ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  

ಜಗದ್ಗುರು ಲಿಯೋರವರು: "ನೈತಿಕ ಕಾನೂನಿನಲ್ಲಿ ಬೇರು ಬಿಟ್ಟಿದ್ದಾಗ ಮಾತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ."

ಈ ವಾರ ನಡೆದ ಪಾಂಟಿಫಿಕಲ್ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್‌ನ ಪೂರ್ಣಸಭೆಯಲ್ಲಿ ಭಾಗವಹಿಸಿದವರಿಗೆ ನೀಡಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು “ನೈತಿಕ ಕಾನೂನಿನಲ್ಲಿ ಬೇರು ಬಿಟ್ಟಿದ್ದಾಗ ಮಾತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ” ಎಂದು ಒತ್ತಿಹೇಳುತ್ತಾರೆ. ಜೊತೆಗೆ, “ತಾಂತ್ರಿಕ, ಆರ್ಥಿಕ ಮತ್ತು ಸೈನಿಕ ಶಕ್ತಿಗಳು ಕೆಲವರ ಕೈಗಳಲ್ಲಿ ಕೇಂದ್ರೀಕೃತವಾಗುವುದರಿಂದ ಜನರ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಗೂ ಹಾಗೂ ಅಂತರರಾಷ್ಟ್ರೀಯ ಸೌಹಾರ್ದಕ್ಕೂ ಬೆದರಿಕೆ ಉಂಟಾಗುತ್ತದೆ” ಎಂದು ಅವರು ಎಚ್ಚರಿಸುತ್ತಾರೆ

ವ್ಯಾಟಿಕನ್ ವರದಿ

ಪ್ರಜಾಸತ್ತಾತ್ಮಕ ವ್ಯವಸ್ಥೆ ಆರೋಗ್ಯಕರವಾಗಿರುವುದು ನೈತಿಕ ಕಾನೂನಿನಲ್ಲಿ ಹಾಗೂ ಮಾನವ ವ್ಯಕ್ತಿಯ ನಿಜವಾದ ದೃಷ್ಟಿಯಲ್ಲಿ ಬೇರುಬಿಟ್ಟಿರುವಾಗ ಮಾತ್ರ. ಈ ಮೂಲಭೂತ ಆಧಾರವಿಲ್ಲದಿದ್ದರೆ, ಅದು ಬಹುಮತದ ದೌರ್ಜನ್ಯವಾಗಿಯೂ ಅಥವಾ ಆರ್ಥಿಕ ಮತ್ತು ತಾಂತ್ರಿಕ ಎಲಿಟ್‌ಗಳ ಪ್ರಭುತ್ವಕ್ಕೆ ಮುಖವಾಡವಾಗಿಯೂ ಪರಿಣಮಿಸುವ ಅಪಾಯವಿದೆ.

ಜಗದ್ಗುರು XIVನೇ ಲಿಯೋರವರು ಈ ಮಾತನ್ನು 2026 ಏಪ್ರಿಲ್ 14ರಿಂದ 16ರವರೆಗೆ ನಡೆದ ಪಾಂಟಿಫಿಕಲ್ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್‌ನ ಪೂರ್ಣಸಭೆಯಲ್ಲಿ ಭಾಗವಹಿಸಿದವರಿಗೆ ಕಳುಹಿಸಿದ ಪತ್ರದಲ್ಲಿ ವ್ಯಕ್ತಪಡಿಸಿದರು. “ಶಕ್ತಿಯ ಬಳಕೆಗಳು: ಮಾನ್ಯತೆ, ಪ್ರಜಾಸತ್ತಾತ್ಮಕತೆ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಯ ಮರುರಚನೆ” ಎಂಬ ವಿಷಯದ ಮೇಲೆ ನಡೆದ ಈ ಸಭೆಯನ್ನು, ರಾಷ್ಟ್ರಗಳ ಒಳಗೂ ಹಾಗೂ ರಾಷ್ಟ್ರಗಳ ನಡುವೆ ಶಾಂತಿಯನ್ನು ನಿರ್ಮಿಸಲು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಅತ್ಯಂತ ಸೂಕ್ತ ವಿಷಯವೆಂದು ಜಗದ್ಗುರುಗಳು ವಿವರಿಸಿದರು.

ಸಾಮಾನ್ಯ ಹಿತದತ್ತ ಶಕ್ತಿ ದಾರಿತೋರುವುದಾಗಿರಬೇಕು

ತಮ್ಮ ಪತ್ರದಲ್ಲಿ, ಜಗದ್ಗುರುಗಳು ಕಥೋಲಿಕ ಸಾಮಾಜಿಕ ಬೋಧನೆ ಶಕ್ತಿಯನ್ನು ಸ್ವತಃ ಅಂತಿಮ ಗುರಿಯಾಗಿ ನೋಡದೇ, ಸಾಮಾನ್ಯ ಹಿತದತ್ತ ದಾರಿತೋರುವ ಸಾಧನವೆಂದು ಪರಿಗಣಿಸುತ್ತದೆ ಎಂದು ಒತ್ತಿಹೇಳಿದರು. ಇದರಿಂದ, ಅಧಿಕಾರದ ಮಾನ್ಯತೆ ಆರ್ಥಿಕ ಅಥವಾ ತಾಂತ್ರಿಕ ಶಕ್ತಿಯ ಸಂಗ್ರಹಣೆಯ ಮೇಲೆ ಅಲ್ಲ, ಅದನ್ನು ಬಳಸುವ ಜ್ಞಾನ ಮತ್ತು ಸತ್ಪ್ರವೃತ್ತಿಗಳ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.

ಜ್ಞಾನವು ನಿಜವಾದ ಮತ್ತು ಒಳ್ಳೆಯದನ್ನು ಗುರುತಿಸಿ ಅದನ್ನು ಅನುಸರಿಸಲು ನಮಗೆ ಸಹಾಯ ಮಾಡುತ್ತದೆ ಅದು ಕೇವಲ ಕಾಣಿಸಿಕೊಳ್ಳುವ ಸುಳ್ಳು ಸೌಖ್ಯಗಳು ಅಥವಾ ಖ್ಯಾತಿಯ ಆಸೆಯನ್ನು ಮೀರಿ ಸಾಗಲು ನೆರವಾಗುತ್ತದೆ. ಜ್ಞಾನವು ನೈತಿಕ ಸತ್ಪ್ರವೃತ್ತಿಗಳಿಂದ ಬೇರ್ಪಟ್ಟದ್ದಲ್ಲ, ಅವು ಸಾಮಾನ್ಯ ಹಿತವನ್ನು ಉತ್ತೇಜಿಸುವ ನಮ್ಮ ಇಚ್ಛೆಯನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

“ನ್ಯಾಯ ಮತ್ತು ಧೈರ್ಯವು ಸರಿಯಾದ ನಿರ್ಧಾರಗಳಿಗೆ ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರಲು ಅತ್ಯವಶ್ಯಕ. ಹಾಗೆಯೇ, ನಿಯಮಿತತೆ  ಅಧಿಕಾರದ ಸಮರ್ಪಕ ಬಳಕೆಗೆ ಅಗತ್ಯ ಅದು ಅತಿಯಾದ ಆತ್ಮೋನ್ನತಿಯನ್ನು ನಿಯಂತ್ರಿಸಿ, ಅಧಿಕಾರದ ದುರುಪಯೋಗವನ್ನು ತಡೆಯುವ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ.”ಎಂದು ವಿಶೇಷವಾಗಿ ಅವರು ಹೇಳಿದರು,

ಜಗದ್ಗುರು XIVನೇ ಲಿಯೋರವರ ಪ್ರಕಾರ, ಮಾನ್ಯವಾದ ಶಕ್ತಿಯ ಈ ಅರಿವು ನಿಜವಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅತ್ಯುನ್ನತವಾಗಿ ವ್ಯಕ್ತವಾಗುತ್ತದೆ.

“ಪ್ರಜಾಸತ್ತಾತ್ಮಕತೆ ಕೇವಲ ಒಂದು ವಿಧಾನವಲ್ಲ ಅದು ಪ್ರತಿಯೊಬ್ಬ ಮಾನವನ ಗೌರವವನ್ನು ಗುರುತಿಸಿ, ಸಾಮಾನ್ಯ ಹಿತದ ಸಾಧನೆಗೆ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯುತವಾಗಿ ಪಾಲ್ಗೊಳ್ಳುವಂತೆ ಕರೆ ನೀಡುತ್ತದೆ.”

ಆರೋಗ್ಯಕರ ಪ್ರಜಾಸತ್ತಾತ್ಮಕತೆಗೆ ಮಾನದಂಡಗಳು

ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್ ರವರು ಈ ನಂಬಿಕೆಯನ್ನು ಪ್ರತಿಬಿಂಬಿಸಿದ್ದು, ಧರ್ಮ ಸಭೆ ಪ್ರಜಾಸತ್ತಾತ್ಮಕತೆಯನ್ನು ಮೌಲ್ಯಯುತವೆಂದು ಪರಿಗಣಿಸುತ್ತದೆ, ಏಕೆಂದರೆ ಅದು ರಾಜಕೀಯ ಆಯ್ಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ನೀಡುತ್ತದೆ ಮತ್ತು ಆಡಳಿತಗಾರರನ್ನು ಆಯ್ಕೆಮಾಡುವುದಕ್ಕೂ, ಅವರನ್ನು ಹೊಣೆಗಾರರನ್ನಾಗಿಸುವುದಕ್ಕೂ ಹಾಗೂ ಅಗತ್ಯವಿದ್ದಾಗ ಶಾಂತಿಯುತವಾಗಿ ಬದಲಾಯಿಸುವ ಸಾಧ್ಯತೆಯನ್ನು ಒದಗಿಸುತ್ತದೆ ಎಂದು ಅವರು ನೆನಪಿಸಿದರು.

ಆದರೆ, ಪ್ರಜಾಸತ್ತಾತ್ಮಕತೆ ನೈತಿಕ ಕಾನೂನಿನಲ್ಲಿ ಮತ್ತು ಮಾನವ ವ್ಯಕ್ತಿಯ ನಿಜವಾದ ದೃಷ್ಟಿಯಲ್ಲಿ ಬೇರುಬಿಟ್ಟಿರಬೇಕು ಎಂಬುದನ್ನು ಜಗದ್ಗುರುಗಳು ಮತ್ತೊಮ್ಮೆ ಒತ್ತಿಹೇಳಿದರು. ಇಲ್ಲದಿದ್ದರೆ, ಅದು ಬಹುಮತದ ದೌರ್ಜನ್ಯವಾಗಿಯೂ ಅಥವಾ ಆರ್ಥಿಕ ಮತ್ತು ತಾಂತ್ರಿಕ ಎಲಿಟ್‌ಗಳ ಪ್ರಭುತ್ವಕ್ಕೆ ಮುಖವಾಡವಾಗಿಯೂ ಪರಿಣಮಿಸುವ ಅಪಾಯವಿದೆ ಎಂದು ಎಚ್ಚರಿಸಿದರು.

ಜಗದ್ಗುರುಗಳು , ರಾಷ್ಟ್ರಗಳ ಒಳಗಿನ ಅಧಿಕಾರದ ಬಳಕೆಯನ್ನು ಮಾರ್ಗದರ್ಶಿಸುವ ಇದೇ ತತ್ವಗಳು ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿಯೂ ಅನ್ವಯಿಸಬೇಕು ಎಂದು ಹೇಳಿದರು. ಜಾಗತಿಕ ಸಂಬಂಧಗಳನ್ನು ರೂಪಾಂತರಗೊಳಿಸುತ್ತಿರುವ ತಂತ್ರಾತ್ಮಕ ಸ್ಪರ್ಧೆಗಳು ಮತ್ತು ಬದಲಾಗುತ್ತಿರುವ ಮೈತ್ರಿಗಳು ಇರುವ ಈ ಕಾಲದಲ್ಲಿ ಇದು ವಿಶೇಷವಾಗಿ ಮಹತ್ವದ್ದಾಗಿದೆ.

“ನ್ಯಾಯಸಮ್ಮತ ಮತ್ತು ಸ್ಥಿರ ಅಂತರರಾಷ್ಟ್ರೀಯ ವ್ಯವಸ್ಥೆ ಕೇವಲ ಶಕ್ತಿಯ ಸಮತೋಲನದಿಂದಲೂ ಅಥವಾ ತಾಂತ್ರಿಕ ತರ್ಕದಿಂದಲೂ ಉದ್ಭವಿಸುವುದಿಲ್ಲ” ಎಂದು ಅವರು ಹೇಳಿದರು.

ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆ ಮತ್ತು ಅಂತರರಾಷ್ಟ್ರೀಯ ಸೌಹಾರ್ದಕ್ಕೆ ಅಪಾಯಗಳು

ತಾಂತ್ರಿಕ, ಆರ್ಥಿಕ ಮತ್ತು ಸೈನಿಕ ಶಕ್ತಿಗಳು ಕೆಲವರ ಕೈಗಳಲ್ಲಿ ಕೇಂದ್ರೀಕೃತವಾಗುವುದರಿಂದ, ಜಗದ್ಗುರುಗಳು ಎಚ್ಚರಿಸಿದರು, “ಜನರ ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಗೂ ಹಾಗೂ ಅಂತರರಾಷ್ಟ್ರೀಯ ಸೌಹಾರ್ದಕ್ಕೂ ಬೆದರಿಕೆ ಉಂಟಾಗುತ್ತದೆ.

ಹಿಂದಿನ ಜಗದ್ಗುರುಗಳು  ಸೂಚಿಸಿದಂತೆ, ಉಪಸಿದ್ಧಾಂತ ತತ್ವದ ಆಧಾರದ ಮೇಲೆ ನವೀಕೃತ ಸಂಸ್ಥೆಗಳು ಮತ್ತು ವಿಶ್ವಮಟ್ಟದ ಅಧಿಕಾರದ ಅಗತ್ಯವಿದೆ ಎಂದು ಅವರು ನೆನಪಿಸಿದರು. ಅಂತರರಾಷ್ಟ್ರೀಯ ಸಹಕಾರದ ವಿಧಾನಗಳನ್ನು ಧೈರ್ಯದಿಂದ ಮರುಚಿಂತನೆ ಮಾಡುವ ಅಗತ್ಯವು ಈಗ ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಭೌತಿಕ ಶಕ್ತಿಗಳು ಶಾಂತಿಯ ಪರಂಪರೆ ಅಗಸ್ಟಿನಿಯನ್ ವ್ಯಾಖ್ಯಾನದಾದ ಟ್ರ್ಯಾಂಕ್ವಿಲ್ಲಿಟಾಸ್ ಆರ್ಡಿನಿಸ್ ಅನ್ನು ಭಂಗಪಡಿಸುವಾಗ, “ಈ ಲೋಕಕ್ಕೆ ಸೇರಿದದಾಗಿರದಿದ್ದರೂ, ಈ ಲೋಕದ ವಿಷಯಗಳಿಗೆ ಬೆಳಕು ಚೆಲ್ಲುವ ದೇವರ ರಾಜ್ಯದಿಂದ ನಾವು ಭರವಸೆಯನ್ನು  ಪಡೆಯಬೇಕು ಎಂದು ಅವರು ಹೇಳಿದರು.

ಈ ನಂಬಿಕೆಯ ದೃಷ್ಟಿಕೋನದಲ್ಲಿ, “ದೇವರ ಸರ್ವಶಕ್ತಿತ್ವವು ವಿಶೇಷವಾಗಿ ಕರುಣೆ ಮತ್ತು ಕ್ಷಮೆಯಲ್ಲಿ ವ್ಯಕ್ತವಾಗುತ್ತದೆ, ದೈವಿಕ ಶಕ್ತಿ ಆಳುವುದಿಲ್ಲ, ಬದಲಾಗಿ ಗುಣಪಡಿಸಿ ಪುನರುಜ್ಜೀವನಗೊಳಿಸುತ್ತದೆ ಎಂದು ಅವರು ನೆನಪಿಸಿದರು.

ಪ್ರೀತಿಯ ತತ್ವ ಇತಿಹಾಸವನ್ನು ಚೇತನಗೊಳಿಸಬೇಕು

ಈ ಪ್ರೀತಿಯ ತತ್ವವೇ ಇತಿಹಾಸವನ್ನು ಚೇತನಗೊಳಿಸಬೇಕು, ಎಂದು ಜಗದ್ಗುರುಗಳು ಹೇಳಿದರು. ಪ್ರೀತಿಯಿಂದ ಪ್ರೇರಿತವಾದ ಮಾನವ ಕ್ರಿಯೆಗಳು ಭೂಮಿಯ ನಗರವನ್ನು ಏಕತೆ ಮತ್ತು ಶಾಂತಿಯೊಂದಿಗೆ ರೂಪಿಸಲು ಸಹಾಯ ಮಾಡುತ್ತವೆ ಅದು ಅಪೂರ್ಣವಾಗಿದ್ದರೂ ದೇವರ ನಗರದ ಮುನ್ನೋಟವನ್ನು ನೀಡುತ್ತದೆ.

ಈ ನಂಬಿಕೆ ನಮ್ಮಲ್ಲಿ ಸಮಾಧಾನದ ಸಂಸ್ಕೃತಿಯನ್ನು ನಿರ್ಮಿಸಲು ಬಲ ನೀಡುತ್ತದೆ, ಅದು ನಿರ್ಲಕ್ಷ್ಯ ಮತ್ತು ಅಸಹಾಯಕತೆಯ ಸವಾಲುಗಳನ್ನು ಜಯಿಸುತ್ತದೆ ಎಂದು ಅವರು ಹೇಳಿದರು.

ಈ ಭಾವನೆಗಳೊಂದಿಗೆ, ತಮ್ಮ ಚಿಂತನೆಗಳು ಶಕ್ತಿಯ ಸಮರ್ಪಕ ಬಳಕೆ, ನಿಜವಾದ ಪ್ರಜಾಸತ್ತಾತ್ಮಕತೆಯ ಮಾನದಂಡಗಳು ಮತ್ತು ಸಾಮಾನ್ಯ ಹಿತಕ್ಕೆ ಸೇವೆ ಮಾಡುವ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಸ್ಪಷ್ಟಪಡಿಸಲು ಸಹಾಯಕವಾಗಲಿ ಎಂದು ಜಗದ್ಗುರುಗಳು ಆಶಿಸಿದರು.

ಈ ರೀತಿಯಾಗಿ, ಅವರ ಕೆಲಸವು ಜಾಗತಿಕ ಸಮಾಧಾನ ಮತ್ತು ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಲು ಮಹತ್ವದ ಕೊಡುಗೆಯನ್ನು ನೀಡುತ್ತದೆ—ಅದು ಕೇವಲ ಸಂಘರ್ಷದ ಅಭಾವವಲ್ಲ, ಆದರೆ ನ್ಯಾಯದ ಫಲವಾಗಿದೆ ಪ್ರತಿಯೊಬ್ಬ ಮಾನವನ ಮತ್ತು ಸಮಸ್ತ ಮಾನವಕುಟುಂಬದ ಸೇವೆಗೆ ವಿನಮ್ರವಾಗಿ ಬಳಸುವ ಅಧಿಕಾರದಿಂದ ಜನಿಸುವ ಶಾಂತಿಯಾಗಿದೆ.

ಕೊನೆಯಲ್ಲಿ, ಜಗದ್ಗುರು ಲಿಯೋರವರು ಪವಿತ್ರಾತ್ಮರು ಅವರ ಮನಸ್ಸುಗಳನ್ನು ಪ್ರಕಾಶಮಾನಗೊಳಿಸಿ ಅವರ ಪ್ರಯತ್ನಗಳನ್ನು ಬಲಪಡಿಸಲಿ ಎಂದು ಪ್ರಾರ್ಥಿಸಿ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

14 ಏಪ್ರಿಲ್ 2026, 16:45