ಹುಡುಕಿ

ಜಗದ್ಗುರು ಲಿಯೋರವರು ಯುರೋಪಿಯನ್ ಪೀಪಲ್ಸ್ ಪಾರ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಜಗದ್ಗುರು ಲಿಯೋರವರು ಯುರೋಪಿಯನ್ ಪೀಪಲ್ಸ್ ಪಾರ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾರೆ  (ANSA)

ಜಗದ್ಗುರುಗಳು: ಯುರೋಪಿಯನ್ ಯೂನಿಯನ್ ಶಾಸಕರಿಗೆ ನಾಶಕ್ಕೆ ದಾರಿ ಮಾಡುವ ಸಂಘರ್ಷವಲ್ಲ, ಏಕತೆಯನ್ನು ಹುಡುಕಿ.

ಜಗದ್ಗುರು XIVನೇ ಲಿಯೋರವರು ಯುರೋಪಿಯನ್ ಪೀಪಲ್ಸ್ ಪಾರ್ಟಿ ಶಾಸಕರಿಗೆ ತತ್ವವಾದಗಳನ್ನು ತಿರಸ್ಕರಿಸಲು, ನಾಗರಿಕರೊಂದಿಗೆ ನಂಬಿಕೆಯನ್ನು ಪುನರ್‌ನಿರ್ಮಿಸಲು ಮತ್ತು ಸಂಘರ್ಷಕ್ಕಿಂತ ಏಕತೆಯನ್ನು ಹುಡುಕುವ ಮೂಲಕ ಸಾಮೂಹಿಕ ಹಿತದಲ್ಲಿ ಬೇರುಬಿಟ್ಟ ರಾಜಕೀಯವನ್ನು ಅನುಸರಿಸಲು ಕರೆ ನೀಡುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಶನಿವಾರ ವ್ಯಾಟಿಕನ್‌ನಲ್ಲಿ ಯುರೋಪಿಯನ್ ಪೀಪಲ್ಸ್ ಪಾರ್ಟಿಯ ಸಂಸತ್ ಸದಸ್ಯರನ್ನು ಭೇಟಿಯಾದರು.

ತಮ್ಮ ಭಾಷಣದಲ್ಲಿ, ಅವರು ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್ ಮತ್ತು ಜಗದ್ಗುರು XVIನೇ ಬೆನೆಡಿಕ್ಟ್  ರವರೊಂದಿಗೆ ಈ ಗುಂಪಿನ ಹಿಂದಿನ ಭೇಟಿಗಳನ್ನು, ಹಾಗೆಯೇ 2023ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಈ ಗುಂಪನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಕಳುಹಿಸಿದ್ದ ಸಂದೇಶವನ್ನು ಸ್ಮರಿಸಿದರು.

ಜಗದ್ಗುರು XVIನೇ ಬೆನೆಡಿಕ್ಟ್ ರವರ ಮಾತುಗಳನ್ನು ಪ್ರತಿಧ್ವನಿಸುತ್ತಾ, ಜಗದ್ಗುರು ಲಿಯೋರವರು “ಯುರೋಪಿನ ಕ್ರೈಸ್ತ ಪರಂಪರೆಯನ್ನು ನಿಮ್ಮ ಗುಂಪು ಗುರುತಿಸಿರುವುದನ್ನು ನಾನು ಮೆಚ್ಚುತ್ತೇನೆ” ಎಂದು ಹೇಳಿದರು.

ಜಗದ್ಗುರುಗಳು ಹೇಳಿದರು: ಯುರೋಪಿಯನ್ ಯೋಜನೆ “ದ್ವಿತೀಯ ವಿಶ್ವಯುದ್ಧದ ಭಸ್ಮದಿಂದ” ಹುಟ್ಟಿಕೊಂಡಿತು. ಅಂತಹ ಸಂಘರ್ಷ ಮತ್ತೆ ನಡೆಯದಂತೆ ತಡೆಯುವುದಕ್ಕಷ್ಟೇ ಅಲ್ಲದೆ, ಶತಮಾನಗಳ ವಿಭಜನೆಗಳನ್ನು ಮೀರಿ ಸಹಕಾರವನ್ನು ಬೆಳೆಸುವುದೂ ಅದರ ಉದ್ದೇಶವಾಗಿತ್ತು.

ಅವರು ಅಡೆನಾವರ್, ಡಿ ಗ್ಯಾಸ್ಪೆರಿ ಮತ್ತು ಶುಮನ್ ಮೊದಲಾದ ನಾಯಕರ ಪ್ರಭಾವವನ್ನು ಉಲ್ಲೇಖಿಸಿದರು. ಇವರನ್ನು ತಮ್ಮ ವೈಯಕ್ತಿಕ ನಂಬಿಕೆ ಪ್ರೇರೇಪಿಸಿತ್ತು ಮತ್ತು ಅವರು ಕ್ರೈಸ್ತ ತತ್ವಗಳನ್ನು ಖಂಡವನ್ನು ಮರುನಿರ್ಮಿಸುವಲ್ಲಿ ಸಾಮಾನ್ಯ ಮತ್ತು ಏಕೀಕರಣಕಾರಿ ಅಂಶ ಎಂದು ಕಂಡಿದ್ದರು.

ನಂತರ, ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಉಲ್ಲೇಖಿಸಿ, “ಏಕತೆ ಸಂಘರ್ಷಕ್ಕಿಂತ ಶ್ರೇಷ್ಠ” ಎಂದು ಹೇಳಿದರು. ನಿಜವಾದ ಏಕತೆ ಸಂಘರ್ಷದ ಮೇಲ್ಮೈಯನ್ನು ಮೀರಿ, ಇತರರ ಆಳವಾದ ಗೌರವವನ್ನು ಕಾಣುವ ಧೈರ್ಯವನ್ನು ಹೊಂದಿದೆ ಎಂದು ಅವರು ವಿವರಿಸಿದರು. ಆದರೆ ಸಂಘರ್ಷವು ಅಧಿಕಾರದ ಹುಡುಕಾಟ ಮತ್ತು ಅದರ ಪ್ರತಿಷ್ಠಾಪನೆಯನ್ನು ಉತ್ತೇಜಿಸುತ್ತದೆ ಕೊನೆಯಲ್ಲಿ ಅದು ನಾಶಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ರಾಜಕೀಯದ ಪಾತ್ರ

ರಾಜಕೀಯದ ಪಾತ್ರದ ಕುರಿತು ಮಾತನಾಡುತ್ತಾ, ಜಗದ್ಗುರುಗಳು ಹೇಳಿದರು: ಯಾವುದೇ ರಾಜಕೀಯ ಕ್ರಿಯೆಯ ಮೊದಲ ಕರ್ತವ್ಯವೆಂದರೆ ಒಂದು ಆದರ್ಶ ದೃಷ್ಟಿಯನ್ನು ನೀಡುವುದು‌ ಇದಕ್ಕೆ ಭವಿಷ್ಯದ ಬಗ್ಗೆ ವಿಶಾಲ ದೃಷ್ಟಿಕೋನ ಮತ್ತು ಸಾಮೂಹಿಕ ಹಿತಕ್ಕಾಗಿ ಅಗತ್ಯವಾದಾಗ ಕಠಿಣ ಹಾಗೂ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಿದ್ಧತೆ ಬೇಕಾಗುತ್ತದೆ.

ಈ ಸಂದರ್ಭದಲ್ಲಿ ಅವರು ಮುಂದುವರಿದು, ರಾಜಕೀಯವನ್ನು ಅತ್ಯುನ್ನತ ದಾನಧರ್ಮದ ರೂಪ ಎಂದು ಅರ್ಥಮಾಡಿಕೊಳ್ಳಬಹುದು ಎಂದರು, ಏಕೆಂದರೆ ಅದು ಎಲ್ಲರ ಹಿತದತ್ತ ಕೇಂದ್ರೀಕೃತವಾಗಿದೆ.

ಆದರೆ, ಆದರ್ಶಗಳು ತತ್ವವಾದಗಳಾಗಿ ವಿಕೃತಗೊಳ್ಳುವ ಅಪಾಯದ ಬಗ್ಗೆ ಅವರು ಎಚ್ಚರಿಸಿದರು. ಒಂದು ಆದರ್ಶವನ್ನು ಅನುಸರಿಸುವುದು ಎಂದರೆ ತತ್ವವಾದವನ್ನು ಮಹಿಮೆಪಡಿಸುವುದಲ್ಲ ಎಂದು ಹೇಳಿ, ತತ್ವವಾದವನ್ನು ವಾಸ್ತವದ ವಿಕೃತಿ ಮತ್ತು ಅದರ ಮೇಲೆ ಹೇರಲಾದ ಹಿಂಸೆಯ ಒಂದು ರೂಪ ಎಂದು ವಿವರಿಸಿದರು.

ಅದು ಆಲೋಚನೆಗಳನ್ನು ತಿರುಗಿಸಿ, ಜನರನ್ನು ತನ್ನ ಉದ್ದೇಶಗಳಿಗೆ ಅಧೀನಗೊಳಿಸುತ್ತದೆ ಹಾಗೂ ಕೊನೆಗೆ ಅವರ ನಿಜವಾದ ಆಶಯಗಳನ್ನು ಕುಂಠಿತಗೊಳಿಸುತ್ತದೆ ಎಂದು ಅವರು ಹೇಳಿದರು. ಆಧುನಿಕ ಯುರೋಪ್ ಸ್ವತಃ ಅದನ್ನು ನಾಶಮಾಡಿ ವಿಭಜಿಸಿದ್ದ ತತ್ವವಾದಿ ಯೋಜನೆಗಳ ವೈಫಲ್ಯವನ್ನು ಅರಿತ ಪರಿಣಾಮವಾಗಿ ಉದಯಿಸಿತು ಎಂದೂ ಅವರು ಸೇರಿಸಿದರು.

ದೃಢವಾದ ಗುರುತು

ಯುರೋಪಿಯನ್ ಪೀಪಲ್ಸ್ ಪಾರ್ಟಿಯ ಗುರುತನ್ನು ಉಲ್ಲೇಖಿಸುತ್ತಾ, ಜಗದ್ಗುರುಗಳು ಹೇಳಿದರು: ಜನರೇ ನಿಮ್ಮ ಬದ್ಧತೆಯ ಕೇಂದ್ರಬಿಂದು, ಅವರನ್ನು ನೀವು ಪಕ್ಕಕ್ಕಿರಿಸಲು ಸಾಧ್ಯವಿಲ್ಲ.

ನಾಗರಿಕರು ರಾಜಕೀಯ ಪ್ರಸ್ತಾಪಗಳ ನಿಷ್ಕ್ರಿಯತೆಯನ್ನು  ಸ್ವೀಕರಿಸುವವರು ಮಾತ್ರವಲ್ಲ, ಪ್ರತಿಯೊಂದು ರಾಜಕೀಯ ಕ್ರಿಯೆಯಲ್ಲಿ ಹೊಣೆಗಾರಿಕೆಯನ್ನು ಹಂಚಿಕೊಳ್ಳುವ ಸಕ್ರಿಯ ಭಾಗವಹಿಸುವವರು ಎಂದು ಅವರು ಹೇಳಿದರು.

ಜನರ ನಡುವೆ ಇರುವುದು ಮತ್ತು ಅವರನ್ನು ರಾಜಕೀಯ ಪ್ರಕ್ರಿಯೆಗಳಲ್ಲಿ ಸೇರಿಸಿಕೊಳ್ಳುವುದು “ಜನಪ್ರಿಯತಾವಾದಕ್ಕೂ ಹಾಗೂ ಎಲಿಟಿಸಂಕ್ಕೂ ಅತ್ಯುತ್ತಮ ಪ್ರತಿವಿಷ” ಎಂದು ಅವರು ವಿವರಿಸಿದರು. ಇವು ಎರಡೂ ಇಂದಿನ ರಾಜಕೀಯ ಪರಿಸರದಲ್ಲಿ ವ್ಯಾಪಕವಾಗಿರುವ ಪ್ರವೃತ್ತಿಗಳು ಎಂದರು.

ನಂತರ ಜಗದ್ಗುರುಗಳು “ಜನರು ಮತ್ತು ಅವರ ಪ್ರತಿನಿಧಿಗಳ ನಡುವಿನ ಸೌಹಾರ್ದ, ಸಹಕಾರ ಮತ್ತು ಪರಸ್ಪರ ಸಂಬಂಧದ ನಿರಂತರ ಕುಸಿತವನ್ನು ಗಮನಕ್ಕೆ ತಂದರು.

ಇದನ್ನು ಸರಿಪಡಿಸಲು, ನಾಗರಿಕರು ಮತ್ತು ಅವರ ಪ್ರತಿನಿಧಿಗಳ ನಡುವಿನ ವೈಯಕ್ತಿಕ ಸಂಪರ್ಕದ ಮೂಲಕ ಜನರ ನಿಜವಾದ ಭಾವನೆಯನ್ನು ಮರುನಿರ್ಮಿಸಲು ಅವರು ಕರೆ ನೀಡಿದರು.

“ಡಿಜಿಟಲ್ ವಿಜಯದ” ಯುಗದಲ್ಲಿ, ಸಾಮೂಹಿಕ ಹಿತದತ್ತ ಮುಖಮಾಡಿದ ರಾಜಕೀಯ ಕ್ರಿಯೆಗೆ “ಅನಾಲಾಗ್ ಲೋಕದತ್ತ ಹಿಂತಿರುಗುವಿಕೆ” ಅಗತ್ಯವೆಂದು ಅವರು ಹೇಳಿದರು.

ಕ್ರೈಸ್ತ ಪರಂಪರೆ

ಕ್ರೈಸ್ತ ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ಪ್ರೇರಿತರಾದವರಿಗೆ ಮಾತನಾಡುತ್ತಾ, ಜಗದ್ಗುರುಗಳು ಹೇಳಿದರು ಇದರ ಅರ್ಥ ಕ್ರೈಸ್ತ ಪರಂಪರೆಯನ್ನು ಮರುಅನ್ವೇಷಿಸಿ ಅದನ್ನು ಅಪ್ಪಿಕೊಳ್ಳುವುದು, ಜೊತೆಗೆ ಭವಿಷ್ಯವಾಣಿ ಸ್ವರೂಪದ ಧಾರ್ಮಿಕ ಸಾಕ್ಷ್ಯ ಮತ್ತು ಸ್ಪಷ್ಟ ರಾಜಕೀಯ ಆಯ್ಕೆಗಳ ಮೂಲಕ ವ್ಯಕ್ತವಾಗುವ ಕ್ರೈಸ್ತ ಸಾಕ್ಷ್ಯದ ನಡುವಿನ ಅಗತ್ಯ ವ್ಯತ್ಯಾಸವನ್ನು ಉಳಿಸಿಕೊಳ್ಳುವುದು.

ರಾಜಕೀಯದಲ್ಲಿ ಕ್ರೈಸ್ತನಾಗಿರುವುದು ಎಂದರೆ ಬಹಿರಂಗ ಧಾರ್ಮಿಕತೆಯನ್ನು ತೋರಿಸುವುದಲ್ಲ, ಎಂದ ಅವರು, ಸುಲಭ ಒಪ್ಪಿಗೆಯನ್ನು ಪಡೆಯದ ನಿರ್ಧಾರಗಳಲ್ಲಿಯೂ ಸುವಾರ್ತೆಯು ಮಾರ್ಗದರ್ಶನ ನೀಡಲು ಅವಕಾಶ ಮಾಡಿಕೊಡುವುದು ಅಗತ್ಯವೆಂದು ಹೇಳಿದರು.

ಅವರು ಸ್ವಾಭಾವಿಕ ಕಾನೂನು ಮತ್ತು ಸಕಾರಾತ್ಮಕ ಕಾನೂನುಗಳ ನಡುವಿನ ಸಂಬಂಧವನ್ನು, ಹಾಗೆಯೇ ಕ್ರೈಸ್ತ ಬೇರುಗಳು ಮತ್ತು ರಾಜಕೀಯ ಕ್ರಿಯೆಗಳ ನಡುವಿನ ಸಂಪರ್ಕವನ್ನು ಕಾಪಾಡುವ ಮಹತ್ವವನ್ನೂ ಒತ್ತಿಹೇಳಿದರು.

ಯುರೋಪಿಯನ್ ಯೂನಿಯನ್ ಎದುರಿಸುತ್ತಿರುವ ಸವಾಲುಗಳು

ಜಗದ್ಗುರು ಲಿಯೋರವರು ನಂತರ ಯುರೋಪ್ ಎದುರಿಸುತ್ತಿರುವ ಸ್ಪಷ್ಟ ಸವಾಲುಗಳ ಕಡೆಗೆ ತಿರುಗಿದರು. ಜನರ ನೈಜ ಚಿಂತನೆಗಳಿಂದ ಆರಂಭವಾಗುವ ವಾಸ್ತವಿಕ ದೃಷ್ಟಿಕೋನ ಅಗತ್ಯವಿದೆ ಎಂದು ಹೇಳಿದರು. ಇದರಲ್ಲಿ ಹೆಚ್ಚಾಗಿ ಮಾನವೀಯತೆಯನ್ನು ಕಳೆದುಕೊಳ್ಳುತ್ತಿರುವ ಮತ್ತು ತೃಪ್ತಿಕರವಲ್ಲದ ಮಾರುಕಟ್ಟೆಗೆ ಪ್ರತಿಕ್ರಿಯೆಯಾಗಿ ಗೌರವಯುತ ಉದ್ಯೋಗ ಪರಿಸ್ಥಿತಿಗಳನ್ನು ಉತ್ತೇಜಿಸುವುದು ಸೇರಿದೆ.

ಜನರು ಕುಟುಂಬವನ್ನು ಆರಂಭಿಸುವ ಭಯವನ್ನು ಜಯಿಸುವಂತೆ ಮಾಡಲು ಸಹಾಯ ಮಾಡಬೇಕು ಎಂದು ಅವರು ಹೇಳಿದರು ಈ ಭಯವು ವಿಶೇಷವಾಗಿ ಯುರೋಪಿನಲ್ಲಿ ವ್ಯಾಪಕವಾಗಿದೆ ಎಂದರು.

ವಲಸೆಯ ವಿಷಯದಲ್ಲಿ, ರಾಜಕಾರಣಿಗಳು ಮೂಲ ಕಾರಣಗಳನ್ನು ಪರಿಹರಿಸಬೇಕು, ಜೊತೆಗೆ ಬಾಧೆ ಅನುಭವಿಸುವವರನ್ನು ಕಾಳಜಿ ವಹಿಸಬೇಕು ಮತ್ತು ವಲಸಿಗರನ್ನು ಸಮಾಜದಲ್ಲಿ ಸ್ವೀಕರಿಸುವ ಹಾಗೂ ಒಗ್ಗೂಡಿಸುವ ನೈಜ ಸಾಮರ್ಥ್ಯವನ್ನು ಗುರುತಿಸಬೇಕು ಎಂದು ಹೇಳಿದರು.

ಸೃಷ್ಟಿಯ ಕಾಳಜಿ ಮತ್ತು ಕೃತಕ ಬುದ್ಧಿಮತ್ತೆ ಮೊದಲಾದ ಮಹತ್ವದ ವಿಷಯಗಳಲ್ಲಿ ತತ್ವವಾದರಹಿತ ದೃಷ್ಟಿಕೋನ ಅಗತ್ಯವೆಂದು ಅವರು ಕರೆ ನೀಡಿದರು. ವಿಶೇಷವಾಗಿ ಕೃತಕ ಬುದ್ಧಿಮತ್ತೆ ಮಹತ್ತರ ಅವಕಾಶಗಳನ್ನು ನೀಡುವುದರ ಜೊತೆಗೆ ಅಪಾಯಗಳಿಂದ ಕೂಡಿದೆ ಎಂದರು.

ತಮ್ಮ ಭಾಷಣದ ಅಂತ್ಯದಲ್ಲಿ, ಜಗದ್ಗುರುಗಳು ಸ್ವಾತಂತ್ರ್ಯದ ಅರ್ಥದ ಕುರಿತು ಚಿಂತನೆ ಮಾಡಿ, ನಾಯಕರು ಕೇವಲ ವೈಯಕ್ತಿಕ ಇಚ್ಛೆಗಳ ಮಟ್ಟಕ್ಕೆ ಸೀಮಿತವಾಗದ, ಸತ್ಯದಲ್ಲಿ ನೆಲೆಗೊಂಡಿರುವ ಸ್ವಾತಂತ್ರ್ಯದಲ್ಲಿ ಹೂಡಿಕೆ ಮಾಡಬೇಕು ಎಂದು ಹೇಳಿದರು. ಇದು ಧಾರ್ಮಿಕ ಸ್ವಾತಂತ್ರ್ಯವನ್ನೂ, ಹಾಗೆಯೇ ಪ್ರತಿಯೊಂದು ಸ್ಥಳದಲ್ಲೂ ಮತ್ತು ಸಂದರ್ಭದಲ್ಲೂ ಚಿಂತನೆ ಹಾಗೂ ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನೂ ರಕ್ಷಿಸುತ್ತದೆ ಎಂದರು.

ಕೊನೆಯಲ್ಲಿ, ಅವರು ಮಾನವ ಹಕ್ಕುಗಳ ಒಂದು ‘ಶಾರ್ಟ್ ಸರ್ಕ್ಯೂಟ್’” ಬಗ್ಗೆ ಎಚ್ಚರಿಸಿ, ಅದು ಅಂತಿಮವಾಗಿ ಬಲ ಮತ್ತು ಹಿಂಸೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

25 ಏಪ್ರಿಲ್ 2026, 18:13