‘ಸಂತ ಅಗಸ್ಟಿನ್ ರವರ ಪುತ್ರ’ನಾಗಿ ಬೆಳೆದು ಜಗದ್ಗುರುಗಳಾದರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ವಿಶ್ವ ಗುರುಗಳಾಗಿ ಆಯ್ಕೆಯಾದ ಬಳಿಕ, “ನಾನು ಸಂತ ಅಗಸ್ಟಿನ್ ರವರ ಪುತ್ರ, ಒಬ್ಬ ಆಗಸ್ಟಿನಿಯನ್” ಎಂದು ತಮ್ಮನ್ನು ವಿಶ್ವಕ್ಕೆ ಪರಿಚಯಿಸಿಕೊಂಡರು. 1978ರ ಸೆಪ್ಟೆಂಬರ್ 2ರಂದು ದಾರಿದ್ರ್ಯ, ಪರಿಶುದ್ಧತೆ ಮತ್ತು ವಿಧೇಯತೆಯ ವ್ರತಗಳನ್ನು ಸ್ವೀಕರಿಸಿದ ದಿನದಿಂದಲೇ ಅವರು ಸಂತ ಅಗಸ್ಟಿನ್ ಸಂಘದ ಸದಸ್ಯರಾಗಿದ್ದಾರೆ. ಹಿಪ್ಪೋ ನಗರದ ಬಿಷಪ್ ಆಗಿದ್ದ ಸಂತ ಅಗಸ್ಟಿನ್ ರವರ ಜೀವನ ಮತ್ತು ಬೋಧನೆಗಳು ಜಗದ್ಗುರು ಲಿಯೋರವರ ಜೀವನಯಾತ್ರೆಯ ಪ್ರತಿಯೊಂದು ಹಂತವನ್ನೂ ಆಳವಾಗಿ ಪ್ರಭಾವಿಸಿವೆ.
ಜಗದ್ಗುರುಗಳಾಗಿ ಆಯ್ಕೆಯಾದ ತಕ್ಷಣ ಅವರು ಉಚ್ಚರಿಸಿದ ಮೊದಲ ಮಾತುಗಳಲ್ಲಿಯೇ ಅಗಸ್ಟಿನಿಯನ್ ಆತ್ಮಸ್ಫೂರ್ತಿ ಸ್ಪಷ್ಟವಾಗಿ ಗೋಚರಿಸಿತು. “ನಿಮ್ಮೊಂದಿಗಿದ್ದಾಗ ನಾನು ಕ್ರೈಸ್ತನು, ನಿಮಗಾಗಿ ನಾನು ಬಿಷಪ್.” ಸಂತ ಅಗಸ್ಟಿನ್ ರವರ ಉಪದೇಶದಿಂದ ತೆಗೆದುಕೊಂಡ ಈ ವಾಕ್ಯ, ವಿಶ್ವಾಸಿಗಳ ಸಮುದಾಯದೊಂದಿಗೆ ಅವರ ಏಕತೆಯ ಭಾವವನ್ನೂ, ಕುರಿಗಾಹಿಗಳ ಜವಾಬ್ದಾರಿಯ ಅರಿವನ್ನೂ ವ್ಯಕ್ತಪಡಿಸುತ್ತದೆ.
ಜಗದ್ಗುರು XIVನೇ ಲಿಯೋರವರು ತಮ್ಮ ಧರ್ಮ ಸಭೆಯ ಜನರ ನಡುವೆ ಸೇತುವೆಗಳನ್ನು ನಿರ್ಮಿಸುವ, ಸಂವಾದವನ್ನು ಉತ್ತೇಜಿಸುವ ಮತ್ತು ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸುವ ಸಮುದಾಯವಾಗಿರಬೇಕು ಎಂದು ಕರೆ ನೀಡುತ್ತಾರೆ. ಈ ದೃಷ್ಟಿಕೋನವು ಸಂತ ಅಗಸ್ಟಿನ್ ರವರ ಬಿಷಪ್ ಸೇವೆಯ ಪ್ರತಿಬಿಂಬವಾಗಿದೆ. ಅಗಸ್ಟಿನ್ ರವರು ವಿಶ್ವಾಸಿಗಳಿಗೆ ಸೇವೆ ಸಲ್ಲಿಸಿ, ಭ್ರಾಂತ ಬೋಧನೆಗಳಿಗೆ ವಿರೋಧವಾಗಿ ನಿಂತು, ಎಲ್ಲರೊಂದಿಗೆ ಸಂವಾದ ನಡೆಸಿ, ಬಡವರು ಮತ್ತು ಅಗತ್ಯವಂತರ ಸೇವೆಯಲ್ಲಿ ತೊಡಗಿದ್ದರು.
ಅಗಸ್ಟಿನಿಯನ್ ಕುಟುಂಬದ ಸದಸ್ಯನಾಗಿ, ಜಗದ್ಗುರು ಲಿಯೋರವರು ದೇವರ ಅನ್ವೇಷಣೆ, ಕ್ರಿಸ್ತನ ಅನುಕರಣ, ಸಹೋದರತ್ವ ಮತ್ತು ಧರ್ಮ ಸಭೆಯ ಸೇವೆಯನ್ನು ತಮ್ಮ ಜೀವನದ ಕೇಂದ್ರವಾಗಿಸಿಕೊಂಡಿದ್ದಾರೆ. ಜಗದ್ಗುರುಗಳಾದ ನಂತರವೂ ಅವರು ಅಗಸ್ಟಿನಿಯನ್ ಸಹೋದರರೊಂದಿಗೆ ಆತ್ಮೀಯ ಬಾಂಧವ್ಯವನ್ನು ಮುಂದುವರಿಸಿಕೊಂಡಿದ್ದಾರೆ. ಸಮುದಾಯ ಜೀವನ ಮತ್ತು ಹಂಚಿಕೆ ಅಗಸ್ಟಿನಿಯನ್ ಜೀವನದ ಪ್ರಮುಖ ಅಂಶಗಳಾಗಿವೆ ಎಂದು ಅವರು ತಮ್ಮ ನಡೆ-ನುಡಿಗಳ ಮೂಲಕ ತೋರಿಸುತ್ತಿದ್ದಾರೆ.
ಜಗದ್ಗುರುಗಳಾಗಿ ಆಯ್ಕೆಯಾದ ಎರಡು ದಿನಗಳಲ್ಲೇ ಅವರು ರೋಮಿನ ಸಮೀಪದ ಜೆನಾಜ್ಜಾನೊದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದರು. ಶತಮಾನಗಳಿಂದ ಅಗಸ್ಟಿನಿಯನ್ ಸಂಘದ ಆರೈಕೆಯಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ, ದೇವಮಾತೆ ಮರಿಯಮ್ಮನವರ ಮಾರ್ಗದರ್ಶನ ಮತ್ತು ರಕ್ಷಣೆಯನ್ನು ಅವರು ತಮ್ಮ ಹೊಸ ಧ್ಯೇಯಕ್ಕಾಗಿ ಬೇಡಿಕೊಂಡರು. ತಮ್ಮ ಜೀವನಪೂರ್ತಿ ಮರಿಯಮ್ಮನವರ ಪ್ರೀತಿ ಮತ್ತು ಜ್ಞಾನವು ತಮ್ಮನ್ನು ಮಾರ್ಗದರ್ಶಿಸಿದೆ ಎಂದು ಅವರು ಹೇಳಿದ್ದಾರೆ.
ಸಂತ ಅಗಸ್ಟಿನ್ ರವರಂತೆ, ಜಗದ್ಗುರು XIVನೇ ಲಿಯೋರವರು ಏಕತೆ, ಸಂವಾದ ಮತ್ತು ಸತ್ಯದ ಅನ್ವೇಷಣೆಯನ್ನು ತಮ್ಮ ಬೋಧನೆಯ ಕೇಂದ್ರವಾಗಿಸಿಕೊಂಡಿದ್ದಾರೆ. “ಇಲ್ಲೊ ಉನೊ ಉನಂ ನಲ್ಲಿ” “ಒಬ್ಬನೇ ಕ್ರಿಸ್ತನಲ್ಲಿ ನಾವು ಒಂದಾಗಿದ್ದೇವೆ” ಎಂಬ ಅವರ ಜಗದ್ಗುರುಗಳ ಧ್ಯೇಯವಾಕ್ಯವೂ ಅಗಸ್ಟಿನ್ ರವರ ಬೋಧನೆಯಿಂದಲೇ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಅವರು ಅಲ್ಜೀರಿಯಾಗೆ ಭೇಟಿ ನೀಡಿ, ಜನಾಂಗಗಳ ನಡುವಿನ ಏಕತೆ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರಿದರು. ಸಂತ ಅಗಸ್ಟಿನ್ ರವರ ಆತ್ಮಸ್ಫೂರ್ತಿಯ ಮೂಲಕ ಜಗತ್ತಿನಲ್ಲಿ ಸಂವಾದ ಮತ್ತು ಸೌಹಾರ್ದತೆಯ ಸೇತುವೆಗಳನ್ನು ನಿರ್ಮಿಸುವುದೇ ಅವರ ಆಶಯವಾಗಿದೆ.
