ಹುಡುಕಿ

ಯೌಂಡೆಯಲ್ಲಿರುವ ಅಪೋಸ್ಟೋಲಿಕ್ ನನ್ಸಿಯೇಚರ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಮುಸ್ಲಿಂ ನಾಯಕರ ಮಾತುಗಳನ್ನು ಕೇಳುತ್ತಿದ್ದಾರೆ ಯೌಂಡೆಯಲ್ಲಿರುವ ಅಪೋಸ್ಟೋಲಿಕ್ ನನ್ಸಿಯೇಚರ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಮುಸ್ಲಿಂ ನಾಯಕರ ಮಾತುಗಳನ್ನು ಕೇಳುತ್ತಿದ್ದಾರೆ  (ANSA)

ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನಲ್ಲಿ ಹಲವಾರು ಮುಸ್ಲಿಂ ನಾಯಕರನ್ನು ಭೇಟಿಯಾದರು.

ಯೌಂಡೆಗೆ ಹಿಂದಿರುಗಿದ ನಂತರ, ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನ ಇಸ್ಲಾಮಿಕ್ ಸಮುದಾಯಗಳ ಹಲವು ಪ್ರತಿನಿಧಿಗಳನ್ನು ಭೇಟಿ ಮಾಡಿ, ಪರಸ್ಪರ ಗೌರವದ ಆಧಾರದ ಮೇಲೆ ಶಾಂತಿಗಾಗಿ ಎಲ್ಲಾ ಧರ್ಮಗಳ ಜನರು ಒಂದಾಗಿ ಕೆಲಸ ಮಾಡಲು ಪ್ರೇರೇಪಿಸಿದರು.

ವ್ಯಾಟಿಕನ್ ವರದಿ

ಗುರುವಾರ ಸಂಜೆ, ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನ ವಿವಿಧ ಇಸ್ಲಾಮಿಕ್ ಸಮುದಾಯಗಳನ್ನು ಪ್ರತಿನಿಧಿಸುವ 12 ಮಂದಿಯ ಗುಂಪನ್ನು ಭೇಟಿ ಮಾಡಿದರು. ಇವರಲ್ಲಿ ಕೆಲವರನ್ನು ಅವರು 2025ರ ಡಿಸೆಂಬರ್‌ನಲ್ಲಿ ರೋಮ್‌ನಲ್ಲಿ ಈಗಾಗಲೇ ಭೇಟಿಯಾಗಿದ್ದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮತ್ಯೋ ಬ್ರೂನಿ ರವರ ಪ್ರಕಾರ, ಈ ಭೇಟಿಯು ಯೌಂಡೆಯ ಅಪೋಸ್ಟೋಲಿಕ್ ನನ್ಸಿಯೇಚರ್‌ನಲ್ಲಿ  ನಡೆಯಿತು. ಬಮೆಂಡಾದಿಂದ ವಿಮಾನದಲ್ಲಿ ಹಿಂದಿರುಗಿದ ನಂತರ ಜಗದ್ಗುರುಗಳು ಈ ಸಭೆಯಲ್ಲಿ ಭಾಗವಹಿಸಿದರು.

ಈ ಮುಸ್ಲಿಂ ನಾಯಕರಿಂದ ಪ್ರತಿನಿಧಿಸಲ್ಪಟ್ಟ ಸಮುದಾಯಗಳು, ಕ್ಯಾಮರೂನ್‌ನ ಬಡಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಸಹಕಾರವನ್ನು ಉತ್ತೇಜಿಸುವ ಹಲವಾರು ಯೋಜನೆಗಳನ್ನು ಸ್ಥಳೀಯ ಕಥೋಲಿಕ ಧರ್ಮ ಸಭೆಯೊಂದಿಗೆ ಸಹಕಾರದಲ್ಲಿ ನಡೆಸುತ್ತಿವೆ.

ಬ್ರೂನಿರವರು ತಿಳಿಸಿದಂತೆ, ಜಗದ್ಗುರುಗಳು ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಅಭಿನಂದಿಸಿ, ಅವರಿಂದ ವ್ಯಕ್ತವಾದ ಸ್ವಾಗತ ಮತ್ತು ಕೃತಜ್ಞತೆಯ ಮಾತುಗಳನ್ನು ಗಮನದಿಂದ ಆಲಿಸಿದರು.

ಮುಸ್ಲಿಂ ನಾಯಕರು ಧರ್ಮ ಸಭೆಯೊಂದಿಗೆ ನಡೆಸಿದ ಸಹಕಾರದ ಕಾರ್ಯಗಳಿಗೆ, ಜಗದ್ಗುರುಗಳ ಭೇಟಿಗೆ ಹಾಗೂ ಬಮೆಂಡಾದಲ್ಲಿ ಅವರು ನೀಡಿದ ಸಂವಾದ ಮತ್ತು ಶಾಂತಿಯ ಸಂದೇಶಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಜಗದ್ಗುರು XIVನೇ ಲಿಯೋರವರು ಅವರನ್ನು ಭೇಟಿಯಾದ ಸಂತೋಷವನ್ನು ಹಂಚಿಕೊಂಡು, ಕ್ಯಾಮರೂನ್‌ನ ಎಲ್ಲ ಜನರಿಂದ ಕ್ರೈಸ್ತರು, ಕಥೋಲಿಕರು ಮತ್ತು ಇತರ ಧರ್ಮಸ್ಥರು, ಮುಸ್ಲಿಮರು ಹಾಗೂ ಪರಂಪರಾಗತ ಧರ್ಮಗಳ ಅನುಯಾಯಿಗಳಿಂದ ತಮಗೆ ದೊರೆತ ಹೃತ್ಪೂರ್ವಕ ಸ್ವಾಗತಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಅವರು ಕೆಲವೊಮ್ಮೆ ಧರ್ಮಗಳ ಮಧ್ಯೆ ಉಂಟಾಗುವ ವಿಭಜನೆಗಳ ಬಗ್ಗೆ ಮಾತನಾಡಿ, ಇಂತಹ ಸಂದರ್ಭಗಳು ಎಲ್ಲರನ್ನೂ ಪರಸ್ಪರ ಭೇಟಿಯಿಂದ ಉಂಟಾಗುವ ಜವಾಬ್ದಾರಿಯನ್ನು ಸ್ವೀಕರಿಸಲು ಕರೆದೊಯ್ಯುತ್ತವೆ ಎಂದು ಹೇಳಿದರು.

ಜಗದ್ಗುರುಗಳು ಎಲ್ಲಾ ಕ್ಯಾಮರೂನ್ ಜನರಿಗೆ ಪ್ರತಿಯೊಬ್ಬರ ಶಾಂತಿಯ ಭರವಸೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು ಅದು ನಿರ್ಲಕ್ಷ್ಯದ ಶಾಂತಿ ಅಲ್ಲ, ವೈವಿಧ್ಯತೆಯ ಸೌಂದರ್ಯವನ್ನು ಕಳೆದುಕೊಳ್ಳುವ ಶಾಂತಿ ಅಲ್ಲ ಬದಲಾಗಿ, ನಾವು ಎಲ್ಲರೂ ಸಹೋದರ ಸಹೋದರಿಯರೆಂದು, ಒಬ್ಬನೇ ಸೃಷ್ಟಿಕರ್ತನ ಮಕ್ಕಳಾಗಿದ್ದೇವೆಂದು ಮತ್ತು ಪ್ರತಿಯೊಬ್ಬರ ಗೌರವವನ್ನು ಮಾನ್ಯಗೊಳಿಸಲು ಕರೆಯಲ್ಪಟ್ಟಿದ್ದೇವೆಂದು ಅರಿತಾಗ ಹುಟ್ಟುವ ಶಾಂತಿ.

ಕ್ಯಾಮರೂನ್‌ನಲ್ಲಿ ಈ ಕನಸನ್ನು ನಿಜವಾಗಿಸುವ ದೊಡ್ಡ ಅವಕಾಶವಿದೆ ಎಂದು ಜಗದ್ಗುರುಗಳು ಹೇಳಿದರು, ಏಕೆಂದರೆ ಈ ಭರವಸೆ ಬದ್ಧತೆಯಾಗಿ ರೂಪಾಂತರಗೊಳ್ಳಬಹುದು.

ಜಗದ್ಗುರು XIVನೇ ಲಿಯೋರವರು ಈ ಸಂವಾದದ ಮಾರ್ಗವನ್ನು ಮುಂದುವರಿಸಲು ಹಾಗೂ ಈ ಸಂದೇಶ ಮತ್ತು ಕನಸನ್ನು ಇತರರಿಗೂ ಮುಸ್ಲಿಮರಿಗೆ ಮತ್ತು ಇನ್ನೂ ಅರ್ಥಮಾಡಿಕೊಳ್ಳದವರಿಗೂ ಹಂಚಿಕೊಳ್ಳಲು ಪ್ರೇರೇಪಿಸಿದರು, ಇದರಿಂದ ಸಹೋದರತ್ವದ ಸೌಂದರ್ಯವನ್ನು ಎಲ್ಲರೂ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸಂಪೂರ್ಣ ಕ್ಯಾಮರೂನ್‌ಗೆ ಮಹತ್ತರ ಲಾಭವಾಗುತ್ತದೆ.

ಬ್ರೂನಿರವರು ತಿಳಿಸಿದಂತೆ, ಬುಧವಾರ ಸಂಜೆ ಜಗದ್ಗುರುಗಳು ಕ್ಯಾಮರೂನ್‌ನ ಬಿಷಪ್‌ಗಳನ್ನು ಕೂಡ ಭೇಟಿಯಾದರು.

ಆ ಸಭೆಯಲ್ಲಿ, ಧರ್ಮ ಸಭೆಯೊಳಗೆ ಅಪ್ಪಿಕೊಳ್ಳಬೇಕಾದ ಮತ್ತು ಸಂಘರ್ಷಗಳಿಂದ ವಿಭಜಿತವಾಗಿರುವ ಜಗತ್ತಿನೊಂದಿಗೆ ಹಂಚಿಕೊಳ್ಳಬೇಕಾದ “ಏಕತೆಯ” ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳಿದರು. ಅವರು ಯಾಜಕರ ಆಧ್ಯಾತ್ಮಿಕ ಜೀವನದ ಮಹತ್ವವನ್ನೂ ವಿವರಿಸಿ, ಅದು ಅವರನ್ನು ನಿಜವಾದ ಸಾಕ್ಷಿಗಳಾಗಿಸುತ್ತದೆ ಎಂದು ಹೇಳಿದರು.

ಕ್ಯಾಮರೂನ್‌ನಲ್ಲಿ ಹೆಚ್ಚುತ್ತಿರುವ ಧಾರ್ಮಿಕ ವೃತ್ತಿಗಳ ಆಶೀರ್ವಾದವನ್ನು ಅವರು ಉಲ್ಲೇಖಿಸಿ, ಯುವಕರನ್ನು ಆಧ್ಯಾತ್ಮಿಕ, ಬೌದ್ಧಿಕ ಮತ್ತು ಭಾವನಾತ್ಮಕ ಮಟ್ಟಗಳಲ್ಲಿ ಜವಾಬ್ದಾರಿಯಿಂದ ರೂಪಿಸುವ ಸವಾಲಿನ ಬಗ್ಗೆ ಮಾತನಾಡಿದರು. ಯೇಸು ಮಾಡಿದ ಕಾಲು ತೊಳೆಯುವ ಸೇವೆಯ ಮಾದರಿಯನ್ನು ಅನುಸರಿಸಿ, ಯಾಜಕ ಸೇವೆಯೇ ತಮ್ಮ ಏಕೈಕ ಅಧಿಕಾರವಾಗಿರಬೇಕು ಎಂದು ಅವರು ತಿಳಿಸಿದರು.

ಬ್ರೂನಿರವರ ಪ್ರಕಾರ, ಸಭೆಯಲ್ಲಿ ಹಾಜರಿದ್ದ ಬಿಷಪ್‌ಗಳ ಹಲವಾರು ಪ್ರಶ್ನೆಗಳಿಗೆ ಜಗದ್ಗುರುಗಳು ಉತ್ತರಿಸಿ, ಕ್ಯಾಮರೂನ್‌ಗೆ ಸಂಬಂಧಿಸಿದ ಇಂದಿನ ಮಹತ್ವದ ಅನೇಕ ವಿಷಯಗಳನ್ನು ಸ್ಪರ್ಶಿಸಿದರು.

16 ಏಪ್ರಿಲ್ 2026, 20:17