ಕೈವ್‌ನಲ್ಲಿ ಚೆರ್ನೋಬಿಲ್ ಸಂತ್ರಸ್ತರ ಸ್ಮಾರಕದಲ್ಲಿ ಮಹಿಳೆಯೊಬ್ಬರು ಹೂವುಗಳನ್ನು ಮುಟ್ಟುತ್ತಿದ್ದಾರೆ ಕೈವ್‌ನಲ್ಲಿ ಚೆರ್ನೋಬಿಲ್ ಸಂತ್ರಸ್ತರ ಸ್ಮಾರಕದಲ್ಲಿ ಮಹಿಳೆಯೊಬ್ಬರು ಹೂವುಗಳನ್ನು ಮುಟ್ಟುತ್ತಿದ್ದಾರೆ  (AFP or licensors)

ಚೆರ್ನೊಬಿಲ್ ದುರಂತದ 40ನೇ ವಾರ್ಷಿಕೋತ್ಸವದಂದು ಜಗದ್ಗುರುಗಳು ಅಣುಶಕ್ತಿಯನ್ನು ಶಾಂತಿಯುತವಾಗಿ ಬಳಸುವಂತೆ ಕರೆ ನೀಡಿದರು.

ಜಗದ್ಗುರು XIVನೇ ಲಿಯೋರವರು ಚೆರ್ನೊಬಿಲ್ ಅಣು ದುರಂತದ 40ನೇ ವಾರ್ಷಿಕೋತ್ಸವವನ್ನು ಸ್ಮರಿಸಿ, ಅಣುಶಕ್ತಿಯ ಎಲ್ಲಾ ಬಳಕೆಗಳು ಜೀವನ ಮತ್ತು ಶಾಂತಿಗೆ ಸೇವೆ ಸಲ್ಲಿಸುವಂತಾಗಲು ವಿವೇಕ ಮತ್ತು ಜವಾಬ್ದಾರಿತನ ಅಗತ್ಯವಿದೆ ಎಂದು ಕರೆ ನೀಡಿದರು.

ವ್ಯಾಟಿಕನ್ ವರದಿ

ಭಾನುವಾರ ಸಂತ ಪೇತ್ರರ ಚೌಕದಲ್ಲಿ ರೆಜಿನಾ ಚೇಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಅಣುಶಕ್ತಿಯ ಜವಾಬ್ದಾರಿಯುತ ಬಳಕೆಗೆ ಕರೆ ನೀಡಿದರು.

ಚೆರ್ನೊಬಿಲ್ ಅಣು ದುರಂತದ 40ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅವರು ಈ ಮನವಿಯನ್ನು ಮಾಡಿದರು. ಈ ಘಟನೆ “ಮಾನವಕುಲದ ಮನಸ್ಸಿನ ಮೇಲೆ ಆಳವಾದ ಗುರುತು ಬಿಟ್ಟಿದೆ” ಎಂದು ಹೇಳಿದರು.

“ಈ ದುರಂತದ ಬಲಿಗಳನ್ನೂ ಮತ್ತು ಅದರ ಪರಿಣಾಮಗಳಿಂದ ಇನ್ನೂ ಬಳಲುತ್ತಿರುವ ಎಲ್ಲರನ್ನೂ ದೇವರ ಕರುಣೆಗೆ ನಾವು ಒಪ್ಪಿಸುತ್ತೇವೆ,” ಎಂದು ಅವರು ಹೇಳಿದರು.

1986ರ ಏಪ್ರಿಲ್ 26ರಂದು, ಯುಕ್ರೇನ್‌ನ ಕೀವ್‌ನಿಂದ ಸುಮಾರು 90 ಕಿಲೋಮೀಟರ್ ಉತ್ತರದಲ್ಲಿರುವ ಸೋವಿಯತ್ ನಿಯಂತ್ರಣದಲ್ಲಿದ್ದ ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರದಲ್ಲಿ ರಿಯಾಕ್ಟರ್ ಸ್ಫೋಟಗೊಂಡಿತು. ಇದರಿಂದ ತಕ್ಷಣವೇ 31 ಮಂದಿ ಸಾವನ್ನಪ್ಪಿದರು ಮತ್ತು ನಂತರದ ಕೆಲವು ವರ್ಷಗಳಲ್ಲಿ ಕಿರಣೋತ್ಸರ್ಗದ ಪರಿಣಾಮವಾಗಿ ಇನ್ನೂ ಸುಮಾರು 15,000 ಮಂದಿ ಮೃತಪಟ್ಟರು.

ತಮ್ಮ ಮನವಿಯಲ್ಲಿ, ಜಗದ್ಗುರು ಲಿಯೋರವರು ಹೆಚ್ಚು ಶಕ್ತಿಯುತ ತಂತ್ರಜ್ಞಾನಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು.

ಅಣುಶಕ್ತಿಯ ಬಳಕೆಯ ಕುರಿತು ವಿವೇಕಪೂರ್ಣ ಮತ್ತು ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಅವರು ಆಶಿಸಿದರು.

“ಎಲ್ಲಾ ನಿರ್ಧಾರಾತ್ಮಕ ಮಟ್ಟಗಳಲ್ಲಿ ವಿವೇಕ ಮತ್ತು ಜವಾಬ್ದಾರಿತನವು ಸದಾ ಮೇಲುಗೈ ಸಾಧಿಸಲಿ ಹೀಗಾಗಿ ಅಣುಶಕ್ತಿಯ ಪ್ರತಿಯೊಂದು ಬಳಕೆ ಜೀವನ ಮತ್ತು ಶಾಂತಿಗೆ ಸೇವೆ ಸಲ್ಲಿಸುವಂತಾಗಲಿ,” ಎಂದು ಜಗದ್ಗುರುಗಳು ಹೇಳಿದರು.

26 ಏಪ್ರಿಲ್ 2026, 16:50