ಹುಡುಕಿ

Pope Leo XIV visits Equatorial Guinea

ಜಗದ್ಗುರುಗಳು: ಗಂಭೀರ ಅಪರಾಧಗಳನ್ನು ಮಾಡಿದ ಬಳಿಕವೂ ಮಾನವ ಗೌರವ ಕಳೆದುಹೋಗುವುದಿಲ್ಲ.

ಜಗದ್ಗುರು XIVನೇ ಲಿಯೋರವರು ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಹಾಗೂ ವಿಶ್ವದಾದ್ಯಂತ ಮರಣದಂಡನೆ ರದ್ದುಪಡಿಸಲು ಹೋರಾಡುತ್ತಿರುವವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ಮಾನವ ಗೌರವವನ್ನು ಕಾಪಾಡುವ ಮಹತ್ವವನ್ನು ಒತ್ತಿಹೇಳುತ್ತಾರೆ.

ವ್ಯಾಟಿಕನ್ ವರದಿ

“ಬಹಳ ಗಂಭೀರ ಅಪರಾಧಗಳನ್ನು ಮಾಡಿದ ಬಳಿಕವೂ ವ್ಯಕ್ತಿಯ ಗೌರವ ಕಳೆದುಹೋಗುವುದಿಲ್ಲ” ಎಂದು ಜಗದ್ಗುರು ಲಿಯೋರವರು ಹೇಳಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನಗಳ ಡಿಪಾಲ್ ವಿಶ್ವವಿದ್ಯಾಲಯದಲ್ಲಿ ಇಲಿನಾಯ್ಸ್ ರಾಜ್ಯದಲ್ಲಿ ಮರಣದಂಡನೆ ರದ್ದುಪಡಿಸಿದ 15ನೇ ವಾರ್ಷಿಕೋತ್ಸವದ ಅಂಗವಾಗಿ ಏಪ್ರಿಲ್ 24 ಶುಕ್ರವಾರ ಬಿಡುಗಡೆ ಮಾಡಿದ ವೀಡಿಯೋ ಸಂದೇಶದಲ್ಲಿ ಅವರು ಈ ಮಾತುಗಳನ್ನು ಹೇಳಿದರು.

2011ರಲ್ಲಿ ತೆಗೆದುಕೊಳ್ಳಲಾದ ಈ ಐತಿಹಾಸಿಕ ನಿರ್ಧಾರವನ್ನು ಆಚರಿಸುತ್ತಿರುವವರೊಂದಿಗೆ ತಾವು ಕೂಡ ಸೇರಿಕೊಂಡಿರುವುದಾಗಿ ಅವರು ತಿಳಿಸಿ, “ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿಯೂ ಹಾಗೂ ವಿಶ್ವದಾದ್ಯಂತ ಮರಣದಂಡನೆ ರದ್ದುಪಡಿಸಲು ಹೋರಾಡುತ್ತಿರುವವರಿಗೆ ನನ್ನ ಬೆಂಬಲವಿದೆ” ಎಂದು ಹೇಳಿದರು.

“ನಿಮ್ಮ ಪ್ರಯತ್ನಗಳು ಪ್ರತಿಯೊಬ್ಬ ವ್ಯಕ್ತಿಯ ಗೌರವವನ್ನು ಇನ್ನಷ್ಟು ಗುರುತಿಸಲು ದಾರಿ ಮಾಡಿಕೊಡಲಿ ಹಾಗೂ ಇದೇ ನ್ಯಾಯಯುತ ಕಾರಣಕ್ಕಾಗಿ ಇತರರನ್ನೂ ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಅವರು ಒತ್ತಿಹೇಳಿದರು.

ಮರಣದಂಡನೆಯಿಲ್ಲದೇ ನ್ಯಾಯ ಸಾಧಿಸಬಹುದು

“ನಾಗರಿಕರನ್ನು ರಕ್ಷಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಸಂಪೂರ್ಣವಾಗಿ ಪುನರುತ್ಥಾನದ ಅವಕಾಶವನ್ನು ಕಳೆದುಹಾಕದ ಪರಿಣಾಮಕಾರಿ ಬಂಧನ ವ್ಯವಸ್ಥೆಗಳು ಅಭಿವೃದ್ಧಿಯಾಗಿವೆ ಹಾಗೂ ಅಭಿವೃದ್ಧಿಪಡಿಸಬಹುದು” ಎಂದು ಜಗದ್ಗುರುಗಳು ಹೇಳಿದರು.

ಈ ಕಾರಣಕ್ಕಾಗಿಯೇ ಜಗದ್ಗುರು ಫ್ರಾನ್ಸಿಸ್ ರವರು ಹಾಗೂ ನನ್ನ ಇತ್ತೀಚಿನ ಪೂರ್ವಾಧಿಕಾರಿಗಳು ಸಾಮೂಹಿಕ ಹಿತವನ್ನು ರಕ್ಷಿಸುವುದಕ್ಕೂ ಹಾಗೂ ನ್ಯಾಯದ ಅವಶ್ಯಕತೆಗಳನ್ನು ಪೂರೈಸುವುದಕ್ಕೂ ಮರಣದಂಡನೆಯ ಅವಶ್ಯಕತೆ ಇಲ್ಲ ಎಂದು ಪುನಃಪುನಃ ಒತ್ತಿಹೇಳಿದ್ದಾರೆ ಎಂದು ಅವರು ಮುಂದುವರಿಸಿದರು.

ಅವರು ಕಥೋಲಿಕ ಧರ್ಮ ಸಭೆಯ ಧರ್ಮೋಪದೇಶವನ್ನು ಉಲ್ಲೇಖಿಸಿ, “ಮರಣದಂಡನೆ ವ್ಯಕ್ತಿಯ ಅವಿಚ್ಛೇದ್ಯತೆ ಮತ್ತು ಗೌರವದ ಮೇಲೆ ದಾಳಿ ಮಾಡುವುದರಿಂದ ಅದು ಅಂಗೀಕಾರಾರ್ಹವಲ್ಲ” ಎಂದು ಧರ್ಮ ಸಭೆಯು ಬೋಧಿಸುತ್ತದೆ ಎಂದು ಹೇಳಿದರು.

ಜಗದ್ಗುರುಗಳು ಮಾನವ ಜೀವವನ್ನು ಗರ್ಭಧಾರಣೆಯಿಂದ ಸಹಜ ಮರಣದವರೆಗೆ ಕಾಪಾಡುವ ಅಗತ್ಯತೆಯ ಕುರಿತು ಧರ್ಮ ಸಭೆ ನೀಡುವ ಬೋಧನೆಯನ್ನು ಮತ್ತೆ ಒತ್ತಿಹೇಳಿದರು.

ಜೀವಿಸುವ ಹಕ್ಕು ಎಲ್ಲಾ ಮಾನವ ಹಕ್ಕುಗಳ ಮೂಲಾಧಾರವಾಗಿದೆ. ಆದ್ದರಿಂದ, ಮಾನವ ಜೀವನದ ಪವಿತ್ರತೆಯನ್ನು ಕಾಪಾಡುವ ಸಮಾಜವೇ ನಿಜವಾಗಿ ಅಭಿವೃದ್ಧಿಯಾಗುತ್ತದೆ ಮತ್ತು ಸಮೃದ್ಧಿಯಾಗುತ್ತದೆ ಎಂದು ಅವರು ದೃಢವಾಗಿ ಹೇಳಿದರು.

24 ಏಪ್ರಿಲ್ 2026, 21:23