ಹುಡುಕಿ

ವ್ಯಾಟಿಕನ್ ಉದ್ಯಾನವನದಲ್ಲಿರುವ ಅವರ್ ಲೇಡಿ ಆಫ್ ಲೌರ್ಡ್ಸ್ ಗ್ರೊಟ್ಟೊದಲ್ಲಿ ಜಗದ್ಗುರು ಲಿಯೋರವರು ಮಂಡಿಯೂರಿ ನಮಸ್ಕರಿಸಿದ್ದಾರೆ. ವ್ಯಾಟಿಕನ್ ಉದ್ಯಾನವನದಲ್ಲಿರುವ ಅವರ್ ಲೇಡಿ ಆಫ್ ಲೌರ್ಡ್ಸ್ ಗ್ರೊಟ್ಟೊದಲ್ಲಿ ಜಗದ್ಗುರು ಲಿಯೋರವರು ಮಂಡಿಯೂರಿ ನಮಸ್ಕರಿಸಿದ್ದಾರೆ.  (ANSA)

ಜಗದ್ಗುರುಗಳು ವ್ಯಾಟಿಕನ್ ಉದ್ಯಾನವನದಲ್ಲಿ ವಿಶ್ವಶಾಂತಿಗಾಗಿ ಜಾಗತಿಕ ಜಪಸರ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ಯುದ್ಧ ಅಂತ್ಯಗೊಳ್ಳಬೇಕೆಂಬ ತಮ್ಮ ಪುನಃಪುನಃ ಕೋರಿಕೆಗಳಿಗೆ ಅನುಗುಣವಾಗಿ, ಜಗದ್ಗುರು XIVನೇ ಲಿಯೋರವರು ಮೇ 30ರಂದು ವ್ಯಾಟಿಕನ್ ಉದ್ಯಾನವನದಲ್ಲಿ ಪವಿತ್ರ ಜಪಸರ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ಈ ಜಪಸರದ ಪ್ರತಿಯೊಂದು ದಶಕವನ್ನು ಯುದ್ಧದಿಂದ ಬಾಧಿತರಾದ ಜನರಿಗೆ ವಿಭಜಿತ ಕುಟುಂಬಗಳಿಂದ ಹಿಡಿದು ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಯಂಸೇವಕರವರೆಗೆ ಸಮರ್ಪಿಸಲಾಗುವುದು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ತಮ್ಮ  ಸೇವೆಯ ಅವಧಿಯಿಡೀ ವಿಶ್ವಶಾಂತಿಗಾಗಿ ನಿರಂತರವಾಗಿ ಮನವಿ ಮಾಡುತ್ತ ಬಂದಿದ್ದಾರೆ. ಅವರ ಈ ಮನವಿಗಳಿಗೆ ಸದಾ ಪ್ರಾರ್ಥನೆಯ ಕರೆಗೋ ಕೂಡ ಜೊತೆಯಾಗಿತ್ತು.

ಆ ಕಾರಣದಿಂದಲೇ, ಮರಿಯಮ್ಮನವರ ತಿಂಗಳ ಸಮಾಪ್ತಿಯ ಅಂಗವಾಗಿ, ಮೇ 30ರ ಶನಿವಾರ ಸಂಜೆ 7:00 ಗಂಟೆಗೆ ವ್ಯಾಟಿಕನ್ ಉದ್ಯಾನವನದಲ್ಲಿರುವ ಅವರ್ ಲೇಡಿ ಆಫ್ ಲೂರ್ಡ್ಸ್ ಗುಹಾಲಯದಲ್ಲಿ ಜಗದ್ಗುರುಗಳು ಪವಿತ್ರ ಜಪಸರ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ವಿಶ್ವದ ಎಲ್ಲಾ ಜನರು ಹಾಗೂ ಎಲ್ಲಾ ತೀರ್ಥಕ್ಷೇತ್ರಗಳನ್ನು ಈ ಜಪಸರ ಪ್ರಾರ್ಥನೆಯಲ್ಲಿ ತಮ್ಮೊಂದಿಗೆ ಒಂದಾಗುವಂತೆ ಅವರು ಆಹ್ವಾನಿಸಿದ್ದಾರೆ.

ಈ ಪ್ರಾರ್ಥನೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ದೃಢೀಕರಿಸಿರುವ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಇವು ಸೇರಿವೆ. ದೇವಮಾತೆಯ ತೀರ್ಥಕ್ಷೇತ್ರ (ಜರ್ವಾನ್ಯಿತ್ಸಿಯಾ, ಉಕ್ರೇನ್); ಅವರ್ ಲೇಡಿ ಆಫ್ ಪೀಸ್ ಅಂಡ್ ಗುಡ್ ವಾಯೇಜ್ ಅಂತರರಾಷ್ಟ್ರೀಯ ತೀರ್ಥಕ್ಷೇತ್ರ (ಅಂಟಿಪೋಲೊ, ಫಿಲಿಪ್ಪೀನ್ಸ್); ಅವರ್ ಲೇಡಿ ಆಫ್ ದ ರೋಸರಿ ತೀರ್ಥಕ್ಷೇತ್ರ (ಫಾತಿಮಾ, ಪೋರ್ಚುಗಲ್); ಅವರ್ ಲೇಡಿ ಕ್ವೀನ್ ಆಫ್ ಪೀಸ್ ತೀರ್ಥಕ್ಷೇತ್ರ (ಮೆಡ್ಜುಗೊರ್ಜೆ, ಬೋಸ್ನಿಯಾ ಮತ್ತು ಹೆರ್ಜೆಗೋವಿನಾ); ಅವರ್ ಲೇಡಿ ಆಫ್ ಲೂರ್ಡ್ಸ್ ತೀರ್ಥಕ್ಷೇತ್ರ (ಲೂರ್ಡ್ಸ್, ಫ್ರಾನ್ಸ್); ಸಂತ ಶಾರ್ಬೆಲ್ ಅನ್ನಾಯಾ ತೀರ್ಥಕ್ಷೇತ್ರ (ಬೈಬ್ಲೋಸ್, ಲೆಬನಾನ್); ಮತ್ತು ಪಾಂಟಿಫಿಕಲ್ ಶ್ರೈನ್ ಆಫ್ ದ ಹೋಲಿ ಹೌಸ್ ಆಫ್ ಲೊರೆಟೊ (ಲೊರೆಟೊ, ಇಟಲಿ).

ಜಗದ್ಗುರು XIVನೇ ಲಿಯೋರವರು ಸಂತೋಷದ ರಹಸ್ಯಗಳನ್ನು ಧ್ಯಾನಿಸುತ್ತಾ ಜಪಸರ ಪ್ರಾರ್ಥನೆ ನಡೆಸಲಿದ್ದು, ಪ್ರತಿಯೊಂದು ದಶಕವನ್ನೂ ಯುದ್ಧ ಮತ್ತು ಹಿಂಸೆಯಿಂದ ಬಾಧಿತರಾದವರಿಗಾಗಿ ಸಮರ್ಪಿಸಿ, ಅವರನ್ನು ಶಾಂತಿಯ ರಾಣಿ ಮರಿಯಮ್ಮನವರ ಮಧ್ಯಸ್ಥಿಕೆಗೆ ಒಪ್ಪಿಸಲಿದ್ದಾರೆ.

ಮೊದಲ ರಹಸ್ಯವನ್ನು ಯುದ್ಧದ ಬಲಿಪಶುಗಳಿಗಾಗಿ, ವಿಶೇಷವಾಗಿ ಅತೀ ದುರ್ಬಲರಿಗಾಗಿ ಅರ್ಪಿಸಲಾಗುತ್ತದೆ. ಎರಡನೆಯದು ಯುದ್ಧಪೀಡಿತ ಜನರಿಗೆ ಆಶಾದಾಯಕ ಮಾತುಗಳು ಮತ್ತು ನಂಬಿಕೆಯ ಸಾಂತ್ವನವನ್ನು ತರುವವರಿಗಾಗಿ ಸಮರ್ಪಿತವಾಗಿರುತ್ತದೆ. ಮೂರನೆಯದು ಪ್ರತಿದಿನ ಮಾನವೀಯ ನೆರವು ನೀಡುತ್ತಿರುವ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಸ್ಮರಿಸುತ್ತದೆ.

ನಾಲ್ಕನೇ ರಹಸ್ಯವು ಯುದ್ಧದ ಹಿಂಸೆಯನ್ನು ಅನುಭವಿಸುವವರಿಗಾಗಿ, ಕೈದಿಗಳಿಗಾಗಿ ಹಾಗೂ ಮಾನವ ಗೌರವವನ್ನು ಉಲ್ಲಂಘಿಸುವ ಅವಮಾನಗಳನ್ನು ಸಹಿಸಬೇಕಾಗಿರುವ ಎಲ್ಲರಿಗಾಗಿ ಪ್ರಾರ್ಥಿಸುತ್ತದೆ. ಐದನೇ ಮತ್ತು ಅಂತಿಮ ಸಂತೋಷದ ರಹಸ್ಯವು ಯುದ್ಧ ಅಂತ್ಯಗೊಂಡು ವಿಶ್ವದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗಲೆಂದು ಪ್ರಾರ್ಥನೆ ಸಲ್ಲಿಸುತ್ತದೆ.

ರೋಮಿನಲ್ಲಿರುವ ಯಾತ್ರಿಕರು ಮತ್ತು ಭಕ್ತರು ಕೂಡ ಸಂತ ಪೇತ್ರರ ಚೌಕದಲ್ಲಿ ಅಳವಡಿಸಲಾಗಿರುವ ದೊಡ್ಡ ಪರದೆಗಳ ಮೂಲಕ ಈ ಪ್ರಾರ್ಥನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಈ ಉಪಕ್ರಮವನ್ನು “ವಿಶ್ವದಲ್ಲಿ ಸುವಾರ್ತಾಪ್ರಚಾರಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳ ವಿಭಾಗ” ಹೊಂದಿರುವ ಸುವಾರ್ತಾಪ್ರಚಾರ ವಿಭಾಗ ಪ್ರೋತ್ಸಾಹಿಸಿದೆ.

28 ಮೇ 2026, 19:10