ಹುಡುಕಿ

ಜಗದ್ಗುರು XIVನೇ ಲಿಯೋರವರು ಐಎನ್ ಪಿಎಸ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿ ಮಾಡಿದರು. ಜಗದ್ಗುರು XIVನೇ ಲಿಯೋರವರು ಐಎನ್ ಪಿಎಸ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿ ಮಾಡಿದರು.  (@Vatican Media)

ಜಗದ್ಗುರಗಳು : ಸಾಮಾಜಿಕ ಭದ್ರತಾ ವ್ಯವಸ್ಥೆಗಳು ಆರ್ಥಿಕ ನ್ಯಾಯವನ್ನು ಉತ್ತೇಜಿಸಿ, ಉದ್ಯೋಗದ ಹಕ್ಕನ್ನು ಖಚಿತಪಡಿಸಬೇಕು

ಜಗದ್ಗುರು XIVನೇ ಲಿಯೋರವರು ಇಟಾಲಿಯ ರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆಯ ಪ್ರತಿನಿಧಿ ಮಂಡಳಿಯನ್ನು ಭೇಟಿ ಮಾಡಿ, ರಾಷ್ಟ್ರೀಯ ಕಲ್ಯಾಣ ವ್ಯವಸ್ಥೆಗಳು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸಿ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಒತ್ತಾಯಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಶುಕ್ರವಾರ ಇಟಲಿಯ ರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿ ಮಾಡಿ, ಈ ಸಂಸ್ಥೆಯು ದೇಶದ ಪಿಂಚಣಿ ವ್ಯವಸ್ಥೆಯಾಗಿ ಮಹತ್ವದ ಸಾಮಾಜಿಕ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಸಂಕಷ್ಟದಲ್ಲಿರುವ ದುರ್ಬಲ ಜನರ ಅಗತ್ಯಗಳನ್ನು ಪೂರೈಸಲು ಸಮನ್ಯಾಯವಾಗಿ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸುವುದರ ಮೂಲಕ ಈ ಸಂಸ್ಥೆ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದು ಅವರು ಪ್ರಶಂಸಿಸಿದರು.

ಈ ಜವಾಬ್ದಾರಿಯ ಮೂಲಕ, ಆರ್ಥಿಕ ಅಭಿವೃದ್ಧಿ ಮತ್ತು ಸಮಾಜದ ಏಕತೆಯನ್ನು ಒಟ್ಟುಗೂಡಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ಅವಕಾಶ ಸಂಸ್ಥೆಗೆ ದೊರೆಯುತ್ತದೆ ಎಂದು ಜಗದ್ಗುರುಗಳು ಹೇಳಿದರು. ಸಾರ್ವಜನಿಕ ಹಿತದ ಕಡೆಗೆ ನಿರ್ಧಾರಗಳನ್ನು ಮಾರ್ಗದರ್ಶನ ಮಾಡುವಲ್ಲಿ ಈ ಪಾತ್ರ ಮಹತ್ವದ್ದಾಗಿದೆ ಎಂದು ಅವರು ವಿವರಿಸಿದರು.

ಜಗದ್ಗುರುಗಳು ಜಗತ್ತಿನಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಲವರ ಕೈಗಳಲ್ಲಿ ಹೆಚ್ಚಿನ ಸಂಪತ್ತು ಕೇಂದ್ರೀಕೃತವಾಗಿರುವಾಗ, ಲಕ್ಷಾಂತರ ಜನರು ಅತಿದಾರಿದ್ರ್ಯದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಆಹಾರ, ಆಶ್ರಯ, ವೈದ್ಯಕೀಯ ಸೇವೆ, ಶಿಕ್ಷಣ, ವಿದ್ಯುತ್ ಮತ್ತು ಶುದ್ಧ ನೀರಿನಂತಹ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಅವರು ಉಲ್ಲೇಖಿಸಿದರು.

ಈ ಅಸಮಾನತೆ ಅನಿವಾರ್ಯವಲ್ಲ, ಅದನ್ನು ಸರಿಪಡಿಸಲು ನೈತಿಕತೆ ಮತ್ತು ಪ್ರಾಮಾಣಿಕತೆಯ ಅವಶ್ಯಕತೆ ಇದೆ ಎಂದು ಜಗದ್ಗುರುಗಳು ಹೇಳಿದರು. ಕಥೋಲಿಕ ಧರ್ಮ ಸಭೆ ಸದಾ ಕೆಲಸದ ಕ್ಷೇತ್ರದಲ್ಲಿಯೂ ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿಯೂ ಮಾನವರ ನೈಜ ಅಗತ್ಯಗಳನ್ನು ಕೇಂದ್ರದಲ್ಲಿಟ್ಟುಕೊಂಡಿದೆ ಎಂದು ಅವರು ನೆನಪಿಸಿದರು.

ಜಗದ್ಗುರು  XIIIನೇ ಲಿಯೋರವರಿಂದ ಆರಂಭವಾದ ಕಥೋಲಿಕ ಸಾಮಾಜಿಕ ಬೋಧನೆಯ ಪರಂಪರೆಯನ್ನು ಅವರು ಸ್ಮರಿಸಿದರು. ಕೆಲಸದ ಹಕ್ಕು, ಹಾಗೂ ಅನಾರೋಗ್ಯ, ಅಪಘಾತ ಅಥವಾ ವೃದ್ಧಾಪ್ಯ ಸಂದರ್ಭದಲ್ಲಿ ಸಹಾಯ ದೊರೆಯುವಂತಹ ಸಾಮಾಜಿಕ ಭದ್ರತಾ ವ್ಯವಸ್ಥೆಯ ಅಗತ್ಯವನ್ನು ಧರ್ಮ ಸಭೆ ನಿರಂತರವಾಗಿ ಒತ್ತಿಹೇಳಿದೆ ಎಂದು ಹೇಳಿದರು. ಆದರೆ, ಕಲ್ಯಾಣ ವ್ಯವಸ್ಥೆಯ ಮೇಲಿನ ಅವಲಂಬಿತ್ವದ ಬಗ್ಗೆ ಎಚ್ಚರಿಕೆಯನ್ನು ಕೂಡ ಹಿಂದಿನ ಜಗದ್ಗುರುಗಳು ನೀಡಿದ್ದನ್ನು ಅವರು ಉಲ್ಲೇಖಿಸಿದರು.

ಕೊನೆಗೆ, ಜಗದ್ಗುರು XIVನೇ ಲಿಯೋರವರು ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಸಂಭವಿಸಿರುವ ಬದಲಾವಣೆಗಳನ್ನು ಉಲ್ಲೇಖಿಸಿದರು ಗಿಗ್ ಆರ್ಥಿಕತೆ, ಜಾಗತೀಕರಣ ಮತ್ತು ಉದ್ಯೋಗದ ಅನಿಶ್ಚಿತತೆ. ಈ ಸವಾಲುಗಳ ನಡುವೆ, ಪ್ರತಿಯೊಬ್ಬ ಮಾನವನ ಗೌರವ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವ ರೀತಿಯಲ್ಲಿ ಕೆಲಸ ಮಾಡುವಂತೆ ಅವರು ಕರೆ ನೀಡಿದರು, ಹಾಗಾಗಿ ಯಾರೂ ಮಾನವೀಯ ಜೀವನ ನಡೆಸುವ ಅವಕಾಶದಿಂದ ವಂಚಿತರಾಗಬಾರದು ಎಂದು ಹೇಳಿದರು.

10 ಏಪ್ರಿಲ್ 2026, 18:59