ಅಲ್ಜೀರಿಯಾದಲ್ಲಿ ಜಗದ್ಗುರುಗಳು: “ಯುದ್ಧಗಳು, ಹಿಂಸಾಚಾರ, ಅನ್ಯಾಯ ಮತ್ತು ಸುಳ್ಳುಗಳಿಂದ ದೇವರ ಹೃದಯವು ಚಿಂದಿಯಾಗುತ್ತದೆ.”
ವ್ಯಾಟಿಕನ್ ವರದಿ
ತಮ್ಮ ಪ್ರೇಷಿತರ ಪ್ರವಾಸದ ಎರಡನೇ ದಿನದಲ್ಲಿ, ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾದ ಅನ್ನಾಬಾಗೆ ವಿಮಾನದಲ್ಲಿ ತೆರಳಿ, ಸಂತ ಆಗಸ್ಟಿನ್ ಬಿಷಪ್ ಆಗಿ ಸೇವೆ ಸಲ್ಲಿಸಿದ ಪ್ರಾಚೀನ ಹಿಪ್ಪೋ ನಗರದ ಸ್ಥಳಕ್ಕೆ ಭೇಟಿ ನೀಡಿದರು.
ಪುರಾತತ್ವ ತಾಣಕ್ಕೆ ಭೇಟಿ ನೀಡಿದ ನಂತರ, ಲಿಟಲ್ ಸಿಸ್ಟರ್ಸ್ ಆಫ್ ದಿ ಪೂರ್ ನಡೆಸುವ “ಮಾ ಮೈಸನ್” ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಕೆಲವು ವೃದ್ಧರೊಂದಿಗೆ ಜಗದ್ಗುರುಗಳು ಕೆಲವು ನಿಮಿಷಗಳನ್ನು ಕಳೆದರು.
ತಮ್ಮ ಸಂಕ್ಷಿಪ್ತ ಭಾಷಣದಲ್ಲಿ, ದೇವರು ಇಲ್ಲಿ ವಾಸಿಸುತ್ತಾನೆ ಎಂದು ನಿವಾಸಿಗಳಿಗೆ ಹೇಳಿದರು. “ಎಲ್ಲಿ ಪ್ರೀತಿ ಮತ್ತು ಸೇವೆ ಇರುತ್ತದೆಯೋ ಅಲ್ಲಿ ದೇವರು ಇರುತ್ತಾನೆ” ಎಂದು ಅವರು ಹೇಳಿದರು.
ಆಶ್ರಮದ ವೃದ್ಧ ಮುಸ್ಲಿಂ ನಿವಾಸಿಯಾಗಿರುವ ಸಲಾಹ್ ಬುಷೆಮೆಲ್ ರವರು ನೀಡಿದ ಸ್ವಾಗತ ಭಾಷಣಕ್ಕೆ ಜಗದ್ಗುರುಗಳು ವಿಶೇಷವಾಗಿ ಧನ್ಯವಾದ ಹೇಳಿದರು. ತಮ್ಮ ಮಾತಿನಲ್ಲಿ, ಪರಸ್ಪರ ಗೌರವ ಮತ್ತು ಧರ್ಮಗಳ ನಡುವಿನ ಸೌಹಾರ್ದವನ್ನು ಅವರು ಕೊಂಡಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಗದ್ಗುರುಗಳು, ಜನರು ಸಹೋದರತ್ವದಲ್ಲಿ ಬದುಕಲು ಪ್ರಯತ್ನಿಸುವ ಸ್ಥಳದಲ್ಲಿ ಇರುವ ಭರವಸೆಯನ್ನು ದೇವರು ಖಂಡಿತವಾಗಿ ಗುರುತಿಸುತ್ತಾನೆ ಎಂದು ಹೇಳಿದರು.
ಯುದ್ಧಗಳು, ಹಿಂಸಾಚಾರ, ಅನ್ಯಾಯ ಮತ್ತು ಸುಳ್ಳುಗಳಿಂದ ದೇವರ ಹೃದಯವು ಚಿಂದಿಯಾಗುತ್ತದೆ, ಎಂದು ಅವರು ಹೇಳಿದರು. ಆದರೆ ನಮ್ಮ ತಂದೆಯ ಹೃದಯ ದುಷ್ಟರೊಂದಿಗೆ, ಅಹಂಕಾರಿಗಳೊಂದಿಗೆ ಅಥವಾ ಗರ್ವಿಗಳೊಂದಿಗೆ ಇರುವುದಿಲ್ಲ ಎಂದರು.
ಬದಲಾಗಿ, ಸೇವೆಯ ಮೂಲಕ ದೇವರ ರಾಜ್ಯವನ್ನು ನಿರ್ಮಿಸುವವರೊಂದಿಗೆ ದೇವರು ವಾಸಿಸುತ್ತಾನೆ ಎಂದು ಜಗದ್ಗುರು ಲಿಯೋರವರು ಹೇಳಿದರು.
ದೇವರ ಹೃದಯವು ಸಣ್ಣವರೊಂದಿಗೆ ಮತ್ತು ವಿನಮ್ರರೊಂದಿಗೆ ಇರುತ್ತದೆ, ಎಂದು ಅವರು ಹೇಳಿದರು, ಮತ್ತು ಅವರೊಂದಿಗೆ ದೇವರು ದಿನದಿಂದ ದಿನಕ್ಕೆ ಪ್ರೀತಿ ಮತ್ತು ಶಾಂತಿಯ ರಾಜ್ಯವನ್ನು ನಿರ್ಮಿಸುತ್ತಾರೆ ನೀವು ಇಲ್ಲಿ ನಿಮ್ಮ ದೈನಂದಿನ ಸೇವೆ, ಸ್ನೇಹ ಮತ್ತು ಸಹಜೀವನದ ಮೂಲಕ ಮಾಡುವ ಪ್ರಯತ್ನದಂತೆ ಎಂದು ಹೇಳಿದರು.
ಜಗದ್ಗುರು ಲಿಯೋರವರನ್ನು 2008ರಿಂದ 2021ರವರೆಗೆ ಕಾನ್ಸ್ಟಾಂಟೈನ್-ಹಿಪ್ಪೋನ್ ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ಮತ್ತು ಈಗ ಲಿಟಲ್ ಸಿಸ್ಟರ್ಸ್ ಆಫ್ ದಿ ಪೂರ್ ಜೊತೆ ವಾಸಿಸುತ್ತಿರುವ ಆರ್ಚ್‌ಬಿಷಪ್ ಪಾಲ್ ಡೆಸ್ಫಾರ್ಜ್ ರವರು ಸಹ ಸ್ವಾಗತಿಸಿದರು.
ಆರ್ಚ್‌ಬಿಷಪ್ ರವರು ಸಹೋದರಿಯರು ಮತ್ತು ಸಿಬ್ಬಂದಿ ತಮ್ಮ ಕಾಳಜಿ ಮತ್ತು ಗಮನದ ಮೂಲಕ ಪ್ರತಿದಿನ ಸಣ್ಣ ಅದ್ಭುತಗಳನ್ನು ನೆರವೇರಿಸುತ್ತಾರೆ ಎಂದು ಹೇಳಿದರು. ಒಬ್ಬರ ಕೈ ಹಿಡಿಯುವಂತಹ ಸರಳ ಕ್ರಿಯೆಗಳು ಕೂಡ ಜನರನ್ನು ಹತ್ತಿರ ತರುತ್ತವೆ ಎಂದು ಅವರು ಹೇಳಿದರು.
ಜಗದ್ಗುರುಗಳು ಆರ್ಚ್‌ಬಿಷಪ್ ಡೆಸ್ಫಾರ್ಜ್ ರವರ ಸ್ವಾಗತಕ್ಕೆ ಧನ್ಯವಾದ ಹೇಳಿ, ವೃದ್ಧರೊಂದಿಗೆ ಜೊತೆಯಾಗಿ ಬದುಕುತ್ತಿರುವ ಅವರ ಸಾಕ್ಷಿಯನ್ನು ಪ್ರಶಂಸಿಸಿದರು.
ಯೇಸು ಕ್ರಿಸ್ತನ ಮಾತುಗಳನ್ನು (ಲೂಕ 10:21) ಅವರು ನೆನಪಿಸಿಕೊಂಡರು ತಂದೆ ತನ್ನ ರಹಸ್ಯಗಳನ್ನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಮರೆಮಾಡಿ, ಸಣ್ಣ ಮಕ್ಕಳಿಗೆ ಪ್ರಕಟಿಸಿದ್ದಾನೆ ಎಂದು ಹೇಳಿದರು.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಸಹೋದರಿಯರು ಮತ್ತು ನಿವಾಸಿಗಳ ಸಾಕ್ಷಿಗೆ ಧನ್ಯವಾದ ತಿಳಿಸಿ, ಪುನರುತ್ಥಾನಿ ಕ್ರಿಸ್ತನ ಮೋಸಾಯಿಕ್ ಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿದರು.
ಅಲ್ಬೇನಿಯನ್ ಮೋಸಾಯಿಕ್ ಕಲಾವಿದ ಜೋಸಿಫ್ ಡ್ರೋಬೊನಿಕು ರಚಿಸಿದ ಈ ಕೃತಿ ಪ್ರಾಚೀನ ಬೈಜಾಂಟೈನ್ ಪರಂಪರೆಯನ್ನು ಅನುಸರಿಸುತ್ತದೆ ಮತ್ತು ಗ್ರೀಕ್ ಭಾಷೆಯಲ್ಲಿ ಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ ಎಂದು ಕರೆ ನೀಡುತ್ತದೆ.
ಈ ಕೃತಿಯೊಂದಿಗೆ ನೀಡಲಾದ ಟಿಪ್ಪಣಿಯ ಪ್ರಕಾರ, ಈ ಕಲಾಕೃತಿ ಪುನರುತ್ಥಾನಿ ಕ್ರಿಸ್ತನ ಸಾನ್ನಿಧ್ಯದಿಂದ ಪ್ರಕಾಶಮಾನರಾಗಲು ಮತ್ತು ಪ್ರೀತಿ ಹಾಗೂ ಸೇವೆಯ ಮೂಲಕ, ಮಾನವ ಹೃದಯವು ಸಾಂತ್ವನ ಮತ್ತು ಭರವಸೆಯನ್ನು ಕಾಯುತ್ತಿರುವ ಎಲ್ಲೆಡೆ ಅವನ ಕರುಣೆಯ ಪ್ರತಿಬಿಂಬವನ್ನು ಹೊತ್ತೊಯ್ಯಲು ಆಹ್ವಾನ ನೀಡುತ್ತದೆ.
