ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯಲ್ಲಿ  ಶಾಂತಿಗಾಗಿ ಜಗದ್ಗುರು ಲಿಯೋರವರು ಜಪಮಾಲೆಯನ್ನು ಪ್ರಾರ್ಥಿಸುತ್ತಿದ್ದಾರೆ. ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯಲ್ಲಿ ಶಾಂತಿಗಾಗಿ ಜಗದ್ಗುರು ಲಿಯೋರವರು ಜಪಮಾಲೆಯನ್ನು ಪ್ರಾರ್ಥಿಸುತ್ತಿದ್ದಾರೆ. 

ಜಪಮಾಲೆ ಪ್ರಾರ್ಥನೆಯಲ್ಲಿ ಜಗದ್ಗುರು ಲಿಯೋರವರು: ಯುದ್ಧ ಮತ್ತು ಸಂಘರ್ಷಗಳ ಕಾಲದಲ್ಲಿಯೂ ಶಾಂತಿ ಸಾಧ್ಯ.

ಮರಿಯಮ್ಮನವರಿಗೆ ಸಮರ್ಪಿತ ಮೇ ತಿಂಗಳ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯ ಬಳಿ ಶಾಂತಿಗಾಗಿ ಜಪಮಾಲೆ ಪ್ರಾರ್ಥನೆಯನ್ನು ನಡೆಸಿದರು. ಶಾಂತಿಯನ್ನು ಸಾಧಿಸಲು ಪ್ರತಿದಿನವೂ ಬದ್ಧತೆಯಿಂದ ಪ್ರಯತ್ನಿಸಬೇಕೆಂದು ಎಲ್ಲರಿಗೂ ಕರೆ ನೀಡಿದ ಅವರು, “ಶಾಂತಿಯಿಂದ ವಂಚಿತರಾದವರ ಮೊರೆಯನ್ನು ನಾವು ಆಲಿಸಲು ಆಯ್ಕೆ ಮಾಡಿದಾಗ ಶಾಂತಿಯನ್ನು ಸಾಧಿಸುವುದು ಸಾಧ್ಯ” ಎಂದು ಹೇಳಿದರು.

ವ್ಯಾಟಿಕನ್ ವರದಿ

ಮರಿಯಮ್ಮನವರ ಭಕ್ತಿಗೆ ಸಮರ್ಪಿತ ಮೇ ತಿಂಗಳ ಸಮಾರೋಪದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂದು೯ ಮಾತೆಯ ಗುಹೆಯಲ್ಲಿ ಜಗತ್ತಿನ ವಿವಿಧ ಮರಿಯಮ್ಮನವರ ಯಾತ್ರಾಸ್ಥಳಗಳೊಂದಿಗೆ ಆಧ್ಯಾತ್ಮಿಕವಾಗಿ ಒಂದಾಗಿ ಸಂತೋಷದ ರಹಸ್ಯಗಳ ಜಪಮಾಲೆಯನ್ನು ಪ್ರಾರ್ಥಿಸಿದರು. ವಿಶೇಷವಾಗಿ ಯುದ್ಧ, ಹಿಂಸಾಚಾರ ಮತ್ತು ಸಂಘರ್ಷಗಳಿಂದ ಬಾಧಿತ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಅವರು ಸ್ಮರಿಸಿದರು.

ಐದು ದಶಕಗಳ ಜಪಮಾಲೆ ಪ್ರಾರ್ಥನೆಯ ಅಂತ್ಯದಲ್ಲಿ ಜಗದ್ಗುರುಗಳು ಕೀರ್ತನೆ 85:8 ರ ವಾಕ್ಯವನ್ನು ಉಲ್ಲೇಖಿಸಿದರು: “ದೇವರಾದ ಪ್ರಭು ಏನು ಹೇಳುವನೋ ನಾನು ಆಲಿಸುವೆನು; ಆತನು ತನ್ನ ಜನರಿಗೆ, ತನ್ನ ನಿಷ್ಠಾವಂತರಿಗೆ ಮತ್ತು ಹೃದಯದಿಂದ ತನ್ನ ಕಡೆಗೆ ತಿರುಗುವವರಿಗೆ ಶಾಂತಿಯನ್ನು ಘೋಷಿಸುವನು.” ಈ ವಾಕ್ಯವು ಇಂದಿನ ಹಿಂಸಾಚಾರ ಮತ್ತು ಸಂಕಷ್ಟಗಳ ನಡುವೆ ನಮಗೆ ಅತ್ಯಗತ್ಯವಾಗಿರುವ ಆಶಾಭರವಸೆಯನ್ನು ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದರು. ಪ್ರಾರ್ಥನೆಯ ಮೂಲಕ ದೇವರ ವಾಕ್ಯವನ್ನು ಆಲಿಸಲು ಹೃದಯಗಳನ್ನು ತೆರೆದು, ಇತಿಹಾಸದ ಘಟನೆಗಳ ಅರ್ಥವನ್ನು ಗ್ರಹಿಸಲು ಹಾಗೂ ದೇವರ ದೈವಿಕ ಮಾರ್ಗದರ್ಶನವನ್ನು ಅರಿಯಲು ಎಲ್ಲರನ್ನು ಅವರು ಆಹ್ವಾನಿಸಿದರು.

ಮರಿಯಮ್ಮನವರನ್ನು ಉಲ್ಲೇಖಿಸಿದ ಜಗದ್ಗುರುಗಳು, ದೇವರ ವಾಕ್ಯವನ್ನು ಆಲಿಸಿ ಅದಕ್ಕೆ ವಿಧೇಯರಾಗಿರುವ ನಂಬಿಕೆಯ ಮಾದರಿಯೆಂದು ಅವರನ್ನು ಬಣ್ಣಿಸಿದರು. ಯೇಸುವನ್ನು ತಮ್ಮ ಗರ್ಭದಲ್ಲಿ ಸ್ವಾಗತಿಸಿದ ಮರಿಯಮ್ಮನವರು ನಿಜವಾದ ವಿಧೇಯತೆಯ ಆದರ್ಶವಾಗಿದ್ದಾರೆ. ಜಪಮಾಲೆಯ ರಹಸ್ಯಗಳನ್ನು ಮರಿಯಮ್ಮನವರ ಕಣ್ಣಿನಿಂದ ನೋಡುವಾಗ, ಯೇಸು ಕ್ರಿಸ್ತನಲ್ಲಿ ತಂದೆಯ ಅಂತಿಮ ವಾಕ್ಯವನ್ನು ನಾವು ಕಾಣುತ್ತೇವೆ. ಆತನು ಪಶ್ಚಾತ್ತಾಪಪೂರ್ಣ ಹೃದಯದಿಂದ ದೇವರ ಕಡೆಗೆ ಮರಳುವ ಎಲ್ಲರಿಗೂ ಶಾಂತಿಯ ಸಂದೇಶವಾಗಿದ್ದಾರೆ. ನಾವು ದೇವರನ್ನು ಮರೆತಾಗಲೂ ಅಥವಾ ದಾರಿತಪ್ಪಿದಾಗಲೂ ದೇವರು ನಮ್ಮನ್ನು ಎಂದಿಗೂ ತ್ಯಜಿಸುವುದಿಲ್ಲ, ಬದಲಾಗಿ ನಮ್ಮನ್ನು ಹುಡುಕಿ ತನ್ನ ಬಳಿಗೆ ಮರಳಿ ಕರೆತರುತ್ತಾರೆ ಎಂದು ಜಗದ್ಗುರುಗಳು ಹೇಳಿದರು.

‘ಶಾಂತಿ’ ಎಂಬ ಒಂದೇ ಪದದ ಮಹತ್ವವನ್ನು ಒತ್ತಿಹೇಳಿದ ಜಗದ್ಗುರುಗಳು, ಶಾಂತಿಯು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕಾದ ಸಿದ್ಧಾಂತವಲ್ಲ, ಅಮಾಯಕ ಭ್ರಮೆಯೂ ಅಲ್ಲ, ಸ್ವಾರ್ಥಕ್ಕಾಗಿ ಬೆನ್ನಟ್ಟುವ ಗುರಿಯೂ ಅಲ್ಲ ಎಂದು ಹೇಳಿದರು. ಶಾಂತಿಯನ್ನು ಪ್ರಾಮಾಣಿಕ ಹೃದಯದಿಂದ ಹುಡುಕಬೇಕು. ಅದು ಪ್ರತಿದಿನದ ಬದ್ಧತೆ. ನ್ಯಾಯ ಮತ್ತು ಪ್ರೀತಿಯಿಂದ ಶಾಂತಿ ಹುಟ್ಟುತ್ತದೆ. ಕುಟುಂಬಗಳು, ಸಮುದಾಯಗಳು, ಜನಾಂಗಗಳು ಮತ್ತು ರಾಷ್ಟ್ರಗಳನ್ನು ಒಗ್ಗೂಡಿಸುವ ಸಾಮರಸ್ಯವೇ ಶಾಂತಿ ಎಂದು ಅವರು ವಿವರಿಸಿದರು.

ಇಂದಿನ ಜಗತ್ತಿನಲ್ಲಿ ಯುದ್ಧ, ಹಿಂಸಾಚಾರ ಮತ್ತು ಸಂಘರ್ಷಗಳು ಹೆಚ್ಚಾಗಿದ್ದರೂ, ಶಾಂತಿಯಿಂದ ವಂಚಿತರಾದವರ ಮೊರೆಯನ್ನು ನಾವು ಆಲಿಸಲು ಆಯ್ಕೆ ಮಾಡಿದಾಗ ಶಾಂತಿ ಸಾಧ್ಯವಾಗುತ್ತದೆ ಎಂದು ಜಗದ್ಗುರುಗಳು ತಿಳಿಸಿದರು. ನಿರಪರಾಧಿ ಮಕ್ಕಳು, ವ್ಯಥೆಗೊಳಗಾದ ತಾಯಂದಿರು ಮತ್ತು ತಂದೆಯರು, ದೌರ್ಜನ್ಯಕ್ಕೆ ಒಳಗಾದ ಕೈದಿಗಳು, ನಿರಾಶ್ರಿತರು ಮತ್ತು ಸಂಕಷ್ಟದಲ್ಲಿರುವ ಅನೇಕ ಜನರು ಒಂದೇ ಮಾತನ್ನು ಹೇಳುತ್ತಿದ್ದಾರೆ ‘ಶಾಂತಿ’. ಶಾಂತಿಯು ದೇವರ ವರವಾಗಿರುವುದರಿಂದ ಅದು ಯಾವಾಗಲೂ ಸಾಧ್ಯ. ಆ ಶಾಂತಿಗೆ ಯೇಸು ಕ್ರಿಸ್ತನ ಮುಖವಿದೆ. ಆತನು ದ್ವೇಷದ ಗೋಡೆಗಳನ್ನು ಕೆಡವಿ, ನಮ್ರತೆಯ ಮೂಲಕ ಅಹಂಕಾರವನ್ನು ಸೋಲಿಸಿ, ಪಾಪದಿಂದ ಸೃಷ್ಟಿಯನ್ನು ವಿಮೋಚಿಸುತ್ತಾನೆ ಎಂದು ಜಗದ್ಗುರುಗಳು ಹೇಳಿದರು.

ಯೇಸು ನಮ್ಮೊಂದಿಗಿದ್ದಾಗ ಮತ್ತು ನಾವು ಅವರ ಪ್ರೀತಿಯ ನಿಜವಾದ ಶಿಷ್ಯರಾಗಿ ಬದುಕಿದಾಗ, ಮಾನವನಿಗೆ ಅಸಾಧ್ಯವೆನಿಸುವುದನ್ನು ಪವಿತ್ರಾತ್ಮನು ಸಾಧ್ಯವಾಗಿಸುತ್ತಾನೆ. ಆದರೆ ದೇವರಿಂದ ದೂರವಾದಾಗ ನಾವು ಇತರರಿಂದಲೂ ದೂರವಾಗುತ್ತೇವೆ ಮತ್ತು ಅವರ ನೋವು-ಸಂಕಷ್ಟಗಳ ಬಗ್ಗೆ ನಿರ್ಲಕ್ಷ್ಯ ಹೊಂದುತ್ತೇವೆ. ದೇವರ ಬಳಿಗೆ ಮರಳುವ ಪ್ರತಿಯೊಂದು ಸಂದರ್ಭದಲ್ಲೂ ಶಾಂತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗುತ್ತದೆ. ಆದ್ದರಿಂದ ನಮ್ಮ ಪ್ರಾರ್ಥನೆ ಕೇವಲ ಪ್ರಾರ್ಥನೆಯಾಗಿ ಉಳಿಯದೆ, ಒಂದು ಧ್ಯೇಯ ಮತ್ತು ಪ್ರವಾದನಾತ್ಮಕ ಸಾಕ್ಷಿಯಾಗಿ ಮಾರ್ಪಡಬೇಕು ಎಂದು ಜಗದ್ಗುರುಗಳು ನೆನಪಿಸಿದರು.

ನಗರಗಳಲ್ಲಿ ನಿರಪರಾಧಿಗಳ ಮೊರೆ ಇನ್ನು ಮುಂದೆ ಕೇಳಿಸಬಾರದು. ಬಾಂಬ್ ದಾಳಿಗಳ ಭಯದಿಂದ ಯಾರೂ ತಮ್ಮ ಮನೆಗಳನ್ನು ತೊರೆಯುವಂತಾಗಬಾರದು. ಅಧಿಕಾರದ ದಾಹ ಮತ್ತು ‘ಹಿಂಸಾತ್ಮಕ ಮಾತುಗಳ ಸಂಸ್ಕೃತಿ’ ಅಂತ್ಯಗೊಳ್ಳಬೇಕು,ಅದರ ಸ್ಥಾನವನ್ನು ನ್ಯಾಯ ಮತ್ತು ಸತ್ಯ ಆಕ್ರಮಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಶಾಂತಿಯನ್ನು ಸಾಧಿಸಲು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಅದು ದೈನಂದಿನ ಜೀವನದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿಯೂ ಮಾತಿನ ಮತ್ತು ದೈಹಿಕ ಹಿಂಸೆಯ ಎಲ್ಲ ರೂಪಗಳನ್ನು ತ್ಯಜಿಸುವಂತಹ ಸಣ್ಣದಾದರೂ ಮಹತ್ವದ ಹೆಜ್ಜೆಗಳಿಂದ ಆರಂಭವಾಗಬೇಕು ಎಂದು ಅವರು ಹೇಳಿದರು.

ನಿಜವಾದ ಶಾಂತಿಯು ಪ್ರೀತಿಯಿಂದ ತುಂಬಿದ ಹೃದಯದಿಂದ ಆರಂಭವಾಗುತ್ತದೆ. ಜನರು ಸಮಾಧಾನದ ಮಾತುಗಳನ್ನು ಮಾತನಾಡಿದಾಗ ಮತ್ತು ಲೋಕವನ್ನು ಸೌಮ್ಯತೆ ಹಾಗೂ ಜ್ಞಾನದಿಂದ ನೋಡುವಾಗ ಶಾಂತಿ ಬೆಳೆಯುತ್ತದೆ. “ಇದೇ ನಿಜವಾದ ಶಕ್ತಿ—ಸತ್ಯ ಮತ್ತು ಪ್ರೀತಿಯ ಶಕ್ತಿ” ಎಂದು ಜಗದ್ಗುರುಗಳು ಹೇಳಿದರು. ತಮ್ಮ ಸಂದೇಶದ ಕೊನೆಯಲ್ಲಿ, ದೇವರು ಶಾಂತಿಸಾಧಕರನ್ನು ಹುಡುಕುತ್ತಿದ್ದಾನೆ ಎಂದು ನೆನಪಿಸಿದ ಜಗದ್ಗುರುಗಳು, “ನಾನು ಇಲ್ಲಿದ್ದೇನೆ” ಎಂಬ ಮರಿಯಮ್ಮನವರ ಪ್ರತಿಕ್ರಿಯೆಯನ್ನು ನಾವು ಪ್ರತಿದಿನ ಕೇವಲ ಮಾತುಗಳಲ್ಲಿ ಮಾತ್ರವಲ್ಲ, ನಮ್ಮ ಕಾರ್ಯಗಳಲ್ಲಿಯೂ ಪ್ರತಿಧ್ವನಿಸುವಂತೆ ಆಶೀರ್ವದಿತ ಮಾತೆಯಾದ ಮರಿಯಮ್ಮನವರು ನಮಗೆ ಸಹಾಯ ಮಾಡಲಿ ಎಂದು ಪ್ರಾರ್ಥಿಸಿದರು.

30 ಮೇ 2026, 19:42