ಜಗದ್ಗುರಗಳು ಮಾನಸಿಕ ಆಸ್ಪತ್ರೆಗೆ ಭೇಟಿ ನೀಡಿ ಮಾನಸಿಕ ಆರೋಗ್ಯದ ಕುರಿತು ‘ವಿಶಾಲ’ ಸಂದೇಶ ನೀಡಿದರು.
ವ್ಯಾಟಿಕನ್ ವರದಿ
ಈಕ್ವಟೋರಿಯಲ್ ಗಿನಿಯಾದ ಮಲಾಬೊದಲ್ಲಿರುವ ಜೀನ್-ಪಿಯರ್ ಒಲಿ ಮಾನಸಿಕ ಆಸ್ಪತ್ರೆಯಲ್ಲಿ ಜಗದ್ಗುರು ಲಿಯೋರವರ ಭೇಟಿಗಾಗಿ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. “ಕ್ರಿಸ್ತನು, ಈಕ್ವಟೋರಿಯಲ್ ಗಿನಿಯಾದ ಬೆಳಕು, ಭರವಸೆಯ ಭವಿಷ್ಯದತ್ತ” ಎಂಬ ಮಂತ್ರವಾಕ್ಯವನ್ನು ಒಳಗೊಂಡ ಪ್ರೇಷಿತರ ಪ್ರವಾಸದ ಅಧಿಕೃತ ಚಿಹ್ನೆಯನ್ನು ಕಟ್ಟಡಗಳ ಹೊರಭಾಗದಲ್ಲಿ ಅಂಟಿಸಲಾಗಿದೆ. ರೋಗಿಗಳು ಮತ್ತು ಸಿಬ್ಬಂದಿಗಳು ಜಗದ್ಗುರುಗಳ ಮಾತುಗಳನ್ನು ಕೇಳಲು ಸೇರಿಕೊಳ್ಳುವ ಕೇಂದ್ರ ಪೆವಿಲಿಯನ್‌ನಲ್ಲಿ ಕುರ್ಚಿಗಳ ಸಾಲುಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ.
“ಇದು ಅತ್ಯಂತ ದೊಡ್ಡ ಗೌರವ,” ಎಂದು ಆಸ್ಪತ್ರೆಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಟುನೀಷಿಯಾದ ವೈದ್ಯ ಪ್ರೊ. ಬೆಶೀರ್ ಬೆನ್ ಹದ್ಜ್ ಅಲಿ ಹೇಳಿದ್ದಾರೆ.ಜಗದ್ಗುರುಗಳ ಭೇಟಿ “ಅತ್ಯಂತ ಮಹತ್ವದ ಸಂಕೇತಾತ್ಮಕ ಕ್ರಮ” ಎಂದು ಅವರು ಒತ್ತಿಹೇಳುತ್ತಾರೆ ಇದು ಈಕ್ವಟೋರಿಯಲ್ ಗಿನಿಯಾದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಮಾನಸಿಕ ಆರೋಗ್ಯದ ಮಹತ್ವದ ಕಡೆಗೆ ಗಮನ ಸೆಳೆಯಲಿದೆ.
ಈ ಆಸ್ಪತ್ರೆ ದೇಶದಲ್ಲಿನ ಈ ರೀತಿಯ ಏಕೈಕ ಸಂಸ್ಥೆಯಾಗಿದ್ದು, ಹತ್ತು ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಆರಂಭದಲ್ಲಿ ಕೇವಲ ಇಪ್ಪತ್ತೈದು ಹಾಸಿಗೆಗಳಿದ್ದ ಈ ಕೇಂದ್ರವು ಈಗ 146 ಹಾಸಿಗೆಗಳನ್ನು ಹೊಂದಿದ್ದು, ಆರು ವಾರ್ಡ್‌ಗಳಲ್ಲಿ ವಿಂಗಡಿಸಲಾಗಿದೆ. ಪ್ರಸ್ತುತ ಇಲ್ಲಿ ಸುಮಾರು 125 ರೋಗಿಗಳನ್ನು (100 ಪುರುಷರು ಮತ್ತು 25 ಮಹಿಳೆಯರು) ಚಿಕಿತ್ಸೆ ನೀಡಲಾಗುತ್ತಿದೆ ಅವರು ಮನೋವಿಕಾರ, ಖಿನ್ನತೆ, ಆತಂಕ ಮತ್ತು ಮಾದಕ ವಸ್ತುಗಳ ವ್ಯಸನದಿಂದ ಬಳಲುತ್ತಿದ್ದಾರೆ.
2025ರ ಡಿಸೆಂಬರ್‌ನಲ್ಲಿ ಈ ಆಸ್ಪತ್ರೆಯನ್ನು ಪ್ರಸಿದ್ಧ ಫ್ರೆಂಚ್ ಮನೋವೈದ್ಯರಾದ ಜೀನ್-ಪಿಯರ್ ಒಲಿ ರವರ ಸ್ಮರಣಾರ್ಥ ಮರುನಾಮಕರಣ ಮಾಡಲಾಯಿತು ಈ ಸಂಸ್ಥೆಯನ್ನು ಸ್ಥಾಪಿಸಲು ಅವರು ಮಹತ್ವದ ಪಾತ್ರವಹಿಸಿದ್ದರು. ಮೊದಲ ಮಹಿಳೆ ಕಾಂಸ್ಟಾನ್ಸಿಯಾ ಮಂಗು ಡೆ ಒಬಿಯಾಂಗ್ ರವರ ಬೆಂಬಲವೂ ಅತ್ಯಂತ ಮುಖ್ಯವಾಗಿತ್ತು ಎಂದು ಪ್ರೊ. ಬೆನ್ ಹದ್ಜ್ ಅಲಿ ತಿಳಿಸಿದ್ದಾರೆ.
ಜಗತ್ತಿನಾದ್ಯಂತ, ವಿಶೇಷವಾಗಿ ಆಫ್ರಿಕಾದಲ್ಲಿ, ಮಾನಸಿಕ ಆರೋಗ್ಯವನ್ನು ತಪ್ಪಾಗಿ “ದ್ವಿತೀಯ” ಮಹತ್ವದ ವಿಷಯವೆಂದು ಪರಿಗಣಿಸಲಾಗುತ್ತದೆ ಎಂದು ಟುನೀಷಿಯಾದ ಈ ವೈದ್ಯರು ಹೇಳಿದ್ದಾರೆ. ಆದ್ದರಿಂದ ಜಗದ್ಗುರುಗಳ ಭೇಟಿ, ಮಾನಸಿಕ ರೋಗಗಳಿಂದ ಬಳಲುತ್ತಿರುವವರ ಆರೈಕೆಯ ಮಹತ್ವದ ಕುರಿತು ತುಂಬಾ ಬಲವಾದ ಸಂದೇಶವನ್ನು ನೀಡುತ್ತದೆ.
ಆಸ್ಪತ್ರೆಯ ಉಪನಿರ್ದೇಶಕಿ ಡಾ. ಎಂಗ್ರಾಸಿಯಾ ಅಸಾಂಗೋನೋ ನ್ಚುಚುಮಾ ರವರು, ಈ ಸಂಸ್ಥೆ ಇತ್ತೀಚೆಗೆ ಸಮುದಾಯ ಆಧಾರಿತ ಆರೈಕೆಯ ಮಾದರಿಯತ್ತ ಅಭಿವೃದ್ಧಿಯಾಗಿದೆ ಎಂದು ವಿವರಿಸುತ್ತಾರೆ. ಆಸ್ಪತ್ರೆ ಸೋಮವಾರದಿಂದ ಶುಕ್ರವಾರದವರೆಗೆ ಹೊರರೋಗಿಗಳಿಗಾಗಿ ಮನೋವೈದ್ಯಕೀಯ ಮತ್ತು ಮನೋವಿಜ್ಞಾನ ಸಲಹೆಗಳನ್ನು ನೀಡುವುದಲ್ಲದೆ, ವಿವಿಧ ಕಾರಣಗಳಿಂದ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ರೋಗಿಗಳ ಮನೆಗಳಿಗೆ ತೆರಳಿ ಸೇವೆ ನೀಡುವ ಮೊಬೈಲ್ ತಂಡವನ್ನೂ ಹೊಂದಿದೆ. ಹೆಚ್ಚುವರಿಯಾಗಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ ಮಕ್ಕಳ ಮನೋವೈದ್ಯಕೀಯ ಘಟಕವನ್ನೂ ಆರಂಭಿಸಲಾಗಿದೆ.
ರೋಗಿಗಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಪ್ರಯತ್ನವೂ ಮಾಡಲಾಗುತ್ತದೆ ಎಂದು ಡಾ. ಅಸಾಂಗೋನೋ ನ್ಚುಚುಮಾ ತಿಳಿಸಿದ್ದಾರೆ ಇದರಲ್ಲಿ ಪವಿತ್ರ ಬಲಿಪೂಜೆಯ ಆಚರಣೆಗಳು ಹಾಗೂ ಇತ್ತೀಚೆಗೆ ಜಗದ್ಗುರುಗಳ ಭೇಟಿಗೆ ಸಿದ್ಧತೆಗಳೂ ಸೇರಿವೆ.
ಜಗದ್ಗುರು ಲಿಯೋರವರು ಆಗಮಿಸಿದಾಗ, ಮಾನಸಿಕ ಅಸ್ವಸ್ಥತೆಯಿಂದ ಬಳಲುವವರನ್ನು ಪ್ರತ್ಯೇಕಿಸಬೇಕಾದ ವ್ಯಕ್ತಿಗಳೆಂದು ನೋಡುವ ಬದಲು, ಅವರನ್ನು ನಮ್ಮ ಸಮುದಾಯಗಳಲ್ಲಿ ಒಳಗೊಳ್ಳುವವರಾಗಿ ನೋಡಲು ಎಲ್ಲರಿಗೂ ಸಹಾಯ ಮಾಡುವರು ಎಂದು ಅವರು ಒತ್ತಿಹೇಳುತ್ತಾರೆ.
