ಹುಡುಕಿ

ಸೇಂಟ್ ಪ್ಯಾಟ್ರಿಕ್ ಕ್ಯಾಥೆಡ್ರಲ್‌ನಲ್ಲಿ ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ರೊನಾಲ್ಡ್ ಹಿಕ್ಸ್. ಸೇಂಟ್ ಪ್ಯಾಟ್ರಿಕ್ ಕ್ಯಾಥೆಡ್ರಲ್‌ನಲ್ಲಿ ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ರೊನಾಲ್ಡ್ ಹಿಕ್ಸ್.  (AFP or licensors)

ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ಹಿಕ್ಸ್: 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್' ಭವಿಷ್ಯದ ತಲೆಮಾರುಗಳನ್ನು ರೂಪಿಸಲಿದೆ.

ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ರೋನಾಲ್ಡ್ ಹಿಕ್ಸ್ ಅವರು ಜಗದ್ಗುರು XIVನೇ ಲಿಯೋರವರು ಮೊದಲ ಎನ್ಸಿಕ್ಲಿಕಲ್ 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್' ಅನ್ನು ಮುಂದಿನ ತಲೆಮಾರುಗಳಿಗೆ ಅತ್ಯಾವಶ್ಯಕವಾದ ದಸ್ತಾವೇಜು ಎಂದು ಕರೆದಿದ್ದಾರೆ. ವಿಶೇಷವಾಗಿ ಉದ್ಯೋಗ ಕ್ಷೇತ್ರದ ಪರಿವರ್ತನಾತ್ಮಕ ಸ್ವಭಾವದ ಕುರಿತು ಜಗದ್ಗುರು ಲಿಯೋರವರು ಸರಿಯಾದ ವಿಷಯಗಳನ್ನು ಮುಂದಿಟ್ಟಿದ್ದಾರೆ ಎಂದು ಅವರು ಒತ್ತಿಹೇಳಿದರು. ಏಕೆಂದರೆ ಅವರ ಮಹಾಧರ್ಮಪ್ರಾಂತ್ಯದ ಯುವಕರು, “ಇನ್ನೂ 10 ವರ್ಷಗಳಲ್ಲಿ ಅಸ್ತಿತ್ವದಲ್ಲೇ ಇರದ ವೃತ್ತಿಗಾಗಿ ನಾನೇನು ಈಗ ಅಧ್ಯಯನ ಮಾಡುತ್ತಿದ್ದೀನೆಯೇ?” ಎಂದು ಪ್ರಶ್ನಿಸುತ್ತಿದ್ದಾ

ವ್ಯಾಟಿಕನ್ ವರದಿ

ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ರೋನಾಲ್ಡ್ ಹಿಕ್ಸ್ ಅವರು, ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸಿಕ್ಲಿಕಲ್ 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್' ಕುರಿತು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಈ ದಸ್ತಾವೇಜು ಇಂದಿನ ಜಗತ್ತಿಗೆ ಅತ್ಯಂತ ಸಮಯೋಚಿತ ಹಾಗೂ ಅಗತ್ಯವಾದ ಸಂದೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಈಗ ನಮ್ಮ ಜೀವನದ ಶಾಶ್ವತ ಭಾಗವಾಗಿದ್ದು, ಅದರ ಬಗ್ಗೆ ಚರ್ಚೆ ಮತ್ತು ನೈತಿಕ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಅವರು ಒತ್ತಿಹೇಳಿದರು.

ಜಗದ್ಗುರು XIVನೇ ಲಿಯೋರವರು ತಮ್ಮ  ಸೇವೆಯ ಆರಂಭದಲ್ಲಿಯೇ ಎಐ ಕುರಿತು ಮಾತನಾಡಲು ಮುಂದಾಗಿರುವುದು ಧೈರ್ಯಶಾಲಿ ಹಾಗೂ ದೂರದೃಷ್ಟಿಯ ಹೆಜ್ಜೆಯಾಗಿದೆ ಎಂದು ಆರ್ಚ್‌ಬಿಷಪ್ ಪ್ರಶಂಸಿಸಿದರು. “ಧಮ೯ ಸಭೆಯ  ಜಗತ್ತಿನಿಂದ ದೂರ ಉಳಿಯುವುದಿಲ್ಲ, ಇಂದಿನ ನೈಜ ಸಮಸ್ಯೆಗಳೊಂದಿಗೆ ನೇರವಾಗಿ ಸಂವಾದ ನಡೆಸಲಿದೆ” ಎಂಬ ಸಂದೇಶವನ್ನು ಜಗದ್ಗುರುಗಳು ನೀಡಿದ್ದಾರೆ ಎಂದು ಅವರು ಹೇಳಿದರು. ಎಐ ಅನ್ನು ತಿರಸ್ಕರಿಸುವ ಬದಲು, ಅದು ಮಾನವ ಗೌರವ ಮತ್ತು ಸಾಮೂಹಿಕ ಹಿತಕ್ಕಾಗಿ ಹೇಗೆ ಬಳಸಬಹುದು ಎಂಬುದರ ಕುರಿತು ಸಂವಾದ ನಡೆಯಬೇಕು ಎಂದು ಜಗದ್ಗುರುಗಳು ಕರೆ ನೀಡಿದ್ದಾರೆ ಎಂದರು.

ನ್ಯೂಯಾರ್ಕ್‌ನಂತಹ ತಂತ್ರಜ್ಞಾನ ಮತ್ತು ವ್ಯಾಪಾರದ ಕೇಂದ್ರವಾಗಿರುವ ನಗರದಲ್ಲಿಯೂ ಈ ಎನ್ಸಿಕ್ಲಿಕಲ್ ಉತ್ತಮ ಸ್ವಾಗತ ಪಡೆದಿದೆ ಎಂದು ಹಿಕ್ಸ್ ವಿವರಿಸಿದರು. ಕೇವಲ ಕಥೋಲಿಕರು ಮಾತ್ರವಲ್ಲ, ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸದವರೂ ಸಹ ಈ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು. “ಎಐ ಅನ್ನು ಕೆಲವೇ ಜನರ ಲಾಭಕ್ಕಾಗಿ ಬಳಸಲಾಗುತ್ತದೆಯೇ, ಅಥವಾ ಮಾನವಕುಲದ ಹಿತಕ್ಕಾಗಿ ಬಳಸಲಾಗುತ್ತದೆಯೇ?” ಎಂಬ ಪ್ರಶ್ನೆಯನ್ನು ಸಮಾಜ ಈಗ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಅವರು ಹೇಳಿದರು.

ಈ ಎನ್ಸಿಕ್ಲಿಕಲ್‌ನಲ್ಲಿನ ಪ್ರಮುಖ ವಿಷಯವೆಂದರೆ “ಮಾನವನಾಗಿರುವುದು ಎಂದರೇನು?” ಎಂಬ ಪ್ರಶ್ನೆ ಎಂದು ಆರ್ಚ್‌ಬಿಷಪ್ ಅಭಿಪ್ರಾಯಪಟ್ಟರು. ತಂತ್ರಜ್ಞಾನ ದಿನೇದಿನೇ ಹೆಚ್ಚು ಅಭಿವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ, ಮಾನವ ಗೌರವ, ಸಂಬಂಧಗಳು ಮತ್ತು ದೇವರ ಪ್ರತಿರೂಪವನ್ನು ಪರಸ್ಪರರಲ್ಲಿ ಕಾಣುವ ಕ್ರೈಸ್ತ ಮೌಲ್ಯಗಳು ಅತ್ಯಂತ ಮುಖ್ಯವಾಗುತ್ತವೆ ಎಂದು ಅವರು ಹೇಳಿದರು. ಈ ಸಂದೇಶವು ಧರ್ಮ ಸಭೆಯ ಧರ್ಮೋಪದೇಶ ಹಾಗೂ ಧರ್ಮಾಧ್ಯಕ್ಷೀಯ ಸೇವೆಯ ಹೃದಯಭಾಗವಾಗಿದೆ ಎಂದು ಅವರು ವಿವರಿಸಿದರು.

ಯುವಜನರ ಆತಂಕಗಳನ್ನೂ ಅವರು ವಿಶೇಷವಾಗಿ ಉಲ್ಲೇಖಿಸಿದರು. “ನಾನು ಈಗ ಓದುತ್ತಿರುವ ವೃತ್ತಿ ಇನ್ನೂ ಹತ್ತು ವರ್ಷಗಳಲ್ಲಿ ಇರಬಹುದೇ?” ಎಂಬ ಪ್ರಶ್ನೆಯನ್ನು ಯುವಕರು ಕೇಳುತ್ತಿದ್ದಾರೆ ಎಂದು ಅವರು ಹೇಳಿದರು. ಎಐ ಉದ್ಯೋಗ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾದ ಕಾರಣ, ಯುವಜನರಿಗೆ ಮಾರ್ಗದರ್ಶನ ಮತ್ತು ಭರವಸೆ ಅಗತ್ಯವಾಗಿದೆ. ಈ ಎನ್ಸಿಕ್ಲಿಕಲ್ ಆ ಪ್ರಶ್ನೆಗಳಿಗೆ ಪ್ರಾಯೋಗಿಕ ದಾರಿದೀಪವನ್ನು ನೀಡುತ್ತದೆ ಎಂದು ಅವರು ನಂಬಿಕೆ ವ್ಯಕ್ತಪಡಿಸಿದರು.

ಕೊನೆಯಲ್ಲಿ, ಜಗದ್ಗುರು XIIIನೇ ಲಿಯೋರವರ ರೆರಮ್ ನೊವರಮ್ ಎನ್ಸಿಕ್ಲಿಕಲ್ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಕಾರ್ಮಿಕರ ಗೌರವವನ್ನು ರಕ್ಷಿಸಿದಂತೆ, ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಕೂಡ ಡಿಜಿಟಲ್ ಯುಗದಲ್ಲಿ ಮಾನವ ಗೌರವವನ್ನು ಕಾಪಾಡುವ ಮಹತ್ವದ ದಸ್ತಾವೇಜಾಗಲಿದೆ ಎಂದು ಆರ್ಚ್‌ಬಿಷಪ್ ಹಿಕ್ಸ್ ಅಭಿಪ್ರಾಯಪಟ್ಟರು. “ಎಐ ಇಲ್ಲಿಯೇ ಉಳಿಯಲಿದೆ, ಅದು ಜಗತ್ತನ್ನು ಬದಲಾಯಿಸಲಿದೆ. ಆದರೆ ಅದು ಮಾನವಕುಲದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕೆಂಬುದೇ ಮುಖ್ಯ” ಎಂದು ಅವರು ಹೇಳಿದರು.

29 ಮೇ 2026, 15:50