ಮೇ 1976 ರಲ್ಲಿ ಭೂಕಂಪ ಪೀಡಿತ ವಲಯ ಮೇ 1976 ರಲ್ಲಿ ಭೂಕಂಪ ಪೀಡಿತ ವಲಯ  (AFP or licensors)

ಐವತ್ತು ವರ್ಷಗಳ ನಂತರ, ಪ್ರಾಣಹಾನಿಕರ ಇಟಾಲಿಯನ್ ಭೂಕಂಪದ ಬಲಿಯಾದವರನ್ನು ಜಗದ್ಗುರುಗಳು ಸ್ಮರಿಸುತ್ತಾರೆ.

ಸುಮಾರು 1,000 ಜನರನ್ನು ಬಲಿಯಾಗಿಸಿ, 150,000ಕ್ಕೂ ಹೆಚ್ಚು ಜನರನ್ನು ಮನೆಯಿಲ್ಲದವರನ್ನಾಗಿಸಿದ ಫ್ರಿಯುಲಿ ಭೂಕಂಪದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು “ಈ ದುರಂತ ಘಟನೆಯ ಸ್ಮರಣೆ” “ಸೌಹಾರ್ದತೆ ಮತ್ತು ದಾನಧರ್ಮದ ಮೌಲ್ಯಗಳಿಗೆ ಹೊಸ ಬದ್ಧತೆಯನ್ನು” ಪ್ರೇರೇಪಿಸಲಿ ಎಂದು ಪ್ರಾರ್ಥಿಸಿದರು.

ವ್ಯಾಟಿಕನ್ ವರದಿ

ಉತ್ತರ ಇಟಲಿಯ ಫ್ರಿಯುಲಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಬಾಧಿತರಾದವರತ್ತ ತನ್ನ ಆಧ್ಯಾತ್ಮಿಕ ಸಾನ್ನಿಧ್ಯವನ್ನು ಜಗದ್ಗುರು ಲಿಯೋರವರು ವ್ಯಕ್ತಪಡಿಸಿದ್ದಾರೆ. ಈ ದುರಂತದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಳುಹಿಸಲಾದ ಟೆಲಿಗ್ರಾಂನಲ್ಲಿ, ಫ್ರಿಯುಲಿ ಜನರಿಗೆ ಹಾಗೂ ಉದಿನೆಯ ಮಹಾಧ್ಯಕ್ಷರಾದ ಆರ್ಚ್‌ಬಿಷಪ್ ರಿಕ್ಕಾರ್ಡೋ ಲಾಂಬರವರಿಗೆ ಉದ್ದೇಶಿಸಿ, ಜಗದ್ಗುರುಗಳು “ಕಾರ್ಡಿನಲ್ ಮಾತ್ತೆಯೊ ಜುಪ್ಪಿರವರ ಅಧ್ಯಕ್ಷತೆಯಲ್ಲಿ ನಡೆದ ಯೂಕರಿಸ್ಟಿಕ್ ಆಚರಣೆಯಲ್ಲಿ ಆತ್ಮೀಯವಾಗಿ ಭಾಗವಹಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಈ ಆಚರಣೆ ಬಲಿಯಾದವರ ಸ್ಮರಣಾರ್ಥವಾಗಿ ಆಯೋಜಿಸಲಾಯಿತು.

ಜಗದ್ಗುರುಗಳು ಬಲಿಯಾದವರ ಕುಟುಂಬಗಳಿಗೆ ತಮ್ಮ ಪ್ರಾರ್ಥನೆಗಳನ್ನು ಭರವಸೆ ನೀಡುತ್ತಾ, “ತಮ್ಮ ಪ್ರಿಯಜನರನ್ನು ಕಳೆದುಕೊಂಡವರ ದುಃಖದಲ್ಲಿ ಇರುವವರಿಗೆ ಸಾಂತ್ವನದ ಮಾತುಗಳನ್ನು” ಅರ್ಪಿಸುತ್ತಾರೆ.

ಕಾರ್ಡಿನಲ್ ಪಿಯೇತ್ರೊ ಪಾರೋಲಿನ್ ರವರ ಸಹಿಯಿರುವ ಈ ಟೆಲಿಗ್ರಾಂ ಮುಂದುವರಿದು, ಆ ದುರಂತದ ಸಮಯದಲ್ಲಿ ಉದ್ಭವಿಸಿದ ಐಕ್ಯತೆಯ ಅಲೆಗಳನ್ನು ಉಲ್ಲೇಖಿಸುತ್ತದೆ. ಜಗದ್ಗುರುಗಳು “ವಿವಿಧ ದೇಶಗಳಿಂದ ನೆರವು ನೀಡಿದ ಎಲ್ಲರಿಗೂ” ಕೃತಜ್ಞತೆ ಸಲ್ಲಿಸುತ್ತಾರೆ ಮತ್ತು “ಸ್ಥಳೀಯ ಸಮುದಾಯಗಳ ಅಕ್ಷೀಣ ಸೇವೆಯನ್ನು” ಶ್ಲಾಘಿಸುತ್ತಾರೆ. ಈ ಒಗ್ಗಟ್ಟಿನ ಚಟುವಟಿಕೆ ಸಾಮಾನ್ಯ ಜೀವನಕ್ಕೆ ವೇಗವಾಗಿ ಮರಳಲು ಹಾಗೂ ಮಾದರಿಯಂತಹ ಪುನರ್‌ನಿರ್ಮಾಣಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ. ಇದನ್ನು “ನಾಗರಿಕ ಪುನರುಜ್ಜೀವನದ ಮಾದರಿ” ಎಂದು ವರ್ಣಿಸಲಾಗಿದೆ.

ಜಗದ್ಗುರುಗಳು ಆ ದುಃಖದ ಸಂದರ್ಭಗಳಲ್ಲಿ ಇಟಾಲಿಯನ್ ಮತ್ತು ವಿದೇಶಿ ಸಮುದಾಯಗಳು ತೋರಿದ ಮಾನವೀಯ ಮತ್ತು ಕ್ರೈಸ್ತ ಸೌಹಾರ್ದತೆಯನ್ನು ಒತ್ತಿ ಹೇಳುತ್ತಾ, ಈ ದುರಂತದ ಸ್ಮರಣೆ ಸೌಹಾರ್ದತೆ ಮತ್ತು ದಾನಧರ್ಮದ ಮೌಲ್ಯಗಳಿಗೆ ಹೊಸ ಬದ್ಧತೆಯನ್ನು ಪ್ರೇರೇಪಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಕೊನೆಯಲ್ಲಿ, ಜಗದ್ಗುರುಗಳು “ಫ್ರಿಯುಲಿ ಪ್ರದೇಶದ ಸಮಸ್ತ ಜನರನ್ನು ಕನ್ಯಾ ಮರಿಯಮ್ಮನ ತಾಯಿಯ ರಕ್ಷಣೆಗೆ” ಹಾಗೂ ಅವರ ಪಾಲಕರಾದ ಸಂತ ಹೆರ್ಮಾಗೋರಾಸ್ ಮತ್ತು ಸಂತ ಫೋರ್ಟುನಾಟಸ್ ರವರ ಸಂರಕ್ಷಣೆಗೆ ಒಪ್ಪಿಸುತ್ತಾರೆ.

03 ಮೇ 2026, 09:49