ದೇವರ ಪ್ರೀತಿಯನ್ನು ಪ್ರಕಟಿಸುವ ಧರ್ಮ ಸಭೆಯ ಗುರಿ ಕುರಿತು ಚಿಂತಿಸಲು ಜಗದ್ಗುರುಗಳು ಕನ್ಸಿಸ್ಟರಿಯನ್ನು ಕರೆದಿದ್ದಾರೆ.
ವ್ಯಾಟಿಕನ್ ವರದಿ
ಧರ್ಮ ಸಭೆ ಗುರಿ “ತಮ್ಮದೇ ಉಳಿವಿಗಾಗಿ ಅಲ್ಲ, ದೇವರು ಲೋಕವನ್ನು ಪ್ರೀತಿಸುವ ಪ್ರೀತಿಯನ್ನು ಪ್ರಕಟಿಸುವುದಕ್ಕಾಗಿ” ಎಂಬುದು ಮಂಗಳವಾರ ಪ್ರಕಟವಾದ ಅಸಾಮಾನ್ಯ ಕನ್ಸಿಸ್ಟರಿಗಾಗಿ ಕಾರ್ಡಿನಲ್‌ಗಳಿಗೆ ಬರೆದ ಜಗದ್ಗುರು XIVನೇ ಲಿಯೋರವರ ಪತ್ರದ ಮುಖ್ಯ ಸಂದೇಶವಾಗಿತ್ತು.
ಕನ್ಸಿಸ್ಟರಿ ಜೂನ್ 26 ಮತ್ತು 27 ರಂದು ವಾಟಿಕನ್‌ನಲ್ಲಿ ನಡೆಯಲಿದೆ, ಸಂತ ಪೇತ್ರ ಮತ್ತು ಪೌಲರ ಮಹೋತ್ಸವದ ಮುನ್ನ. ಇದು ಜಗದ್ಗುರು ಲಿಯೋರವರ ಅಧ್ಯಕ್ಷತೆಯಲ್ಲಿ ನಡೆಯುವ ಬಲಿಪೂಜೆಯ ಆಚರಣೆಯೊಂದಿಗೆ ಸಮಾಪ್ತಿಯಾಗುತ್ತದೆ. ಜನವರಿ 7–8 ರಂದು ನಡೆದ ಕನ್ಸಿಸ್ಟರಿಯ ಕೊನೆಯಲ್ಲಿ ಈ ಸಭೆಯನ್ನು ಜಗದ್ಗುರುಗಳು ಘೋಷಿಸಿದ್ದರು.
ಪತ್ರದಲ್ಲಿ, ಜನವರಿ ಕನ್ಸಿಸ್ಟರಿಯಲ್ಲಿ ನಡೆದ ಕಾರ್ಯಗಳಿಗೆ ಜಗದ್ಗುರುಗಳು ಕೃತಜ್ಞತೆಯನ್ನು ವ್ಯಕ್ತಪಡಿಸಿ, ಅಲ್ಲಿ ಸಂಗ್ರಹವಾದ ಕೊಡುಗೆಗಳನ್ನು ದೀರ್ಘಕಾಲದ ಮೌಲ್ಯ ಹೊಂದಿರುವ ಸಂಪನ್ಮೂಲವೆಂದು ವಿವರಿಸಿ, ಅವುಗಳನ್ನು ಧರ್ಮ ಸಭೆಯ ವಿವೇಚನೆಯ ಮೂಲಕ ಮುಂದುವರಿಸಿ ಅಭಿವೃದ್ಧಿಪಡಿಸಬೇಕೆಂದು ಹೇಳಿದ್ದಾರೆ.
“ ಇವಾಂಜೆಲಿ ಗೌಡಿಯಮ್”ಮಾರ್ಗದರ್ಶಕ ಉಲ್ಲೇಖವಾಗಿ
ಜಗದ್ಗುರು ಲಿಯೋರವರು, ಜಗದ್ಗುರು ಫ್ರಾನ್ಸಿಸ್ ರವರ ಪ್ರೇಷಿತರ ಉಪದೇಶ "ಇವಾಂಜೆಲಿ ಗೌಡಿಯಮ್” ಅನ್ನು ಧರ್ಮ ಸಭೆಯ ಜೀವನ ಮತ್ತು ಗುರಿಗಳಿಗೆ ನಿರಂತರ ಮಾರ್ಗದರ್ಶಕವಾಗಿ ಸೂಚಿಸುತ್ತಾರೆ.
ಇದು “ಕ್ರೈಸ್ತ ಹಾಗೂ ಧರ್ಮ ಸಭೆಯ ಗುರುತಿನ ಹೃದಯವಾಗಿರುವ ಕೇರಿಗ್ಮಾ ಮೇಲೆ ಎಲ್ಲವನ್ನೂ ಮರುಕೇಂದ್ರೀಕರಿಸುತ್ತದೆ” ಎಂದು ಅವರು ಹೇಳುತ್ತಾರೆ ಮತ್ತು ಅದನ್ನು “ಹೊಸ ಉಸಿರಿನಂತೆ, ಧರ್ಮಾಧ್ಯಕ್ಷೀಯ ಮತ್ತು ಮಿಷನರಿ ಪರಿವರ್ತನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಶಕ್ತಿಯುತವಾದದ್ದು ಎಂದು ವಿವರಿಸುತ್ತಾರೆ.
ಪ್ರತಿ ಮಟ್ಟದಲ್ಲಿಯೂ ನವೀಕರಣ
ಈ ದೃಷ್ಟಿಕೋನವು ಧರ್ಮ ಸಭೆಯನ್ನು ಹಲವು ಮಟ್ಟಗಳಲ್ಲಿ ನವೀಕರಣಕ್ಕೆ ಕರೆಸುತ್ತದೆ ಎಂದು ಜಗದ್ಗುರುಗಳು ವಿವರಿಸುತ್ತಾರೆ.
ವೈಯಕ್ತಿಕ ಮಟ್ಟದಲ್ಲಿ, ಪ್ರತಿಯೊಬ್ಬ ದೀಕ್ಷಿತನು ಕ್ರಿಸ್ತನೊಂದಿಗೆ ತನ್ನ ಭೇಟಿಯನ್ನು ನವೀಕರಿಸಬೇಕು, ಕೇವಲ ಸ್ವೀಕರಿಸಿದ ನಂಬಿಕೆಯಿಂದ ನಿಜವಾಗಿ ಅನುಭವಿಸಿ ಬದುಕುವ ನಂಬಿಕೆಗೆ ಸಾಗಬೇಕು ಎಂದು ಅವರು ಬರೆಯುತ್ತಾರೆ.
ಸಮುದಾಯ ಮಟ್ಟದಲ್ಲಿ, ನಿರ್ವಹಣೆಗೆ ಮಾತ್ರ ಕೇಂದ್ರೀಕೃತವಾಗಿರುವ ಧರ್ಮಾಧ್ಯಕ್ಷೀಯ ದೃಷ್ಟಿಕೋನದಿಂದ ಮಿಷನರಿ ಧರ್ಮಾಧ್ಯಕ್ಷೀಯ ದೃಷ್ಟಿಕೋನಕ್ಕೆ ಬದಲಾವಣೆ ಅಗತ್ಯ,ಅಲ್ಲಿ ಸಮುದಾಯಗಳು ಘೋಷಣೆಯ ಜೀವಂತ ಸಾಧನಗಳಾಗಿ ಮಾರ್ಪಡುವುದರ ಜೊತೆಗೆ, ಸಂಬಂಧಗಳ ಮೇಲೆ ಗಮನ ಮತ್ತು ಸಹಯಾತ್ರೆ ಹಾಗೂ ಗುಣಮುಖತೆಗೆ ತೆರೆಯಲ್ಪಟ್ಟಿರುತ್ತವೆ.
ಧರ್ಮಪ್ರಾಂತ್ಯ ಮಟ್ಟದಲ್ಲಿ, ಧರ್ಮಾಧ್ಯಕ್ಷೀಯ ಜವಾಬ್ದಾರಿಯನ್ನು ಅವರು ಉಲ್ಲೇಖಿಸಿ, ಮಿಷನರಿ ಚೈತನ್ಯವು ಸಂಘಟನಾ ಅಡೆತಡೆಗಳಿಂದ ಒತ್ತಡಕ್ಕೊಳಗಾಗದಂತೆ ಅಥವಾ ಕುಂಠಿತವಾಗದಂತೆ ನೋಡಿಕೊಳ್ಳಬೇಕು ಹಾಗೂ ಮುಖ್ಯ ವಿಷಯಗಳ ಮೇಲೆ ಕೇಂದ್ರೀಕೃತ ವಿವೇಚನೆಯನ್ನು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
ಕ್ರಿಸ್ತನಲ್ಲಿ ಬೇರುಬಿಟ್ಟ ಮಿಷನ್
ಈ ಚಿಂತನೆಗಳಿಂದ, ಮಿಷನ್ ಕುರಿತು ಏಕೀಕೃತ ಅರಿವು ಮೂಡುತ್ತದೆ. ಜಗದ್ಗುರುಗಳು ಇದನ್ನು “ಕ್ರಿಸ್ತಕೇಂದ್ರಿತ ಮತ್ತು ಕೇರಿಗ್ಮಾತ್ಮಕ” ಎಂದು ವಿವರಿಸಿ, ಜೀವನವನ್ನು ಪರಿವರ್ತಿಸಲು ಸಮರ್ಥವಾದ ಭೇಟಿಯಿಂದ ಹುಟ್ಟಿಕೊಂಡು ಜಯಿಸುವುದರಿಂದ ಅಲ್ಲ, ಆಕರ್ಷಣೆಯಿಂದ ಹರಡುವುದು ಎಂದು ಹೇಳಿದ್ದಾರೆ.
ಈ ಮಿಷನ್ ಸ್ಪಷ್ಟ ಘೋಷಣೆ, ಸಾಕ್ಷ್ಯ, ಬದ್ಧತೆ ಮತ್ತು ಸಂವಾದವನ್ನು ಒಂದಾಗಿಸುತ್ತದೆ ಎಂದು ಅವರು ಹೇಳಿ, ಧರ್ಮಾಂತರಗೊಳಿಸುವ ಪ್ರಲೋಭನೆ ಹಾಗೂ ಕೇವಲ ಸಂಸ್ಥಾತ್ಮಕ ಸಂರಕ್ಷಣೆ ಅಥವಾ ವಿಸ್ತರಣೆ ಎಂಬ ತರ್ಕವನ್ನು ತಪ್ಪಿಸಬೇಕು ಎಂದು ಸೂಚಿಸುತ್ತಾರೆ.
ಧರ್ಮ ಸಭೆ ಅಲ್ಪಸಂಖ್ಯಾತವಾಗಿರುವ ಸಂದರ್ಭದಲ್ಲಿಯೂ, ಎಲ್ಲರಿಗೂ ಭರವಸೆಯನ್ನು ತರುವ ಸಣ್ಣ ಕುರಿಮಂದೆಯಾಗಿ ಬದುಕಲು ಆಕೆ ಕರೆಯಲ್ಪಟ್ಟಿದ್ದಾಳೆ ಎಂದು ಅವರು ಹೇಳುತ್ತಾರೆ.
ಸ್ಪಷ್ಟ ಆದ್ಯತೆಗಳು
ಮುಂದಿನ ದಿಕ್ಕಿನಲ್ಲಿ, ಜಗದ್ಗುರುಗಳು ಹಲವು ವಿಚಾರಗಳ ಮೇಲೆ ಹೆಚ್ಚಿನ ಚಿಂತನೆಗೆ ಕರೆ ನೀಡುತ್ತಾರೆ. “ಇವಾಂಜೆಲಿ ಗೌಡಿಯಮ್”ನಿಂದ ಕಾಲಕ್ರಮೇಣ ನಾವು ಪಡೆದದ್ದನ್ನು ನಿಷ್ಠೆಯಿಂದ ಪರಿಶೀಲಿಸಬೇಕೆಂದು ಅವರು ಹೇಳುತ್ತಾರೆ, ಏಕೆಂದರೆ ಕೆಲವು ಅಂಶಗಳು ಇನ್ನೂ ಅಪರಿಚಿತವಾಗಿಯೇ ಉಳಿದಿವೆ ಮತ್ತು ಜಾರಿಗೆ ಬಂದಿಲ್ಲ.
ಅವರು ಗುರುತಿಸಿದ ಪ್ರಮುಖ ಆದ್ಯತೆಗಳಲ್ಲಿ ಕ್ರೈಸ್ತ ಪ್ರವೇಶದ ಪ್ರಕ್ರಿಯೆಗಳ ಸುಧಾರಣೆ,ಪ್ರೇಷಿತರ ಮತ್ತು ಧರ್ಮಾಧ್ಯಕ್ಷೀಯ ಭೇಟಿಗಳ ಪುನರ್ಮೌಲ್ಯಮಾಪನ, ಮತ್ತು ಪವಿತ್ರ ಸಭೆಯ ಮಟ್ಟದಲ್ಲಿಯೂ ಸೇರಿ ಧರ್ಮ ಸಭೆಯ ಸಂವಹನದ ಪರಿಣಾಮಕಾರಿತ್ವವನ್ನು ಹೆಚ್ಚು ಸ್ಪಷ್ಟವಾದ ಮಿಷನರಿ ದೃಷ್ಟಿಯಲ್ಲಿ ಪರಿಶೀಲಿಸುವ ಅಗತ್ಯಗಳು ಸೇರಿವೆ.
ಜೂನ್ ಕನ್ಸಿಸ್ಟರಿಯತ್ತ
ತಮ್ಮ ಪತ್ರವನ್ನು ಮುಕ್ತಾಯಗೊಳಿಸುವಾಗ, ಜಗದ್ಗುರುಗಳು ಕಾರ್ಡಿನಲ್‌ಗಳ ಸೇವೆಗೆ ಮತ್ತೆ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಜೂನ್ ಕನ್ಸಿಸ್ಟರಿಗಾಗಿ ಮುಂದಿನ ವಿವರಗಳನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪುನರುತ್ಥಾನಿ ಪ್ರಭುವಿನ ಭರವಸೆಗೆ ಧರ್ಮ ಸಭೆಯನ್ನು ಒಪ್ಪಿಸಿ, ಅವರು ಪಾಸ್ಖ ಹಬ್ಬದ ಶುಭಾಶಯಗಳನ್ನು ಕಳುಹಿಸಿ, ಎಲ್ಲಾ ವಿಶ್ವಾಸಿಗಳನ್ನು ಧರ್ಮ ಸಭೆಯ ಮಿಷನ್‌ನ ಹೃದಯವನ್ನು ಮರುಹುಡುಕಲು ಆಹ್ವಾನಿಸುತ್ತಾರೆ ಲೋಕದಲ್ಲಿ ದೇವರ ಪ್ರೀತಿಗೆ ಸಾಕ್ಷಿಯಾಗುವುದು.
