Pope Leo XIV visits Cameroon

ಬಮೆಂಡಾದ ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರುಗಳು: ‘ಮಾನವರಿಗಿಂತ ದೇವರಿಗೆ ವಿಧೇಯರಾಗಿರಿ’

ಕ್ಯಾಮರೂನ್ ದೇಶದ ಪಶ್ಚಿಮ ಭಾಗದಲ್ಲಿರುವ ಬಮೆಂಡಾ ನಗರದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸುತ್ತಾ, ಜಗದ್ಗುರು XIVನೇ ಲಿಯೋರವರು ಆ ಪ್ರದೇಶವನ್ನು ಕಾಡುತ್ತಿರುವ ಅನೇಕ ಬಡತನದ ಹಾಗೂ ಅನ್ಯಾಯದ ರೂಪಗಳನ್ನು ಖಂಡಿಸಿದರು. ಜೊತೆಗೆ, ಶಾಂತಿ ಮತ್ತು ಸೌಹಾರ್ದತೆಯಿಂದ ಕೂಡಿದ ಭವಿಷ್ಯವನ್ನು ನಿರ್ಮಿಸಲು ನಡೆಯುತ್ತಿರುವ ತಮ್ಮ ಹೋರಾಟದಲ್ಲಿ, ಕ್ಯಾಮರೂನ್ ಜನರು ದೇವರಿಗೂ ಅವರ ವಾಕ್ಯಕ್ಕೂ ತಮ್ಮನ್ನು ಒಪ್ಪಿಸಿಕೊಳ್ಳಬೇಕೆಂದು ಅವರು ಪ್ರೇರೇಪಿಸಿದರು.

ವ್ಯಾಟಿಕನ್ ವರದಿ

ಕ್ಯಾಮರೂನ್ ದೇಶದ ಪಶ್ಚಿಮ ಭಾಗದಲ್ಲಿರುವ ಬಮೆಂಡಾ ನಗರದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಜನರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಪ್ರತಿ ವ್ಯಕ್ತಿಯ ಗೌರವವನ್ನು ಮಾನ್ಯತೆ ನೀಡಲಾಗುವ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಖಚಿತಪಡಿಸಲಾಗುವ ಶಾಂತಿ ಮತ್ತು ಸೌಹಾರ್ದತೆಯ ಭವಿಷ್ಯಕ್ಕಾಗಿ ಅವರು ಹೋರಾಟ ಮಾಡುತ್ತಿರುವುದನ್ನು ಜಗದ್ಗುರುಗಳು ಶ್ಲಾಘಿಸಿದರು.

ಗುರುವಾರ ಅವರು ಕ್ಯಾಮರೂನ್‌ನ ಇಂಗ್ಲಿಷ್ ಭಾಷಿಕ ವಾಯುವ್ಯ ಪ್ರದೇಶವಾದ ಬಮೆಂಡಾಗೆ ಭೇಟಿ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಆ ಪ್ರದೇಶವು ಆಂಗ್ಲೋಫೋನ್ ಸಂಕಟದ ಹಿನ್ನೆಲೆಯಲ್ಲಿ ಉದ್ಭವಿಸಿದ ಉದ್ವಿಗ್ನತೆ ಮತ್ತು ಹಿಂಸಾಚಾರದಿಂದ ಬಳಲುತ್ತಿದೆ. ಈ ಪರಿಸ್ಥಿತಿ ಸಮಾಜದ ಏಕತೆಯನ್ನು ದುರ್ಬಲಗೊಳಿಸಿ, ಅನೇಕ ಜನರನ್ನು ವಲಸೆ ಹೋಗುವಂತೆ ಮಾಡಿದ್ದು, ಮಾನವೀಯ ಅಗತ್ಯಗಳನ್ನು ಹೆಚ್ಚಿಸಿದೆ. ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಈ ಪವಿತ್ರ ಬಲಿಪೂಜೆಯಲ್ಲಿ ಸುಮಾರು 20,000 ಜನರು ಭಾಗವಹಿಸಿದರು.

ಕ್ಯಾಮರೂನ್ ಜನರು ತಮ್ಮ ದೇಶದ ಕಥೆಯನ್ನು ಬದಲಿಸಿ, ಶಾಂತಿ ಮತ್ತು ಸೌಹಾರ್ದತೆ ನೆಲೆಸಿರುವ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಜಗದ್ಗುರುಗಳು ಅವರ ಆಶಯವನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದರು. ಆದರೆ, ಈ ಸುಂದರ ಭೂಮಿಯನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳು ಆ ಭರವಸೆಯನ್ನು ನಿರಂತರವಾಗಿ ಕುಂಠಿತಗೊಳಿಸುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜಗದ್ಗುರುಗಳು ವಿಶ್ವಾಸಿಗಳ ಉಲ್ಲಾಸಭರಿತ ಮತ್ತು ಜೀವಂತ ಪ್ರಾರ್ಥನೆ ಹಾಗೂ ಪೂಜೆಯನ್ನು ಪ್ರಶಂಶಿಸಿದರು. ಇವು ದೇವರ ಮೇಲಿನ ನಂಬಿಕೆಯ ಒಪ್ಪಿಗೆ, ಅಚಲವಾದ ನಿರೀಕ್ಷೆ ಮತ್ತು ತಂದೆಯ ಪ್ರೀತಿಗೆ ಅಂಟಿಕೊಂಡಿರುವ ಸಂಕೇತಗಳಾಗಿವೆ ಎಂದು ಹೇಳಿದರು. ಅದೇ ಸಮಯದಲ್ಲಿ, ಮಾನವರ ಜೀವನದಲ್ಲಿ ಹೃದಯವನ್ನು ಮುರಿಯುವ ಅನೇಕ ಪರಿಸ್ಥಿತಿಗಳನ್ನು ಗುರುತಿಸಿ, ಶಾಂತಿ ಮತ್ತು ನ್ಯಾಯದ ನಿರೀಕ್ಷೆಗಳು ಹಲವು ಬಾರಿ ವಿಫಲವಾಗುತ್ತವೆ ಎಂದು ಒಪ್ಪಿಕೊಂಡರು.

ಜಗದ್ಗುರು XIVನೇ ಲಿಯೋರವರು ಬಡತನದ ವಿವಿಧ ರೂಪಗಳನ್ನು ಉಲ್ಲೇಖಿಸಿದರು. ಆಹಾರ ಸಂಕಷ್ಟ, ಭ್ರಷ್ಟಾಚಾರ, ಮತ್ತು ಸಂಪತ್ತಿನ ನಿರ್ವಹಣೆಯಲ್ಲಿನ ದೋಷಗಳು ಸಂಸ್ಥೆಗಳ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂದು ಹೇಳಿದರು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳ ಸಮಸ್ಯೆಗಳು ಹಾಗೂ ವಿಶೇಷವಾಗಿ ಯುವಜನರು ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವುದು ಕೂಡ ಅವರು ಗಮನ ಸೆಳೆದ ವಿಷಯಗಳಾಗಿವೆ.

ಈ ಒಳಗಿನ ಸಮಸ್ಯೆಗಳ ಜೊತೆಗೆ, ಲಾಭದ ಹೆಸರಿನಲ್ಲಿ ಆಫ್ರಿಕಾ ಖಂಡವನ್ನು ದುರುಪಯೋಗಪಡಿಸಿಕೊಳ್ಳುವ ಬಾಹ್ಯ ಶಕ್ತಿಗಳ ಪರಿಣಾಮವನ್ನೂ ಜಗದ್ಗುರುಗಳು ಖಂಡಿಸಿದರು. ಈ ಸಂದರ್ಭದಲ್ಲಿ ಅವರು ವಿಶ್ವಾಸಿಗಳಿಗೆ ಈಗಲೇ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು. “ಇಂದು, ನಾಳೆ ಅಲ್ಲ; ಈಗಲೇ, ಭವಿಷ್ಯದಲ್ಲಿ ಅಲ್ಲ  ವೈವಿಧ್ಯತೆ ಮತ್ತು ಸಂಪತ್ತನ್ನು ಒಗ್ಗೂಡಿಸಿ ಏಕತೆಯ ಸುಂದರ ಚಿತ್ರವನ್ನು ಪುನರ್‌ನಿರ್ಮಿಸಲು ಇದು ಸೂಕ್ತ ಸಮಯ ಎಂದು ಹೇಳಿದರು.

ಅಂತಿಮವಾಗಿ, ದೇವರ ವಾಕ್ಯವು ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಮತ್ತು ಪರಿವರ್ತನೆ ಹಾಗೂ ಚೇತರಿಕೆಯನ್ನು ತರಿಸುತ್ತದೆ ಎಂದು ಜಗದ್ಗುರುಗಳು ಒತ್ತಿ ಹೇಳಿದರು. "ಮಾನವರಿಗಿಂತ ದೇವರಿಗೆ ವಿಧೇಯರಾಗಬೇಕು” ಎಂದು ಹೇಳಿ, ದೇವರೇ ನಮಗೆ ಸ್ವಾತಂತ್ರ್ಯವನ್ನು ನೀಡುವವರು ಮತ್ತು ಅವರ ಆತ್ಮವೇ ನಮ್ಮನ್ನು ಹೊಸ ವ್ಯಕ್ತಿಗಳಾಗಿ ರೂಪಿಸುವುದೆಂದು ಅವರು ನೆನಪಿಸಿದರು..

16 ಏಪ್ರಿಲ್ 2026, 20:08