ಜಗದ್ಗುರುಗಳು: ಯುದ್ಧದ ಭೀಕರ ಪರಿಣಾಮಗಳಿಂದ ನಾಗರಿಕರನ್ನು ರಕ್ಷಿಸುವುದು ನಮ್ಮ ನೈತಿಕ ಕರ್ತವ್ಯ
ವ್ಯಾಟಿಕನ್ ವರದಿ
“ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಅಚ್ಚೊತ್ತಲ್ಪಟ್ಟಿರುವ ಹಾಗೂ ಅಂತರರಾಷ್ಟ್ರೀಯ ಕಾನೂನಿನಲ್ಲಿ ಮಾನ್ಯತೆ ಪಡೆದ ಮಾನವೀಯತೆಯ ತತ್ತ್ವವು, ಯುದ್ಧದ ಭೀಕರ ಪರಿಣಾಮಗಳಿಂದ ನಾಗರಿಕರನ್ನು ರಕ್ಷಿಸುವ ನೈತಿಕ ಕರ್ತವ್ಯವನ್ನು ಒಳಗೊಂಡಿದೆ.”
ಈ ಮೂಲಭೂತ ಆಲೋಚನೆಯ ಆಧಾರದ ಮೇಲೆ, ಏಪ್ರಿಲ್ 12ರ ಇಂದು ಬೆಳಿಗ್ಗೆ, ರೆಜಿನಾ ಚೇಲಿ ಪ್ರಾರ್ಥನೆಯ ನಂತರ ಸಂತ ಪೇತ್ರರ ಚೌಕದಲ್ಲಿ ಕೂಡಿಕೊಂಡಿದ್ದ ಭಕ್ತರನ್ನುದ್ದೇಶಿಸಿ ಜಗದ್ಗುರು XIVನೇ ಲಿಯೋರವರು ತಮ್ಮ ಮನವಿ ವ್ಯಕ್ತಪಡಿಸಿದರು.
ಇಂದು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಪಾಸ್ಖ ಹಬ್ಬ ಆಚರಿಸುವ ಪೂರ್ವ ಧರ್ಮ ಸಭೆಗಳಿಗೆ, ಪುನರುತ್ಥಾನಗೊಂಡ ಪ್ರಭುವಿನಲ್ಲಿ ನಂಬಿಕೆಯ ಏಕತೆಯಲ್ಲಿ, ಶಾಂತಿಯ ಶುಭಾಶಯಗಳನ್ನು ತಿಳಿಸಿದರು. ಅವರ ಪ್ರಾರ್ಥನೆಗಳು ಯುದ್ಧಗಳಿಂದ ಬಳಲುತ್ತಿರುವ ಎಲ್ಲರ ಮೇಲೂ, ವಿಶೇಷವಾಗಿ ಪ್ರಿಯ ಉಕ್ರೇನ್ ಜನರಿಗಾಗಿ ಕೇಂದ್ರೀಕೃತವಾಗಿದ್ದವು.
“ಕ್ರಿಸ್ತನ ಬೆಳಕು ದುಃಖಿತ ಹೃದಯಗಳಿಗೆ ಧೈರ್ಯ ನೀಡಲಿ ಮತ್ತು ಶಾಂತಿಯ ನಿರೀಕ್ಷೆಯನ್ನು ಬಲಪಡಿಸಲಿ. ಈ ಯುದ್ಧದ ದುರಂತದ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದ ಗಮನ ಕಡಿಮೆಯಾಗದಿರಲಿ!”
ಲೆಬನಾನ್‌ನಲ್ಲಿ ನೋವು, ಭಯ ಮತ್ತು ನಿರೀಕ್ಷೆ
ಯುರೋಪಿನಿಂದ ಮಧ್ಯಪ್ರಾಚ್ಯದತ್ತ ಮುಖಮಾಡಿ, ಲಿಯೋರವರು ಈ ದುಃಖ ಮತ್ತು ಭಯದ ದಿನಗಳನ್ನು,ಹಾಗೆಯೇ ದೇವರಲ್ಲಿ ಅಚಲವಾದ ನಿರೀಕ್ಷೆಯನ್ನು, ಅನುಭವಿಸುತ್ತಿರುವ ಪ್ರಿಯ ಲೆಬನಾನ್ ಜನರ ಬಗ್ಗೆ ಚಿಂತನೆ ಮಾಡಿದರು.
ಸಂಘರ್ಷದಲ್ಲಿರುವ ಪಕ್ಷಗಳು ತಕ್ಷಣವೇ ಯುದ್ಧ ವಿರಾಮ ಘೋಷಿಸಿ, ಶಾಂತಿಯುತ ಪರಿಹಾರವನ್ನು ತುರ್ತಾಗಿ ಹುಡುಕಬೇಕೆಂದು ನಾನು ಕರೆ ನೀಡುತ್ತೇನೆ ಎಂದರು.
ಸುಡಾನ್ ಜನರ ನೋವು ಎಷ್ಟೋ ದೊಡ್ಡದು
ಈ ರೀತಿಯಾಗಿ ವಿಶ್ವದ ಸಾಂಕೇತಿಕ ಪ್ರಯಾಣವನ್ನು ಮುಂದುವರಿಸಿದ ಜಗದ್ಗುರುಗಳು, ನಂತರ ಆಫ್ರಿಕಾದತ್ತ ದೃಷ್ಟಿಹರಿಸಿದರು. ಏಪ್ರಿಲ್ 15ರಂದು ಸುಡಾನಿನಲ್ಲಿ ರಕ್ತಪಾತದ ಸಂಘರ್ಷ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಳ್ಳುವುದನ್ನು ಅವರು ಸ್ಮರಿಸಿದರು.
ಈ ಅಮಾನುಷ ದುರಂತದ ನಿರಪರಾಧ ಬಲಿಗಳಾದ ಸುಡಾನ್ ಜನರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ.
ಜಗದ್ಗುರುಗಳು ಯುದ್ಧದಲ್ಲಿರುವ ಪಕ್ಷಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು, ಯಾವುದೇ ಪೂರ್ವಶರತ್ತುಗಳಿಲ್ಲದೆ, ಈ ಸಹೋದರಹತ್ಯೆಯ ಯುದ್ಧವನ್ನು ಸಾಧ್ಯವಾದಷ್ಟು ಬೇಗ ಅಂತ್ಯಗೊಳಿಸಲು ಉದ್ದೇಶಿಸಿದ ಪ್ರಾಮಾಣಿಕ ಸಂವಾದವನ್ನು ಪ್ರಾರಂಭಿಸಬೇಕು ಎಂದು ಪುನಃ ಮನವಿ ಮಾಡಿದರು.
ಪ್ರೇಷಿತರ ಪ್ರಯಾಣಕ್ಕಾಗಿ ಪ್ರಾರ್ಥನೆಗಳು
ಸಂತ ಪೇತ್ರರ ಚೌಕದಲ್ಲಿ ಹಾಜರಿದ್ದ ಯಾತ್ರಿಕರ ಗುಂಪುಗಳಿಗೆ ವಂದನೆ ಸಲ್ಲಿಸಿದ ನಂತರ, ಏಪ್ರಿಲ್ 13ರಂದು ಪ್ರಾರಂಭವಾಗುವ ತಮ್ಮ ಪ್ರೇಷಿತರ ಪ್ರಯಾಣಕ್ಕಾಗಿ ಪ್ರಾರ್ಥನೆಗಳಲ್ಲಿ ತಮಗೆ ಸಹಕಾರ ನೀಡುವಂತೆ ಜಗದ್ಗುರು ವಿನಂತಿಸಿದರು. ಈ ಪ್ರಯಾಣವು ನಾಲ್ಕು ಆಫ್ರಿಕಾ ದೇಶಗಳನ್ನು ಒಳಗೊಂಡಿರುತ್ತದೆ: ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವೇಟೋರಿಯಲ್ ಗಿನಿಯಾ ಎಂಬುದಾಗಿ ತಿಳಿಸಿದರು.
