರಿಕದ ತಂತ್ರಜ್ಞಾನ ತಜ್ಞ ಹಾಗೂ ಉದ್ಯಮಿ ಎಲಿ ಪ್ಯಾರೈಸರ್ ರವರು, ಕೃತಕ ಬುದ್ಧಿಮತ್ತೆ (ಎಐ) ಕುರಿತ ಚರ್ಚೆಯಲ್ಲಿ ವಿಶ್ವಕ್ಕೆ ಇಂದು ನೈತಿಕ ನಾಯಕತ್ವದ ಅಗತ್ಯವಿದೆ ಎಂದು ಹೇಳಿದ್ದಾರೆ. ಜಗದ್ಗುರು XIVನೇ ಲಿಯೋರವರ ಮೊದಲ ಪರಿಪತ್ರಿಕೆ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್  ಪ್ರಕಟವಾದ ಕೆಲವೇ ದಿನಗಳ ನಂತರ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸ್ತುತ ಎಐ ಕ್ಷೇತ್ರದ ನಾಯಕರು ತಾಂತ್ರಿಕ ಸ್ಪರ್ಧೆ ಮತ್ತು ಆರ್ಥಿಕ ಲಾಭದತ್ತ ಹೆಚ್ಚು ಗಮನಹರಿಸುತ್ತಿದ್ದು, ಅದರ ನೈತಿಕ ಹಾಗೂ ಮಾನವೀಯ ಪರಿಣಾಮಗಳ ಕುರಿತು ಸಾಕಷ್ಟು ಚಿಂತನೆ ನಡೆಸುತ್ತಿಲ್ಲ ಎಂದು ಅವರು ಎಚ್ಚರಿಸಿದರು.

ಒಂದು ದಶಕಕ್ಕೂ ಹೆಚ್ಚು ಕಾಲ ಡಿಜಿಟಲ್ ತಂತ್ರಜ್ಞಾನದ ಅವಕಾಶಗಳು ಮತ್ತು ಅಪಾಯಗಳ ಕುರಿತು ಅಧ್ಯಯನ ನಡೆಸುತ್ತಿರುವ ಪ್ಯಾರೈಸರ್, 2011ರಲ್ಲಿ “ಫಿಲ್ಟರ್ ಬಬಲ್ಸ್” ಎಂಬ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಅತಿಯಾದ ವೈಯಕ್ತಿಕೀಕೃತ ಅಂತರ್ಜಾಲದ ಅಪಾಯಗಳನ್ನು ಜಗತ್ತಿನ ಗಮನಕ್ಕೆ ತಂದಿದ್ದರು. ಪ್ರಸ್ತುತ ಅವರು ಆರೋಗ್ಯಕರ ಡಿಜಿಟಲ್ ಸಾರ್ವಜನಿಕ ವಲಯಗಳನ್ನು ನಿರ್ಮಿಸಲು ಕಾರ್ಯನಿರ್ವಹಿಸುವ ನ್ಯೂ ಪಬ್ಲಿಕ್ ಸಂಸ್ಥೆಯ ಸಹ-ನಿರ್ದೇಶಕರಾಗಿದ್ದು, ಎಐ ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ವಿಶೇಷವಾಗಿ ಗಮನಹರಿಸಿದ್ದಾರೆ.

ಪ್ಯಾರೈಸರ್ ಅವರ ಪ್ರಕಾರ,ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರಿಕೆ ಅತ್ಯಂತ ಸೂಕ್ತ ಸಮಯದಲ್ಲಿ ಪ್ರಕಟವಾಗಿದೆ. ಎಐ ಕೇವಲ ತಾತ್ಕಾಲಿಕ ಪ್ರಚಾರವಲ್ಲ, ಅದು ಮಾನವ ಸಮಾಜದ ಭವಿಷ್ಯವನ್ನು ಆಳವಾಗಿ ಪ್ರಭಾವಿಸುವ ತಂತ್ರಜ್ಞಾನ ಎಂಬ ಅರಿವು ಜನರಲ್ಲಿ ಮೂಡುತ್ತಿದೆ. ಈ ಪರಿಪತ್ರಿಕೆ ಕೇವಲ ಎಐ ಅಭಿವೃದ್ಧಿಪಡಿಸುವ ತಂತ್ರಜ್ಞರಿಗಷ್ಟೇ ಅಲ್ಲದೆ, ಅದರ ಪರಿಣಾಮಗಳನ್ನು ಎದುರಿಸಬೇಕಾದ ಸಾಮಾನ್ಯ ಜನರಿಗೂ ಮಾತನಾಡುತ್ತದೆ ಎಂದು ಅವರು ಹೇಳಿದ್ದಾರೆ. ವಿಶ್ವದ ವಿವಿಧ ಮಾಧ್ಯಮಗಳು ಮತ್ತು ತಂತ್ರಜ್ಞಾನ ವಲಯಗಳಲ್ಲಿ ಈ ಪರಿಪತ್ರಿಕೆಯ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವುದನ್ನೂ ಅವರು ಗಮನಿಸಿದರು.

ಜಗದ್ಗುರು XIVನೇ ಲಿಯೋರವರು ತಮ್ಮ ಪರಿಪತ್ರಿಕೆಯಲ್ಲಿ ಎಐ ಕುರಿತು ಮಾತನಾಡುವಾಗ, ಮಾನವಕುಲವು “ಹೊಸ ಬಾಬೇಲ್ ಗೋಪುರವನ್ನು ನಿರ್ಮಿಸುವುದೋ ಅಥವಾ ದೇವರು ಮತ್ತು ಮಾನವರು ಒಟ್ಟಾಗಿ ವಾಸಿಸುವ ನಗರವನ್ನು ಕಟ್ಟುವುದೋ” ಎಂಬ ನಿರ್ಣಾಯಕ ಆಯ್ಕೆಯ ಎದುರಲ್ಲಿದೆ ಎಂದು ಹೇಳಿದ್ದಾರೆ. ಈ ಉಲ್ಲೇಖವನ್ನು ಪ್ಯಾರೈಸರ್ ಮೆಚ್ಚಿಕೊಂಡಿದ್ದು, ಇದು ಮಾನವನ ಅಹಂಕಾರ ಮತ್ತು ಮಿತಿಮೀರಿದ ತಾಂತ್ರಿಕ ಮಹತ್ವಾಕಾಂಕ್ಷೆಗಳ ಅಪಾಯವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ. ಎಐ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಜಗದ್ಗುರುಗಳು ಹೇಳುತ್ತಿಲ್ಲ. ಬದಲಿಗೆ ಅದು ಮಾನವ ಸೇವೆಗೆ ಹೇಗೆ ಬಳಸಲ್ಪಡಬೇಕು ಎಂಬುದನ್ನು ನಾವು ನಿರ್ಧರಿಸಬೇಕೆಂದು ಅವರು ಸೂಚಿಸುತ್ತಿದ್ದಾರೆ ಎಂದು ಪ್ಯಾರೈಸರ್ ವಿವರಿಸಿದರು.

ಎಐ ಜನರನ್ನು ಒಗ್ಗೂಡಿಸುವ ಶಕ್ತಿಯಾಗಬಹುದು ಅಥವಾ ಅವರನ್ನು ಮತ್ತಷ್ಟು ಪ್ರತ್ಯೇಕಿಸುವ ಸಾಧನವಾಗಬಹುದು ಎಂದು ಪ್ಯಾರೈಸರ್ ಅಭಿಪ್ರಾಯಪಟ್ಟರು. ಉದಾಹರಣೆಗೆ, ಒಂಟಿತನ ಅನುಭವಿಸುವ ವ್ಯಕ್ತಿಗೆ ಒಂದು ಚಾಟ್‌ಬಾಟ್ “ನಾನು ನಿನ್ನ ಸ್ನೇಹಿತನಾಗುತ್ತೇನೆ” ಎಂದು ಹೇಳಬಹುದು, ಅಥವಾ “ನಿನ್ನ ಆಸಕ್ತಿಗಳಿಗೆ ಹೊಂದುವ ಸ್ಥಳೀಯ ಸಮುದಾಯ ಗುಂಪುಗಳಲ್ಲಿ ಸೇರಿ ಸ್ನೇಹಿತರನ್ನು ಮಾಡಿಕೋ” ಎಂದು ಮಾರ್ಗದರ್ಶನ ನೀಡಬಹುದು. ಈ ಎರಡು ವಿಧಾನಗಳು ಸಮಾಜದ ಮೇಲೆ ಸಂಪೂರ್ಣ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಹೇಳಿದರು. ಆದ್ದರಿಂದ, ಎಐ ಅನ್ನು ಮಾನವ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ರೂಪಿಸುವುದು ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಜಗದ್ಗುರು XIVನೇ ಲಿಯೋರವರು ಪರಿಪತ್ರಿಕೆಯಲ್ಲಿ ಎಐ ಅನ್ನು “ಶಸ್ತ್ರೀಕರಣದ ಮನೋಭಾವದಿಂದ ಮುಕ್ತಗೊಳಿಸಬೇಕು” ಎಂದು ಕರೆ ನೀಡಿರುವುದಕ್ಕೆ ಪ್ಯಾರೈಸರ್ ಸಹಮತ ವ್ಯಕ್ತಪಡಿಸಿದರು. ಎಐ‌ ಅಭಿವೃದ್ಧಿ ಇಂದು ತೀವ್ರ ಆರ್ಥಿಕ ಸ್ಪರ್ಧೆ ಮತ್ತು ಲಾಭದಾಸೆಯ ವಾತಾವರಣದಲ್ಲಿ ನಡೆಯುತ್ತಿದೆ ಎಂದು ಅವರು ಎಚ್ಚರಿಸಿದರು. ಆದರೆ ಸಮಾಜವಾಗಿ ನಾವು ಈ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ರೂಪಿಸಬೇಕು, ಯಾವ ಉದ್ದೇಶಕ್ಕಾಗಿ ಬಳಸಬೇಕು ಮತ್ತು ಯಾವ ಮೌಲ್ಯಗಳ ಆಧಾರದ ಮೇಲೆ ನಿಯಂತ್ರಿಸಬೇಕು ಎಂಬುದನ್ನು ನಿರ್ಧರಿಸುವ ಶಕ್ತಿ ಇನ್ನೂ ನಮ್ಮ ಕೈಯಲ್ಲಿದೆ. ಅಸಹಾಯಕತೆಯ ಭಾವನೆ ತೊರೆದು, ಎಐ ಅಭಿವೃದ್ಧಿಯ ಮೇಲೆ ಮಾನವೀಯ ನಿಯಂತ್ರಣ ಸ್ಥಾಪಿಸುವ ಸಮಯ ಈಗ ಬಂದಿದೆ ಎಂದು ಅವರು ಕರೆ ನೀಡಿದರು.

02 ಜೂನ್ 2026, 19:36