SPAIN-VATICAN-DIPLOMACY-RELIGION-POPE

ಟೆನೆರಿಫ್‌ನ ವಲಸಿಗರಿಗೆ ಜಗದ್ಗುರು XIVನೇ ಲಿಯೋರವರ ಸಂದೇಶ: “ನಿಮ್ಮನ್ನು ನಾನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ”.

ಕ್ಯಾನರಿ ದ್ವೀಪಗಳಲ್ಲಿನ ತಮ್ಮ ಭೇಟಿಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಟೆನೆರಿಫ್‌ನ ಲಾಸ್ ರೈಸೆಸ್ ಕೇಂದ್ರದಲ್ಲಿ ವಲಸಿಗರನ್ನು ಭೇಟಿಯಾದರು. ಈ ವೇಳೆ ಅವರು, “ನಾನು ನಿಮ್ಮನ್ನು ನನ್ನ ಹೃದಯದಲ್ಲೂ ಪ್ರಾರ್ಥನೆಗಳಲ್ಲೂ ಹೊತ್ತುಕೊಂಡಿದ್ದೇನೆ” ಎಂದು ಅವರಿಗೆ ಧೈರ್ಯ ತುಂಬಿದರು. ಅಲ್ಲದೆ, ಯಾವುದೇ “ಬಿರುಗಾಳಿಯೂ” ಕ್ರಿಸ್ತನ ಸಾನ್ನಿಧ್ಯದ ಅನುಭವದಿಂದ ಅವರನ್ನು ದೂರ ಮಾಡದಿರಲಿ ಎಂದು ಪ್ರಾರ್ಥಿಸಿದರು.

ವ್ಯಾಟಿಕನ್ ವರದಿ

ಟೆನೆರಿಫ್‌ನ ಲಾಸ್ ರೈಸೆಸ್ ಕೇಂದ್ರದಲ್ಲಿ ವಲಸಿಗರನ್ನು ಭೇಟಿಯಾದ ಜಗದ್ಗುರು ಲಿಯೋರವರು, “ನಾನು ನಿಮ್ಮನ್ನು ನನ್ನ ಹೃದಯದಲ್ಲಿ ಹೊತ್ತುಕೊಂಡಿದ್ದೇನೆ ಮತ್ತು ನನ್ನ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಸ್ಮರಿಸುತ್ತೇನೆ” ಎಂದು ಅವರಿಗೆ ಧೈರ್ಯ ತುಂಬಿದರು.

ಅಲ್ಲಿದ್ದವರ ಸಾಕ್ಷ್ಯಗಳನ್ನು ಆಲಿಸಿದ ಬಳಿಕ, ಜಗದ್ಗುರುಗಳು ಅವರಿಗೂ ಹಾಗೂ ವಿಶ್ವದ ಎಲ್ಲ ವಲಸಿಗರಿಗೂ ತಮ್ಮ ಆತ್ಮೀಯ ಸಾನ್ನಿಧ್ಯ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದರು. ಇಂದು ಧರ್ಮಸಭೆ ಯೇಸುವಿನ ಪರಮಪವಿತ್ರ ಹೃದಯದ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನೆನಪಿಸಿದ ಅವರು, ಕ್ರೈಸ್ತರಿಗೆ ಯೇಸುವಿನ ಹೃದಯವು ಪ್ರತಿಯೊಬ್ಬ ಮಾನವನ ಮೇಲಿನ ದೇವರ ಅಪಾರ ಕರುಣೆ ಮತ್ತು ಅನಂತ ಪ್ರೀತಿಯ ಸಂಕೇತವಾಗಿದೆ ಎಂದು ವಿವರಿಸಿದರು.

 “ನಾವು ಒಟ್ಟಾಗಿ ಸೇರಲು, ಒಬ್ಬರನ್ನೊಬ್ಬರು ನೋಡಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಾವು ಎಲ್ಲಿಂದ ಬಂದವರಾಗಿದ್ದರೂ ದೇವರ ಪ್ರೀತಿಗೆ ಯಾವುದೇ ಗಡಿಗಳಿಲ್ಲ, ಅದು ಯಾರನ್ನೂ ಭೇದಿಸುವುದಿಲ್ಲ, ಎಲ್ಲರಿಗೂ ಸಮಾನವಾಗಿ ನೀಡಲ್ಪಡುತ್ತದೆ ಮತ್ತು ನಮ್ಮನ್ನು ಏಕತೆಯಲ್ಲಿ ಒಂದಾಗಿಸುತ್ತದೆ ಎಂಬುದನ್ನು ಅರಿಯಲು ಸಾಧ್ಯವಾಗಿರುವುದು ದೈವಿಕ ಅನುಗ್ರಹವಾಗಿದೆ.”ಎಂದು ಜಗದ್ಗುರುಗಳು ಹೇಳಿದರು.

ನಿಮ್ಮ ಮುಖಗಳನ್ನು ನೋಡುವಾಗ, ನಿಮ್ಮ ಹೃದಯಗಳನ್ನೂ ನಾನು ನೆನಸುತ್ತೇನೆ ಎಂದು ಜಗದ್ಗುರುಗಳು ಹೇಳಿದರು. “ನಿಮ್ಮ ಕಥೆಗಳನ್ನು ಕೇಳುವಾಗ ಮತ್ತು ನಿಮ್ಮ ಮುಖಗಳನ್ನು ನೋಡುವಾಗ, ಅನೇಕ ಕಷ್ಟಗಳಿಂದ ಗಾಯಗೊಂಡಿದ್ದರೂ, ಉದಾರ, ಕರುಣಾಮಯ ಮತ್ತು ಪ್ರೀತಿಯ ಹೃದಯಗಳಿಂದ ಪಡೆದ ಸಾಂತ್ವನದಿಂದ ಬಲಗೊಂಡಿರುವ ನಿಮ್ಮ ಹೃದಯಗಳನ್ನು ನಾನು ಕಾಣುತ್ತೇನೆ” ಎಂದರು.

ಪ್ರೀತಿಯಿಂದ ಯೇಸುವಿನ ಹೃದಯವೂ ನೋವನ್ನು ಅನುಭವಿಸಿತು ಮತ್ತು ಛೇದಿಸಲ್ಪಟ್ಟಿತು ಎಂದು ಅವರು ನೆನಪಿಸಿದರು. ಆದರೆ ಅದೇ ಸಮಯದಲ್ಲಿ, ಕರುಣೆಯುಳ್ಳ ಜನರ ಪ್ರೀತಿ ಮತ್ತು ಸಾಂತ್ವನವು ಅವರ ನೋವನ್ನು ಹಗುರಗೊಳಿಸಿತು ಎಂದರು.

ಜಗದ್ಗುರು ಲಿಯೋರವರು ಬಳಿಕ ಒಳ್ಳೆಯ ಸಮಾರ್ಯದವನ ಉಪಮೆಯನ್ನು ಉಲ್ಲೇಖಿಸಿ, ಪ್ರೀತಿಯ ವಿಶ್ವವ್ಯಾಪಕತೆಯನ್ನು ವಿವರಿಸಿದರು. ಬೇರೆ ಊರಿನವನಾಗಿದ್ದ ಮತ್ತು ಬೇರೆ ಧರ್ಮಕ್ಕೆ ಸೇರಿದವನಾಗಿದ್ದ ಒಬ್ಬ ಅಪರಿಚಿತನು ಗಾಯಗೊಂಡು ಹಿಂಸೆಗೆ ಒಳಗಾಗಿದ್ದ ವ್ಯಕ್ತಿಯ ಮೇಲೆ ಕರುಣೆ ತೋರಿದನು ಎಂಬ ಸಂಗತಿಯನ್ನು ಅವರು ನೆನಪಿಸಿದರು.

ದೇವರ ಪ್ರೀತಿಯಿಂದ ಪ್ರೇರಿತರಾಗಿ, ಇತರರ ಗಾಯಗಳನ್ನು ಗುಣಪಡಿಸಲು ಮತ್ತು ಸಂಕಷ್ಟದಲ್ಲಿರುವವರಿಗೆ ಕರುಣೆ ತೋರಲು ಕರೆ ಪಡೆದಿದ್ದ ಸಂತ ಬ್ರದರ್ ಪೀಟರ್ ಹಾಗೂ ಸಂತ ಜೋಸೆಫ್ ದೆ ಅಂಚಿಯೆಟಾರವರು ಕ್ಯಾನರಿ ದ್ವೀಪಗಳಿಂದ ಅಮೆರಿಕಾಕ್ಕೆ ಸುವಾರ್ತೆ ಸಾರಲು ಪ್ರಯಾಣ ಬೆಳೆಸಿದರು. ಹೀಗೆ ಅವರು ಹೊಸ ಧರ್ಮಪ್ರಚಾರದ ದಾರಿಗಳನ್ನು ತೆರೆದರು ಎಂದು ಜಗದ್ಗುರುಗಳು ಹೇಳಿದರು.

ಅವರೂ ಸಹ ಒಂದು ರೀತಿಯಲ್ಲಿ ವಲಸಿಗರೇ ಆಗಿದ್ದರು. ಅಪರಿಚಿತ ಪ್ರದೇಶಗಳತ್ತ ಹೊರಟ ಅವರು, ತಮ್ಮ ಅತ್ಯಮೂಲ್ಯ ಸಂಪತ್ತಾದ ನಂಬಿಕೆ, ಭರವಸೆ ಮತ್ತು ಪ್ರೀತಿಯನ್ನು ತಮ್ಮೊಂದಿಗೆ ಕೊಂಡೊಯ್ದರು. ಆ ಹೊಸ ನೆಲಗಳಲ್ಲಿ ಅವರು ತಮ್ಮಲ್ಲಿದ್ದುದನ್ನು ಹಂಚಿಕೊಂಡರು, ಜೊತೆಗೆ ಅಲ್ಲಿನ ಜನರು ನೀಡಿದ ಹೊಸ ವರಗಳನ್ನು ಸಹ ಸಂತೋಷದಿಂದ ಸ್ವೀಕರಿಸಿದರು.

“ನಿಮ್ಮ ಮಾನವೀಯತೆಯ, ನಿಮ್ಮ ಕನಸುಗಳ ಮತ್ತು ನಿಮ್ಮ ಸಂಸ್ಕೃತಿಯ ಅಮೂಲ್ಯ ಸಂಪತ್ತನ್ನು ನೀವು ಈ ದ್ವೀಪಗಳಿಗೆ ತಂದಿದ್ದೀರಿ. ಅವನ್ನು ಇತರರೊಂದಿಗೆ ಹಂಚಿಕೊಳ್ಳಿ, ಹಾಗೆಯೇ ನಿಮಗೆ ನೀಡಲ್ಪಡುವುದನ್ನು ಸ್ವೀಕರಿಸಲು ಸಹ ಮುಕ್ತರಾಗಿರಿ” ಎಂದು ಜಗದ್ಗುರುಗಳು ಪ್ರೋತ್ಸಾಹಿಸಿದರು.

ಈ ಪರಸ್ಪರ ವಿನಿಮಯವನ್ನು ಜವಾಬ್ದಾರಿಯುತವಾಗಿ ಬದುಕಬೇಕು ಎಂದು ಅವರು ಒತ್ತಿಹೇಳಿದರು. ಪ್ರೀತಿ ಮತ್ತು ಸಹೋದರತ್ವದ ನಾಗರಿಕತೆಯ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಬಿಟ್ಟುಕೊಡಬೇಕೆಂಬ ದೃಷ್ಟಿಯಿಂದ ನಾವು ಕಾರ್ಯನಿರ್ವಹಿಸಬೇಕು ಎಂದರು. ವಲಸೆಯು ಜನರ ನಡುವಿನ ಭೇಟಿಗೆ ಮತ್ತು ಪರಸ್ಪರ ಸಮೃದ್ಧಿಗೆ ಒಂದು ಅಮೂಲ್ಯ ಅವಕಾಶವಾಗಬಹುದು ಎಂದು ಅವರು ಗಮನ ಸೆಳೆದರು.

“ಒಂದು ಅರ್ಥದಲ್ಲಿ ನಾವೆಲ್ಲರೂ ವಲಸಿಗರೇ ಆಗಿದ್ದೇವೆ,” ಎಂದು ಜಗದ್ಗುರುಗಳು ಹೇಳಿದರು. “ಏಕೆಂದರೆ ನಾವು ಎಲ್ಲರೂ ನಮ್ಮ ಸ್ವರ್ಗೀಯ ತಾಯ್ನಾಡಿನತ್ತ ಸಾಗುತ್ತಿರುವ ಯಾತ್ರಿಕರು”ಎಂದರು.

ಈ ಜೀವನಯಾತ್ರೆಯನ್ನು ಹೆಚ್ಚು ಮಾನವೀಯವಾಗಿಸಲು ಪ್ರತಿಯೊಬ್ಬರೂ ತಮ್ಮಿಂದಾದ ಕೊಡುಗೆಯನ್ನು ನೀಡಬೇಕು ಎಂದು ಅವರು ಕರೆ ನೀಡಿದರು. ಜೊತೆಗೆ, ಸರ್ಕಾರಗಳು, ವಿವಿಧ ಸಂಸ್ಥೆಗಳು ಹಾಗೂ ಅನೇಕ ಸದುದ್ದೇಶದ ಪುರುಷರು ಮತ್ತು ಮಹಿಳೆಯರು ನೀಡುತ್ತಿರುವ ಸಹಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಅವರ ಸೇವೆಯೇ ಅನೇಕರಿಗೆ ಆಶೆಯನ್ನು ಮರಳಿ ನೀಡುತ್ತಿದೆ ಮತ್ತು ಅವರ ಮಾನವ ಘನತೆಯನ್ನು ಪುನಃಸ್ಥಾಪಿಸುತ್ತಿದೆ ಎಂದು ಹೇಳಿದರು.

ಲಾಸ್ ರೈಸೆಸ್ ಎಂಬ ಕೇಂದ್ರದ ಹೆಸರೇ ತಮ್ಮ ಗಮನ ಸೆಳೆದಿದೆ ಎಂದು ಜಗದ್ಗುರುಗಳು ಹೇಳಿದರು. “ರೈಸೆಸ್” ಎಂದರೆ “ಬೇರುಗಳು”. ವಲಸಿಗರನ್ನು ಭೇಟಿಯಾಗುವ ಮಹದಾಸೆಯನ್ನು ಹೊಂದಿದ್ದ ದಿವಂಗತ ಜಗದ್ಗುರು ಫ್ರಾನ್ಸಿಸ್ ರವರು, ನಮ್ಮ ಮೂಲಗಳನ್ನು ಮರೆಯದೆ, ಏಕತೆಯಲ್ಲಿ ಉಳಿದು, ದೇವರಲ್ಲಿ ಭರವಸೆ ಇಡಬೇಕೆಂಬ ಸಂದೇಶವನ್ನು ಸಾರಲು “ಬೇರುಗಳು” ಎಂಬ ರೂಪಕವನ್ನು ಆಗಾಗ ಬಳಸುತ್ತಿದ್ದರು ಎಂದು ಅವರು ನೆನಪಿಸಿದರು.

ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಪ್ರೇಷಿತರ ಉಪದೇಶದಲ್ಲಿ, “ದೇವರಲ್ಲಿ ಭರವಸೆ ಇಡುವವರು ನೀರಿನ ಬಳಿಯಲ್ಲಿ ನೆಡಲ್ಪಟ್ಟ ಮರದಂತೆ,ಅದು ತನ್ನ ಬೇರುಗಳನ್ನು ಹರಿವ ನೀರಿನತ್ತ ಚಾಚುತ್ತದೆ. ಬಿಸಿಲು ಬಂದರೂ ಅದು ಭಯಪಡುವುದಿಲ್ಲ, ಅದರ ಎಲೆಗಳು ಸದಾ ಹಸಿರಾಗಿರುತ್ತವೆ” ಎಂದು ಬರೆದಿರುವುದನ್ನು ಜಗದ್ಗುರು ಲಿಯೋರವರು ಉಲ್ಲೇಖಿಸಿದರು.

ಅದೇ ರೂಪಕವನ್ನು ಬಳಸಿದ ಜಗದ್ಗುರು ಲಿಯೋರಶರು, “ನೀವು ಪ್ರಭುವಿನಲ್ಲಿ ದೃಢವಾಗಿ ಬೇರುಬಿಟ್ಟವರಾಗಿರಲಿ. ಆಗ ಯಾವುದೇ ಬಿರುಗಾಳಿಯೂ ನಿಮ್ಮನ್ನು ಅವರ ಸಾನ್ನಿಧ್ಯದಿಂದ ದೂರ ಮಾಡಲಾರದು. ಅವರ ಸಾನ್ನಿಧ್ಯವೇ ನಿಮ್ಮನ್ನು ಬಲಪಡಿಸುತ್ತದೆ ಮತ್ತು ಜೀವಂತವಾಗಿರಿಸುತ್ತದೆ” ಎಂದು ಪ್ರಾರ್ಥಿಸಿದರು.

“ಪ್ರಿಯ ಸ್ನೇಹಿತರೇ, ನಾನು ನಿಮ್ಮನ್ನು ನನ್ನ ಹೃದಯದಲ್ಲಿ ಹೊತ್ತುಕೊಂಡಿದ್ದೇನೆ ಮತ್ತು ನನ್ನ ಪ್ರಾರ್ಥನೆಗಳಲ್ಲಿ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ” ಎಂದು ಅವರು ಪುನರುಚ್ಚರಿಸಿದರು.

ಅಂತಿಮವಾಗಿ, ದೇವರು ನಿಮ್ಮನ್ನೂ, ನಿಮ್ಮ ಕುಟುಂಬಗಳನ್ನೂ ಹಾಗೂ ನಿಮಗೆ ಒಳಿತು ಮಾಡುವ ಎಲ್ಲರನ್ನೂ ಆಶೀರ್ವದಿಸಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಜೊತೆಗೆ, ವಲಸಿಗರ ಸಾಂತ್ವನವಾದ ಧನ್ಯ ಕನ್ಯಾ ಮರಿಯಮ್ಮನವರು ತಮ್ಮ ತಾಯಿಯ ರಕ್ಷಣೆಯೊಂದಿಗೆ ಸದಾ ನಿಮ್ಮೊಂದಿಗಿದ್ದು ನಿಮ್ಮನ್ನು ಕಾಪಾಡಲಿ ಎಂದು ಅವರು ಪ್ರಾರ್ಥಿಸಿ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

12 ಜೂನ್ 2026, 17:44