ಹುಡುಕಿ

ಜಗದ್ಗುರು ಲಿಯೋರವರು ಸೆಂಟೆಸಿಮಸ್ ಅನ್ನಸ್ ಪ್ರೊ ಪಾಂಟಿಫೈಸ್ ಫೌಂಡೇಶನ್ ಸದಸ್ಯರನ್ನು ಭೇಟಿ ಮಾಡಿದರು. ಜಗದ್ಗುರು ಲಿಯೋರವರು ಸೆಂಟೆಸಿಮಸ್ ಅನ್ನಸ್ ಪ್ರೊ ಪಾಂಟಿಫೈಸ್ ಫೌಂಡೇಶನ್ ಸದಸ್ಯರನ್ನು ಭೇಟಿ ಮಾಡಿದರು.  (ANSA)

ಜಗದ್ಗುರು ಲಿಯೋರವರು: ನಮ್ಮೆಲ್ಲರ ಸಾಮಾನ್ಯ ಮಾನವೀಯತೆಯ ಅರಿವು ಯುದ್ಧ ಮತ್ತು ವಿಭಜನೆಯ ಮನೋಭಾವಕ್ಕೆ ಪರಿಣಾಮಕಾರಿ ಪ್ರತಿವಿಷವಾಗಿದೆ.

ಸೆಂಟೆಸಿಮಸ್ ಅನ್ನಸ್ ಪ್ರೊ ಪೊಂಟಿಫಿಸೆ ಪ್ರತಿಷ್ಠಾನದ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ವಿಭಜನೆಗಳಿಂದ ಕಂಗೆಟ್ಟಿರುವ ಇಂದಿನ ಜಗತ್ತಿನಲ್ಲಿ ಧರ್ಮ ಸಭೆಯ ಸಾಮಾಜಿಕ ಬೋಧನೆಯ ಮಹತ್ವವನ್ನು ಒತ್ತಿಹೇಳಿದರು. ಸ್ವಾತಂತ್ರ್ಯವು ಸ್ವಾರ್ಥಪೂರ್ಣ ಸ್ವಯಂಪ್ರತಿಪಾದನೆಯಾಗಿ ಅಲ್ಲ, ಬದಲಾಗಿ ತನ್ನನ್ನು ಇತರರಿಗಾಗಿ ಅರ್ಪಿಸಿಕೊಳ್ಳುವ ಜೀವನಶೈಲಿಯಾಗಿ ಬದುಕಲ್ಪಡಬೇಕು ಹಾಗೂ ಸಂವಾದವು ಸತ್ಯದ ಆಧಾರದ ಮೇಲೆ ನಿರ್ಮಾಣವಾಗಿರಬೇಕು ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಶನಿವಾರ ಜಗದ್ಗುರು XIVನೇ ಲಿಯೋರವರು ಸೆಂಟೆಸಿಮಸ್ ಅನ್ನಸ್ ಪ್ರೊ ಪೊಂಟಿಫಿಸೆ ಪ್ರತಿಷ್ಠಾನದ ಸದಸ್ಯರಿಗೆ ವಿಶೇಷ ಭೇಟಿಯನ್ನು ನೀಡಿದರು.

ಪ್ರತಿಷ್ಠಾನದ 2026ರ ಸಾಮಾನ್ಯ ಸಭೆ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸುಮಾರು 400 ಮಂದಿ ಭಾಗವಹಿಸುತ್ತಿದ್ದಾರೆ.

ತಮ್ಮ ಭಾಷಣದಲ್ಲಿ ಜಗದ್ಗುರುಗಳು, ಯುದ್ಧ, ಧ್ರುವೀಕರಣ ಹಾಗೂ ಸಾಮಾಜಿಕ ವಿಭಜನೆಗಳಂತಹ ಇಂದಿನ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಪ್ರತಿಕ್ರಿಯಿಸಲು ಕಥೋಲಿಕರು ಧರ್ಮ ಸಭೆಯ ಸಾಮಾಜಿಕ ಬೋಧನೆಯಿಂದ ಮಾರ್ಗದರ್ಶನ ಪಡೆಯಬೇಕೆಂದು ಕರೆ ನೀಡಿದರು.

ಪ್ರತಿಷ್ಠಾನದ ವಾರ್ಷಿಕ ಸಭೆಯು ತಮ್ಮ ಇತ್ತೀಚಿನ ಪರಿಪತ್ರಿಕೆ "ಮ್ಯಾಗ್ನಿಫಿಕಾ ಹ್ಯುಮಾನಿಟಾಸ್" ಪ್ರಕಟವಾದ ಸಂದರ್ಭದೊಂದಿಗೆ ಹೊಂದಿಕೆಯಾಗಿರುವುದನ್ನು ಅವರು ಉಲ್ಲೇಖಿಸಿದರು.

ದುರ್ಬಲತೆಗಳ ನಡುವೆಯೂ ಹೊಸ ಭರವಸೆಯು ಉದಯಿಸುತ್ತದೆ, ಎಂದು ಅವರು ಹೇಳಿದರು. ವಿಭಜನೆಗಳು ಹೆಚ್ಚಾಗುತ್ತಿರುವಂತೆ ಕಂಡರೂ, ನಮ್ಮೆಲ್ಲರನ್ನು ನಿಸ್ಸಂದೇಹವಾಗಿ ಒಂದಾಗಿಸುವ ಒಂದು ಸಾಮಾನ್ಯ ಅಂಶ ಸ್ಪಷ್ಟವಾಗುತ್ತದೆ ಅದು ನಮ್ಮ ಹಂಚಿಕೊಂಡ ಮಾನವೀಯತೆ.”

ಜಗದ್ಗುರು ಲಿಯೋರವರ ಪ್ರಕಾರ, ಸಂಕಷ್ಟ ಮತ್ತು ಪ್ರತಿಕೂಲತೆಯ ಕ್ಷಣಗಳು ಮಾನವನನ್ನು ಪೀಳಿಗೆಗಳಿಂದಲೂ ಹೃದಯಗಳನ್ನು ಕಾಡಿರುವ ಮೂಲಭೂತ ಪ್ರಶ್ನೆಗಳತ್ತ ಮರಳುವಂತೆ ಮಾಡುತ್ತವೆ.

“ನಾವು ಎಲ್ಲಿಗೆ ಸಾಗುತ್ತಿದ್ದೇವೆ? ಯಾವ ಗುರಿಯತ್ತ ನಮ್ಮನ್ನು ನಾವು ಮುನ್ನಡೆಸಲು ಬಯಸುತ್ತೇವೆ? ಒಂದು ಜನಾಂಗವಾಗಿ ಮತ್ತು ಮಾನವ ಸಮುದಾಯವಾಗಿ ನಾವು ಯಾವ ದಿಕ್ಕನ್ನು ಆರಿಸಿಕೊಳ್ಳಬೇಕು?”

ಈ ಪ್ರಶ್ನೆಗಳು ಸತ್ಯದ ಹುಡುಕಾಟವನ್ನು ವ್ಯಕ್ತಪಡಿಸುತ್ತವೆ ಮತ್ತು ದೇವರು ಹಾಗೂ ಜೀವನದ ಅರ್ಥಕ್ಕಾಗಿ ಇರುವ ನಮ್ಮ ಹಂಬಲವನ್ನು ಜಾಗೃತಗೊಳಿಸುತ್ತವೆ ಎಂದು ಅವರು ಹೇಳಿದರು.

ಇವು ಮಾನವ ವ್ಯಕ್ತಿಯ ಅತ್ಯಂತ ಆಳವಾದ ಆಯಾಮಗಳಾದ “ದೇವರು ನೀಡಿರುವ ವಿವೇಕ ಮತ್ತು ಸ್ವಾತಂತ್ರ್ಯದ ವರಗಳನ್ನು” ಸೂಚಿಸುತ್ತವೆ. ಈ ವರಗಳ ಮೂಲಕ ಪುರುಷರು ಮತ್ತು ಮಹಿಳೆಯರು ಸತ್ಯವನ್ನು ಅರಿತು, ಒಳ್ಳೆಯದನ್ನು ಆಯ್ಕೆ ಮಾಡಬಲ್ಲರು ಎಂದು ಅವರು ವಿವರಿಸಿದರು.

ನಿಜವಾದ ಸ್ವಾತಂತ್ರ್ಯದ ಅರ್ಥ

ಸ್ವಾತಂತ್ರ್ಯದ ಕುರಿತು ಚಿಂತನೆ ನಡೆಸಿದ ಜಗದ್ಗುರು ಲಿಯೋರವರು, ಅದನ್ನು ಕೇವಲ “ತಾನು ಬಯಸಿದ್ದನ್ನು ಮಾಡುವ ಸಾಮರ್ಥ್ಯ” ಎಂದು ಪರಿಗಣಿಸುವ ಪ್ರವೃತ್ತಿಯ ವಿರುದ್ಧ ಎಚ್ಚರಿಕೆ ನೀಡಿದರು.

ನಿಜವಾದ ಸ್ವಾತಂತ್ರ್ಯವು ತನ್ನನ್ನು ಇತರರಿಗಾಗಿ ಅರ್ಪಿಸಿಕೊಳ್ಳುವಾಗ ಮತ್ತು ಇತರರ ಕಡೆಗೆ ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವಾಗ ಮಾತ್ರ ಪೂರ್ಣತೆಯನ್ನು ಕಂಡುಕೊಳ್ಳುತ್ತದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯವು ವ್ಯಕ್ತಿವಾದದ ರೀತಿಯಲ್ಲಿ ಸಂಪೂರ್ಣ ಸ್ವಯಂಪ್ರಧಾನವಾಗಿಬಿಟ್ಟಾಗ, ಅದು ತನ್ನ ಮೂಲ ಅರ್ಥ ಮತ್ತು ಘನತೆಯನ್ನು ಕಳೆದುಕೊಳ್ಳುತ್ತದೆ ಎಂದು ಅವರು ಸೇರಿಸಿದರು.

ಸಂತ ಅಗಸ್ಟಿನ್ ರವರ ಎರಡು ನಗರಗಳು

ಈ ವಿಚಾರವನ್ನು ಜಗದ್ಗುರು ಲಿಯೋರವರು ಸಂತ ಅಗಸ್ಟಿನ್ ರವರು ವಿವರಿಸಿದ ಎರಡು ನಗರಗಳ ಪರಿಕಲ್ಪನೆಯೊಂದಿಗೆ ಸಂಪರ್ಕಿಸಿದರು. ಅಹಂಕಾರ ಮತ್ತು ಸ್ವಪ್ರೇಮದ ಮೇಲೆ ನಿರ್ಮಿತವಾದ “ಮಾನವನ ನಗರ” ಹಾಗೂ ದೇವರ ಪ್ರೀತಿ ಮತ್ತು ನಿಸ್ವಾರ್ಥತೆಯ ಮೇಲೆ ನಿರ್ಮಿತವಾದ “ದೇವರ ನಗರ.”ಎಂದು ಹೇಳಿದರು.

ದೇವರ ನಗರವು ಸಂಬಂಧಗಳ ಅಡಿಪಾಯದ ಮೇಲೆ ನಿಂತಿದ್ದು, ನಿಜವಾದ “ಪ್ರೀತಿಯ ನಾಗರಿಕತೆಯನ್ನು” ನಿರ್ಮಿಸಲು ಸಾಧ್ಯವಾಗಿಸುತ್ತದೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ಬಿಕ್ಕಟ್ಟು ಮತ್ತು ಮಾನವಶಾಸ್ತ್ರೀಯ ಸಂಕಟ

ಇಂದಿನ ಪ್ರಜಾಪ್ರಭುತ್ವಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, ಅದರ ನಿಜವಾದ ಕಾರಣವು ಮಾನವಶಾಸ್ತ್ರೀಯ ಸಂಕಟ ಎಂದು ಹೇಳಿದರು. ಮಾನವಕುಲವು ದೇವರನ್ನು ಮರೆತಿರುವುದರಿಂದ, ಪರಸ್ಪರ ಪ್ರೀತಿಸುವುದನ್ನು ಹೇಗೆ ಎಂಬುದನ್ನೂ ಮರೆತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆದಾಗ್ಯೂ, ಕ್ರೈಸ್ತರು ನಿರಾಶೆಗೆ ಶರಣಾಗಬಾರದು ಎಂದು ಅವರು ಒತ್ತಿಹೇಳಿದರು. ಬದಲಾಗಿ, ದೈನಂದಿನ ಜೀವನದಲ್ಲಿ ದೃಢವಾದ ನಿಷ್ಠೆಯಿಂದ ತಮ್ಮ ಪಾಲಿನ ಕೊಡುಗೆಯನ್ನು ನೀಡಲು ಅವರು ಕರೆಯಲ್ಪಟ್ಟಿದ್ದಾರೆ ಎಂದು ಹೇಳಿದರು.

ಸತ್ಯದ ಮೇಲೆ ಆಧಾರಿತ ಸಂವಾದ

ತಮ್ಮ ಭಾಷಣದ ಕೊನೆಯಲ್ಲಿ, ಪ್ರೀತಿಯ ಮೇಲೆ ನಿರ್ಮಿತವಾದ ನಾಗರಿಕತೆಯನ್ನು ರೂಪಿಸಲು ಸತ್ಯದ ಮೇಲೆ ಆಧಾರಿತ ಸಂವಾದ ಅತ್ಯಗತ್ಯ ಎಂದು ಜಗದ್ಗುರು ಲಿಯೋರವರು ಸೆಂಟೆಸಿಮಸ್ ಅನ್ನಸ್ ಪ್ರೊ ಪೊಂಟಿಫಿಸೆ ಪ್ರತಿಷ್ಠಾನಕ್ಕೆ ನೆನಪಿಸಿದರು.

ಪ್ರತಿಯೊಬ್ಬ ವ್ಯಕ್ತಿಯ ಸಹಜ ಘನತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದರಿಂದ, ಸ್ವಾರ್ಥ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಮೀರಿ ಸಾಮಾನ್ಯ ಹಿತದತ್ತ ಸಾಗಲು ಸಾಧ್ಯವಾಗುತ್ತದೆ, ಎಂದು ಅವರು ಹೇಳಿದರು.

ಜಗದ್ಗುರುಗಳ ಪ್ರಕಾರ, ನಮ್ಮೆಲ್ಲರ ಸಾಮಾನ್ಯ ಮಾನವೀಯತೆಯ ಅರಿವು ಹಾಗೂ ಪ್ರತಿಯೊಬ್ಬರ ಘನತೆಯ ಗೌರವವೇ ವಿಭಜನೆ, ಧ್ರುವೀಕರಣ ಮತ್ತು ಯುದ್ಧಗಳಿಂದ ಗಾಯಗೊಂಡಿರುವ ಜಗತ್ತಿನಲ್ಲಿ ಶಾಂತಿ ಮತ್ತು ಸಹೋದರತ್ವದ ಸಂಸ್ಕೃತಿಯನ್ನು ಬೆಳೆಸುವ ದೃಢವಾದ ಅಡಿಪಾಯವಾಗಿದೆ.

30 ಮೇ 2026, 15:04