ಜಗದ್ಗುರು XIVನೇ ಲಿಯೋರವರು ಮತ್ತು ಕೆನಡಾದ ಪ್ರಧಾನಮಂತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ವ್ಯಾಟಿಕನ್ ವರದಿ
"ಮ್ಯಾಗ್ನಿಫಿಕಾ ಹ್ಯುಮಾನಿಟಾಸ್" ಪರಿಪತ್ರಿಕೆಯ ಪ್ರಕಟಣೆಯ ಸಂದರ್ಭದಲ್ಲಿ, ಶುಕ್ರವಾರ ಮಧ್ಯಾಹ್ನ ಜಗದ್ಗುರು XIVನೇ ಲಿಯೋರವರು ಮತ್ತು ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ರವರ ನಡುವೆ ದೂರವಾಣಿ ಸಂಭಾಷಣೆ ನಡೆಯಿತು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, “ನೈತಿಕ ದೃಷ್ಟಿಕೋನದಿಂದ ಹಾಗೂ ಮಾನವಕೇಂದ್ರಿತ ವಿಧಾನವನ್ನು ಅನುಸರಿಸಿ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಮಹತ್ವದ ಕುರಿತು ಚರ್ಚೆ ನಡೆಯಿತು.”
“ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಆಸಕ್ತಿಯ ವಿಷಯಗಳ ಕುರಿತೂ ಮಾತುಕತೆ ನಡೆಯಿತು. ವಿಶೇಷವಾಗಿ ಮಧ್ಯಪ್ರಾಚ್ಯ ಮತ್ತು ಉಕ್ರೇನ್‌ನಲ್ಲಿ ಶಾಂತಿಯನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದವು,” ಎಂದು ಪ್ರಕಟಣೆ ತಿಳಿಸಿದೆ.
ಜಗದ್ಗುರುಗಳ ಪದಗ್ರಹಣದ ಉದ್ಘಾಟನಾ ದಿವ್ಯಬಲಿಪೂಜೆಯ ಬಳಿಕ ಭೇಟಿ
ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ರವರು 2025ರ ಮೇ 18ರಂದು, ಜಗದ್ಗುರು XIVನೇ ಲಿಯೋರವರ ಪದಗ್ರಹಣದ ಆರಂಭವನ್ನು ಗುರುತಿಸಿದ ದಿವ್ಯಬಲಿಪೂಜೆಯ ಬಳಿಕ, ವ್ಯಾಟಿಕನ್‌ನಲ್ಲಿ ಜಗದ್ಗುರುಗಳನ್ನು ಭೇಟಿಯಾದರು.
ಕಥೋಲಿಕ ವಿಶ್ವಾಸವನ್ನು ಆಚರಿಸುವ ಕಾರ್ನಿರವರು ತಮ್ಮ ಕುಟುಂಬದೊಂದಿಗೆ ರೋಮಿಗೆ ಆಗಮಿಸಿದ್ದರು. 2025ರ ಮಾರ್ಚ್ ತಿಂಗಳಲ್ಲಿ ಪ್ರಧಾನಮಂತ್ರಿಯಾಗಿ ನೇಮಕಗೊಂಡ 61 ವರ್ಷದ ಕಾರ್ನಿ ರವರು ಅರ್ಥಶಾಸ್ತ್ರಜ್ಞ, ಬ್ಯಾಂಕರ್, ಆಡಳಿತಗಾರ ಹಾಗೂ ರಾಜಕಾರಣಿಯಾಗಿದ್ದು, ಕೆನಡಾದ ಲಿಬರಲ್ ಪಕ್ಷದ ನಾಯಕರಾಗಿದ್ದಾರೆ. ಅವರು ಡಯಾನ್ ರವರನ್ನು ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ.
