Vatican Pentecost Vigil

ಜಗದ್ಗುರುಗಳ ಆಫ್ರಿಕಾ ಭೇಟಿಯು ಸ್ಥಳೀಯ ಕಥೋಲಿಕರ ‘ಸಂತೋಷಗಳು ಮತ್ತು ದುಃಖಗಳು’ ಹಂಚಿಕೊಳ್ಳುವ ಅವಕಾಶವಾಗಿದೆ.

ಕ್ಯಾಮರೂನ್ ಮತ್ತು ಈಕ್ವೇಟೋರಿಯಲ್ ಗಿನಿಯಾಗೆ ಪ್ರೇಷಿತರ ರಾಯಭಾರಿಯಾಗಿರುವ ಆರ್ಚ್‌ಬಿಷಪ್ ಜೋಸೆ ಬೆಟ್ಟೆಂಕೋರ್ಟ್, ಜಗದ್ಗುರು ಲಿಯೋರವರ ಇತ್ತೀಚೆಗೆ ಮುಕ್ತಾಯಗೊಂಡ ಆಫ್ರಿಕಾ ಪ್ರೇಷಿತರ ಪ್ರವಾಸ ಕುರಿತು ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದರು. ಈ ಭಾಗದ ಲೋಕದಲ್ಲಿರುವ ಕ್ರಿಸ್ತನ ದೇಹದ ಸಂತೋಷಗಳು ಮತ್ತು ದುಃಖಗಳನ್ನು “ಸ್ಪರ್ಶಿಸುವ” ಅವಕಾಶವನ್ನು ಜಗದ್ಗುರುಗಳ ಈ ಭೇಟಿ ನೀಡಿದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಆಫ್ರಿಕಾ ಖಂಡದ ನಾಲ್ಕು ದೇಶಗಳಿಗೆ 11 ದಿನಗಳ ಪ್ರೇಷಿತರ ಪ್ರವಾಸವನ್ನು ಪೂರ್ಣಗೊಳಿಸಿ ಇದೀಗ ರೋಮಿಗೆ ಮರಳಿದ್ದಾರೆ. ಈ ಭೇಟಿಯು ಆಫ್ರಿಕಾದ ಕಥೋಲಿಕ ವಿಶ್ವಾಸಿಗಳನ್ನು ಪ್ರೋತ್ಸಾಹಿಸಲು ಮತ್ತು ಜೊತೆಯಾಗಿರಲು  ಒಂದು ಮಹತ್ವದ ಅವಕಾಶವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಅಧಿಕಾರದಲ್ಲಿರುವವರಿಗೆ ಜನರ ಹಕ್ಕುಗಳು ಮತ್ತು ಮಾನವನ್ನು ಗೌರವಿಸುವಂತೆ ಅವರು ಮನವಿ ಮಾಡಿದರು.

ಈ ಪ್ರಯಾಣದ ಕೆಲ ಭಾಗಗಳಲ್ಲಿ ಕ್ಯಾಮರೂನ್ ಮತ್ತು ಈಕ್ವೇಟೋರಿಯಲ್ ಗಿನಿಯಾಗೆ ಪ್ರೇಷಿತರ ರಾಯಭಾರಿಯಾಗಿರುವ  ಆರ್ಚ್‌ಬಿಷಪ್ ಜೋಸೆ ಬೆಟ್ಟೆಂಕೋರ್ಟ್ ಜಗದ್ಗುರುಗಳ ಜೊತೆಗಿದ್ದರು. ಅವರು ಹೇಳುವಂತೆ, ಈ ಭೇಟಿ ಶಾಂತಿಯ ಬಹಳ ಬಲವಾದ ಸಂದೇಶವನ್ನು ನೀಡಿದ್ದು, ಸ್ಥಳೀಯ ಕಥೋಲಿಕ ಸಮುದಾಯ ಮತ್ತು ವಿಶ್ವ ಧರ್ಮ ಸಭೆಯ ನಡುವಿನ ಬಾಂಧವ್ಯವನ್ನು ಗಾಢಗೊಳಿಸುವ ಅವಕಾಶವಾಯಿತು.

ಕ್ಯಾಮರೂನ್‌ನಲ್ಲಿ ಜಗದ್ಗುರುಗಳ ಭೇಟಿ ವಿಶೇಷವಾಗಿತ್ತು. ಅಟ್ಲಾಂಟಿಕ್ ಸಮುದ್ರದಿಂದ ಸಹಾರಾ ವರೆಗೂ ವ್ಯಾಪಿಸಿರುವ ಈ ದೇಶದಲ್ಲಿ 26 ಧರ್ಮಪ್ರಾಂತ್ಯಗಳು ಮತ್ತು ಅನೇಕ ಧಾರ್ಮಿಕ ಸಂಘಗಳು ಇವೆ. ಜಗದ್ಗುರುಗಳು ದೈವಾರಾಧನೆ ಆಚರಣೆಗಳಿಂದ ಹಿಡಿದು ಯುದ್ಧದಿಂದ ಪೀಡಿತ ಬಮೆಂಡಾ ಪ್ರದೇಶದ ಭೇಟಿ ತನಕ ಹಲವು ಪ್ರಮುಖ ವಿಷಯಗಳನ್ನು ಸ್ಪರ್ಶಿಸಿದರು. ಬಮೆಂಡಾದ ಬೀದಿಗಳಲ್ಲಿ ನಡೆದಾಡಿದುದು ಶಾಂತಿಯ ಶಕ್ತಿಯುತ ಸಂಕೇತವಾಗಿ ಉಳಿದಿದೆ.

ಇದೇ ರೀತಿ, ಈಕ್ವೇಟೋರಿಯಲ್ ಗಿನಿಯಾದಲ್ಲಿ ಜಗದ್ಗುರುಗಳು ಬಾಟಾ ಕಾರಾಗೃಹಕ್ಕೆ ಭೇಟಿ ನೀಡಿ ಮಾನವೀಯ ಕಾಳಜಿಯನ್ನು ತೋರಿಸಿದರು. ಅಲ್ಲಿನ ಜನರು ಭಕ್ತಿಯಿಂದ ತುಂಬಿದ್ದು, ಈ ಭೇಟಿಯನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದರು. ಅವರ ಮಾತುಗಳಲ್ಲಿ ಆರ್ಥಿಕ ಸಮಾನತೆ, ಮಾನವ ಹಕ್ಕುಗಳ ಗೌರವ ಮತ್ತು ಯುವಜನತೆಗೆ ಉತ್ತಮ ಭವಿಷ್ಯದ ಅಗತ್ಯವನ್ನು ಒತ್ತಿಹೇಳಲಾಯಿತು.

ಜಗದ್ಗುರುಗಳು ಅನಾಥಾಶ್ರಮಗಳು ಮತ್ತು ಮಾನಸಿಕ ಆಸ್ಪತ್ರೆಗಳಂತಹ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಸಂಕಷ್ಟದಲ್ಲಿರುವ ಜನರ ಬಳಿಯೇ ಇರಲು ಬಯಸಿದರು. ಧರ್ಮ ಸಭೆಯ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಅವರು ಉತ್ತೇಜಿಸಿದರು. ಈ ಭೇಟಿ ಸ್ಥಳೀಯ ಧರ್ಮ ಸಭೆಗೆ ಪ್ರೇರಣೆ ನೀಡಿದ್ದು, ಸಮಾಜ ಸೇವೆಯಲ್ಲಿ ಮುಂದುವರೆಯಲು ಉತ್ಸಾಹ ತುಂಬಿದೆ.

ಒಟ್ಟಾರೆ, ಈ ಪ್ರೇಷಿತರ ಪ್ರವಾಸವು ಧರ್ಮ ಸಭೆಯ ವಿಶ್ವವ್ಯಾಪಕತೆಯನ್ನು ತೋರಿಸಿತು ಮತ್ತು ಕ್ರಿಸ್ತನ ದೇಹದ ಸಂತೋಷಗಳು ಮತ್ತು ದುಃಖಗಳನ್ನು ಹಂಚಿಕೊಳ್ಳುವ ಅನುಭವವಾಯಿತು. ದೇವರ ಕೃಪೆಯಿಂದ ಈ ಭೇಟಿ ಯಶಸ್ವಿಯಾಗಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ಇದರ ಫಲಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಿವೆ.

27 ಏಪ್ರಿಲ್ 2026, 15:02