ಭಾನುವಾರದ ರೆಜಿನಾ ಕೆಲಿ ಮತ್ತು ಆಶೀರ್ವಾದಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಜನಸಮೂಹ. ಭಾನುವಾರದ ರೆಜಿನಾ ಕೆಲಿ ಮತ್ತು ಆಶೀರ್ವಾದಕ್ಕಾಗಿ ಸಂತ ಪೇತ್ರರ ಚೌಕದಲ್ಲಿ ಜನಸಮೂಹ.  (ANSA)

ಹಿಂಸಾಚಾರ ಮತ್ತು ಯುದ್ಧಗಳ ಕಾರಣದಿಂದ ತಮ್ಮ ಪ್ರಾಣಗಳನ್ನು ಕಳೆದುಕೊಂಡ ಪತ್ರಕರ್ತರನ್ನು ಜಗದ್ಗುರುಗಳು ಸ್ಮರಿಸುತ್ತಾರೆ.

ಮೇ 3ರಂದು ಆಚರಿಸಲಾಗುವ ವಾರ್ಷಿಕ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಸ್ಮರಿಸಿಕೊಂಡು, ಜಗದ್ಗುರು XIVನೇ ಲಿಯೋರವರು ಯುದ್ಧಗಳು ಮತ್ತು ಹಿಂಸಾಚಾರದ ಪರಿಣಾಮವಾಗಿ ಬಲಿಯಾದ ಅನೇಕ ಪತ್ರಕರ್ತರು ಮತ್ತು ವರದಿಗಾರರನ್ನು ನೆನಪಿಸಿಕೊಳ್ಳುತ್ತಾರೆ.

ವ್ಯಾಟಿಕನ್ ವರದಿ

ಭಾನುವಾರದ ರೆಜಿನಾ ಕೇಲಿ ಪ್ರಾರ್ಥನೆಯ ನಂತರ, ಜಗದ್ಗುರು ಲಿಯೋರವರು ಇಂದು ಮೇ 3ರಂದು ಯುನೆಸ್ಕೋ (ಸಂಯುಕ್ತ ರಾಷ್ಟ್ರಗಳ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆ) ಪ್ರೋತ್ಸಾಹಿಸುವ ವಾರ್ಷಿಕ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ಸ್ಮರಿಸಿದರು.

ಪತ್ರಿಕಾ ಸ್ವಾತಂತ್ರ್ಯವು ದುರ್ಭಾಗ್ಯವಶಾತ್ ಅನೇಕ ಬಾರಿ ಉಲ್ಲಂಘನೆಯಾಗುತ್ತದೆ, ಕೆಲವೊಮ್ಮೆ ಸ್ಪಷ್ಟವಾಗಿ ಅಥವಾ ಸೂಕ್ಷ್ಮ ರೀತಿಗಳಲ್ಲಿ ಎಂಬುದಾಗಿ ಜಗದ್ಗುರುಗಳು ಗಮನಿಸಿದರು.  “ಯುದ್ಧಗಳು ಮತ್ತು ಹಿಂಸಾಚಾರದ ಪರಿಣಾಮವಾಗಿ ಬಲಿಯಾದ ಅನೇಕ ಪತ್ರಕರ್ತರು ಮತ್ತು ವರದಿಗಾರರನ್ನು ನಾವು ನೆನಪಿಸಿಕೊಳ್ಳೋಣ.”ಎಂದು ಅವರು ಹೇಳಿದರು.

ಯುನೆಸ್ಕೋ ಪ್ರಕಾರ, ವಿಶ್ವಾಸಾರ್ಹ ಮಾಹಿತಿಗೆ ಪ್ರವೇಶ, ಜವಾಬ್ದಾರಿ, ಸಂವಾದ ಮತ್ತು ನಂಬಿಕೆಯನ್ನು ಉತ್ತೇಜಿಸುವುದರಿಂದ, ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವತಂತ್ರ ಪತ್ರಿಕೋದ್ಯಮವು ಶಾಂತಿ, ಆರ್ಥಿಕ ಪುನಶ್ಚೇತನ, ಸದೃಢ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳಿಗೆ ಮಹತ್ವದ ಕೊಡುಗೆ ನೀಡಬಹುದು.

ಇದೇ ಸಮಯದಲ್ಲಿ, ಯುನೆಸ್ಕೋ ತನ್ನ ವಿಶ್ವ ಪ್ರವೃತ್ತಿಗಳ ವರದಿ 2022–2025 ನಲ್ಲಿ ಎಚ್ಚರಿಕೆ ನೀಡಿದ್ದು, 2012ರಿಂದ ಇಂದಿನವರೆಗೆ ಪತ್ರಿಕಾ ಸ್ವಾತಂತ್ರ್ಯವು ಅತ್ಯಂತ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಈ ಕುಸಿತವು 20ನೇ ಶತಮಾನದ ಅತ್ಯಂತ ಅಸ್ಥಿರ ಕಾಲಘಟ್ಟಗಳಾದ ಎರಡು ವಿಶ್ವಯುದ್ಧಗಳು ಮತ್ತು ಶೀತಯುದ್ಧದ ಸಮಯದಂತೆಯೇ ಇರುವುದಾಗಿ ತಿಳಿಸಿದೆ. ಯುನೆಸ್ಕೋ ಮತ್ತಷ್ಟು ಎಚ್ಚರಿಕೆ ನೀಡುವುದೇನೆಂದರೆ, ಮಾಹಿತಿಯ ತಿರುಚಾಟ ಮತ್ತು ದುರುದ್ದೇಶಪೂರಿತ ವ್ಯಕ್ತಿಗಳಿಂದ ಕೃತಕ ಬುದ್ಧಿಮತ್ತೆಯ ಬಳಕೆ ನಂಬಿಕೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಒಳಪಡಿಸುತ್ತಿವೆ.

ಆದಾಗ್ಯೂ, ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಹುದು ಎಂದು ಯುನೆಸ್ಕೋ ಹೇಳುತ್ತದೆ, ಮತ್ತು 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವು ಶಾಂತಿ ಮತ್ತು ಸದೃಢ ಅಭಿವೃದ್ಧಿಗೆ ಕೊಡುಗೆ ನೀಡುವ ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಮರುಸ್ಥಾಪಿಸಲು ಒಂದು ಪ್ರಮುಖ ಕ್ಷಣವಾಗಿದೆ.

“ಶಾಂತಿಯ ಭವಿಷ್ಯವನ್ನು ರೂಪಿಸುವುದು” ಎಂಬ ವಿಷಯದಡಿ, ಮೇ 4 ಸೋಮವಾರದಂದು ಜಾಂಬಿಯಾದ ಲುಸಾಕಾದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಸಮ್ಮೇಳನ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿಯೂ ನಡೆಯಲಿವೆ. ಈ ದಿನವು ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ಆಚರಿಸಲು, ಜಾಗತಿಕ ಮಟ್ಟದಲ್ಲಿ ಅದರ ಸ್ಥಿತಿಯನ್ನು ವಿಮರ್ಶಿಸಲು, ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ತಮ್ಮ ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.

ಯುನೆಸ್ಕೋವು ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಮಾಹಿತಿಯ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಸಮರ್ಪಿತವಾದ ವಿಶೇಷ ಸಂಸ್ಥೆಯಾಗಿದೆ.

ಇಟಲಿಯ ‘ಮೀಟರ್’ ಸಂಘಕ್ಕೆ ಅಭಿನಂದನೆಗಳು

ಭಾನುವಾರದ ಆಶೀರ್ವಾದದ ವೇಳೆ ಸಂತ ಪೇತ್ರರ ಚೌಕದಲ್ಲಿ ಉಪಸ್ಥಿತರಿದ್ದ ವಿವಿಧ ಗುಂಪುಗಳಿಗೆ ಜಗದ್ಗುರು ಲಿಯೋರವರು ಶುಭಾಶಯಗಳನ್ನು ಕೋರಿದರು. ಇವರಲ್ಲಿ ಇಟಲಿಯ “ಮೀಟರ್” ಸಂಘದ ಪ್ರತಿನಿಧಿಗಳೂ ಸೇರಿದ್ದರು. ಈ ಸಂಘವು ಮೂವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಅಪ್ರಾಪ್ತ ವಯಸ್ಕರನ್ನು ದುರುಪಯೋಗದ ಅನರ್ಥದಿಂದ ರಕ್ಷಿಸಲು, ಹಾಗೂ ಬಲಿಪಶುಗಳಿಗೆ ಸಹಾಯ ಮಾಡುವ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಧರ್ಮ ಸಭೆಯ ಮತ್ತು ನಾಗರಿಕ ಸಮಾಜವನ್ನು ತೊಡಗಿಸಿಕೊಳ್ಳಲು ಕೆಲಸ ಮಾಡುತ್ತಿದೆ. ಈ ಸೇವೆಗೆ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು.

03 ಮೇ 2026, 09:38