ಹುಡುಕಿ

ಜಗದ್ಗುರು XIVನೇ ಲಿಯೋರವರು ಒಇಐ - ಜಗದ್ಗುರುಗಳ ಅಧಿಕಾರ ಸ್ಥಳದ ಸಭೆಯಲ್ಲಿ ಭಾಗವಹಿಸುವವರನ್ನು ಭೇಟಿ ಮಾಡುತ್ತಾರೆ. ಜಗದ್ಗುರು XIVನೇ ಲಿಯೋರವರು ಒಇಐ - ಜಗದ್ಗುರುಗಳ ಅಧಿಕಾರ ಸ್ಥಳದ ಸಭೆಯಲ್ಲಿ ಭಾಗವಹಿಸುವವರನ್ನು ಭೇಟಿ ಮಾಡುತ್ತಾರೆ.  (ANSA)

ಜಗದ್ಗುರುಗಳು: ಶಿಕ್ಷಣವು ಯುವಜನರಿಗೆ ತಮ್ಮನ್ನು ತಾವು ಹಾಗೂ ಇತರರನ್ನು ಕಂಡುಕೊಳ್ಳಲು ನೆರವಾಗಬೇಕು.

ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಕುರಿತು ವ್ಯಾಟಿಕನ್‌ನಲ್ಲಿ ನಡೆದ ಸಮ್ಮೇಳನದ ಭಾಗವಹಿಸುವವರಿಗೆ ಉದ್ದೇಶಿಸಿ ಮಾತನಾಡಿದ ಜಗದ್ಗುರು ಲಿಯೋರವರು, ಯುವಜನರು ಮೌನದ ಮೌಲ್ಯವನ್ನು ಮರುಅನ್ವೇಷಿಸಲು, ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಿಕೊಳ್ಳಲು ಹಾಗೂ ತಮ್ಮನ್ನು ಮೀರಿದ ಉನ್ನತ ಆಧ್ಯಾತ್ಮಿಕ ಸತ್ಯಗಳತ್ತ ಮನಸ್ಸು ತೆರೆದುಕೊಳ್ಳಲು ನೆರವು ಮತ್ತು ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಯುವಜನರಿಗೆ ಶಿಕ್ಷಣ ನೀಡುವುದು ನಮ್ಮ ಕಾಲದ ಮಹತ್ತರ ಸವಾಲುಗಳಲ್ಲಿ ಒಂದಾಗಿದೆ ಎಂದು ಜಗದ್ಗುರು ಲಿಯೋರವರು ಶನಿವಾರ ಹೇಳಿದ್ದಾರೆ. ಅವರು “ಭರವಸೆಯ ನಕ್ಷೆಗಳು ಪ್ರಾದೇಶಿಕ ಶಿಕ್ಷಣ ಕಾರ್ಯಸೂಚಿಗಾಗಿ  ಮಾನಸಿಕ ಆರೋಗ್ಯ, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಶಿಕ್ಷಣ” ಎಂಬ ಒಇಐ–ಜಗದ್ಗುರುಗಳ ಅಧಿಕಾರ ಸ್ಥಳದ ಸಭೆಯ ಭಾಗವಹಿಸುವವರನ್ನು ಭೇಟಿಯಾಗಿ ಮಾತನಾಡಿದರು.

ಈ ಸಭೆಯಲ್ಲಿ ಲ್ಯಾಟಿನ್ ಅಮೆರಿಕದ ವಿವಿಧ ದೇಶಗಳ ಪರಿಣಿತರು, ಶಿಕ್ಷಣ ತಜ್ಞರು ಹಾಗೂ ಸಚಿವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಇರುವ ಡಿಕಾಸ್ಟರಿ ಹಾಗೂ ಲ್ಯಾಟಿನ್ ಅಮೆರಿಕಕ್ಕಾಗಿ ಇರುವ ಪಾಂಟಿಫಿಕಲ್ ಆಯೋಗವು, ಐಬೆರೋ-ಅಮೆರಿಕನ್ ರಾಷ್ಟ್ರಗಳ ಸಂಘಟನೆಯ (ಒಇಐ) ಸಹಯೋಗದಲ್ಲಿ ಆಯೋಜಿಸಿತ್ತು.

ತಮ್ಮ ಭಾಷಣದಲ್ಲಿ ಜಗದ್ಗುರು ಲಿಯೋರವರು ಲ್ಯಾಟಿನ್ ಅಮೆರಿಕದ ಮೇಲಿನ ತಮ್ಮ ವಿಶೇಷ ಪ್ರೀತಿಯನ್ನು ಸ್ಮರಿಸಿ, ಸಾಂಪ್ರದಾಯಿಕ ಕೈಮಗ್ಗ ನೇಯ್ಗೆಯ ವಸ್ತ್ರಗಳ ಉದಾಹರಣೆಯಿಂದ ತಮ್ಮ ಸಂದೇಶವನ್ನು ಆರಂಭಿಸಿದರು.

ಅನೇಕ ನೂಲುಗಳು ಮತ್ತು ಜೀವಂತ ಬಣ್ಣಗಳಿಂದ ಕೂಡಿದ ಈ ವಸ್ತ್ರಗಳು, “ಒಂದು ವಿನ್ಯಾಸವನ್ನು ರೂಪಿಸಲು ಒಂದೇ ಒಂದು ನೂಲು ಸಾಕಾಗುವುದಿಲ್ಲ” ಎಂಬುದನ್ನು ತೋರಿಸುತ್ತವೆ ಎಂದು ಅವರು ಹೇಳಿದರು. ಪ್ರತಿಯೊಂದು ನೂಲು ಮತ್ತು ಪ್ರತಿಯೊಂದು ಬಣ್ಣವೂ ಒಂದು ವಿಶಾಲ ನೇಯ್ಗೆಯ ವಿನ್ಯಾಸದೊಳಗೆ ಮಾತ್ರ ತನ್ನ ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ ಎಂದು ಅವರು ವಿವರಿಸಿದರು.

ಸಹಭಾಗಿತ್ವವನ್ನು ಹೆಣೆಯುವ ಕಲೆಯಾಗಿ ಶಿಕ್ಷಣ

ಶಿಕ್ಷಣವು ತನ್ನನ್ನು ಪ್ರತ್ಯೇಕ ವ್ಯಕ್ತಿಗಳನ್ನು ನಿರ್ಮಿಸುವ ಪ್ರಕ್ರಿಯೆಯಾಗಿ ಅಲ್ಲ, ಬದಲಾಗಿ ಸಹಭಾಗಿತ್ವವನ್ನು ಹೆಣೆಯುವ ಕಲೆಯಾಗಿ ಮರುಅನ್ವೇಷಿಸಿಕೊಳ್ಳಬೇಕೆಂದು ಜಗದ್ಗುರುಗಳು ಹೇಳಿದರು.

ಪುರಾತನ ಜನರು ನಕ್ಷತ್ರಮಂಡಲಗಳನ್ನು ಓದಲು ಆಕಾಶದತ್ತ ದೃಷ್ಟಿ ಹರಿಸುತ್ತಿದ್ದಂತೆ, ಇಂದಿನ ಜನರೂ ತಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿ ಒಂದು ಜಾಗತಿಕ ಶೈಕ್ಷಣಿಕ ನಕ್ಷತ್ರಮಂಡಲವನ್ನು ನಿರ್ಮಿಸಲು ಕರೆಯಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. ಅದು ನಾವು ಎಲ್ಲರೂ ಒಂದೇ ಮಾನವ ಕುಟುಂಬಕ್ಕೆ ಸೇರಿದವರು ಎಂಬ ಅರಿವನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.

ಮಾನಸಿಕ ಆರೋಗ್ಯದ ಪ್ರಶ್ನೆಯನ್ನು ಎದುರಿಸುವಾಗ ಈ ದೃಷ್ಟಿಕೋನ ಅತ್ಯಗತ್ಯವಾಗಿದೆ ಎಂದು ಜಗದ್ಗುರುಗಳು ಗಮನಿಸಿದರು. ಏಕೆಂದರೆ ಈ ವಿಷಯವನ್ನು ಕೇವಲ ವೈದ್ಯಕೀಯ ಅಥವಾ ತಾಂತ್ರಿಕ ದೃಷ್ಟಿಕೋನದಿಂದ ಮಾತ್ರ ನೋಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬದಲಾಗಿ, ಇದು ನಮ್ಮ ಕಾಲದ ಅತ್ಯಂತ ದೊಡ್ಡ ಬಡತನಗಳಲ್ಲಿ ಒಂದಾದ ಆಂತರಿಕ ದಿಕ್ಕು ಮತ್ತು ಮಾರ್ಗದರ್ಶನವನ್ನು ಕಳೆದುಕೊಳ್ಳುವ ಸ್ಥಿತಿಗೆ ಪ್ರತಿಕ್ರಿಯಿಸುವುದಾಗಿದೆ ಎಂದು ಅವರು ಹೇಳಿದರು.

ಇಂದು ಅನೇಕ ಯುವಜನರು ಅತ್ಯಾಧುನಿಕ ಸಾಧನಗಳನ್ನು ಹೊಂದಿದ್ದರೂ, ತಮ್ಮ ಜೀವನ, ಕನಸುಗಳು, ಪ್ರೀತಿ ಹಾಗೂ ದುಃಖಗಳಿಗೆ ಅರ್ಥವನ್ನು ನೀಡಲು ಹೋರಾಡುತ್ತಿದ್ದಾರೆ ಎಂದು ಜಗದ್ಗುರುಗಳು ಗಮನಿಸಿದರು.

ಇಂತಹ ಪರಿಸ್ಥಿತಿಗಳು ಮಾನಸಿಕ ದುರ್ಬಲತೆಯ ವಿವಿಧ ರೂಪಗಳನ್ನು ಬಹಿರಂಗಪಡಿಸುತ್ತವೆ. ವಿಶೇಷವಾಗಿ ಸಾಧನೆ ಮತ್ತು ತೀವ್ರ ಸ್ಪರ್ಧೆಯತ್ತ ಅವರನ್ನು ಒತ್ತಾಯಿಸುವ ಜಗತ್ತಿನಲ್ಲಿ ಆತಂಕ, ವಿಫಲತೆಯ ಭಯ ಮತ್ತು ದಿಕ್ಕುತೋಚದ ಸ್ಥಿತಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಆಂತರಿಕ ಜೀವನದ ಮರುಅನ್ವೇಷಣೆ

ಮಾನವ ವ್ಯಕ್ತಿಯು ತನ್ನ ಜೀವನದ ಅರ್ಥವನ್ನು ಕಂಡುಕೊಂಡಾಗ ಮಾತ್ರ ಸಂಪೂರ್ಣವಾಗಿ ಬದುಕಲು ಹಾಗೂ ತನ್ನ ಆಂತರಿಕ ದುರ್ಬಲತೆಗಳನ್ನು ಜಯಿಸಲು ಸಾಧ್ಯವಾಗುತ್ತದೆ ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು.

ಒಬ್ಬ ವ್ಯಕ್ತಿಯು ತನ್ನ ಜೀವನವು ಮೌಲ್ಯಯುತವಾಗಿದೆ, ತಾನು ಪ್ರೀತಿಸಲ್ಪಟ್ಟಿದ್ದೇನೆ, ನಿರೀಕ್ಷಿಸಲ್ಪಟ್ಟಿದ್ದೇನೆ ಮತ್ತು ಲೋಕದಲ್ಲಿ ಒಂದು ಧ್ಯೇಯಕ್ಕಾಗಿ ಕರೆಯಲ್ಪಟ್ಟಿದ್ದೇನೆ ಎಂಬುದನ್ನು ಅರಿತುಕೊಂಡಾಗ, ಭರವಸೆಯು ಪುನರ್ಜನ್ಮ ಪಡೆಯುತ್ತದೆ ಎಂದು ಅವರು ಹೇಳಿದರು.

ಭರವಸೆಯು ಕೇವಲ ಭೋಳಾದ ಕಲ್ಪನೆ ಅಲ್ಲ ಅದು ಅತ್ಯಂತ ಕಠಿಣ ಕ್ಷಣಗಳಲ್ಲಿಯೂ ಜೀವನವನ್ನು ತಡೆಹಿಡಿಯುವ ಆಧ್ಯಾತ್ಮಿಕ ಶಕ್ತಿ ಎಂದು ಅವರು ವಿವರಿಸಿದರು.

ಆದ್ದರಿಂದ, ಯುವಜನರನ್ನು ಡಿಜಿಟಲ್ ಜಾಲತಾಣಗಳಿಗೆ ಸಂಪರ್ಕಿಸುವುದಷ್ಟೇ ಸಾಕಾಗುವುದಿಲ್ಲ ಎಂದು ಜಗದ್ಗುರುಗಳು ಎಚ್ಚರಿಸಿದರು. ಅವರು ತಮ್ಮಿಂದಲೇ, ಇತರರಿಂದ ಹಾಗೂ ತಮ್ಮ ಆಂತರಿಕ ಜೀವನದಿಂದ ದೂರವಾಗಿಯೇ ಉಳಿದರೆ, ಆ ಸಂಪರ್ಕಗಳು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.

ಯುವಜನರಿಗೆ ಮೌನ, ಆತ್ಮಾವಲೋಕನ, ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ, ಸಂಬಂಧಗಳ ಆಳ ಹಾಗೂ ಅತೀತ ಮತ್ತು ಆಧ್ಯಾತ್ಮಿಕ ವಾಸ್ತವತೆಗಳತ್ತ ಮನಸ್ಸು ತೆರೆದುಕೊಳ್ಳುವ ಮನೋಭಾವವನ್ನು ಮರುಅನ್ವೇಷಿಸಲು ನೆರವಾಗಬೇಕು ಎಂದು ಅವರು ಹೇಳಿದರು.

ಬೆಳಕಾಗುವ ಕರೆ

ಹಲವಾರು ಬಣ್ಣಗಳ ನೂಲುಗಳು ಸೇರಿ ಒಂದೇ ಸುಂದರ ನೇಯ್ಗೆಯನ್ನು ರೂಪಿಸುವ ಚಿತ್ರಣವನ್ನು ಪುನಃ ಉಲ್ಲೇಖಿಸಿದ ಜಗದ್ಗುರು ಲಿಯೋರವರು, ಸಾರ್ವಜನಿಕ ಸಂಸ್ಥೆಗಳು, ಶಾಲೆಗಳು, ವಿಶ್ವವಿದ್ಯಾನಿಲಯಗಳು, ಕುಟುಂಬಗಳು, ಧಾರ್ಮಿಕ ಸಮುದಾಯಗಳು ಹಾಗೂ ಸಂಸ್ಕೃತಿ ಮತ್ತು ಸಂವಹನ ಕ್ಷೇತ್ರಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಡಿಜಿಟಲ್ ಪರಿವರ್ತನೆಯ ಈ ಯುಗದಲ್ಲಿ, ವಿಶೇಷವಾಗಿ ಯುವಜನರಿಗಾಗಿ ನಾವು ಬೆಳಕಾಗಲು ಕರೆಯಲ್ಪಟ್ಟಿದ್ದೇವೆ ಎಂದು ಜಗದ್ಗುರುಗಳು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

ಚಿಂತನೆ ಮತ್ತು ಜೀವನವನ್ನು, ಧ್ಯಾನ ಮತ್ತು ಕ್ರಿಯೆಯನ್ನು, ಬಡವರೊಂದಿಗಿನ ಐಕ್ಯತೆಯನ್ನು ಹಾಗೂ ಜೀವನದ ಅರ್ಥದ ಹುಡುಕಾಟವನ್ನು ಒಂದಾಗಿಸುವ, ಶಿಕ್ಷಣದ ಆಳವಾದ ಮಾನವೀಯ ಪರಂಪರೆಯನ್ನು ಕಾಪಾಡುವ ಹೊಸ ಸಾಂಸ್ಕೃತಿಕ ಸಂಯೋಜನೆಗಳನ್ನು ನಿರ್ಮಿಸುವ ದೃಷ್ಟಿಕೋನಗಳು ಇಂದು ಅತ್ಯಗತ್ಯವಾಗಿವೆ ಎಂದು ಅವರು ಹೇಳಿದರು.

30 ಮೇ 2026, 14:59