ಹುಡುಕಿ

ಭಾನುವಾರ ಏಪ್ರಿಲ್ 26ರಂದು ಜಗದ್ಗುರು ಲಿಯೋರವರು 8 ಹೊಸ ಯಾಜಕರನ್ನು ಅಭಿಷೇಕಿಸಲಿದ್ದಾರೆ. ಭಾನುವಾರ ಏಪ್ರಿಲ್ 26ರಂದು ಜಗದ್ಗುರು ಲಿಯೋರವರು 8 ಹೊಸ ಯಾಜಕರನ್ನು ಅಭಿಷೇಕಿಸಲಿದ್ದಾರೆ.  (ANSA)

ಜಗದ್ಗುರು XIVನೇ ಲಿಯೋರವರು ಸಂತ ಪೆತ್ರರ ಬಾಸಿಲಿಕಾದಲ್ಲಿ 8 ಯಾಜಕರನ್ನು ಅಭಿಷೇಕಿಸಲು ಸಿದ್ಧರಾಗಿದ್ದಾರೆ.

ಏಪ್ರಿಲ್ 26 ಭಾನುವಾರ, ಇದು ವೃತ್ತಿಗಳಿಗಾಗಿ ವಿಶ್ವ ಪ್ರಾರ್ಥನಾ ದಿನವೂ ಆಗಿದ್ದು, ಆ ಜಗದ್ಗುರುಗಳು ಯಾಜಕರ ಅಭಿಷೇಕಗಳೊಂದಿಗೆ ಬಲಿಪೂಜೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇದರ ಎರಡು ದಿನಗಳ ಮೊದಲು, ಸೇಂಟ್ ಜಾನ್ ಲಾಟೆರನ್‌ನಲ್ಲಿ ಪ್ರಾರ್ಥನಾ ಜಾಗರಣೆ ನಡೆಯಲಿದೆ.

ವ್ಯಾಟಿಕನ್ ವರದಿ

ಏಪ್ರಿಲ್ 26 ಭಾನುವಾರದ ಬೆಳಿಗ್ಗೆ, ಸಂತ ಪೇತ್ರರ ಬಸಿಲಿಕಾಯಲ್ಲಿ ಜಗದ್ಗುರು XIVನೇ ಲಿಯೋರವರ ಅಧ್ಯಕ್ಷತೆಯಲ್ಲಿ ನಡೆಯುವ ಬಲಿ ಪೂಜೆಯಲ್ಲಿ ಎಂಟು ಮಂದಿ ಪುರುಷರು ಯಾಜಕತ್ವಕ್ಕೆ ಅಭಿಷೇಕಗೊಳ್ಳಲಿದ್ದಾರೆ.

ಭವಿಷ್ಯದ ಯಾಜಕರ ಕಥೆಗಳು

ಭವಿಷ್ಯದ ಯಾಜಕರಲ್ಲಿ  ಕ್ರಿಸ್ಟಿಯನ್ ಸ್ಗ್ವಾಝಿನೋ ಕೂಡ ಒಬ್ಬರು. ಅವರು ಸಾನ್ ಜಿಯೋವಾನ್ನಿ ದೆಲ್ಲಾ ಕ್ರೋಚೆ ಧರ್ಮ ಕೇಂದ್ರದ (ಸೇಂಟ್ ಜಾನ್ ಆಫ್ ದ ಕ್ರಾಸ್) ಧರ್ಮ ಕೇಂದ್ರದಲ್ಲಿ ಹಾಜರಾಗುತ್ತ ಬೆಳೆದವರು. ಅಲ್ಲದೆ ಫುಟ್‌ಬಾಲ್ ಆಟವನ್ನೂ ಆಸ್ವಾದಿಸುತ್ತಿದ್ದರು. “ಆ ಸಮಯದಲ್ಲೇ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ, “ನನಗೆ ಧರ್ಮ ಸಭೆಯಲ್ಲಿ ಇರೋದು, ಬಲಿಪೀಠದವನ್ನು ಮತ್ತು ಪರಮ ಪ್ರಸಾದ ಪೆಟ್ಟಿಗೆಯನ್ನು ನೋಡುವುದು ಇಷ್ಟವಾಗುತ್ತಿತ್ತು.” ತಮ್ಮ ವೃತ್ತಿಯಲ್ಲಿ ಸಂತೋಷವಾಗಿದ್ದ ಯಾಜಕರನ್ನು ನೋಡುವುದು ಅವರ ಆತ್ಮೀಯ ವಿವೇಚನೆಗೆ ಮಹತ್ವದ ಪ್ರಭಾವ ಬೀರಿತು.

32 ವರ್ಷದ ಜಿಯೋವಾನ್ನಿ ಎಮಾನುವೆಲೆ ನುಂಜಿಯಾಂಟೆ ಕೂಡ ಬಾಲ್ಯದಲ್ಲೇ ದೇವರಿಗೆ ಸಮೀಪವಾಗಿರಬೇಕೆಂಬ ಆಸೆಯನ್ನು ಹೊಂದಿದ್ದರು. “ನಾನು ಒಮ್ಮೆ ಯಾಜಕರಾಗಬೇಕೆಂದು ಯೋಚಿಸುತ್ತಿದ್ದೆ,” ಎಂದು ಅವರು ಹೇಳುತ್ತಾರೆ.

ಆದರೆ ರೋಮ್ನಲ್ಲಿ ಜನಿಸಿದ ಮತ್ತು ಇಂಗ್ಲೆಂಡ್‌ನಲ್ಲೂ ವಾಸಿಸಿದ್ದ ಈ ವ್ಯಕ್ತಿಯ ಜೀವನ ಬೇರೆ ದಾರಿಗಳತ್ತ ಸಾಗಿತು. 2016ರಲ್ಲಿ “ಉತ್ತಮ ಕುರಿಗಾಹಿಯ ಸುವಾರ್ತೆ” ಕೇಳುತ್ತಿದ್ದಾಗ, “ನಾನು ನಂಬಿಕೆಯ ಹೊಸ ಜೀವನಕ್ಕೆ ಇತರರನ್ನು ಜನ್ಮಕೊಡುವ ತಂದೆಯಾಗಬೇಕು” ಎಂಬ ಕರೆಯನ್ನು ಅವರು ಅನುಭವಿಸಿದರು.

ಇನ್ನೊಂದೆಡೆ, ಜೋಸ್ ಎಮ್ಯಾನುಯೆಲ್ ಎನ್‌ಲೇಮೆ ಸಬಾಟೆ ಮೊದಲು ಕಥೋಲಿಕನಾಗಿರಲಿಲ್ಲ. ಅವರ ಕುಟುಂಬ ಮೂಲತಃ ಕ್ಯಾಮರೂನ್ನದ್ದು; ಅವರು ಪ್ರೊಟೆಸ್ಟೆಂಟ್ ಆಗಿದ್ದರು. 11ನೇ ವಯಸ್ಸಿನಲ್ಲಿ ಅವರನ್ನು ತಮ್ಮ ಧರ್ಮಕ್ಷೇತ್ರದ ಮೈನರ್ ಸೆಮಿನರಿಯಲ್ಲಿ ಓದಲು ಕಳುಹಿಸಲಾಯಿತು.

ಅಲ್ಲಿಯೇ ಅವರು ಕಥೋಲಿಕ ಧರ್ಮವನ್ನು ಪರಿಚಯಿಸಿಕೊಂಡರು ಮತ್ತು 12ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದರು. “ನನಗೆ ಪರಿಚಯವಿಲ್ಲದಿದ್ದ ಆ ವಿಧಿಯ ಸಂದರ್ಭದಲ್ಲಿ,” ಎಂದು ಅವರು ನೆನಪಿಸುತ್ತಾರೆ, “ನಾನು ಯಾಜಕನಾಗಬೇಕೆಂಬ ನನ್ನ ಆಯ್ಕೆ ಬೆಳೆಯಲು ಪ್ರಾರಂಭಿಸಿತು.” ಈ ಕರೆಯು “ಕಾಸಾ ಬೆತಾನಿಯಾ” ಎಂಬ ಕುಟುಂಬ ವಸತಿಗೃಹದಲ್ಲಿ ಅವರ ಅನುಭವದ ಮೂಲಕ ಮತ್ತಷ್ಟು ಬೆಳೆಯಿತು ಅಲ್ಲಿ ಅಂಗವೈಕಲ್ಯ ಹೊಂದಿದವರ ಕಡೆ ಅವರ ಗಮನ ಹೆಚ್ಚಿತು ಇದು “ಒಂದು ವೃತ್ತಿಯೊಳಗಿನ ಮತ್ತೊಂದು ವೃತ್ತಿ” ಎಂಬಂತೆ. ಇಂದು, ಸಬಾಟೆ ಸಂಜ್ಞಾ ಭಾಷೆಯನ್ನು ಅಧ್ಯಯನ ಮಾಡುತ್ತಿದ್ದಾರೆ.

ಕೊಲಂಬಿಯಾನ ಯೋರ್ಡನ್ ಕಾಮಿಲೋ ಮೆಡಿನಾಗೆ ಅವರ ಯಾಜಕ ಮಾವ ಮಾದರಿಯಾಗಿದ್ದರು. ಬಾಲ್ಯದಿಂದಲೇ ಪರಮ ಪ್ರಸಾದ ಸ್ವೀಕರಿಸುವಾಗ ಇತರರ ಸಂತೋಷವನ್ನು ಅವರು ನೋಡುತ್ತಿದ್ದರು ಅದರಿಂದಲೇ ಈ ಸಂತೋಷದ ಮಾರ್ಗವನ್ನು ಆಯ್ಕೆ ಮಾಡಿದರು.

27 ವರ್ಷದ ಆಂಟೊನಿನೋ ಒರ್ಡಿನೆಯ ವೃತ್ತಿ ನಿಯೋಕೆಟೆಕುಮೆನಲ್ ವೇನಲ್ಲಿ ಬೆಳೆದಿತು. ಪ್ರಾಯಾ ಆ ಮಾರೆ ಎಂಬ ತಮ್ಮ ಊರಲ್ಲಿ ಅವರು ವೈದ್ಯಕೀಯವನ್ನು ಅಧ್ಯಯನ ಮಾಡುತ್ತಿದ್ದಾಗ, “ನನಗೆ ನಿಜವಾಗಿಯೂ ಇದು ಬೇಕೇ?” ಎಂಬ ಪ್ರಶ್ನೆ ಅವರ ಮನಸ್ಸಿಗೆ ಬಂತು.

“ನಾನು ಹೇಳಬಲ್ಲೆ,” ಎಂದು ಅವರು ಒಪ್ಪಿಕೊಳ್ಳುತ್ತಾರೆ, “ದೇವರು ನನ್ನ ಜೀವನವನ್ನು ನಾನು ಊಹಿಸಿದುದಕ್ಕಿಂತಲೂ ಹೆಚ್ಚು ಸುಂದರವಾಗಿಸಿದ್ದಾರೆ. ರೋಮಿನ ಧರ್ಮಕ್ಷೇತ್ರದಲ್ಲಾಗಲಿ, ಅನೇಕ ಧರ್ಮ ಕೇಂದ್ರಗಳಲ್ಲಿ ಆಗಲಿ, ಅಥವಾ ಲ್ಯಾಟಿನ್ ಅಮೆರಿಕಾ, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ನಡೆದ ಕೆಲವು ಮಿಷನ್‌ಗಳಲ್ಲಿ ಆಗಲಿ, ಧರ್ಮ ಸಭೆಗೆ ಸೇವೆ ಮಾಡುವುದು ಎಷ್ಟು ಸುಂದರವೆಂಬುದನ್ನು ನಾನು ಅರಿತುಕೊಂಡಿದ್ದೇನೆ” ಎಂದು ಹೇಳಿದರು.

ಡಾನಿಯೆಲೆ ರಿಸ್ಚಿಕಾ ಒಮ್ಮೆ “ಅಂತರರಾಷ್ಟ್ರೀಯ ಪಿಯಾನೋದಲ್ಲಿ ಹೊಸ ಭರವಸೆ” ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಫ್ರೋಸಿನೋನೇ ಕಾನ್ಸರ್ವೇಟರಿಯಲ್ಲಿ ಸಂಗೀತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, 24ನೇ ವಯಸ್ಸಿನಲ್ಲಿ ದೇವರು ತಮ್ಮನ್ನು ಬೇರೆ ಮಾರ್ಗಕ್ಕೆ ಕರೆಯುತ್ತಿರುವುದನ್ನು ಅವರು ಅನುಭವಿಸಿದರು. ಅವರು ಬ್ರೆಜಿಲ್, ಚೀನಾ ಮತ್ತು ಮೊಜಾಂಬಿಕ್ಗಳಲ್ಲಿ ಪ್ರದರ್ಶನ ನೀಡಿದ್ದರೂ, ಎಲ್ಲವನ್ನೂ ಬಿಟ್ಟು ಸೆಮಿನರಿಯಲ್ಲಿ ಸೇರಿದರು.

ಇಟಲಿಯ 30 ವರ್ಷದ ಜಿಯೋರ್ಜಿಯೋ ಲಾರೋಸಾ ತಮ್ಮ ವೃತ್ತಿಗೆ “ಸಾಮಾನ್ಯ ಜನರು ಮತ್ತು ಗುರುಗಳು” ಎಂಬ ಮಾದರಿಗಳಿಂದ ಪ್ರೇರಣೆ ಪಡೆದರು. ಅವರ ಸಾಕ್ಷಿಯಿಂದ ಅವರು “ಸುವಾರ್ತೆಯ ಶಕ್ತಿ”ಯನ್ನು ಕಂಡರು. ಪೆಸ್ಕಾರಾನ 35 ವರ್ಷದ ಗುಗ್ಲಿಯೆಲ್ಮೊ ಲಾಪೆನ್ನಾ ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. “2016ರಲ್ಲಿ ವಿಶ್ವ ಯುವ ದಿನ ಕ್ರಕೋವ್‌ನಲ್ಲಿ ನಡೆದಾಗ, ನಾನು ನನ್ನ ಕೆಲಸವನ್ನು ಬಿಟ್ಟು ಸೆಮಿನರಿಯಲ್ಲಿ ಸೇರಲು ನಿರ್ಧರಿಸಿದೆ.” ಈ ನಿರ್ಧಾರವು ಅವರ ಜೀವನವನ್ನು ಬದಲಿಸಿ ಸಮೃದ್ಧಗೊಳಿಸಿತು.

ವೃತ್ತಿಗಳಿಗಾಗಿ ಪ್ರಾರ್ಥನಾ ಜಾಗರಣೆ

ಏಪ್ರಿಲ್ 24 ಶುಕ್ರವಾರ ಸಂಜೆ, ಈ ಎಂಟು ಮಂದಿ ಪುರುಷರು ಸಂತ ಜಾನ್ ಲಾಟೆರನ್ ಬಸಿಲಿಕಾಯಲ್ಲಿ “ದೇವರ ವರದ ಒಳಗಿನ ಅನ್ವೇಷಣೆ” ಎಂಬ ವಿಷಯದೊಂದಿಗೆ ವೃತ್ತಿಗಳಿಗಾಗಿ ಪ್ರಾರ್ಥನಾ ಜಾಗರಣೆಗೆ ಸೇರುವರು. ಈ ವಿಷಯವು ಮಾರ್ಚ್‌ನಲ್ಲಿ ಪ್ರಕಟವಾದ, ಇದೇ ಶೀರ್ಷಿಕೆಯ ಜಗದ್ಗುರು XIVನೇ ಲಿಯೋರವರ ಸಂದೇಶವನ್ನು ಪ್ರತಿಧ್ವನಿಸುತ್ತದೆ. ಇದು ಪಾಸ್ಖ ಕಾಲದ ನಾಲ್ಕನೇ ಭಾನುವಾರವಾದ ಏಪ್ರಿಲ್ 26ರಂದು ಆಚರಿಸಲಾಗುವ 53ನೇ ವೃತ್ತಿಗಳಿಗಾಗಿ ವಿಶ್ವ ಪ್ರಾರ್ಥನಾ ದಿನಕ್ಕೆ ಸಂಬಂಧಿಸಿದೆ.

ಜಗದ್ಗುರುಗಳು ಸ್ವತಃ ಜಾಗರಣೆಯಲ್ಲಿ ಹಾಜರಾಗುವುದಿಲ್ಲದಿದ್ದರೂ, ಯಾಜಕರ ಸಮಿತಿಯಿಂದ ಪ್ರಕಟವಾದ ಸಂದೇಶದಲ್ಲಿ ಅವರು ಈ ಕಾರ್ಯಕ್ರಮಕ್ಕೆ ತಮ್ಮ ತಂದೆಯಂತಹ ಸಮೀಪತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಇದನ್ನು “ವೃತ್ತಿಗಳ ಸೇವೆಯಲ್ಲಿ ಏಕತೆ ಮತ್ತು ಧರ್ಮ ಸಭೆಯ ಸಹಕಾರದ ಜೀವಂತ ಚಿಹ್ನೆ” ಎಂದು ಪರಿಗಣಿಸುತ್ತಾರೆ.

ಈ ಪ್ರಾರ್ಥನಾ ಜಾಗರಣೆಯನ್ನು ಯಾಜಕರ ಸಮಿತಿ, ರೋಮ್ ಧರ್ಮಕ್ಷೇತ್ರ, ಪವಿತ್ರ ಜೀವನ ಸಂಸ್ಥೆಗಳ ಸಮಿತಿ ಮತ್ತು ಇಟಾಲಿಯನ್ ಬಿಷಪ್ ಸಮಿತಿಯ ರಾಷ್ಟ್ರೀಯ ವೃತ್ತಿ ಧರ್ಮಾಧ್ಯಕ್ಷೀಯ ಕಚೇರಿ ಸೇರಿ ಆಯೋಜಿಸಿವೆ.

ಕಾರ್ಡಿನಲ್ ಲಾಜ್ಜಾರೊ ಯು ಹ್ಯೂಂಗ್ ಸಿಕ್ ಮತ್ತು ಕಾರ್ಡಿನಲ್ ಬಾಲ್ಡೋ ರೈನಾ ಹಾಜರಾಗುವ ನಿರೀಕ್ಷೆಯಿದೆ. ಪೂಜಾಕ್ರಮವನ್ನು ರೋಮನ್ ಮೇಜರ್ ಸೆಮಿನರಿ ಮುನ್ನಡೆಸಲಿದೆ ಮತ್ತು ಧರ್ಮ ಪ್ರಾಂತ್ಯ ಗಾಯನ ಬಳಗವು ಮೊನ್ಸಿನಿಯರ್ ಮಾರ್ಕೋ ಫ್ರಿಸಿನಾರವರ ನಿರ್ದೇಶನದಲ್ಲಿ ಸಂಗೀತ ಸಹಕಾರ ನೀಡಲಿದೆ. ಈ ಜಾಗರಣೆಯಲ್ಲಿ ದೇವರ ವಾಕ್ಯವನ್ನು ಆಲಿಸುವ ಕ್ಷಣಗಳು, ಸಾಕ್ಷ್ಯಗಳು, ಪೂಜಾ ಚಿಹ್ನೆಗಳು ಮತ್ತು ಯುವಕರ ವಿಶೇಷ ಭಾಗವಹಿಸುವಿಕೆ ಒಳಗೊಂಡಿರಲಿದೆ.

22 ಏಪ್ರಿಲ್ 2026, 21:37