ಜಗದ್ಗುರುಗಳು: ದೇವರು ವಿಶ್ವ ನಾಯಕರನ್ನು ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿಯತ್ತ ಮುನ್ನಡೆಸಲಿ.
ವ್ಯಾಟಿಕನ್ ವರದಿ
ಶನಿವಾರ ಸಂಜೆ, ವ್ಯಾಟಿಕನ್ ಉದ್ಯಾನವನಗಳಲ್ಲಿರುವ ಲೂರ್ಡ್ಸ್ ಗುಹಾಲಯದಲ್ಲಿ, ಜಗದ್ಗುರು XIVನೇ ಲಿಯೋರವರು ಜಪಮಾಲೆ ಪ್ರಾರ್ಥನೆಗೆ ನೇತೃತ್ವ ವಹಿಸಿ, ಧನ್ಯ ಕನ್ಯಾ ಮರಿಯಮ್ಮನ ಮಧ್ಯಸ್ಥಿಕೆಯನ್ನು ಬೇಡಿಕೊಂಡರು. ಪ್ರಭು ಮಾತ್ರ ನೀಡಬಲ್ಲ “ಶಾಂತಿಯ ವರವನ್ನು” ನಮಗೆ ದೊರಕಿಸಿಕೊಡಬೇಕೆಂದು ಅವರು ಮರಿಯಮ್ಮನನ್ನು ಪ್ರಾರ್ಥಿಸಿದರು. ಈ ಪ್ರಾರ್ಥನೆಯಲ್ಲಿ ವ್ಯಾಟಿಕನ್‌ನಲ್ಲಿ ಸುಮಾರು 2,000 ಮಂದಿ ಭಾಗವಹಿಸಿದ್ದರೆ, ವಿಶ್ವದಾದ್ಯಂತ ಇರುವ 200 ಮರಿಯಮ್ಮನವರ ತೀರ್ಥಕ್ಷೇತ್ರಗಳಿಂದ ಇನ್ನೂ ಸುಮಾರು 1,00,000 ಭಕ್ತರು ಆನ್‌ಲೈನ್ ಮೂಲಕ ಪಾಲ್ಗೊಂಡರು.
ಇಂದು, ಮೇ ತಿಂಗಳ ಕೊನೆಯ ದಿನದಂದು, ಸಂತ ಪೇತ್ರರ ಚೌಕದಲ್ಲಿ ನಡೆದ ತ್ರಿಕಾಲ ಪ್ರಾರ್ಥನೆಯ ವೇಳೆ ಜಗದ್ಗುರುಗಳು ಮತ್ತೊಮ್ಮೆ ಶಾಂತಿಯ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲಿ 20,000ಕ್ಕೂ ಹೆಚ್ಚು ಜನರು ಸೇರಿದ್ದರು. ಅವರು ಮತ್ತೊಮ್ಮೆ ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದರು.
“ಮೇ ತಿಂಗಳಿಡೀ ಇಡೀ ಧರ್ಮ ಸಭೆಯ ಶಾಂತಿಗಾಗಿ ಏಕಮನಸ್ಸಿನಿಂದ ಪ್ರಾರ್ಥಿಸಿದೆ. ವಿಶೇಷವಾಗಿ ಜಪಮಾಲೆಯ ಮೂಲಕ, ತುಂಡಾಗದ ಸರಪಳಿಯಂತೆ ವಿಶ್ವಾಸಿಗಳು ಯುದ್ಧದಿಂದ ನಾಶಗೊಂಡಿರುವ ಜನರನ್ನು ಕನ್ಯಾ ಮರಿಯಮ್ಮನ ಮಧ್ಯಸ್ಥಿಕೆಗೆ ಒಪ್ಪಿಸಿದ್ದಾರೆ. ಅಧಿಕಾರವನ್ನು ಹೊಂದಿರುವವರ ಮನಸ್ಸುಗಳನ್ನು ದೈವಿಕ ಜ್ಞಾನವು ಬೆಳಗಿಸಲಿ ಹಾಗೂ ಅವರ ನಿರ್ಧಾರಗಳು ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ನಿಷ್ಠಾವಂತ ಅನ್ವೇಷಣೆಯತ್ತ ದಾರಿತೋರಿಸಲಿ” ಎಂದು ಅವರು ಪ್ರಾರ್ಥಿಸಿದರು.
ಆರೈಕೆಯ ಸಂಸ್ಕೃತಿಯನ್ನು ಉತ್ತೇಜಿಸುವ ‘ಪರಿಹಾರ ದಿನ’
ಇಟಲಿಯಲ್ಲಿ ಇಂದು 25ನೇ “ಪರಿಹಾರ ದಿನ” ಆಚರಿಸಲಾಗುತ್ತಿದೆ ಎಂಬುದನ್ನೂ ಜಗದ್ಗುರು XIVನೇ ಲಿಯೋರವರು ಉಲ್ಲೇಖಿಸಿದರು. ಈ ವರ್ಷದ ಧ್ಯೇಯವಾಕ್ಯ: “ನಾನು ಕಾಳಜಿ ವಹಿಸುತ್ತೇನೆ”.
“ಅನಾರೋಗ್ಯದಿಂದ ಬಳಲುತ್ತಿರುವವರಿಗೂ ಹಾಗೂ ಅವರನ್ನು ಆರೈಕೆ ಮಾಡುವ ಎಲ್ಲರಿಗೂ ನಾನು ಹತ್ತಿರವಾಗಿದ್ದೇನೆ. ಸಾನ್ನಿಧ್ಯ ಮತ್ತು ಕಾಳಜಿಯ ಸಂಸ್ಕೃತಿಯನ್ನು ಹರಡಲು ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ಅವರನ್ನು ಪ್ರೋತ್ಸಾಹಿಸುತ್ತೇನೆ” ಎಂದು ಅವರು ಹೇಳಿದರು.
ಈ ಉಪಕ್ರಮವು ದೈಹಿಕ ಮತ್ತು ಮಾನಸಿಕ ನೋವುಗಳನ್ನು ನಿವಾರಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ವಿಶೇಷವಾಗಿ ಉಪಶಾಮಕ ಆರೈಕೆ, ನೋವು ನಿರ್ವಹಣೆ, ಆರೋಗ್ಯ ಸೇವೆಯನ್ನು ಹೆಚ್ಚು ಮಾನವೀಯಗೊಳಿಸುವುದು ಹಾಗೂ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡುವ ಸ್ವಯಂಸೇವಕರ ತರಬೇತಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.
ಪೋಲೆಂಡ್‌ನ ಯಾತ್ರಿಕರಿಗೆ ಶುಭಾಶಯ
ತ್ರಿಕಾಲ ಪ್ರಾರ್ಥನೆಯ ನಂತರ ವಿವಿಧ ಯಾತ್ರಿಕರ ಗುಂಪುಗಳನ್ನು ಅಭಿನಂದಿಸಿದ ಜಗದ್ಗುರುಗಳು, ಪೋಲೆಂಡ್‌ನ ಪಿಯೆಕಾರಿ ಮರಿಯಮ್ಮನ ತೀರ್ಥಕ್ಷೇತ್ರಕ್ಕೆ ವಾರ್ಷಿಕ ಯಾತ್ರೆಯಲ್ಲಿ ಭಾಗವಹಿಸಿದ್ದವರನ್ನೂ ವಿಶೇಷವಾಗಿ ಉದ್ದೇಶಿಸಿ ಮಾತನಾಡಿದರು. ಅಲ್ಲಿ ಮರಿಯಮ್ಮನನ್ನು “ಸಾಮಾಜಿಕ ನ್ಯಾಯದ ತಾಯಿ” ಎಂದು ಗೌರವಿಸಲಾಗುತ್ತದೆ.
ಹದಿನೇಳನೇ ಶತಮಾನದಿಂದಲೇ ಈ ತೀರ್ಥಕ್ಷೇತ್ರವು ಮರಿಯಮ್ಮನವರ ಭಕ್ತಿಯ ಪ್ರಮುಖ ಕೇಂದ್ರವಾಗಿದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಪ್ರತಿ ವರ್ಷ ಮೇ ತಿಂಗಳಲ್ಲಿ ಬಾಲಕರು ಮತ್ತು ಪುರುಷರಿಗಾಗಿ ಬೃಹತ್ ಯಾತ್ರೆಯೊಂದು ನಡೆಯುತ್ತದೆ. ಇದರಲ್ಲಿ ಹತ್ತಾರು ಸಾವಿರ ಮಂದಿ ಭಾಗವಹಿಸುತ್ತಾರೆ. ಅದೇ ರೀತಿಯ ಯಾತ್ರೆಯು ಮಹಿಳೆಯರು ಮತ್ತು ಬಾಲಕಿಯರಿಗಾಗಿ ಆಗಸ್ಟ್ ತಿಂಗಳಲ್ಲಿ ಆಯೋಜಿಸಲಾಗುತ್ತದೆ.
